ADVERTISEMENT

ಪ್ರಜಾವಾಣಿ ಸಾಧಕಿಯರು | ಅಂಧರ ಕ್ರಿಕೆಟ್‌ನ ‘ವರ್ಷ’ಧಾರೆ

ಜಿ.ಬಿ.ನಾಗರಾಜ್
Published 8 ಮಾರ್ಚ್ 2024, 0:30 IST
Last Updated 8 ಮಾರ್ಚ್ 2024, 0:30 IST
<div class="paragraphs"><p>ಯು.ವರ್ಷಾ</p></div>

ಯು.ವರ್ಷಾ

   

ಹುಟ್ಟುವಾಗಲೇ ದೃಷ್ಟಿದೋಷಕ್ಕೆ ಸಿಲುಕಿದ ಯು.ವರ್ಷಾ ಪ್ರಪಂಚವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು 16ನೇ ವಯಸ್ಸಿಗೆ. ದೃಷ್ಟಿ ನಿಧಾನವಾಗಿ ಮಂದವಾಗುತ್ತಿದ್ದಂತೆ ಉನ್ನತ ಸಾಧನೆಯ ಛಲ ಚಿಗುರೊಡೆಯಿತು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಬೆಂಗಳೂರು ತಲುಪಿದ ಯುವತಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯಾಗಿ ರೂಪುಗೊಂಡ ಪರಿ ವಿಸ್ಮಯ ಮೂಡಿಸುತ್ತದೆ. ಅವರು ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿ ದೇಶದ ಕೀರ್ತಿಪತಾಕೆಯನ್ನು ಗಗನಕ್ಕೆ ಹಾರಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಆದಿವಾಲ, ವರ್ಷಾ ಅವರ ಸ್ವಗ್ರಾಮ. ಉಮಾಪತಿ ಹಾಗೂ ಯಶೋದಾ ದಂಪತಿಯ ಪುತ್ರಿ. ಕೃಷಿ ಕುಟುಂಬದ ಹಿನ್ನೆಲೆಯವರು. ‘ರೆಟಿನಾ ಪಿಗ್ಮೆಂಟೊಸ್‌’ ಎಂಬ ದೃಷ್ಟಿದೋಷಕ್ಕೆ ಸಿಲುಕಿದ ಅವರಿಗೆ ಸಂಪೂರ್ಣ ಅಂಧತ್ವ (ಬಿ1 ಕೆಟಗರಿ) ಆವರಿಸಿದೆ. ಕತ್ತಲು ಆವರಿಸಿದ ಬದುಕಿಗೆ ‘ಕಿಣಿ.. ಕಿಣಿ..’ ಎಂಬ ಕ್ರಿಕೆಟ್‌ ಚೆಂಡು ಬೆಳಕಾಗಿದೆ. ಕ್ರಿಕೆಟ್‌ ಚೆಂಡು ಬದುಕಿಗೆ ಪ್ರವೇಶ ನೀಡಿದ ಬಳಿಕ ಜೀವನೋತ್ಸಾಹ ಪುಟಿದೆದ್ದಿದೆ. ಸಾಧನೆಯ ಉತ್ತುಂಗಕ್ಕೆ ಏರಲು ಪ್ರೇರೇಪಣೆ ಸಿಕ್ಕಿದೆ. ತನ್ನಂತೆ ಕತ್ತಲಲ್ಲಿ ಬಳಲುತ್ತಿರುವವರ ಬದುಕಿಗೆ ಬೆಳಕಾಗುವ ಹಂಬಲ ಹೆಚ್ಚಾಗಿದೆ.

ADVERTISEMENT

‘ವರ್ಷಾ ಜನಿಸಿದಾಗ ತುಂಬಾ ಅಳುತ್ತಿದ್ದಳು. ಬೆರಳ ಚಿಟಿಕೆಯ ಶಬ್ದ ಕೇಳಿದಾಗ ಮಾತ್ರ ನಗುತ್ತಿದ್ದಳು. ಏಳು ತಿಂಗಳಿದ್ದಾಗ ವೈದ್ಯರನ್ನು ಸಂಪರ್ಕಿಸಿದೆವು. ಶೇ 20ರಷ್ಟು ದೃಷ್ಟಿದೋಷ ಇರುವುದು ಗೊತ್ತಾಯಿತು. ದೊಡ್ಡವಳಾದಂತೆ ಈ ಸಮಸ್ಯೆ ಹೆಚ್ಚಾಗುವ ಅಪಾಯದ ಮುನ್ಸೂಚನೆಯೂ ಸಿಕ್ಕಿತು. ಆಗ ಆಗಸವೇ ಕಳಚಿ ಬಿದ್ದಂತಹ ಅನುಭವವಾಯಿತು. ದೃಷ್ಟಿದೋಷದ ಸಮಸ್ಯೆ ಪರಿಹರಿಸಲು ಎಲ್ಲೆಡೆ ಅಲೆದಿದ್ದೆವು’ ಎಂದು ದೀರ್ಘ ಉಸಿರು ಎಳೆದುಕೊಂಡರು ವರ್ಷಾ ತಾಯಿ ಯಶೋದಾ.

ಚಿಕ್ಕವಳಿದ್ದಾಗ ಮಕ್ಕಳೊಂದಿಗೆ ಆಟವಾಡುತ್ತ ಬೆಳೆದ ವರ್ಷಾ ಸಾಮಾನ್ಯ ಶಾಲೆಗೆ ಪ್ರವೇಶ ಪಡೆದರು. ರಾತ್ರಿ ವೇಳೆ ಮಾತ್ರ ಸ್ಪಷ್ಟವಾಗಿ ಕಣ್ಣು ಕಾಣುತ್ತಿರಲಿಲ್ಲ. ಶಾಲೆಯ ಬೋರ್ಡ್‌ ಮೇಲೆ ಶಿಕ್ಷಕರು ಬರೆದ ಅಕ್ಷರಗಳು ಮಸುಕಾಗುತ್ತಿದ್ದ ಕಾರಣಕ್ಕೆ ತರಗತಿಯ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಶಾಲೆ–ಮನೆಯ ನಡುವೆ ಏಕಾಂಗಿಯಾಗಿ ಸಂಚರಿಸಿ ಪೋಷಕರಲ್ಲಿ ಭರವಸೆ ಮೂಡಿಸಿದ್ದರು. ಆದರೆ, 14ನೇ ವಯಸ್ಸಿಗೆ ಬರುತ್ತಿದ್ದಂತೆ ದೃಷ್ಟಿ ಮಂದವಾಯಿತು. ಶಿಕ್ಷಕರು ನೀಡಿದ ಹೋಂವರ್ಕ್‌ ಬರೆಯಲು ಸಾಧ್ಯವಾಗದೇ ತೊಳಲಾಡತೊಡಗಿದರು. ಇದನ್ನು ಗುರುತಿಸಿದ ತಾಯಿ ಯಶೋದಾ ಪುತ್ರಿಯ ಬದುಕಿಗೆ ಆಸರೆಯಾದರು.

‘ನಿಧಾನವಾಗಿ ದೃಷ್ಟಿ ಕಡಿಮೆಯಾಗುತ್ತಿರುವುದು 8ನೇ ತರಗತಿಯಲ್ಲಿ ಖಚಿತವಾಯಿತು. ನೋಟ್ಸ್‌ ಬರೆಯಲು, ಹೋಂವರ್ಕ್‌ ಪೂರ್ಣಗೊಳಿಸಲು ಸಾಧ್ಯವಾಗದೇ ನನ್ನೊಳಗೆ ತಳಮಳ ಶುರುವಾಗಿತ್ತು. ಬದುಕಿನ ಬಗೆಗಿನ ಭರವಸೆ ಕಳೆದುಕೊಳ್ಳುವ ಭಯ ಆವರಿಸಲಾರಂಭಿಸಿತು. ಎಷ್ಟೋ ಸಂದರ್ಭಗಳಲ್ಲಿ ತಾಯಿ ಹೋಂವರ್ಕ್‌ ಬರೆದುಕೊಟ್ಟಿದ್ದಾರೆ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂಬುದು ಖಚಿತವಾದ ಬಳಿಕ ಮತ್ತೊಬ್ಬರ ನೆರವು ಪಡೆಯಲು ನಿರ್ಧರಿಸಿದೆ’ ಎಂದು ಬದುಕು ಸಾಗಿಬಂದ ದಾರಿಯನ್ನು ಮೆಲುಕು ಹಾಕಿದರು ವರ್ಷಾ.

ಮತ್ತೊಬ್ಬರ ಸಹಾಯ ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲು ವರ್ಷಾ ಬಳಿ ಅಂಧತ್ವದ ಪ್ರಮಾಣಪತ್ರ ಇರಲಿಲ್ಲ. ಪರೀಕ್ಷೆ ಬರೆಯಲು ಸಹಾಯಕಿಯ ಆಸರೆ ಪಡೆಯುವ ಹೊತ್ತಿಗೆ ಪರೀಕ್ಷೆಯ ದಿನ ಸಮೀಪಿಸಿತ್ತು. ಶೇ 79 ಅಂಕ ಪಡೆದು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ವರ್ಷಾ ಬದುಕಿಗೆ ಭರವಸೆಯಾಗಿ ಬಂದವರು ಚಿಕ್ಕಪ್ಪ ರಮೇಶ್‌ ಮತ್ತು ಚಿಕ್ಕಮ್ಮ ಪುಷ್ಪಾ. ಅಂಧ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಅಶ್ವಿನಿ ಅಂಗಡಿ ಅವರ ಸಂಪರ್ಕ ಪಡೆದು ಬೆಂಗಳೂರಿಗೆ ಸ್ಥಳಾಂತರಗೊಂಡರು. ಬ್ರೈಲ್‌ ಲಿಪಿ ಕಲಿತು ಪದವಿ ಪೂರ್ವ ಕಾಲೇಜು ಸೇರಿದರು. ಕಲಾ ವಿಭಾಗದಲ್ಲಿ ಶೇ 88 ಅಂಕ ಪಡೆದು ಎಲ್ಲರನ್ನು ಚಕಿತಗೊಳಿಸಿದರು. ಓದಿನಲ್ಲಿ ತೋರುತ್ತಿದ್ದ ಆಸಕ್ತಿ ಕ್ರೀಡೆಯತ್ತ ಹೊರಳಿದ್ದು ಆಕಸ್ಮಿಕ.

‘ಆಟೋಟಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಸ್ನೇಹಿತರೊಂದಿಗೆ ಆಟವಾಡಿದ ನೆನಪು ಇನ್ನೂ ಹಸಿರಾಗಿದೆ. ಪಿಯು ವ್ಯಾಸಂಗ ಮಾಡುವಾಗ ಫುಟ್‌ಬಾಲ್‌ ಬಗ್ಗೆ ಒಲವು ಮೂಡಿತ್ತು. ಚೆಂಡಿನ ಗೆಜ್ಜೆಯ ಶಬ್ದವನ್ನು ಆಲಿಸಿ ಆಟವಾಡುವ ಪರಿ ಹುಮ್ಮಸ್ಸು ಮೂಡಿಸಿತ್ತು. 2019ರಲ್ಲಿ ಪದವಿಯ ಸ್ನೇಹಿತೆಯೊಬ್ಬಳು ಕ್ರಿಕೆಟ್‌ ಬಗ್ಗೆ ಹೇಳಿದಾಗ ಕುತೂಹಲ ಕೆರಳಿತು. ಚಿಕ್ಕವಳಿದ್ದಾಗ ಕ್ರಿಕೆಟ್‌ ನೋಡಿದ್ದೇನೆಯೇ ಹೊರತು ಆಟವಾಡಿರಲಿಲ್ಲ. ಕಿಣಿ.. ಕಿಣಿ.. ಸದ್ದಿನ ಜಾಡು ಹಿಡಿದು ಆಡುವ ಪರಿಗೆ ಮನಸೋತುಬಿಟ್ಟೆ..’ ಎಂದಾಗ ವರ್ಷಾ ಅವರ ಮೊಗ ಅರಳಿತು.

‘ಸಮರ್ಥಂ ಟ್ರಸ್ಟ್‌’ ನಡೆಸುವ ವಾರ್ಷಿಕ ಕ್ರಿಕೆಟ್‌ ಶಿಬಿರಕ್ಕೆ ವರ್ಷಾ ಸೇರಿದರು. ಅಂಧರ ಕ್ರಿಕೆಟ್ ತರಬೇತಿ ಪಡೆಯುವ ಆರಂಭದಲ್ಲಿ ಇವರನ್ನು ಭಯ ಕಾಡಿತ್ತು. ಕೋಚ್‌ ಕೃತಿಕಾ ಚಾರ್ವಿ ಹಾಗೂ ವ್ಯವಸ್ಥಾಪಕಿ ಶಿಖಾ ಧೈರ್ಯ ತುಂಬಿದರು. ಮಧ್ಯಮ ವೇಗದ ಬಲಗೈ ಬೌಲರ್‌ ಆಗಿರುವ ವರ್ಷಾ, ಆಲ್‌ರೌಂಡ್‌ ಕ್ರಿಕೆಟ್ ಆಟಗಾರ್ತಿಯು ಹೌದು. ಹ್ಯಾಟ್ರಿಕ್‌ ವಿಕೆಟ್‌, 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸಾಧನೆ ಇವರ ಹೆಸರಿನಲ್ಲಿದೆ. ಅಂತರರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್‌ (ಐಬಿಎಸ್‌ಎ) ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ 2023ರಲ್ಲಿ ನಡೆಸಿದ ವಿಶ್ವ ಕ್ರೀಡಾಕೂಟದಲ್ಲಿ ವರ್ಷಾ ನೇತೃತ್ವದ ಭಾರತ ತಂಡ ಚಾಂಪಿಯನ್‌ ಆಯಿತು. ದೆಹಲಿಗೆ ಮರಳಿದ ಮಹಿಳಾ ಅಂಧರ ಕ್ರಿಕೆಟ್‌ ತಂಡವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಮಾನ ನಿಲ್ದಾಣಕ್ಕೆ ಧಾವಿಸಿ ಸ್ವಾಗತಿಸಿದ್ದರು.

‘ಭಾರತದ ತ್ರಿವರ್ಣ ಧ್ವಜವನ್ನು ವಿದೇಶದಲ್ಲಿ ಹಾರಿಸಿದ ಹೆಮ್ಮೆಯ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ನೇಪಾಳ, ಆಸ್ಟ್ರೇಲಿಯಾ ಸೇರಿ ಹಲವು ತಂಡಗಳ ವಿರುದ್ಧ ಗೆಲುವು ಸಾಧಿಸಿದ್ದೇವೆ. ವಿಶ್ವದ ಮಹಿಳಾ ಅಂಧರ ಕ್ರಿಕೆಟ್‌ ತಂಡದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾಷೆ, ಊಟ, ಏಕಾಂಗಿಯಾಗಿ ಆಡುವ ಸವಾಲುಗಳನ್ನು ಮೆಟ್ಟಿ ಗೆಲುವು ಸಾಧಿಸಿದ್ದು ಖುಷಿ ಕೊಟ್ಟಿದೆ. ‘ಬೇಟಿ ಬಚಾವೊ, ಬೇಟಿ ಪಢಾವೊ’ ಆಂದೋಲನಕ್ಕೆ ಬ್ರಾಂಡ್‌ ಅಂಬಾಸಿಡರ್‌ ಆಗಿ ತಮ್ಮನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ವರ್ಷಾ ಸಂತಸ ಹಂಚಿಕೊಂಡರು.

__________________________________________________________________

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.