‘ಕಡೂರು ತಾಲ್ಲೂಕಿನ ಕಾಡಂಚಿನ ಗ್ರಾಮದಲ್ಲಿ ಆಗ ತಾನೆ ಪ್ರೌಢಶಾಲೆ ಆರಂಭವಾಗಿತ್ತು. 1994ರಲ್ಲಿ ಮೊದಲ ಬಾರಿ ಸಹ ಶಿಕ್ಷಕಿಯಾಗಿ ನೇಮಕವಾಗಿದ್ದ ನಾನು ಹೊಸಶಾಲೆಯ ಹೊಸ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದೆ. ತರಗತಿಗಳು ಆರಂಭವಾಗಿ ನಾಲ್ಕು ತಿಂಗಳೂ ಆಗಿರಲಿಲ್ಲ. ಪೋಷಕ ದಂಪತಿಯೊಬ್ಬರು ತಮ್ಮ ಮನೆಯ ಮದುವೆ ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು. ಲಗ್ನ ಪತ್ರಿಕೆ ತಿರುವಿ ನೋಡಿದಾಕ್ಷಣ.. ಅರೆ ಈಕೆ ನಮ್ಮ ಶಾಲೆಯ ವಿದ್ಯಾರ್ಥಿನಿ. ಅವಳಿನ್ನೂ 8ನೇ ತರಗತಿ. ಇಷ್ಟು ಬೇಗ ಮದುವೆ ಎಂದು ಉದ್ಗರಿಸಿದ್ದೆ. ಗುಟ್ಟಾಗಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಬಾಲ್ಯ ವಿವಾಹ ತಡೆದಿದ್ದೆ...’
–ಇದು ಬೆಂಗಳೂರಿನ ಚಿಕ್ಕಪೇಟೆಯ ₹100 ಕೋಟಿ ಬೆಲೆ ಬಾಳುವ ಸರ್ಕಾರಿ ಶಾಲೆಯ ಜಾಗವನ್ನು ಮರಳಿ ಶಾಲೆಗೆ ಕೊಡಿಸಲು ಶ್ರಮಿಸಿ ಯಶಸ್ವಿಯಾದ ಆ ಶಾಲೆಯ ಮುಖ್ಯಶಿಕ್ಷಕಿ ಎಂ. ಶೀಲಾರಾಣಿ ಅವರ ವೃತ್ತಿ ಬದುಕಿನ ಆರಂಭದ ಸಾಹಸಗಾಥೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಬೀರೂರಿನ ಆರ್.ಮರುಳಪ್ಪ–ಕಾತ್ಯಾಯಿನಿ ದಂಪತಿಯ ಇಬ್ಬರು ಪುತ್ರಿಯರಲ್ಲಿ ಶೀಲಾರಾಣಿ ಹಿರಿಯ ಮಗಳು. ಡಿಪ್ಲೊಮಾ ಎಂಜಿನಿಯರಿಂಗ್ ಮುಗಿಸಿದ ನಂತರ ದಿಕ್ಕು ಬದಲಿಸಿ ಮತ್ತೆ ಪದವಿ, ಬಿ.ಇಡಿ ಪೂರೈಸಿದರು. ನಂತರ ಎಂ.ಎ, ಎಂ.ಇಡಿ ಪದವಿ ಪಡೆದರು. 1998ರಲ್ಲಿ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್) ಪರೀಕ್ಷೆ ಬರೆದು ಮುಖ್ಯ ಶಿಕ್ಷಕಿಯಾದರು. ಶೀಲಾರಾಣಿ ಅವರ ವೃತ್ತಿ ಬದುಕಿನ ಅತ್ಯಂತ ದಿಟ್ಟ ನಿರ್ಧಾರಗಳಲ್ಲಿ ತಾವು ಕೆಲಸ ಮಾಡಿದ ಶಾಲೆಗಳಲ್ಲಿ ನಕಲು ತಡೆಗೆ ತೆಗೆದುಕೊಂಡ ಕ್ರಮಗಳು ಮುಖ್ಯವಾದವು. ಮುಖ್ಯ ಶಿಕ್ಷಕಿಯಾಗಿ ಅವರು 1998ರಲ್ಲಿ ವರದಿ ಮಾಡಿಕೊಂಡ ಹಿಂದಿನ ವರ್ಷ ಆ ಶಾಲೆಯ ಫಲಿತಾಂಶ ಅತ್ಯುತ್ತಮವಾಗಿತ್ತು. ಆದರೆ, ಫಲಿತಾಂಶಕ್ಕಾಗಿ ಶಾಲೆಗಳು ಅನುಸರಿಸುತ್ತಿದ್ದ ಮಾರ್ಗ ಸರಿ ಇರಲಿಲ್ಲ. ನಕಲು ತಡೆದರೆ ಫಲಿತಾಂಶ ಕುಸಿಯುತ್ತದೆ. ಹಿರಿಯ ಅಧಿಕಾರಿಗಳ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಒಪ್ಪದ ಅವರು ನಕಲು ಸಂಸ್ಕೃತಿಗೆ ತಿಲಾಂಜಲಿ ನೀಡಿದ್ದರು. ನಿರೀಕ್ಷಿಸಿದಂತೆಯೇ ಮರು ವರ್ಷ ಫಲಿತಾಂಶ ಕುಸಿದಿತ್ತು. ಮೇಲಧಿಕಾರಿಗಳಿಂದ ಕಿರಿಕಿರಿಯನ್ನೂ ಎದುರಿಸಬೇಕಾಯಿತು. ಕೊನೆಗೆ ಹೆಚ್ಚುವರಿ ತರಗತಿಗಳು, ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ಪಾಠಗಳು ಮತ್ತಿತರ ಕ್ರಮಗಳ ಮೂಲಕ ಶಾಲೆ ಮತ್ತೆ ‘ಫಲಿತಾಂಶ’ದ ಹಳಿಗೆ ಬಂದಿತ್ತು.
ಸುಮಾರು ₹100 ಕೋಟಿ ಮೌಲ್ಯದ ನಿವೇಶನ, ಕಟ್ಟಡ ಒಳಗೊಂಡ ಚಿಕ್ಕಪೇಟೆ ಸರ್ಕಾರಿ ಶಾಲೆಯ ಸ್ವತ್ತನ್ನು ಶಾಲೆಗೇ ಮರಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದ ನಂತರ ಶೀಲಾರಾಣಿ ಹೆಸರು ಶಿಕ್ಷಣ ವಲಯದಲ್ಲಿ ಚಿರಪರಿಚಿತವಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಪೇಟೆ ಒಟಿಸಿ ರಸ್ತೆಯ 13,735 ಚದರ ಅಡಿ ವಿಸ್ತೀರ್ಣದ ಮೈದಾನದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆ ಆರಂಭಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಅದೇ ಜಾಗದಲ್ಲಿ ಪ್ರೌಢಶಾಲೆಯನ್ನೂ ತೆರೆಯಲಾಗಿತ್ತು. 1979ರ ವೇಳೆಗೆ ಶಿಥಿಲಾವಸ್ಥೆ ತಲುಪಿದ್ದ ಶಾಲಾ ಕೊಠಡಿಗಳನ್ನು ಕೆಡವಿ, ಹೊಸ ಕೊಠಡಿ ನಿರ್ಮಿಸಿಕೊಡಲು ಅವಕಾಶ ಕೋರಿ ರಜತಾ ಎಂಟರ್‌ಪ್ರೈಸಸ್ ಎಂಬ ಖಾಸಗಿ ಸಂಸ್ಥೆಯೊಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಂಸ್ಥೆಯ ಮನವಿ ಪುರಸ್ಕರಿಸಿದ ಸರ್ಕಾರ, ನೆಲ ಹಾಗೂ ಮೊದಲ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟಲು, ಎರಡನೇ ಮಹಡಿಯಲ್ಲಿ ಶಾಲೆಗಳಿಗೆ ಕೊಠಡಿ ನಿರ್ಮಿಸಿಕೊಡಲು ಒಪ್ಪಂದ ಮಾಡಿಕೊಂಡು ತಿಂಗಳಿಗೆ ₹16,350ರಂತೆ 26 ವರ್ಷಗಳಿಗೆ ಶಾಲಾ ಜಾಗವನ್ನು ಗುತ್ತಿಗೆ ನೀಡಿತ್ತು. ಗುತ್ತಿಗೆ ಅವಧಿ 2005ಕ್ಕೆ ಮುಕ್ತಾಯವಾಗಿತ್ತು.
ನಂತರ ರಜತಾ ಕಾಂಪ್ಲೆಕ್ಸ್ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2011ರಲ್ಲಿ ಪ್ರತಿ ತಿಂಗಳು ₹6.41 ಲಕ್ಷ ಬಾಡಿಗೆಗೆ 10 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ಈ ಅವಧಿಯೂ 2021 ಜೂನ್‌ಗೆ ಮುಕ್ತಾಯವಾಗಿತ್ತು. ಬಳಿಕ ಸಂಘದ ಕೋರಿಕೆಯನ್ನು ಪರಿಗಣಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ, ನಾಲ್ಕು ಮಹಡಿಗಳ ಕಟ್ಟಡವನ್ನು ಮಾರಾಟ, ಗುತ್ತಿಗೆ ಅಥವಾ ಹರಾಜು ಹಾಕಲು ಅನುಮತಿ ನೀಡುವಂತೆ ಕೋರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಈ ಕುರಿತು ‘ಪ್ರಜಾವಾಣಿ’ 2022, ಆ.18ರ ಸಂಚಿಕೆಯಲ್ಲಿ ‘ಸರ್ಕಾರಿ ಶಾಲೆ ಮಾರಾಟಕ್ಕಿದೆ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಶಾಲಾ ಆಸ್ತಿ ಕೈತಪ್ಪುತ್ತಿರುವ ವಿಷಯವನ್ನು ಇಲಾಖೆಯ ಗಮನಕ್ಕೆ ತಂದು ಕೆಲಸದ ಮಧ್ಯೆಯೂ ಶಾಲೆಯ ಆಸ್ತಿ ಉಳಿಸಲು ಶೀಲಾರಾಣಿ ನಿರಂತರ ಶ್ರಮಿಸಿದರು. ಶಾಲಾ ಕೆಲಸದ ಬಿಡುವಿನ ಸಮಯದಲ್ಲಿ ಕಚೇರಿಗಳಿಗೆ ಅಲೆದು, ತಾವು ಸಂಗ್ರಹಿಸಿದ ದಾಖಲೆಗಳನ್ನು ನೀಡಿದರು. ಅದು ಶಾಲೆಯ ಜಾಗ ಎಂದು ಸಾಬೀತುಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ಗಿರಿಜಮ್ಮ ಅವರಿಗೆ ಬೆನ್ನೆಲುಬಾಗಿ ನಿಂತರು. ಇದರ ಫಲವಾಗಿ ಕಂದಾಯ ಇಲಾಖೆ ಆಸ್ತಿಯನ್ನು ಶಾಲೆಗೆ ಮರಳಿಸಿ, ಆದೇಶ ಹೊರಡಿಸಿತು. ಬಡವರು, ಕೂಲಿ ಕಾರ್ಮಿಕರು, ದಿನಗೂಲಿಗಳ ಮಕ್ಕಳೇ ಹೆಚ್ಚಾಗಿರುವ ಶಾಲೆಯಲ್ಲಿ ಹಲವರ ಶಿಕ್ಷಣಕ್ಕೆ ಶೀಲಾರಾಣಿ ನೆರವಾಗಿದ್ದಾರೆ. ಶಾಲೆ ತೊರೆದ ಮಕ್ಕಳ ಮನೆಗಳಿಗೆ ತೆರಳಿ ಮರಳಿ ಕರೆತರುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಶಾಲಾ ಮಕ್ಕಳ ಪಾಲಿಗೆ ‘ಅಮ್ಮ‘ನೇ ಆಗಿದ್ದಾರೆ.
__________________________________________________________________
ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.