ADVERTISEMENT

ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ‘ತೆರೇಸಮ್ಮ’

ವೆಂಕಟೇಶ ಜಿ.ಎಚ್.
Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
<div class="paragraphs"><p>ಸಿಸ್ಟರ್ ಶೋಭನಾ</p></div>

ಸಿಸ್ಟರ್ ಶೋಭನಾ

   

ಭದ್ರಾವತಿಯ ನಿರ್ಮಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಬಂದ ಶೋಭನಾ, ಬಿಡುವಿನ ವೇಳೆಯಲ್ಲಿ ಗ್ರಾಮೀಣರು ಮತ್ತು ಬಡವರ ಶುಶ್ರೂಷೆ ಆರಂಭಿಸಿದರು. ಈ ವೇಳೆ ಅಲ್ಲಿನ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಟೊಂಕ ಕಟ್ಟಿ ನಿಂತರು.

ಅದು 1980ರ ದಶಕದ ಮಧ್ಯಭಾಗ. ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳ ಸೈರನ್‌ ಸದ್ದು ಭದ್ರಾವತಿಗೆ ‘ಉದ್ಯಮ ನಗರ’ ಎಂಬ ಶ್ರೇಯ ತಂದುಕೊಟ್ಟಿತ್ತು. ಹೀಗಾಗಿ, ದೇಶದ ವಿವಿಧೆಡೆಯಿಂದ ಅದರಲ್ಲೂ ತಮಿಳುನಾಡಿನಿಂದ ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇಲ್ಲಿ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದರು.

ADVERTISEMENT

ಅವರೆಲ್ಲ ಭದ್ರಾವತಿ ಮಾತ್ರವಲ್ಲ ಸಮೀಪದ ಕಾರೇಹಳ್ಳಿ, ನಿರ್ಮಲಪುರ, ಹರಳೀಹಳ್ಳಿ, ಬಿಳಕಿ, ವೀರಾಪುರ, ಸಿದ್ಧಾಪುರ, ಚಟ್‌ಪಟ್‌ ನಗರ, ಕೂಡ್ಲಿಗೆರೆ ಗ್ರಾಮಗಳ ಸುತ್ತಲೂ ‘ಕ್ಯಾಂಪ್‌’ ಹೆಸರಲ್ಲಿ ಜೋಪಡಿಗಳಲ್ಲಿ ನೆಲೆನಿಂತಿದ್ದರು.

ಬಡತನಕ್ಕೆ ಅನ್ವರ್ಥವಾಗಿದ್ದ ಅವರೆಲ್ಲರೂ ಅಂದಂದಿನ ಅನ್ನವನ್ನು ಅಂದೇ ದುಡಿಯಬೇಕಿತ್ತು. ದಿನವಿಡೀ ಮೈಮುರಿದು ದುಡಿದು ಸಂಜೆ ಪಡೆಯುತ್ತಿದ್ದ ಕೂಲಿಯು ಗಂಡಸರಿಗೆ ಸಾರಾಯಿ ಖರ್ಚಿಗೆ ಆಗಿ ಮಿಕ್ಕಿದರೆ ಮನೆಗೆ ಎಂಬಂತಿತ್ತು. ಹೆಣ್ಣು ಮಕ್ಕಳ ಕೂಲಿ ಮನೆಯ ವೆಚ್ಚಕ್ಕೆ ಸರಿಹೋಗುತ್ತಿತ್ತು. ಅಂತೆಯೇ ಮಕ್ಕಳಿಗೆ ಶಿಕ್ಷಣ ‘ಅನಿವಾರ್ಯವಲ್ಲ’ ಎಂಬ ಸ್ಥಿತಿ ಇತ್ತು. ಕುಡಿತ ಸೇರಿದಂತೆ ಬೇರೆ ಬೇರೆ ಚಟಗಳಿಗೆ ದುಡಿದ ಹಣ ಖರ್ಚಾಗುತ್ತಿದ್ದರೆ, ಮನೆಯ ಖರ್ಚಿಗೆ, ಅಪ್ಪ ಮಾಡುತ್ತಿದ್ದ ಸಾಲ ತೀರಿಸುವುದಕ್ಕೆ ಪುಟ್ಟ ಮಕ್ಕಳು ಅಕ್ಕಪಕ್ಕದ ಹಳ್ಳಿಗಳ ಕೃಷಿಕರ ಮನೆಯಲ್ಲಿ ದನ ಕಾಯುವ ಕೆಲಸಕ್ಕೆ, ಜೀತಕ್ಕೆ ಇರುತ್ತಿದ್ದರು. ಅದೂ ವರ್ಷಕ್ಕೆ ₹60 ಕೂಲಿಗೆ.

ಈ ಹೊತ್ತಿನಲ್ಲಿ ದೂರದ ಕೇರಳದ ಎರ್ನಾಕುಲದಿಂದ ಭದ್ರಾವತಿಗೆ ಬಂದವರು ಸಿಸ್ಟರ್ ಶೋಭನಾ. ಭದ್ರಾವತಿಯಲ್ಲಿ ಸೇಂಟ್ ಚಾರ್ಲ್ಸ್ ಬರೋಮಿಯಾ ಸಂಸ್ಥೆ 1954ರಿಂದಲೂ ನಡೆಸುತ್ತಿರುವ ನಿರ್ಮಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಬಂದ ಶೋಭನಾ, ಬಿಡುವಿನ ವೇಳೆಯಲ್ಲಿ ಗ್ರಾಮೀಣರು ಹಾಗೂ ಬಡವರ ಶುಶ್ರೂಷೆ ಆರಂಭಿಸಿದರು. ಈ ವೇಳೆ ಅಲ್ಲಿನ ಕೂಲಿ ಕಾರ್ಮಿಕರ ಬದುಕನ್ನು ಹತ್ತಿರದಿಂದ ಕಂಡರು. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಟೊಂಕ ಕಟ್ಟಿ ನಿಂತರು.

ನಿತ್ಯ ಮನೆಮನೆಗೆ ಹೋಗಿ ಪಾಲಕರ ಮನವೊಲಿಸುತ್ತಿದ್ದರು. ಸ್ಥಳೀಯ ಕೃಷಿಕರ ಬಳಿ ಮುಂಗಡವಾಗಿ ಪಡೆದಿದ್ದ ಹಣ ತಾವೇ ಪಾವತಿಸಿ ಜೀತ ಬಿಡಿಸಿ ಮಕ್ಕಳನ್ನು ಮರಳಿ ಕರೆ ತಂದು ಸಮೀಪದ ಸರ್ಕಾರಿ ಶಾಲೆಗೆ ಸೇರಿಸತೊಡಗಿದರು. ಆ ಮಕ್ಕಳಿಗೆ ಭದ್ರಾವತಿಯಲ್ಲಿ ಶ್ರೀಮಂತರ ಮಕ್ಕಳು ಓದುತ್ತಿದ್ದ ಶಾಲೆಗಳಿಂದ ಬಟ್ಟೆ, ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ದಾನ ಪಡೆದು ತಂದುಕೊಟ್ಟು ಪ್ರೋತ್ಸಾಹಿಸಿದರು. ಆದರೆ, ಕೆಲ ದಿನಗಳಲ್ಲಿಯೇ ಆ ಮಕ್ಕಳು ಮನೆಯಲ್ಲಿನ ಬಡತನ ಪರಿಸ್ಥಿತಿಯ ಕಾರಣ ಮತ್ತೆ ಶಾಲೆ ಬಿಟ್ಟು ಜೀತಕ್ಕೆ ಮರಳುತ್ತಿದ್ದರು. ಅದರ ಹಿಂದೆ ಪಾಲಕರ ಒತ್ತಾಸೆಯೂ ಇರುತ್ತಿತ್ತು. ಪದೇಪದೇ ಮನೆಗಳಿಗೆ ಎಡತಾಕಿ ಹರಸಾಹಸಪಟ್ಟು ಮತ್ತೆ ಆ ಪಾಲಕರ ಮನವೊಲಿಸಲು ಯತ್ನಿಸುತ್ತಿದ್ದ ಶೋಭನಾ, ಆ ಮಕ್ಕಳನ್ನು ಊರಿನ ಹತ್ತಿರದ ಬದಲು ದೂರದ ಊರುಗಳಲ್ಲಿನ ಹಾಸ್ಟೆಲ್‌ಗೆ ದಾಖಲಿಸಿ ಓದು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಅದರ ಫಲವಾಗಿ 170ಕ್ಕೂ ಹೆಚ್ಚು ಮಕ್ಕಳು ಈಗ ಸರ್ಕಾರಿ ನೌಕರಿ ಮಾತ್ರವಲ್ಲ ಖಾಸಗಿ ಕ್ಷೇತ್ರದಲ್ಲೂ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು ಸುಭದ್ರ ಬದುಕು ಕಟ್ಟಿಕೊಂಡಿದ್ದಾರೆ.

ಸ್ತ್ರೀಶಕ್ತಿ ಸ್ವ–ಸಹಾಯ ಸಂಘಗಳ ಬಲ

ಕಾರ್ಮಿಕರ ಕುಟುಂಬಗಳ ಬಹುತೇಕ ಗಂಡಸರು ಸಾರಾಯಿ, ಓ.ಸಿ. ಜೂಜಿನಂತಹ ದುಶ್ಚಟಗಳ ದಾಸರಾಗಿದ್ದರು. ಅಂತಹ ಮನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆ ಕುಟುಂಬಗಳ ಹೆಣ್ಣುಮಕ್ಕಳನ್ನು ಸಂಘಟಿಸಿದ ಸಿಸ್ಟರ್ ಶೋಭನಾ, ಸ್ತ್ರೀಶಕ್ತಿ
ಸ್ವ–ಸಹಾಯ ಸಂಘಗಳನ್ನು ರಚಿಸಿ ನೋಂದಣಿ ಮಾಡಿಸಿದರು. ಅವರಿಗೆ ಸರ್ಕಾರದ ವಿವಿಧ ಇಲಾಖೆಗಳ ನೆರವು, ತರಬೇತಿ ಕೊಡಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೇರಣೆಯಾದರು. ಅದರ ಫಲವಾಗಿ ಹೆಣ್ಣುಮಕ್ಕಳು ಹೈನುಗಾರಿಕೆ, ಕುರಿ ಸಾಕಾಣಿಕೆ, ಟೈಲರಿಂಗ್, ತಿನಿಸು ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ ಕೆಲಸದಲ್ಲಿ ತೊಡಗಿಕೊಂಡರು. ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಕೊಡಿಸಿ ಪ್ರೋತ್ಸಾಹಿಸಿದರು. ಶೋಭನಾ ಅವರ ಒತ್ತಾಸೆಯ ಫಲವಾಗಿ ಭದ್ರಾವತಿ ತಾಲ್ಲೂಕಿನಾದ್ಯಂತ 240 ಸ್ವ–ಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, 4,000ಕ್ಕೂ ಹೆಚ್ಚು ಮಹಿಳೆಯರು ಸದಸ್ಯತ್ವ ಪಡೆದಿದ್ದಾರೆ.

ದಾನಿಗಳಿಂದ ಆರ್ಥಿಕ ಸಹಾಯ ಪಡೆದು ಹೌಸಿಂಗ್ ಸ್ಕೀಮ್ ಯೋಜನೆಯಡಿ ತಾಲ್ಲೂಕಿನಲ್ಲಿ 12 ಕುಟುಂಬಗಳಿಗೆ ಮನೆ ಹಾಗೂ 140 ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಬಡ ಕುಟುಂಬದ 15 ಯುವತಿಯರಿಗೆ ವಿವಾಹ ಮಾಡಿಸಿದ್ದಾರೆ. ಕುಡಿತದ ವ್ಯಸನ ಬಿಡಿಸಲು ಉಚಿತ ಆಶ್ರಮ ವ್ಯವಸ್ಥೆ ಮಾಡಿದ್ದು, ಒಂದು ಬಾರಿಗೆ 30 ಮಂದಿಗೆ ಅಲ್ಲಿ ಆಶ್ರಯ ನೀಡಿ ವ್ಯಸನ ಬಿಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಅನಕ್ಷರಸ್ಥ ಮಹಿಳೆಯರು ಬ್ಯಾಂಕ್ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ಪ್ರತಿ ತಿಂಗಳು ತರಬೇತಿ, ಕಾರ್ಯಾಗಾರ ಮತ್ತು ಕರಕುಶಲ ವಸ್ತು ತಯಾರಿಕೆ ತರಬೇತಿ ಕಾರ್ಯಕ್ರಮ ನೀಡುತ್ತಿದ್ದಾರೆ.

ಸಿಸ್ಟರ್ ಶೋಭನಾ ಕೇರಳದ ಕೃಷಿಕ ಕುಟುಂಬದಿಂದ ಬಂದವರು. ತಂದೆ ವರ್ಗಿಸ್ ಚಾಕೊ, ತಾಯಿ ಯೆಲ್ಲಿ ಚಾಕೊ. ಇಬ್ಬರು ಸಹೋದರ– ಸಹೋದರಿ ಇದ್ದಾರೆ. ಪ್ರಾಥಮಿಕ ಶಿಕ್ಷಣ ಎರ್ನಾಕುಲದ ಸೇಂಟ್ ಲಿಟಲ್ ತೆರೇಸಾ ಶಾಲೆಯಲ್ಲಿ ಪ್ರಾರಂಭಿಸಿ, 1971ರಲ್ಲಿ ಕ್ರೈಸ್ತ ಧರ್ಮಭಗಿನಿಯಾಗಿ ಸೇಂಟ್ ಚಾರ್ಲ್ಸ್ ಬರೋಮಿಯೋ ಸಂಸ್ಥೆ ಸೇರಿದರು. ಸಾಮಾಜಿಕ ಸೇವೆಯಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಮುಗಿಸಿದ ಅವರು, 1982ರಲ್ಲಿ ಬೆಂಗಳೂರಿಗೆ ಬಂದು ಬಿಎಸ್‌ಡಬ್ಲ್ಯು ಪದವಿ ಪಡೆದರು. 1986ರಲ್ಲಿ ಭದ್ರಾವತಿಗೆ ಬಂದ ಅವರು, 1987ರಲ್ಲಿ ಸಮಾಜ ಸೇವೆಯ ನಿರ್ದೇಶಕಿಯಾಗಿ ಆಯ್ಕೆಯಾದರು. ಅಲ್ಲಿಂದ ಅವರ ಸೇವಾ ಕಾರ್ಯಕ್ಕೆ ಗರಿ ಮೂಡಿತು.

ಮೂರೂವರೆ ದಶಕಗಳ ತಮ್ಮ ಈ ಸಮಾಜ ಸೇವೆ ಹಾದಿಯಲ್ಲಿ ಕಾಲ್ನಡಿಗೆ, ಸೈಕಲ್‌ನಲ್ಲಿ ಭದ್ರಾವತಿ ತಾಲ್ಲೂಕಿನ ಹಳ್ಳಿಹಳ್ಳಿಗಳನ್ನು ಸಿಸ್ಟರ್‌ ಶೋಭನಾ ಸುತ್ತಿದ್ದಾರೆ. ಗ್ರಾಮೀಣರ ಪ್ರೀತಿಗೂ ಪಾತ್ರರಾಗಿದ್ದಾರೆ. ಸ್ಥಳೀಯರು ‘ತೆರೇಸಮ್ಮಾ’ ಎಂದು ಕರೆದು ಶೋಭನಾ ಅವರಿಗೆ ಪ್ರೀತಿ ತೋರ್ಪಡಿಸುತ್ತಾರೆ. ಯಾವುದೇ ಪ್ರಚಾರ, ಸನ್ಮಾನಕ್ಕೆ ಒತ್ತುಕೊಡದೆ ಬಡಜನರ ಶ್ರೇಯೋಭಿವೃದ್ಧಿಗೆ ತೆರೆದುಕೊಂಡು ಎಲೆಮರೆಯ ಕಾಯಿಯಂತೆಯೇ ಈ ‘ತೆರೇಸಮ್ಮ’ (ಸಿಸ್ಟರ್‌ ಶೋಭನಾ) ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.