ADVERTISEMENT

ಪ್ರಜಾವಾಣಿ ಸಾಧಕಿಯರು | ಅವಳ ಸಾಧನೆ ಸಂಭ್ರಮಿಸೋಣ...

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
   

ನಮ್ಮ ಸುತ್ತಲಿನ ಸಮಾಜ ಇಂದು ಇಷ್ಟು ಸಹ್ಯವಾಗಿ ಉಳಿಯುವಲ್ಲಿ ಸ್ತ್ರೀಶಕ್ತಿಯೇ ಪ್ರಧಾನ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಶಕ್ತಿ ಅಷ್ಟೊಂದು ಢಾಳಾಗಿ ಪ್ರಕಟಗೊಳ್ಳದೆ ‘ಅದೃಶ್ಯ’ವಾಗಿ ಉಳಿದಿರುವುದೇ ಹೆಚ್ಚೇನೋ ಎಂಬ ಯೋಚನೆ ಕಾಡುವುದುಂಟು. ಮಹಿಳೆಯು ನಮ್ಮ ಸಮಾಜದ ಚಾಲಕ ಶಕ್ತಿ. ಶಿಕ್ಷಣತಜ್ಞೆಯಾಗಿ, ಸಮಾಜ ಪರಿವರ್ತನೆಯ ಹರಿಕಾರಳಾಗಿ, ಆವಿಷ್ಕಾರಗಳ ಮುಂದಾಳಾಗಿ, ನ್ಯಾಯಪರ ಹೋರಾಟಗಾರ್ತಿಯಾಗಿ, ನಮ್ಮ ಭವಿಷ್ಯದ ಪೋಷಕಿಯಾಗಿ ಅವಳ ಪಾತ್ರದ ಹಿರಿಮೆಗೆ ಎಲ್ಲೆಯೇ ಇಲ್ಲ. ಈ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಇಂತಹ ಸಾಧಕಿಯರನ್ನು ಗೌರವಿಸುವ ಕೆಲಸ ಸಮಾಜದಲ್ಲಿ ಅಷ್ಟಾಗಿ ಆದಂತಿಲ್ಲ. ಮಹಿಳೆಯರ ಸಾಧನೆಗೆ ಸೂಕ್ತ ಮನ್ನಣೆ ಸಹ ಪೂರ್ಣ ಪ್ರಮಾಣದಲ್ಲಿ ಸಿಕ್ಕಂತಿಲ್ಲ. ಇಂತಹ ಯೋಚನೆಗಳು ಹರಳುಗಟ್ಟಿದ್ದೇ ‘ಪ್ರಜಾವಾಣಿ ಸಾಧಕಿಯರು’ ಪ್ರಶಸ್ತಿಯನ್ನು ಆರಂಭಿಸಲು ಮುಖ್ಯ ಕಾರಣ. ಸುತ್ತಲ ಸಮಾಜದ ಪರಿವರ್ತನೆಗೆ ಕಾರಣರಾದ ಅಸಾಮಾನ್ಯ ಸಾಧಕಿಯರ ಯಶೋಗಾಥೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶವನ್ನೂ ಈ ಪ್ರಶಸ್ತಿಯು ತಲೆಯ ಮೇಲೆ ಹೊತ್ತುಕೊಂಡಿದೆ.

ತಮ್ಮ ಪ್ರತಿಭೆಯಿಂದ ಜಗದಗಲ ಬೆಳೆದು ನಿಂತ ಸಾಧಕಿಯರಿಗೆ ಲೆಕ್ಕವೇ ಇಲ್ಲ. ಆದರೆ, ಅವರೆಲ್ಲ ಎಲೆ ಮರೆಯ ಕಾಯಿಗಳಂತೆ ಸಮಾಜಕ್ಕೆ ತಮ್ಮ ಕೈಯಿಂದ ಆದ ಸೇವೆ ಸಲ್ಲಿಸುತ್ತಾ ಹೊರಟಿದ್ದಾರೆ. ಅಂತಹ ಅಸಂಖ್ಯ ಸಾಧಕಿಯರಲ್ಲಿ ಪ್ರಾತಿನಿಧಿಕವಾಗಿ ಹತ್ತು ಜನ ಸಾಧಕಿಯರ ಯಶೋಗಾಥೆಗಳನ್ನು ಪ್ರಜಾವಾಣಿ ಹೆಕ್ಕಿ ತೆಗೆದು ಇಲ್ಲಿ ಸಮಾಜದ ಮುಂದಿಟ್ಟಿದೆ.

ಬನ್ನಿ, ಸಮಾಜ ಪರಿವರ್ತನೆಗೆ ಕಾರಣರಾದ ಈ ಸಾಧಕಿಯರನ್ನು ಒಟ್ಟಾಗಿ ಗೌರವಿಸೋಣ.

ADVERTISEMENT

****

ನಟಿ ತಾರಾ ಅನುರಾಧಾ, ನಿವೃತ್ತ ನ್ಯಾಯಾಧೀಶ ಮಂಜುಳಾ ಚೆಲ್ಲೂರು, ಕ್ರಿಡಾಪಟು ಅಶ್ವಿನಿ ನಾಚಪ್ಪ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಕೆ ರತ್ನಪ್ರಭ.

ಸಾಧಕಿಯರನ್ನು ಗುರುತಿಸುವ ಪ್ರಕ್ರಿಯೆ ಹೆಚ್ಚು ಖುಷಿ ನೀಡಿತು. ಸಹ ತೀರ್ಪುಗಾರರಿಂದ ಹೆಚ್ಚು ಕಲಿತೆ. ಸಾಧಕಿಯರ ಬದುಕು, ಅವರ ಜೀವನ ಮೌಲ್ಯ ನಮಗೂ ಪ್ರೇರಣೆ ನೀಡುವಂಥವು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರಮಿಸುತ್ತಿರುವ ವಿವಿಧ ಸ್ತರದ ಮಹಿಳೆಯರನ್ನು ನೋಡಿದಾಗ ಸೋಜಿಗವೆನಿಸಿತು. ಅರ್ಹರನ್ನೇ ಅಂತಿಮ ಸುತ್ತಿಗೆ ತಂದ ಹೆಗ್ಗಳಿಕೆ ಪ್ರಜಾವಾಣಿಯದ್ದು. ಈ ಸಾಧಕಿಯರ ಬದುಕು ಉಳಿದವರಿಗೂ ಸ್ಫೂರ್ತಿಯಾಗಿದೆ
-ತಾರಾ ಅನೂರಾಧ, ಕನ್ನಡದ ಪ್ರತಿಭಾನ್ವಿತ ನಟಿ
ಪ್ರಜಾವಾಣಿ ಸಾಧಕಿಯರನ್ನು ಆಯ್ಕೆ ಮಾಡಿದ್ದೇ ಅದ್ಭುತವಾದ ಅನುಭವ ನನಗೆ. ಎಲ್ಲ ರೀತಿಯ ಗಮನ ಮತ್ತು ಗೌರವಕ್ಕೆ ಅರ್ಹರಾಗಿರುವ ಈ ಸಾಧಕಿಯರನ್ನು ಸಮಾಜಕ್ಕೆ ಪರಿಚಯಿಸಬೇಕಾದ ಅಗತ್ಯ ಖಂಡಿತವಾಗಿ ಇದೆ. ಸಾಧಕಿಯರ ಆಯ್ಕೆಯಲ್ಲಿ  ಸಮಿತಿಯಲ್ಲಿದ್ದ ಎಲ್ಲರದ್ದೂ ಒಕ್ಕೊರಲ ದನಿಯಾಗಿತ್ತು.
-ನ್ಯಾ.ಮಂಜುಳಾ ಚೆಲ್ಲೂರ್, ನಿವೃತ್ತ ಮುಖ್ಯ ನ್ಯಾಯಮೂರ್ತಿ, ಬಾಂಬೆ, ಕಲ್ಕತ್ತಾ, ಕೇರಳ ಹೈಕೋರ್ಟ್
ಸಾಧಕಿಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿತ್ತು. ಆಯ್ಕೆ ಸಮಿತಿಯಲ್ಲಿ ಚರ್ಚಿಸಿ ಮತ್ತು ಅಳೆದೂ ತೂಗಿ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಯ್ಕೆಗಳಿದ್ದವು. ಸಮಾಜಮುಖಿಯಾಗಿ ದುಡಿಯುತ್ತ ಎಲೆಮರೆಯ ಕಾಯಿಗಳಂತೆ ಇರುವ ಸಾಧಕಿಯರನ್ನು ಗುರುತಿಸಿರುವುದು ಶ್ಲಾಘನೀಯ
-ಅಶ್ವಿನಿ ನಾಚಪ್ಪ, ಅಂತರರಾಷ್ಟ್ರೀಯ ಅಥ್ಲೀಟ್
ಸಾಧಕಿಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಿಷ್ಪಕ್ಷಪಾತವಾಗಿತ್ತು. ಆಯ್ಕೆ ಮಾಡಿದ ಎಲ್ಲರೂ ಅರ್ಹರೇ ಆಗಿದ್ದರು. ಅವರಲ್ಲಿ ಮತ್ತೆ ಆಯ್ಕೆ ಮಾಡುವುದೇ ಸವಾಲಿನ ಕೆಲಸವಾಗಿತ್ತು. ಸಾಮಾಜಿಕ ಸುಧಾರಣೆ ಮತ್ತು ಬದಲಾವಣೆ ತರುವಲ್ಲಿ ಹೆಚ್ಚು ಪ್ರೇರಣೆ ನೀಡುವಂಥ, ಪ್ರಭಾವ ಬೀರುವಂಥ ಸಾಧಕಿಯರನ್ನು ತೀರ್ಪುಗಾರರ ತಂಡ ಒಮ್ಮತದಿಂದ ಆಯ್ಕೆ ಮಾಡಿತು. ‘ಪ್ರಜಾವಾಣಿ’ಯ ಈ ಸ್ತ್ರೀಪರ ನಿಲುವು ಸಮಾಜಮುಖಿಯಾಗಿದೆ. ಅಂತಿಮ ಸುತ್ತಿಗೆ ಬಂದ ಎಲ್ಲ ಸಾಧಕಿಯರಿಗೂ ಅಭಿನಂದನೆಗಳು
-ಕೆ. ರತ್ನಪ್ರಭಾ, ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.