ಸಂ ತೋಷ ಎಂದರೇನು? ಅದು ಎಲ್ಲಿದೆ? ಈ ಪ್ರಶ್ನೆಗಳಿಗೆ ಉತ್ತರದ ಹುಡುಕಾಟಕ್ಕೆ ಮನೆ–ಸಂಸಾರವನ್ನು ಬಿಟ್ಟು ಹಿಮಾಲಯದ ತಪ್ಪಲಲ್ಲಿ ನೆಲೆ ಕಂಡು ಸನ್ಯಾಸಿಗಳು, ದಾರ್ಶನಿಕರಾದವರು ಅದೆಷ್ಟೋ ಮಂದಿ. ಸಾಮಾನ್ಯ ಬದುಕು ನಡೆಸುವ ಸಾಮಾನ್ಯರ ಸಂತೋಷದ ಲೆಕ್ಕಾಚಾರವೇ ಬೇರೆ. ಗೃಹಿಣಿಯೊಬ್ಬಳಿಗೆ ಮನೆಯನ್ನು ಒಪ್ಪ ಓರಣವಾಗಿಟ್ಟುಕೊಳ್ಳುವುದು, ಮಕ್ಕಳ ಬೇಕು–ಬೇಡಗಳನ್ನು ಪೂರೈಸುವುದು ಸಂತೋಷಕ್ಕೆ ರಹದಾರಿಯಾಗಿರಬಹುದು.
ರಸಿಕರಿಗೆ ತುತ್ತುತುತ್ತಾಗಿ ಷಡ್ರಸವನ್ನು ಚಪ್ಪರಿಸುತ್ತಾ ಆಸ್ವಾದಿಸುವುದು ಸಂತೋಷವನ್ನು ಕೊಡಬಹುದು. ಇನ್ನು ಕೆಲವರಿಗೆ ಮಾರುಕಟ್ಟೆಗೆ ಹೊಸತಾಗಿ ಬಂದಿರುವುದನ್ನು ಕೊಂಡುಕೊಳ್ಳುವುದೇ ಸುಖದ ಹೇತುವಾಗಿರಬಹುದು. ವಾರ್ಧಕ್ಯದಲ್ಲಿ ಧ್ಯಾನ, ಸತ್ಸಂಗಗಳು ಮನಃಶಾಂತಿಯನ್ನು ಕೊಡುವ ನಲ್ದಾಣಗಳಾಗಿದ್ದರೆ, ಗುಡಿಸಲಿನಲ್ಲಿರುವ ಹಸಿದ ಹೊಟ್ಟೆಗಳ ಸಂತೋಷದ ಬಗೆ ಸಂಪೂರ್ಣ ಬೇರೆ ರೀತಿಯದ್ದು. ಹೀಗಾಗಿ ಸಂತೋಷ ಎಂಬ ವಿಚಾರ ತೀರಾ ವೈಯಕ್ತಿಕ. ಹಾಗೆಯೆ ಅದರ ಪರಿಭಾಷೆ ಯಾವತ್ತೂ ಸಾಪೇಕ್ಷ. ಇನ್ನು ಕೆಲವೊಮ್ಮೆ ಸಂತೋಷದ ಕ್ಷಣಗಳೆಂಬುವುಗಳು ಆ ಕ್ಷಣದ ಸೊತ್ತುಗಳಾಗಿಬಿಡುತ್ತವೆ. ಕ್ಷಣಿಕ ಸುಖ ಕೊಡುವಂಥ ಐಹಿಕಸುಖಭೋಗಗಳು, ಕೆಟ್ಟಚಟಗಳು ಜೀವನದುದ್ದಕ್ಕೂ ಬರುತ್ತಲೂ ಹೋಗುತ್ತಲೂ ಇರುತ್ತವೆ. ಅನೇಕ ಬಾರಿ ಈ ಗಳಿಗೆಗಳು ರಸವನ್ನು ಹೀರಿ ಬಿಸುಟ ಕಬ್ಬಿನ ಜಲ್ಲೆಯಾಗಿಬಿಡುತ್ತವೆ.
ಹೀಗಾಗಿ ಯಾವತ್ತೂ ಸಂತೋಷದ ಕೀಲಿಕೈ ಜಾರಿಹೋಗದೆ ಎಂದೆಂದಿಗೂ ನಮ್ಮೊಂದಿಗೆ ಇರಬೇಕಾದರೆ ಏನು ಮಾಡಬೇಕು – ಎಂಬ ಪ್ರಶ್ನೆ ಕಾಡಿದಾಗ ವೈಯಕ್ತಿಕವಾಗಿ ನಾನು ಕಂಡುಕೊಂಡಿರುವುದು ಮಗುವಿನೊಂದಿಗೆ ಮಗುವಾಗುವ ಮನಸ್ಸು ನಮ್ಮದಾಗಬೇಕು ಎಂದು. ಮೋಸ, ವಂಚನೆ, ಇನ್ನೊಬ್ಬರನ್ನು ಕಂಡು ಮಸೆಯುವ ಗುಣ ತುಂಬಿರುವ ಪ್ರಪಂಚದಲ್ಲಿ ಅನೇಕ ಬಾರಿ ಅನಿವಾರ್ಯವಾಗಿ ಬಲಿಪಶುಗಳಾಗಿಬಿಡುತ್ತೇವೆ ಅಥವಾ ನಾವೇ ಮುಖವಾಡವನ್ನು ಹೊತ್ತುಬಿಡುತ್ತೇವೆ. ಇಂಥ ಸಂದರ್ಭಗಳಲ್ಲಿ ಮಗುತನವನ್ನು ಕಾಪಾಡಿಕೊಳ್ಳುವುದು ಕಷ್ಟವೇ. ಆದರೆ ಮಕ್ಕಳನ್ನು ಗಮನಿಸಿದರೆ ಪ್ರತಿಯೊಂದು ಕ್ಷಣಗಳನ್ನು, ಘಟನೆಗಳನ್ನು ಅವರಷ್ಟು ತನ್ಮಯತೆಯಿಂದ ಅನುಭವಿದಷ್ಟು ಅನುಭವಿಸಲಿಕ್ಕೆ ಮತ್ಯಾರಿಂದಲೂ ಸಾಧ್ಯವಿಲ್ಲ.
ಬೆಕ್ಕು ‘ಮಿಯಾಂವ್’ ಎಂದರೂ ಖುಷಿ, ಕಾಗೆಯ ‘ಕರ್ರ್’ ದನಿ ಕೇಳಿದರೂ ಖುಷಿ. ಸತ್ಯ, ಸುಳ್ಳು, ಮೋಸ, ಕಪಟಗಳಿಲ್ಲದ ಅವರ ಪ್ರಪಂಚದಲ್ಲಿ ನಿಷ್ಕಲ್ಮಷ ನಗುವೊಂದು ಬತ್ತದ ಸೆಲೆ. ಅವರೊಂದಿಗಿರುವಷ್ಟು ಹೊತ್ತು ಎಲ್ಲವನ್ನೂ ಮರೆತು ಮನಸ್ಸು ಹಗುರವಾಗುವುದು ಕೂಡ ಅಷ್ಟೇ ಸತ್ಯ. ಸಾಹಿತಿ ಶಿವರಾಮ ಕಾರಂತರ ಸಂತೋಷದ ಲೆಕ್ಕಾಚಾರವೂ ಕೂಡ ಇದೇ. ಮಕ್ಕಳೊಂದಿಗೆ ಮಕ್ಕಳಾದರೆ ಅವರಿಂದ ಪಡೆಯುವ ಸಂತೋಷ ಮತ್ತೆಲ್ಲಿಯೂ ದೊರಕದು. ಅಷ್ಟು ಮಾತ್ರವಲ್ಲ ಮಕ್ಕಳು ತಂದೆ–ತಾಯಿಗೆ ಬಾಲ್ಯದಾಟವನ್ನು ಉಣಿಸಿ ಸಂತೋಷಪಡಿಸುವ ಮೂಲಕ ಬಾಲ್ಯದಲ್ಲೇ ತಮ್ಮ ಋಣವನ್ನು ತೀರಿಸಿಬಿಟ್ಟಿರುತ್ತಾರೆ ಎಂಬ ವಿಚಾರವನ್ನು ಅವರ ಅನೇಕ ಕೃತಿಗಳಲ್ಲಿ ಕಾಣಬಹುದು.ಮನಃಶಾಂತಿಯನ್ನು ಪಡೆಯಲು ಮಕ್ಕಳೊಂದಿಗೆ ಸ್ವಲ್ಪಕಾಲ ಕಳೆಯುವಂಥ ಸಲಹೆಯನ್ನು ಮನಃಶಾಸ್ತ್ರಕೂಡ ನೀಡುತ್ತದೆ. ಹೀಗಾಗಿ ಮಗುವಿನಂಥ ಮನಸ್ಸು ಜೀವಮಾನವಿಡೀ ಕುಂದಲಾರದಂತೆ ಕಾಪಾಡಿಕೊಂಡರೆ ಅದೇ ಸಂತೋಷದ ಮೂಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.