ಎತ್ತಣ ಮಾಮರ? ಎತ್ತಣ ಕೋಗಿಲೆ? ಎಲ್ಲಿಯ ಸಿಕ್ಕಿಂನ ಹಳ್ಳಿ, ಎಲ್ಲಿ ಎಸ್ತೋನಿಯಾದ ತಾರ್ತು? ಆದರೆ ಕಿಕೀ ಡಿ. ಭುಟಿಯಾ ಎಂಬ ಅಪೂರ್ವ ತೇಜಸ್ಸಿನ ಸಂಶೋಧಕಿ - ರೂಪದರ್ಶಿ ಇವೆರಡನ್ನೂ ಬೆಸೆದ ಬಳ್ಳಿ.
ತದ್ವಿರುದ್ಧ ಎನ್ನಿಸಬಹುದಾದ ಅಪೂರ್ವ ಆಸಕ್ತಿ ಕಿಕೀಯದ್ದು. ಅಲ್ಲದಿದ್ದರೆ ಗ್ಲಾಮರ್ ಲೋಕದ ಮಾಡೆಲಿಂಗ್‌ಗೂ ಗ್ರಾಮರ್ ಲೋಕದ ರಿಸರ್ಚಿಂಗ್‌ಗೂ ಎತ್ತಣಿಂದೆತ್ತ ಸಂಬಂಧ?
ಅಸ್ಸಾಂನ ಗುವಾಹಟಿಯಲ್ಲಿ ಇತ್ತೀಚೆಗೆ ಬಿಲೀಫ್ ನರೇಟಿವ್ ನೆಟ್‌ವರ್ಕ್, ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಫೋಕ್ ನರೇಟಿವ್ ರಿಸರ್ಚ್ ಮತ್ತು ಆನಂದೋ ರಾಮ್ ಬೋರುವಾ ಇನ್‌ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜ್, ಆರ್ಟ್ ಅಂಡ್ ಕಲ್ಚರ್ ಜಂಟಿಯಾಗಿ ಆಯೋಜಿಸಿದ್ದ ‘ಜಾನಪದ ಅಧ್ಯಯನದಲ್ಲಿ ಅತಿಮಾನವತೆಯ ನಿರೂಪಣೆ’ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಯುವ ಸಂಶೋಧಕರಿಗೆ ಕೊಡಮಾಡುವ ಅತ್ಯುತ್ತಮ ಸಂಶೋಧನಾ ಪ್ರಬಂಧ ಪುರಸ್ಕಾರ ಕಿಕೀ ಅವರಿಗೆ ಒಲಿದಿದೆ. ಜಗತ್ತಿನ ನಾನಾ ಕಡೆಗಳಿಂದ ಬಂದ ಪ್ರಬಂಧಗಳನ್ನು ಆಯ್ಕೆ ಸಮಿತಿ ಕೂತು ಸೋಸಿ ತೆಗೆದ ಅತ್ಯುತ್ತಮ ಪ್ರಬಂಧ ಅದು.
ಗುವಾಹಟಿಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಆಂಟ್ರೆಪ್ರೆನ್ಯೂರ್ ಶಿಪ್‌ನ(City Institute of Entrepreneurship) ಸಮಾವೇಶದ ಅಂಗಣದಲ್ಲಿ ಮಾತಿಗೆ ಸಿಕ್ಕ ಕಿಕೀ ಭುಟಿಯ ಬದುಕಿನ ಪುಟಗಳನ್ನೂ, ಕನಸುಗಳನ್ನೂ ಅನಾವರಣಗೊಳಿಸಿದರು.
‘ಉತ್ತರ ಸಿಕ್ಕಿಂನ ದೈನಂದಿನ ಬದುಕಿನಲ್ಲಿ ಸಾಂಪ್ರದಾಯಿಕ ಶಮನಕಾರರ ಪಾತ್ರ ಮತ್ತು ಆವೇಶ ಕಥನ’ ಈಕೆಯ ವಿಷಯ. ಉತ್ತರ ಸಿಕ್ಕಿಂನ ತನ್ನ ಹಳ್ಳಿ ತಿಂಗ್ಚಿಮ್‌ನ ದಟ್ಟಕಾನನದಲ್ಲಿ ಕತ್ತಲು ಇಳಿದ ಹೊತ್ತು ಗೆಳೆತಿಯ ಮನೆಗೆ ಹೊರಟಾಗ ಆದ ಅನುಭವ ಈ ಪ್ರಬಂಧಕ್ಕೆ ಮೂಲ ಪ್ರೇರಣೆ. ಗೆಳತಿಯು ಹತ್ತಿರದ ಕತ್ತಲ ದಾರಿ ಬಿಟ್ಟು ಬೆಳಕಿರುವ ಬಳಸು ದಾರಿ ಹಿಡಿಯುತ್ತಾಳೆ. ಹತ್ತಿರದ ಕತ್ತಲ ದಾರಿಯಲ್ಲಿ ಸ್ದೇ ಅರ್ಥಾತ್ ಭೂತ-ಪ್ರೇತಾದಿ ಸಂಚಾರ ಇದೆ ಎಂದು ಪಾವೊ (ಪ್ರೇತ ಬಿಡಿಸುವವರು ಅಥವಾ ಶಮನಕಾರರು) ಹೇಳಿದ್ದಾರೆ ಎನ್ನುವುದು ಗೆಳತಿಯ ಉತ್ತರ.
ಗೆಳತಿಯ ಮಾತಿನ ಜಾಡು ಹಿಡಿದ ಕಿಕೀ ಗೆ ತೆರೆದುಕೊಂಡದ್ದು ಪ್ರೇತ ಬಿಡಿಸುವ ಶಮನಕಾರರ ಅದ್ಭುತ ಲೋಕ. ಅತಿಮಾನವತೆಯ ಕುರಿತ ನಂಬಿಕೆ, ಆಚರಣೆ, ಅದಕ್ಕೆ ಸಂಬಂಧಿಸಿದ ಕಥನಗಳ ಬೃಹತ್ ಕಣಜ. ಇಲ್ಲಿನ ಕಾಸ್ಮಿಕ್ ಜಗತ್ತಿನ ರಾಜಕೀಯ, ಧಾರ್ಮಿಕ ತಜ್ಞರು, ಮೈಮೇಲೆ ಆವೇಶ ಬರುವುದು, ಸ್ಥಳೀಯ ಬೌದ್ಧ ನಂಬಿಕೆ-ಆಚರಣೆ-ಕಥನ -ಇವೆಲ್ಲವನ್ನೂ ಕಿಕೀ ವಿಶ್ಲೇಷಿಸಿದ್ದಾರೆ.
ಕಿಕೀ, ಯರೋಪ್‌ನ ತಾರ್ತು ವಿಶ್ವವಿದ್ಯಾಲಯದ ಎಸ್ತೋನಿಯನ್ ಹಾಗು ತೌಲನಿಕ ಜಾನಪದದ ಸಂಶೋಧನಾ ವಿದ್ಯಾರ್ಥಿನಿ. ಅದಕ್ಕೂ ಮುನ್ನ ಸಿಕ್ಕಿಂ ರಾಜಧಾನಿ ಗ್ಯಾಂಕ್ಟಕ್‌ನ ನಾಮ್ಗ್ಯಲ್ ಟಿಬೆಟಾಲಜಿ ಸಂಸ್ಥೆಯಲ್ಲಿ ಸಹಾಯಕ ಸಂಶೋಧಕಿ.
ಮೌಖಿಕ ಚರಿತ್ರೆ ಮತ್ತು ನಾಣ್ಣುಡಿಗಳ ಲಿಪ್ಯಂತರ, ಅನುವಾದ, ಪ್ರಸರಣ ಈಕೆಯ ಕೆಲಸ. ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಸಹಾಯಕಿ. ಸಿಕ್ಕಿಂ ನ ರಕ್ಷಕ ದೇವತೆಗಳ ಕುರಿತ ನಂಬಿಕೆಯ ಕಥನಗಳ ಕಡೆಗೆ ತೀವ್ರ ಗಮನ. ಗ್ರಾಮಗಳ ನಿತ್ಯ ಬದುಕಿನಲ್ಲಿ ರಕ್ಷಕ ದೇವತೆಗಳ ಪಾತ್ರ, ನಂಬಿಕೆ, ಮೌಲ್ಯ, ಕಥೆ, ಆಚರಣೆ ಅಂತರಾಳಗಳ ಹುಡುಕಾಟ. ಕಿಕೀಗೆ ಸಂಶೋಧನೆ ಎನ್ನುವುದು ತನ್ನ ತನದ ಅಸೀಮ ಶೋಧ.
ಸಾಮಾಜಿಕ ಕಾರ್ಯಕರ್ತೆ
2016ರಲ್ಲಿ ಕಿಕೀ ಸಂಶೋಧನೆಗಾಗಿ ಯೂರೋಪಿನ ಎಸ್ತೊನಿಯಾಕ್ಕೆ ಬಂದರು. ಅದು ಕಂಡು ಕೇಳರಿಯದ ನಾಡು. ಆದರೆ ನಂತರ ಮನೆಯಂತಹ ಅನುಭವ. ಸಿಕ್ಕಿಂನಂತೆ ಅಲ್ಲೂ ಚಳಿ ಮತ್ತು ಮಂಜು. ಚಳಿಯಲ್ಲಿ ಎಸ್ತೋನಿಯನ್ನರ ಜತೆಗಿನ ಮಾತು ಕಿಕೀಗೆ ಬೆಚ್ಚಗಿನ ಅನುಭವ ನೀಡಿದೆಯಂತೆ.
1975ರ ರವರೆಗೆ ಸಿಕ್ಕಿಂ ಬೌದ್ಧ ಹಿಮಾಲಯ ರಾಜ್ಯ. ಕಿಕೀ ಹೆತ್ತವರು ಹುಟ್ಟಿದ್ದು ಅಲ್ಲೇ. ನೇಪಾಳ, ಭೂತಾನ್, ಚೀನಾ ಗಡಿ ಹಂಚಿಕೊಂಡಿರುವ ಸಿಕ್ಕಿಂ ನಂತರ ಭಾರತದಲ್ಲಿ ವಿಲೀನಗೊಂಡಿದೆ. ಶೇಕಡಾ 75ರಷ್ಟು ಜನ ನೇಪಾಳಿ ಮೂಲದವರು. ಮೂಲ ಸಿಕ್ಕಿಂರಿಗೆ ಅವರದ್ದೇ ಸ್ಥಳೀಯ ಧರ್ಮ ಮತ್ತು ಶಮನ ವ್ಯವಸ್ಥೆ ಇದೆ. ವಿಭಿನ್ನ ಹಿನ್ನೆಲೆಗಳ ವಿವಿಧ ಸಮುದಾಯಗಳು ಇದ್ದು ಒಂದು ಬಗೆಯ ರಾಷ್ಟ್ರೀಯತಾ ಅಸ್ಮಿತೆಯ ಸಮಸ್ಯೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿದೆ ಎನ್ನುವುದು ಕಿಕೀಯ ವಾದ.
‘ಭುಟಿಯ ಎನ್ನುವುದು ಸಿಕ್ಕಿಂನ ಒಂದು ಸಮುದಾಯ. ನಾನು ಇಳಿದದ್ದು ನನ್ನದೇ ಸಮುದಾಯದ ದೇವತೆಗಳ ಕುರಿತ ಹುಡುಕಾಟಕ್ಕೆ. ಇವೆಲ್ಲ ನಿಗೂಢವಾದ, ಬೌದ್ಧ ಪೂರ್ವ ದೇವತಾ ರೂಪಗಳು. ಒಂದು ಪವಿತ್ರ ಮರ. ಅಲ್ಲಿ ವಾಸಿಸುವ ಆತ್ಮ.... ಸಿಕ್ಕಿಂನಲ್ಲಿ ಅಂತಹ ಅನೇಕ ಪವಿತ್ರ ಸ್ಥಳಗಳಿವೆ. ಅವೆಲ್ಲ ಅಪಾಯಕಾರಿ ಎಂದೇ ಜನರ ನಂಬಿಕೆ. ಸಿಕ್ಕಿಂ ಜನರ ನಿತ್ಯ ಬದುಕಿನಲ್ಲಿ ದೇವತೆಗಳು
ವಹಿಸುವ ಪಾತ್ರದ ಬಗ್ಗೆ ಕಿಕೀಗೆ ಕುತೂಹಲ. ಉದಾಹರಣೆಗೆ ನನ್ನ ಆರೋಗ್ಯ ಕೆಟ್ಟರೆ ನೇರ ಆಸ್ಪತ್ರೆಗೆ ಒಯ್ಯುವುದಿಲ್ಲ. ಶಮನರನ್ನು ಮನೆಗೆ ಕರೆಸುತ್ತಾರೆ. ಶಮನದ ಆಚರಣೆ ಶುರು ಮಾಡುತ್ತಾರೆ. ಆಸ್ಪತ್ರೆಗೆ ಹೋಗುವುದು ಕೊನೆಯ ದಾರಿ ಅಷ್ಟೇ’ ಎನ್ನುತ್ತಾರೆ ಕಿಕೀ.
ಆಕೆ ತನ್ನ ಕ್ಷೇತ್ರಕಾರ್ಯಕ್ಕಾಗಿ ಸಿಕ್ಕಿಂ ಪೂರ್ತಿ ಸುತ್ತಿದ್ದಾರೆ. ದೇವತಾ ರೂಪಗಳನ್ನು ಹುಡುಕಿದ್ದಾರೆ. ಸ್ಥಳಿಯ ನಂಬಿಕೆಯ ಕಥನಗಳಲ್ಲಿ ಎಲ್ಲಿ, ಯಾಕೆ ಮತ್ತು ಯಾವ ಬಗೆಯ ರೂಪಗಳ ಅಸ್ತಿತ್ವ ಇದೆ ಎಂದು ಜಾಲಾಡಿದ್ದಾರೆ.
ಸಿಕ್ಕಿಂನ ನಾಣ್ಣುಡಿ ಮತ್ತು ನುಡಿಗಟ್ಟುಗಳ ಮೂಲ ಮತ್ತು ಬಳಕೆ ಕುರಿತ ವಿಶ್ಲೇಷಣೆ ಮಾಡಿದ್ದಾರೆ. ಅನುವಾದ ಮಾಡಿದ್ದಾರೆ. ಸುಮಾರು 290 ನಾಣ್ಣುಡಿಗಳನ್ನು ಸಂಗ್ರಹಿಸಿದ್ದಾರೆ. ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲೂ ಸಹಕರಿಸಿದ್ದಾರೆ.
ಸಿನಿಮಾದಲ್ಲೂ ಕಿಕೀ
‘ಧೊಕ್ ಬು ದ ಕೀಪರ್’– ಕೊಲ್ಕತ್ತಾ ಇಂಟರ್ ನ್ಯಾಷನಲ್ ಕಲ್ಟ್ ಫಿಲಂ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಧ್ವನಿ ವಿನ್ಯಾಸಕ್ಕಿರುವ ಗೋಲ್ಡನ್ ಫಾಕ್ಸ್ ಬಹುಮಾನ ಬಾಚಿಕೊಂಡಿದೆ. ಇದರ ನಿರ್ದೇಶಕ ದಾವಾ ಲೆಪ್ಚಾ ಅತ್ಯುತ್ತಮ ನಿರ್ದೇಶಕರಿಗಿರುವ ಪುರಸ್ಕಾರಕ್ಕೆ ಭಾಜನರಾದರು. 88 ನಿಮಿಷಗಳ ಈ ಸಿಕ್ಕಿಂ ಚಿತ್ರದ ಚಿತ್ರೀಕರಣ ಉತ್ತರ ಸಿಕ್ಕಿಂನ ಝೊಂಗುದಲ್ಲಿ ನಡೆದಿದೆ. ಧೊಕ್ ಬು ಎಂಬ ಪೌರಾಣಿಕ ಕಥಾ ಪಾತ್ರದ ಸುತ್ತ ಕಥನದ ಸುರುಳಿ ಬಿಚ್ಚಿಕೊಳ್ಳುತ್ತದೆ.
ಲ್ಹಕ್ಪ ಲೆಪ್ಚ ಮತ್ತು ಕಿಕೀ ಡಿ ಭುಟಿಯ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಗ್ಲಾಮರಸ್ ಹುಡುಗಿಯೊಬ್ಬಳು ಸಂಶೋಧನೆಯಂತಹ ಅತ್ಯಂತ ಬೋರಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾದರೂ ಹೇಗೆ ಎನ್ನುವುದು ಎಲ್ಲರಿಗೂ ಅಚ್ಚರಿಯ ವಿಷಯ. ಈ ಎರಡು ವಿಚಾರಗಳಲ್ಲಿ ಏಕತಾನತೆ ಮೀರಿದ್ದೇನೆ. ಒಂದು ಪಿ.ಎಚ್‌ಡಿ ಮಾಡುವವರೆಲ್ಲ ಕೇವಲ ದಪ್ಪ ಕನ್ನಡಕ ಹಾಕಿಕೊಂಡು ಓದಿನಲ್ಲೇ ಇರುತ್ತಾರೆ ಎಂಬ ಮಿಥ್. ಇನ್ನೊಂದು ನಟಿಯರೆಲ್ಲ ತೇಲು ಮಟ್ಟದ ಓದಿನಲ್ಲಿ ಇರುತ್ತಾರೆ ಎನ್ನುವ ಮಿಥ್. ಈ ಎರಡೂ ಮಿಥ್‌ಗಳನ್ನು ಒಡೆದು ಹಾಕಿದ್ದೇನೆ. ಅನಿಶ್ಚಿತತೆಯೇ ಬದುಕಿನ ಅತ್ಯುತ್ತಮ ಸಂಗತಿ. ಎಸ್ತೊನಿಯಾದ ಮೂಲಕ ಜಗತ್ತು ನನಗೆ ತೆರೆದುಕೊಂಡಿದೆ’ ಎನ್ನುವುದು ಕಿಕೀಯ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.