ADVERTISEMENT

ಪ್ರಜಾವಾಣಿ ಸಾಧಕಿಯರು | ಎರಡನೇ ದರ್ಜೆ ಪ್ರಜೆಗಳು ನಾವಲ್ಲ...

ಸಂತೋಷ ಈ.ಚಿನಗುಡಿ
Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
<div class="paragraphs"><p>ಸುಜಾತ ಮರಡಿ ಹಾಗೂ ರೂಪಾ ಮರಡಿ</p></div>

ಸುಜಾತ ಮರಡಿ ಹಾಗೂ ರೂಪಾ ಮರಡಿ

   

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಗ್ರಾಮದ ಸಹೋದರಿಯರಾದ ಸುಜಾತಾ ಮರಡಿ ಹಾಗೂ ರೂಪಾ ಮರಡಿ ‘ಪುರುಷ ಪ್ರಧಾನ ಸಮಾಜ’ ಎಂಬ ಮಾತಿಗೆ ಸಡ್ಡು ಹೊಡೆದು ನಿಂತವರು. ಗಂಡುಮಕ್ಕಳು ಹುಟ್ಟಲಿಲ್ಲ ಎಂದು ಕೊರಗುತ್ತಿದ್ದ ತಂದೆ– ತಾಯಿಗೆ ತಾವೇ ಗಂಡುಮಕ್ಕಳು ಎಂದು ಸಾಧಿಸಿ ತೋರಿಸಿದವರು. ಕೃಷಿ ಮಾಡಿ ಸ್ವಾವಲಂಬಿಯಾದವರು. ‘ಹೆಣ್ಣು ಎರಡನೇ ದರ್ಜೆ ನಾಗರಿಕಳಲ್ಲ’ ಎಂಬುದಕ್ಕೆ ಜ್ವಲಂತ ನಿದರ್ಶನವಾದವರು.

ಬಸವರಾಜ ಮರಡಿ ಹಾಗೂ ಶಕುಂತಲಾ ದಂಪತಿಗೆ ಆರು ಹೆಣ್ಣುಮಕ್ಕಳಿದ್ದಾರೆ. ಅವರಲ್ಲಿ ನಾಲ್ವರು ಮದುವೆಯಾಗಿ ಪತಿ ಮನೆಯಲ್ಲಿದ್ದಾರೆ. ಆದರೆ, ಸುಜಾತಾ ಮತ್ತು ರೂಪಾ ಮದುವೆ ಬಂಧನದಿಂದ ದೂರ ಉಳಿದು ಗಂಡುಮಕ್ಕಳಂತೆ ಬದುಕಲು ಪ್ರತಿಜ್ಞೆ ಮಾಡಿದ್ದಾರೆ. ಬಾಯಿಮಾತಿಗೆ ಮಾತ್ರವಲ್ಲ; ತಮ್ಮ ಜೀವನ ಪದ್ಧತಿಯನ್ನೂ ಅವರು ಗಂಡುಮಕ್ಕಳಂತೆ ಪರಿವರ್ತನೆ ಮಾಡಿಕೊಂಡಿದ್ದಾರೆ.

ADVERTISEMENT

ಬಸವರಾಜ ಅವರಿಗೆ ಎಂಟು ಸಹೋದರರು. ಉಳಿದವರಿಗೆಲ್ಲ ಗಂಡುಮಕ್ಕಳಿದ್ದಾರೆ. ತಮಗೆ ಇಲ್ಲ ಎಂಬ ಮರುಕ ಬಸವರಾಜರಿಗೆ ಇತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ಗಟ್ಟಿಗಿತ್ತಿಯರು ಗಂಡುಮಕ್ಕಳಿಗಿಂತ ಚೆನ್ನಾಗಿ ಪಾಲಕರನ್ನು ನೋಡಿಕೊಳ್ಳಲು ಸಾಧ್ಯವಿದೆ. ಪುರುಷರು ಮಾಡುವ ಎಲ್ಲ ಕೆಲಸಗಳನ್ನೂ ಮಾಡುವ ಸಾಮರ್ಥ್ಯ ಹೆಣ್ಣುಮಕ್ಕಳಿಗೂ ಇದೆ ಎಂಬುದನ್ನು ತೋರಿಸಿದರು. ಸದ್ಯ ಸುಜಾತಾ ಅವರಿಗೆ 40 ವರ್ಷ, ರೂಪಾ ಅವರಿಗೆ 38 ವರ್ಷ ವಯಸ್ಸು. 30 ವರ್ಷಗಳಿಂದ ಇಬ್ಬರೂ ಗಂಡುಮಕ್ಕಳಂತೆ ಷ‌ರ್ಟು, ಪ್ಯಾಂಟು ಧರಿಸುತ್ತಿದ್ದಾರೆ. ತಲೆಗೊಂದು ಹಸಿರು ಟವಲ್‌ ಸುತ್ತಿಕೊಂಡು ವ್ಯವಸಾಯ ಮಾಡುತ್ತಾರೆ.

ಹೆಗಲ ಮೇಲೆ ನೇಗಿಲು ಹೊತ್ತು ನಿರಾಳವಾಗಿ ಹೆಜ್ಜೆಹಾಕುವ ಇವರ ನಡೆಯಲ್ಲಿ ದೃಢತೆ ಇದೆ. ಎತ್ತು–ಚಕ್ಕಡಿ ಕಟ್ಟಿಕೊಂಡು ಮಾಡುವ ಕೆಲಸದಲ್ಲಿ ಸಬಲತೆಯ ಉನ್ಮಾದವಿದೆ. ಟ್ರ್ಯಾಕ್ಟರ್‌ ಹತ್ತಿ ಹೊಲ ನೇಗಿಲು ಹೊಡೆಯುವಲ್ಲಿ ಹೆಣ್ಣು ಯಾರಿಗೂ ಕಮ್ಮಿಯಿಲ್ಲ ಎಂಬ ಸಂದೇಶವಿದೆ. ಪ್ರತಿದಿನ ಸೈಕಲ್‌ ಸವಾರಿ ಮಾಡುವ ಜೀವನಶೈಲಿಯಲ್ಲಿ ಸ್ವಾಭಿಮಾನದ ಹಿರಿಮೆ ಇದೆ.

‘ಮಾತಾಡವರು ನೂರೆಂಟು ಮಾತಾಡ್ತಾರ ಯಣ್ಣ. ಯಾರು ನಮ್ಮ ಹೊಟ್ಟಿಗೆ ಹಾಕಾಂಗಿಲ್ಲ ಯಣ್ಣ. ನಾವ್‌ ಬದಕಬೇಕಂದ್ರ ನಾವೇ ದುಡೀಬೇಕು. ನಾವೇ ದುಡ್ಯಾಕತ್ತೀವಿ ಅಂದಮ್ಯಾಲ ಯಾರ ಮಾತು ಕಟಗೊಂಡ ನಮಗೇನ್‌ ಆಗಬೇಕು ಯಣ್ಣ. ‘ಮಾನವಂತರಗೆ ಕಿವಿಗೊಡಬೇಕು– ಅವಮಾನದ ಮಾತಿಗೆ ಕಿವುಡಾಗಬೇಕು’ ಅಂತ ಹಿರ‍್ಯಾರು ಹೇಳಿ ಹೋಗ್ಯಾರ ಯಣ್ಣ. ಆ ಮಾತಿನ ಮ್ಯಾಲ ನಿಂತೇನ್‌ ನೋಡ್‌ ಯಣ್ಣ...’

ಕೃಷಿಗಾರ್ತಿ ಸುಜಾತಾ ಮಾತಲ್ಲಿ ಅವರ ಗಟ್ಟಿಗಿತ್ತಿತನ ವ್ಯಕ್ತವಾಗುತ್ತದೆ. ಸಮಾಜದಲ್ಲಿ ಪರಿವರ್ತನೆ ತರಬೇಕು ಎಂದು ಹೊರಟವರಲ್ಲ ಇವರು. ಪರಿವರ್ತನೆ ಸಾಧ್ಯ ಎಂಬುದನ್ನು ಬದುಕಿ ತೋರಿಸಿದವರು. ಮೌಢ್ಯದ ವಿರುದ್ಧ, ಸಮಾಜದ ಅಲಿಖಿತ ನಿಯಮಗಳ ವಿರುದ್ಧ, ಸಾಂಪ್ರದಾಯಿಕ ಕಟ್ಟಳೆಗಳ ವಿರುದ್ಧ ಹೊರಟಾಗ ಟೀಕೆ– ಮೂದಲಿಕೆ ಸಹಜ. ಅವುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಇದ್ದವರಿಂದ ಮಾತ್ರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಉದಾಹರಣೆ.

ಪ್ರತಿ ಮಾತಿನಲ್ಲೂ ‘ಯಣ್ಣಯಣ್ಣ’ ಎಂದು ಅವರು ಹೇಳುವುದು ಆಪ್ತತೆ ಹುಟ್ಟಿಸುತ್ತದೆ. ಇದೇ ಕಾರಣಕ್ಕೆ ಅವರನ್ನು ಟೀಕೆ ಮಾಡಿದವರೇ ಈಗ ಪುರಸ್ಕಾರ ಮಾಡಿದ್ದಾರೆ. ದುಡಿಮೆ, ವ್ಯವಹಾರ, ನಡವಳಿಕೆ ಎಲ್ಲದರಲ್ಲೂ ಅವರನ್ನೂ ಸಾಮಾನ್ಯರಂತೆ ಕಾಣುತ್ತಾರೆ. ಗಂಡುಬೀರಿ ಎನ್ನುತ್ತಿದ್ದ ಬಾಯಿಗಳು ಈಗ ‘ಭಲೇಹೆಣ್ಣು’ ಎನ್ನುತ್ತಿವೆ. ಈ ಗೌರವವನ್ನು ಅವರು ಯಾರಿಂದಲೂ ಬೇಡಿ ಪಡೆದಿಲ್ಲ. ಬದುಕಿ ಪಡೆದಿದ್ದಾರೆ. ಹೆಣ್ಣು ಹುಟ್ಟಿದರೆ ಕಳವಳ ಪಡುವವರು, ಹೆಣ್ಣುಭ್ರೂಣ ಹತ್ಯೆ ಮಾಡಿಸುವವರು, ವರದಕ್ಷಿಣೆಗೆ ಪೀಡಿಸುವವರು, ಗಂಡುಮಕ್ಕಳಿಲ್ಲ ಎಂದು ಕೊರಗುವವರಿಗೆ ಈ ಸಹೋದರಿಯರ ಬದುಕೇ ಪಾಠ.

ಇಬ್ಬರೂ 2005ರಿಂದ ಒಕ್ಕಲುತನ ಆರಂಭಿಸಿದರು. ತಂದೆಯ ಪಾಲಿಗೆ ಬಂದಿದ್ದು ಒಂದೂವರೆ ಎಕರೆ ಜಮೀನು ಮಾತ್ರ. ಅಕ್ಕಪಕ್ಕದವರ ಇನ್ನೂ ಐದು ಎಕರೆ ಜಮೀನನ್ನು ಪಾಲುದಾರಿಕೆ ಪಡೆದು ಕೃಷಿ ಮಾಡುತ್ತಿದ್ದಾರೆ. ಈ ವರ್ಷ ಐದು ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಕಳೆದ ಹಂಗಾಮಿಲ್ಲಿ 210 ಟನ್‌ ಬೆಳೆದಿದ್ದು ₹5 ಲಕ್ಷದಷ್ಟು ಆದಾಯ ಪಡೆದಿದ್ದಾರೆ.

ಮೂರು ಬೋರ್‌ವೆಲ್‌ ಕೊರೆಸಿದ್ದಾರೆ. ಮೂರರಲ್ಲೂ ನಾಲ್ಕು ಇಂಚಿನಷ್ಟು ನೀರು ಬರುತ್ತಿದೆ. ಜಮೀನು ಪಕ್ಕದಲ್ಲಿ ಎಂಟು ಎಕರೆಯಷ್ಟು ಕೆರೆ ಇದೆ. ಬೇಸಿಗೆಯಲ್ಲಿ ಕೆರೆ ಒಣಗುತ್ತದೆ. ಬೋರ್‌ವೆಲ್‌ ನೀರನ್ನು ಪಕ್ಕದ ಕೆರೆಗೆ ಹರಿಸುವುದು ಸುಜಾತಾ– ರೂಪಾ ಅವರಿಗೆ ರೂಢಿ. ಪ್ರಾಣಿ– ಪಕ್ಷಿಗಳಿಗೂ ನೀರುಣಿಸಬೇಕು ಎಂಬ ಕಕ್ಕುಲಾತಿಯೇ ಇದಕ್ಕೆ ಕಾರಣ. ಹೆತ್ತವರನ್ನು ಮಾತ್ರಲ್ಲ; ಪ್ರಾಣಿ– ಪಕ್ಷಿಗಳನ್ನೂ ಕೂಸುಗಳಂತೆ ಜತನ ಮಾಡುತ್ತಿದ್ದಾರೆ.

ಮನೆ ಬಳಕೆಗೆ ಜೋಳ, ಕಡಲೆ, ತರಕಾರಿಗಳನ್ನೂ ಬೆಳೆಯುತ್ತಾರೆ. ಎರಡು ಎಮ್ಮೆ, ಒಂದು ಆಡು ಸಾಕಿದ್ದಾರೆ. ಪ್ರತಿದಿನ 10 ಲೀಟರ್‌ ಹಾಲು ಕರೆಯುತ್ತಾರೆ. ಸೈಕಲ್ ಏರಿ ಮನೆಮನೆಗೆ ಹಾಲು ಹಾಕಿ ಬರುವುದು ರೂಪಾ ಅವರ ಕೆಲಸ. ನಸುಕಿನ 5ಕ್ಕೇ ಎದ್ದು ದನಕರುಗಳ ಮೈ ಸವರಿ, ಹೊಲದಲ್ಲಿನ ಅಡಸಾಳ ಗಿಡದ ಎಲೆ ಕಿತ್ತುಕೊಂಡು ಬೆಳಗಾವಿಯ ಹೂವಿನ ಮಾರುಕಟ್ಟೆಗೆ ಹೋಗುವುದು ಸುಜಾತಾ ಅವರ ರೂಢಿ. ಅಡಸಾಳ ಎಲೆಗಳನ್ನು ಹೂಮಾಲೆಗಳ ಮಧ್ಯದಲ್ಲಿ ಸೇರಿಸುತ್ತಾರೆ. ಎಲೆಗಳ ಮಾರಾಟದಿಂದಲೇ ಪ್ರತಿದಿನ ಕನಿಷ್ಠ ₹2,500 ಗಳಿಸುತ್ತಾರೆ ಸುಜಾತಾ. ತಮ್ಮ ಹೊಲದಲ್ಲಿ ಬೆಳೆಯುವ ಒಂದು ಎಲೆಯ ತುಂಡನ್ನೂ ಅವರು ವ್ಯರ್ಥವಾಗಲು ಬಿಟ್ಟಿಲ್ಲ ಎಂಬುದು ಮಾದರಿ ಹೆಜ್ಜೆ. ಉತ್ತುವುದು, ಬಿತ್ತುವುದು, ಕಳೆ ತೆಗೆಯುದು, ಗೊಬ್ಬರ ಹಾಕುವುದು, ರೆಂಟೆ– ಕುಂಟೆ– ಗಳೆ ಹೊಡೆಯವುದು, ಬೆಳೆ ಕಾವಲು ಮಾಡುವುದು, ಕೊಯ್ಲು– ರಾಶಿ, ಮಾರುಕಟ್ಟೆಗೆ ಸಾಗಿಸುವುದು... ಎಲ್ಲವನ್ನೂ ಇವರೇ ನಿಭಾಯಿಸುತ್ತಾರೆ.

ತಂದೆ ಬಸವರಾಜ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರು. ಅತ್ಯಂತ ಕಡಿಮೆ ಕೂಲಿ. ಹೀಗಾಗಿ, ಮನೆ ಜವಾಬ್ದಾರಿ ಸಹೋದರಿಯರು ಹೆಗಲೇರಿಸಿಕೊಂಡರು. ತಮ್ಮ ನಾಲ್ವರು ಹಿರಿಯ ಅಕ್ಕಂದಿರನ್ನು ತವರಿಗೆ ಕರೆತರುವುದು, ಹಬ್ಬ– ಹರಿದಿನಗಳ ಉಡುಗೊರೆ ನೀಡುವುದು, ಬಾಣಂತನ ಹೀಗೆ ಎಲ್ಲವನ್ನೂ ಗಂಡುಮಕ್ಕಳಿಗಿಂತ ಹೆಚ್ಚಾಗಿ ನಿಭಾಯಿಸಿದ್ದಾರೆ.

ತಮ್ಮ ಹೊಲದಲ್ಲಿ ₹21 ಲಕ್ಷ ವೆಚ್ಚ ಮಾಡಿ ತಂದೆ–ತಾಯಿಗೆ ಆರ್‌ಸಿಸಿ ಮನೆ ಕಟ್ಟಿಸಿದ್ದಾರೆ. ಹತ್ತಿರದಲ್ಲಿ ₹1.80 ಲಕ್ಷ ಹಾಕಿ ಚಿಕ್ಕ ಕರೆಮ್ಮತಾಯಿ ಗುಡಿ ಕಟ್ಟಿಸಿದ್ದಾರೆ. ನೀರಿಗೆ, ನೆರಳಿಗೆ ತಿಂಡಿಗೆ, ಊಟಕ್ಕೆ, ಹರಕೆಗೆ ಅವರು ಎಲ್ಲೂ ಅಲೆಯಬೇಕಿಲ್ಲ. ತಮ್ಮಲ್ಲೇ ಎಲ್ಲ ಮಾಡಿಕೊಂಡಿದ್ದಾರೆ.

ಸುಜಾತಾ 10 ವರ್ಷದವರಿದ್ದಾಗ ಸೈಕಲ್‌ ಮೇಲಿನಿಂದ ಬಿದ್ದು ಎಡಗಣ್ಣು ಕಳೆದುಕೊಂಡಿದ್ದಾರೆ. ಕಿತ್ತು ಹೊರಗೆ ಬಿದ್ದ ಕಣ್ಣನ್ನು ಮತ್ತೆ ಜೋಡಿಸಿದ್ದರೂ ದೃಷ್ಟಿ ಬಂದಿಲ್ಲ. ಆದರೆ, ಅವರು ಅಳುತ್ತ ಕೂರಲಿಲ್ಲ. ಒಂಟಿಗಣ್ಣಿನಿಂದ ಬದುಕು ಕಟ್ಟಿಕೊಂಡರು. ಸುಜಾತಾ 5ನೇ ತರಗತಿ, ರೂಪಾ 4ನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಆದರೆ, ಲೆಕ್ಕಪತ್ರದಲ್ಲಿ ರೂಪಾ ಅವರದ್ದು ಎತ್ತಿದ ಕೈ. ಶಿಕ್ಷಣ ಇಲ್ಲದಿದ್ದರೂ ವ್ಯವಹಾರಜ್ಞಾನ ಅವರನ್ನು ದೃಢವಾಗಿ ನಿಲ್ಲುವಂತೆ ಮಾಡಿದೆ.

ಮನೆಯಲ್ಲಿ ಆರು ಹೆಣ್ಣುಮಕ್ಕಳು ಇದ್ದ ಕಾರಣ ಸುಜಾತಾ ಹಾಗೂ ರೂಪಾ ಅವರಿಗೆ ಬಾಲ್ಯದಲ್ಲೇ ಮದುವೆ ಮಾಡಲಾಗಿತ್ತು. ಆದರೆ, ಬೆಳೆದುನಿಂತ ಮೇಲೆ ಅವರು ಕೌಟುಂಬಿಕ ಬಂಧನಕ್ಕೆ ಒಳಗಾಗಲಿಲ್ಲ. ತಮ್ಮ ಹೆತ್ತವರನ್ನು ಜೋಪಾನ ಮಾಡುವ ಪಣತೊಟ್ಟರು. ಅದೇ ದಾರಿಯಲ್ಲಿ ಹೆಜ್ಜೆ ಹಾಕಿದರು.

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.