ಲಿಂಗಾಧಾರಿತ ದೌರ್ಜನ್ಯವನ್ನು ವಿರೋಧಿಸುವ ದಿನಾಚರಣೆಯನ್ನು ನವೆಂಬರ್ 25ರಂದು 'ಅಂತರ ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಡಿಸೆಂಬರ್ ಹತ್ತರಂದು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುವವರೆಗೂ ಲಿಂಗಾಧಾರಿತ ದೌರ್ಜನ್ಯ ವಿರೋಧಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ಇಡೀ ಜಗತ್ತೇ ಕಾರ್ಯೋನ್ಮುಖವಾಗಿರುತ್ತದೆ. ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯೂ ಈ ದಿನಗಳಲ್ಲೇ ಸೇರ್ಪಡೆಯಾಗಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಹಕ್ಕುಗಳಿಗೆ ಒತ್ತುಕೊಡುವ ನಿಟ್ಟಿನಲ್ಲಿ ಶ್ರಮಿಸುವುದು ಈ ದಿನಾಚರಣೆಯ ಮುಖ್ಯ ಧ್ಯೇಯ.
2005ರ ಪೂರ್ವದಲ್ಲಿ ಭಾರತೀಯ ಕಾನೂನಿನಲ್ಲಿ ಕೌಟುಂಬಿಕ ದೌರ್ಜನ್ಯದ ವ್ಯಾಖ್ಯಾನದ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆಯು (National Crime Record’s Bureo) 2016ನೇ ಇಸವಿಯ ಪ್ರಕಾರ ಭಾರತದಲ್ಲಿ ಪ್ರತಿ ಮೂರು ನಿಮಿಷಗಳಿಗೊಂದು ಹೆಣ್ಣಿನ ಮೇಲೆ ಅಪರಾಧ ಎಸಗಲಾಗುತ್ತದೆ. ಪ್ರತಿ 77 ನಿಮಿಷಗಳಿಗೆ ಒಬ್ಬ ಮಹಿಳೆ ಹಿಂಸೆಯಿಂದ ಸಾಯುತ್ತಿದ್ದಾಳೆ. ಮದುವೆಯಾದ 100ರಷ್ಟು ಮಹಿಳೆಯರಲ್ಲಿ 20ರಷ್ಟು ಮಹಿಳೆಯರು ದಿನನಿತ್ಯ ಗಂಡನಿಂದ ಅಥವಾ ಕುಟುಂಬದವರಿಂದ ದೈಹಿಕ ಹಲ್ಲೆಗೆ ಗುರಿಯಾಗುತ್ತಿದ್ದಾರೆ. ಪ್ರತಿ ಆರು ಗಂಟೆಗೊಮ್ಮೆ ಒಬ್ಬ ವಿವಾಹಿತ ಮಹಿಳೆಯನ್ನು ಜೀವಂತವಾಗಿ ಸುಡಲಾಗುತ್ತಿದೆ ಅಥವಾ ಹೊಡೆದು ಸಾಯಿಸಲಾಗುತ್ತಿದೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತೆ. ಪ್ರತಿ 9 ನಿಮಿಷಕ್ಕೊಂದು ಕೌಟುಂಬಿಕ ದೌರ್ಜನ್ಯ ಮಹಿಳೆಯ ಮೇಲೆ ಎಸಗಲಾಗುತ್ತಿದೆ.
ದೌರ್ಜನ್ಯಗಳು ಕಡಿಮೆಯಾದಂತೆ ಕಂಡರೂ ದೌರ್ಜನ್ಯದ ರೂಪಗಳು ಬದಲಾಗಿದೆ. ಹೆಣ್ಣುಮಕ್ಕಳು ಹೇಳಿಕೊಂಡ ಸಂಕಟಗಳಿಗಿಂತ ಹೇಳಿಕೊಳ್ಳಲಾರದ ಸಂಕಟಗಳು ಹೆಚ್ಚುತ್ತಿವೆ. ಭಾರತ ಸರ್ಕಾರ 2005ರಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾನೂನನ್ನು ಜಾರಿಗೆ ತಂದರು.
ನೊಂದ ಮಹಿಳೆಯರಿಗೆ ಸೂಕ್ತ ಪರಿಹಾರವನ್ನು ಒದಗಿಸುವ ದಿಕ್ಕಿನಲ್ಲಿ ರೂಪುಗೊಂಡ ಸದರಿ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಲು ಅನೇಕ ತೊಡರುಗಳಿವೆ. ಈ ಕಾನೂನಿನ ಮೂಲ ಆಶಯ ಮಹಿಳೆಯ ಎಲ್ಲ ಪರಿಹಾರ ಹಿಂಸೆಯಿಂದ ಮುಕ್ತವಾಗಿ ಸ್ವಾಭಿಮಾನಪೂರ್ವಕವಾದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಮತ್ತು ದೈಹಿಕ, ಮಾನಸಿಕ, ಲೈಂಗಿಕ, ಭಾವನಾತ್ಮಕ ಹಾಗೂ ಆರ್ಥಿಕ ಹಿಂಸೆಗಳ ವಿರುದ್ಧ ಸದರಿ ಕಾಯಿದೆಯ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂಬುದು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂಕಷ್ಟಕ್ಕಿರುವ ಕಾನೂನಿನ ಆಶಯವಾಗಿದೆ. ಈ ಕಾನೂನಿನಡಿಯಲ್ಲಿ ದೈಹಿಕ, ಮಾನಸಿಕ, ಲೈಂಗಿಕ ಭಾವನಾತ್ಮಕ ಹಾಗೂ ಆರ್ಥಿಕ ಹಿಂಸೆಗಳನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಲಾಗಿದೆ.
ಕೌಟುಂಬಿಕ ದೌರ್ಜನ್ಯವನ್ನು ಕೇವಲ ಕಾನೂನಿನ ಸಮರ ಮಾತ್ರವಲ್ಲದೆ ಇದು ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸಲಾಗಿದೆ.
ಕೌಟುಂಬಿಕ ದೌರ್ಜನ್ಯ ಕಾಯ್ದೆಯಿದೆ. ಕೇವಲ ಗಂಡ, ಅತ್ತೆ, ಮಾವ, ಅವರವರಲ್ಲದೇ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿರುವ ಯಾವುದೋ ವ್ಯಕ್ತಿಯಿಂದ ಮಹಿಳೆ ಹಿಂಸೆಯನ್ನು ಅನುಭವಿಸುತ್ತಿದ್ದರೆ ಇದು ಈ ಕಾನೂನಿನಡಿಯಲ್ಲಿ ಹಿಡಿದಿಟ್ಟುಕೊಂಡಿದೆ. ಈ ಕಾಯ್ದೆಯ ಸಂರಕ್ಷಣಾ ಅಧಿಕಾರಿಗಳಿಂದ ಬಾಧಿತ ಮಹಿಳೆ ಸಹಾಯವನ್ನು ಕೋರಬಹುದು, ನ್ಯಾಯಾಲಯದಿಂದ ಹಣಕಾಸಿನ ಪರಿಹಾರದ ಆಯ್ಕೆಯು ಅವಳಿಗಿದೆ. ಮಕ್ಕಳನ್ನು ತನ್ನ ಹಾರೈಕೆಗೆ ಕೇಳುವ ಅವಕಾಶವು ಮಹಿಳೆಗಿದೆ. ಈ ಎಲ್ಲ ರೀತಿಯ ಹಕ್ಕು ಮತ್ತು ಅವಕಾಶಗಳು ಈ ಕಾನೂನಿನಡಿಯಲ್ಲಿ ಮಹಿಳೆಗೆ ದೊರಕುತ್ತವೆ.
ಅವಕಾಶಗಳನ್ನು ಬಳಸಿಕೊಳ್ಳುವ ಸುಗಮ ದಾರಿ, ತಿಳಿವಳಿಕೆ, ಇವೆಲ್ಲವನ್ನು ನಮ್ಮ ಪ್ರಜ್ಞಾವಂತ ವ್ಯವಸ್ಥೆ ಗೌರವಯುತವಾಗಿ ಒದಗಿಸಬೇಕು.
ಲೇಖಕಿ: ವಕೀಲರು, ಹೈಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.