ಕಲಬುರಗಿ ನಗರದ ಕೊಳೆಗೇರಿಯೊಂದರಲ್ಲಿ ಸಮಾಜದ ಕಟ್ಟಕಡೆಯ ಸಾಲಿನಲ್ಲಿದ್ದ ಸಮುದಾಯವೊಂದರ ಕಡು ಬಡ ಕುಟುಂಬದಲ್ಲಿ 1955ರಲ್ಲಿ ಜನಿಸಿದ್ದ ವಿಜಯಲಕ್ಷ್ಮಿ ದೇಶಮಾನೆ, ಕಷ್ಟಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡವರು. ಅವಿರತ ಪರಿಶ್ರಮ ಮತ್ತು ನಿಸ್ವಾರ್ಥ ಸೇವಾ ಮನೋಭಾವದ ಕಾರಣದಿಂದಾಗಿಯೇ ಭಾರತದ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ನಕ್ಷತ್ರದಂತೆ ಬೆಳಗಿದವರು.
ವಿಜಯಲಕ್ಷ್ಮಿ ಅವರ ಪೂರ್ವಿಕರು ಬಳಸಿದ ಚಪ್ಪಲಿಗಳನ್ನು ಹೊಲಿಯುವ ವೃತ್ತಿಯಲ್ಲಿ ತೊಡಗಿದ್ದವರು. ಅವರ ತಂದೆ ಬಾಬುರಾವ್ ಆ ವೃತ್ತಿಯನ್ನು ತೊರೆದು ಕಟ್ಟಿಗೆ ಕಡಿಯುವುದು, ಕೂಲಿ ಮಾಡುವುದನ್ನು ಆಯ್ದುಕೊಂಡರು. ನಂತರ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿದರು. ತಾಯಿ ರತ್ನಮ್ಮ ತರಕಾರಿ ಮಾರಾಟದಿಂದ ಕುಟುಂಬಕ್ಕೆ ನೆರವಾಗಿದ್ದರು. ವಿಜಯಲಕ್ಷ್ಮಿ ಮತ್ತು ಅವರ ಸಹೋದರ ಕೂಡ ಬಿಡುವಿನ ಅವಧಿಯಲ್ಲಿ ತರಕಾರಿ ಮಾರಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಬಾಬುರಾವ್– ರತ್ನಮ್ಮ ದಂಪತಿಗೆ ವಿಜಯಲಕ್ಷ್ಮಿ ಸೇರಿದಂತೆ ಏಳು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕುಟುಂಬದಲ್ಲಿ ವಿಜಯಲಕ್ಷ್ಮಿ ಅವರು ವೈದ್ಯೆಯಾಗಿ ಬಡವರಿಗೆ ಒಳ್ಳೆಯ ಸೇವೆ ಒದಗಿಸಬೇಕು ಎಂಬುದು ಅವರ ತಂದೆಯ ಕನಸಾಗಿತ್ತು. ಸ್ವಾತಂತ್ರ್ಯ ಹೋರಾಟದಿಂದ ಪ್ರಭಾವಿತರಾಗಿದ್ದ ಬಾಬುರಾವ್, ವೈದ್ಯಕೀಯ ಕ್ಷೇತ್ರದ ಮೂಲಕ ಮಗಳು ಸಾಮಾನ್ಯ ಜನರ ಸಬಲೀಕರಣಕ್ಕೆ ನೆರವಾಗಬೇಕು ಎಂದು ಬಯಸಿದ್ದರು. ದ್ವಿತೀಯ ಪಿಯುಸಿವರೆಗೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ವಿಜಯಲಕ್ಷ್ಮಿ ಅವರು, ಕುಟುಂಬದ ಆರ್ಥಿಕ ಸ್ಥಿತಿಯ ಕಾರಣದಿಂದ ಶಿಕ್ಷಣ ಮುಂದುವರಿಸುವುದು ಅಸಾಧ್ಯ ಎಂಬ ಸ್ಥಿತಿಗೆ ತಲುಪಿದ್ದರು.
1980ರಲ್ಲಿ ಕಲಬುರಗಿ ಭಾಗದಲ್ಲಿ ಭೀಕರ ಬರಗಾಲ ಇತ್ತು. ಮಗಳ ಎಂಬಿಬಿಎಸ್ ಪದವಿ ಪ್ರವೇಶ ಪರೀಕ್ಷೆಯ ಶುಲ್ಕ ಪಾವತಿಗೆ ಹಣ ಹೊಂದಿಸುವುದಕ್ಕೂ ಬಾಬುರಾವ್ ಅವರಿಗೆ ಸಾಧ್ಯವಾಗಲಿಲ್ಲ. ಮಗಳು ವೈದ್ಯೆ ಆಗಲೇಬೇಕು ಎಂಬ ಪತಿಯ ತುಡಿತಕ್ಕೆ ಮನಸೋತ ಪತ್ನಿ ರತ್ನಮ್ಮ ಮಾಂಗಲ್ಯದ ಸರವನ್ನೇ ಬಿಚ್ಚಿ ಕೊಟ್ಟರು. ಅದನ್ನು ಅಡಮಾನ ಇರಿಸಿ ಪಡೆದ ಸಾಲದಲ್ಲೇ ವಿಜಯಲಕ್ಷ್ಮಿ ಅವರ ಎಂಬಿಬಿಎಸ್ ಪ್ರವೇಶ ಪರೀಕ್ಷೆಯ ಶುಲ್ಕ ಪಾವತಿಗೆ ವ್ಯವಸ್ಥೆಯಾಯಿತು. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ದೊರಕಿತು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಬಂದಿದ್ದ ವಿಜಯಲಕ್ಷ್ಮಿ ಅವರಿಗೆ ವೈದ್ಯಕೀಯ ಶಿಕ್ಷಣದ ಮೊದಲ ವರ್ಷ ತುಸು ಕಷ್ಟವಾಯಿತು. ಮೊದಲ ವರ್ಷ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದರು. ಎರಡನೇ ವರ್ಷ ಸುಧಾರಿಸಿಕೊಂಡು ಮೇಲೆದ್ದ ಅವರು, ತಮ್ಮ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ನೊಂದಿಗೆ ವೈದ್ಯೆಯಾಗಿ ಹೊರಬಂದರು. ಬಳಿಕ ಎಂ.ಎಸ್. ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಬಳ್ಳಾರಿಯ ವೈದ್ಯಕೀಯ ಕಾಲೇಜು ಸೇರಿದರು. ಜನರಲ್ ಸರ್ಜರಿ ವಿಭಾಗದಲ್ಲಿ ಎಂ.ಎಸ್. ಪದವಿಯನ್ನೂ ಪಡೆದರು.
ಎಂ.ಎಸ್. ಪದವಿ ಬಳಿಕ ಕ್ಯಾನ್ಸರ್ ತಜ್ಞೆಯಾಗುವ ನಿರ್ಧಾರಕ್ಕೆ ಬಂದ ವಿಜಯಲಕ್ಷ್ಮಿ, ರಾಜ್ಯ ಸರ್ಕಾರದ ಅಧೀನದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿದ್ದರು. ಆ ಕಾಲಘಟ್ಟದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಯೊಳಕ್ಕೆ ವೈದ್ಯೆಯರು ಇರುವುದೇ ವಿರಳ ಎಂಬ ಸ್ಥಿತಿ ಇತ್ತು. ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗಗಳಲ್ಲಿ ಬಹುತೇಕ ಪುರುಷ ವೈದ್ಯರ ಪಾರಮ್ಯವೇ ಇತ್ತು. ಆ ಪರಿಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಕ್ಷೇತ್ರವನ್ನು ಪ್ರವೇಶಿಸಿದ ಡಾ.ವಿಜಯಲಕ್ಷ್ಮಿ ದೇಶಮಾನೆ, ದೇಶದ ಮುಂಚೂಣಿ ಕ್ಯಾನ್ಸರ್ ತಜ್ಞೆಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ದೇಶ ಕಂಡ ಅತ್ಯುತ್ತಮ ವೈದ್ಯರಲ್ಲಿ ಒಬ್ಬರಾದರು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಸಂಸ್ಥೆಯ ಪ್ರಭಾರ ನಿರ್ದೇಶಕಿಯಾಗುವವರೆಗೆ ಬೆಳೆದ ಅವರು, 2015ರಲ್ಲಿ ನಿವೃತ್ತಿ ಹೊಂದಿದರು.
ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳ ಜತೆಯಲ್ಲೇ ಕ್ಯಾನ್ಸರ್ ತಜ್ಞೆಯಾಗಿ ಬೆಳೆದವರು. ಈ ಕಾರಣದಿಂದಾಗಿಯೇ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಸಮಯದ ಪರಿವೆ ಇಲ್ಲದೆ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು. ರೋಗಿಗಳ ಸೇವೆಯಲ್ಲಿ ಅವರ ತಲ್ಲೀನತೆ ಎಷ್ಟು ಗಾಢವಾಗಿ ಇತ್ತು ಎಂಬುದಕ್ಕೆ ವಿಜಯಲಕ್ಷ್ಮಿ ಅವರು ಕೈಗಡಿಯಾರ ಕಟ್ಟದೇ, ಜನರ ಚಲನವಲನಗಳ ಆಧಾರದಲ್ಲೇ ಸಮಯವನ್ನು ಗುರುತಿಸುವ ಸಾಮರ್ಥ್ಯ ಪಡೆದಿದ್ದರು.
ಡಾ. ವಿಜಯಲಕ್ಷ್ಮಿ ಅವರು ವಿಶೇಷವಾಗಿ ಸ್ತನ ಕ್ಯಾನ್ಸರ್ ಚಿಕಿತ್ಸೆ, ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕುರಿತಂತೆ ವ್ಯಾಪಕವಾಗಿ ಕೆಲಸ ಮಾಡಿದರು. ಕ್ಯಾನ್ಸರ್ ರೋಗ ಮತ್ತು ಅದರ ಚಿಕಿತ್ಸೆಗೆ ಸಂಬಂಧಿಸಿದಂತೆ ಆಳವಾದ ಜ್ಞಾನ ಹೊಂದಿರುವ ಅವರು, ಅನೇಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡದಲ್ಲಿ ಕ್ಯಾನ್ಸರ್ ಕುರಿತು ಜ್ಞಾನ ಪ್ರಸಾರಕ್ಕೂ ಕೊಡುಗೆ ನೀಡಿದ್ದಾರೆ. ಬಹುತೇಕರ ಪಾಲಿಗೆ ನಿವೃತ್ತಿ ಜೀವನ ಎಂಬುದು ಆರಾಮದಿಂದ ಕಾಲ ಕಳೆಯುವುದಕ್ಕೆ ಸೀಮಿತ. ಆದರೆ, ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ನಿವೃತ್ತಿ ಜೀವನದ ಬಹುಭಾಗವನ್ನು ಸೇವೆಗಾಗಿಯೇ ಮೀಸಲಿರಿಸಿಕೊಂಡಿದ್ದಾರೆ. ತಿಂಗಳಲ್ಲಿ 15 ದಿನ ಕ್ಯಾನ್ಸರ್ ತಪಾಸಣೆ, ಜಾಗೃತಿ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೆ ಸುತ್ತುತ್ತಾ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.
ಹಮ್ಮು–ಬಿಮ್ಮಗಳಿಲ್ಲದ ವ್ಯಕ್ತಿತ್ವ
ಡಾ.ವಿಜಯಲಕ್ಷ್ಮಿ ದೇಶಮಾನೆ ಭಾರತೀಯ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿ, ಹತ್ತು ಹಲವು ಕೃತಿಗಳನ್ನು ರಚಿಸಿ, ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದವರು. ಆದರೆ, ಅವರದ್ದು ಕಿಂಚಿತ್ತೂ ಹಮ್ಮು–ಬಿಮ್ಮುಗಳಿಲ್ಲದ ವ್ಯಕ್ತಿತ್ವ. ಅತ್ಯಂತ ಸರಳ ಜೀವನ ಶೈಲಿಯನ್ನು ರೂಢಿಸಿಕೊಂಡಿರುವವರು.
__________________________________________________________________
ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.