ಸಾಧನೆಯ ಹಾದಿ ಮಹಿಳೆಯರಿಗೆ ಸಹಜ, ಸರಳವಾಗಿರುವುದೇ ಇಲ್ಲ. ಸಾಮಾಜಿಕ ಸಿದ್ಧಚೌಕಟ್ಟನ್ನು ಮೀರುತ್ತ ತಮ್ಮದೊಂದು ಅಸ್ಮಿತೆಯನ್ನು ಸ್ಥಾಪಿಸಬೇಕಾಗುತ್ತದೆ. ಅವಳಿ ದೋಣಿಗಳಲ್ಲಿ ಯಾನ ಮಾಡಿದಂತೆ ಈ ಮಾರ್ಗ ಕಸರತ್ತಿನಿಂದ ಕೂಡಿರುತ್ತದೆ. ಸಮತೋಲನ ತಪ್ಪಿದರೆ ತಾನು ಕಳೆದುಹೋಗುವುದಲ್ಲದೇ ತನ್ನವರನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭಗಳಲ್ಲಿಯೂ ತನ್ನ ಹೃದಯದ ಮಾತನ್ನು ಕೇಳುತ್ತ, ತಾನೂ ಬೆಳೆದು, ಉಳಿದವರಿಗೂ ಬೆಳೆಯುವ ಅವಕಾಶ ಮಾಡಿಕೊಟ್ಟ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ಸಾಧನೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತ, ಸಮಾನತೆಗಿಂತಲೂ ಹೆಚ್ಚಾಗಿ ಅವಶ್ಯವಿದ್ದಷ್ಟು ಕಸುವು ತುಂಬುವ ಕೆಲಸ ಅವಕಾಶಗಳನ್ನು ನೀಡುತ್ತ, ಪ್ರೋತ್ಸಾಹಿಸುತ್ತ, ಸಹಭಾಗಿತ್ವವನ್ನು ನೀಡುತ್ತ ಹೋಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೂ ಪೂರಕವಾಗಿ ನಿಲ್ಲಲಿದೆ. ಲಿಂಗ ತಾರತಮ್ಯ ತಡೆಯುವುದೇ ಈ ವರ್ಷದ ಆಶಯ.
***
ಕೈಕಸೂತಿ ಅಳಿವಿನಂಚಿಗೆ ಬಂದು ನಿಂತಿತ್ತು. ಕೆಲವೇ ಕೆಲವು ಕಸೂತಿ ಕಲಾವಿದರು ಇದ್ದರು. ಹವ್ಯಾಸಕ್ಕಾಗಿ ಮಾತ್ರ ಮಾಡುತ್ತಿದ್ದರು. ಅದರಿಂದ ಹಣ ಗಳಿಸಬಹುದು ಎನ್ನುವುದೇ ಅವರಿಗೆ ಹೊಸ ಕಲ್ಪನೆಯಾಗಿತ್ತು. ಈ ಹಿಂದೆ ಒಂದಿಬ್ಬರು ಮಾರುಕಟ್ಟೆಗೆ ಕಸೂತಿ ಮಾಡಿ ನೀಡಿದ್ದರೂ ಸಕಾಲಕ್ಕೆ ಹಣ ಸಿಗದೆ ಸೋತು ಹೋಗಿದ್ದರು.
ಕಸೂತಿ ಅಪಾರ ಪ್ರಮಾಣದ ಸಂಯಮ ಬೇಡುತ್ತದೆ. ನವಲಗುಂದ ವಿನ್ಯಾಸಗಳೆಲ್ಲವೂ ಜ್ಯಾಮಿತಿಯ ಆಧಾರದ ಮೇಲಿವೆ. ಎಳೆಗಳನ್ನು ಎಣಿಸುತ್ತಲೇ ತ್ರಿಕೋನ, ಆಯತ, ಚತುಷ್ಕೋನಗಳ ಮೂಲಾಕೃತಿಯೊಡನೆ ಆಟವಾಡುತ್ತ ಹೆಣೆಯುತ್ತಾರೆ. ಹಿಮ್ಮಗ್ಗಲಿನಲ್ಲಿಯೂ ಒಂದೇ ತೆರನಾಗಿ ಕಾಣುವುದೇ ಕೈ ಕಸೂತಿಯ ವಿಶೇಷ. ಇದರಲ್ಲಿ ಸುಮಾರು 900 ಬಗೆಯ ವಿನ್ಯಾಸಗಳಿವೆಯೆಂದು ಮೊದಲು ಹೇಳಿದ್ದರು. ಕಲಾವಿದರನ್ನು ಒಂದೆಡೆ ಸೇರಿಸಿದೆವು. ರಥ, ಗಿಳಿ, ಆನೆ, ಗುಬ್ಬಿಕಾಲು, ಎಳ್ಳುಗಿಡ, ಕಡಲೆಗಿಡ, ರುದ್ರಾಕ್ಷಿ– ಹೀಗೆ ಅಂದಾಜು 400 ವಿನ್ಯಾಸಗಳು ಮೈತಳೆದವು.
ನುರಿತ ಕಲಾವಿದೆಯರಿಂದ ಹೊಸ ಕಲಾವಿದೆಯರಿಗೆ ಹೊಲಿಗೆ ಕಲಿಸುವುದು, ಕಸೂತಿಯನ್ನು ಸಮಕಾಲೀನ ವಿನ್ಯಾಸಕ್ಕೆ ಹೊಂದಿಸುವುದು, ಕುರ್ತಾ, ಕುಷನ್ಸ್, ಕ್ಲಚ್– ಹೀಗೆ ಅಗತ್ಯಕ್ಕೆ ತಕ್ಕಂತೆ ಬಳಸಲು ವಿನ್ಯಾಸಗಳನ್ನು ಅಭಿವೃದ್ಧಿಪಸಲಾಯಿತು. ಮಕ್ಕಳ ಓದಿಗೆ, ಚಿನ್ನ ಕೊಳ್ಳಲು ಕಸೂತಿ ಇವರಿಗೆ ಆಧಾರವಾಗಿದೆ. ಸೂಜಿ, ದಾರದಿಂದ ಜಗತ್ತು ಗೆಲ್ಲಬಹುದೇ ಎಂದು ಆಡಿಕೊಂಡಿದ್ದವರಿಗೆ ಸಾಕಷ್ಟು ಯಶೋಗಾಥೆಗಳು ದೊರೆಯುತ್ತವೆ. ಒಂದೊಂದು ಹೂವಿನ ಹಿಂದೆಯೂ ಒಂದೊಂದು ಕತೆ ಇದೆ.
ಇದೀಗ ಎಲ್ಲರೂ ಅಕ್ಷರ ಕಲಿತಿದ್ದಾರೆ. ತಮ್ಮ ಉತ್ಪನ್ನಗಳ ಫೋಟೊ ತೆಗೆದು ಆ ಬಗ್ಗೆ ವಾಯ್ಸ್ ಮೆಸೇಜು ಕಳುಹಿಸುತ್ತಾರೆ. ಬ್ಯಾಂಕಿನ ವಹಿವಾಟು, ಅಕೌಂಟು ನಿರ್ವಹಣೆ ಮಾಡುವಷ್ಟು ಹಣಕಾಸಿನ ಕುರಿತೂ ಸಾಕ್ಷರರಾಗಿದ್ದಾರೆ.
’ಕೈ ಕ್ರಾಫ್ಟ್, ಧಾರವಾಡಕ್ಕೆ ಕಾಲಿಟ್ಟಿದ್ದು ಸಾಂಪ್ರದಾಯಿಕ ಶೈಲಿಯನ್ನು ಉಳಿಸಲು. ಇದೀಗ ಫ್ಯಾಬ್‌ಇಂಡಿಯಾ ಸಾಕಷ್ಟು ಕುರ್ತಿ, ಟಾಪುಗಳ ಆದೇಶ ನೀಡಿದೆ. ಸುಕೇತ್‌ಧೀರ್ ಅವರಂತಹ ಹೆಸರಾಂತ ವಿನ್ಯಾಸಕರು ನಮ್ಮ ಜೊತೆಗೆ ಕೈಜೋಡಿಸಿದ್ದಾರೆ. ವಿದ್ಯಾಬಾಲನ್ ನಮ್ಮ ಉತ್ಪನ್ನವನ್ನು ಉಟ್ಟು ಸಂಭ್ರಮಿಸಿದ್ದಾರೆ. ಗ್ರಾಮೀಣ ಮಹಿಳೆಯರ ಬದುಕನ್ನು ಕಸೂತಿಯಿಂದ ಹಸನುಗೊಳಿಸುತ್ತಿರುವ ತೃಪ್ತಿ ನನಗಿದೆ.
ಐಡಿಎಫ್ ಎಸ್‌ಎಚ್‌ಜಿ ಸಂಸ್ಥೆಯಿಂದ ಕೈ ಕ್ರಾಫ್ಟ್ ಬೆಳೆಯಿತು. ಇವೆರಡರ ಪರಿಶ್ರಮದಿಂದ ಸಖಿ ಸಾಫಲ್ಯ ಬೆಳೆಯಿತು. ಅಳಿವಿನಂಚಿನಲ್ಲಿದ್ದ ಕಲೆ ಇದೀಗ 467 ಕಲಾವಿದೆಯರ ಕೈಯಲ್ಲಿ ಅರಳುತ್ತಿದೆ.
-ನಿರೂಪಣೆ: ರಶ್ಮಿ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.