ಸಾಂಸ್ಕೃತಿಕ ಕ್ಷೇತ್ರದಲ್ಲಿರುವ ಮಹಿಳೆಯರು ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನದ ಕೊರತೆಯಿಂದ ಬಹಳಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಹಾಗೆಯೇ ಸೃಜನಶೀಲತೆ ಬೇಡುವ ಕೆಲಸಗಳಲ್ಲಿ ಮಹಿಳೆಯರನ್ನು ಕಡೆಗಣಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇಂತಹ ಡಿಜಿಟಲ್ ಅಂತರವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
ಈ ಕೋವಿಡ್ ಎನ್ನುವುದು ಏನೆಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ– ದೈಹಿಕ, ಮಾನಸಿಕ, ಆರ್ಥಿಕ, ಔದ್ಯೋಗಿಕ ಸಮಸ್ಯೆಗಳ ಬಗ್ಗೆಯಂತೂ ಹೊಸದಾಗಿ ಹೇಳುವುದೇ ಬೇಡ, ಮಾಧ್ಯಮಗಳಿಗೆ ತೆರೆದುಕೊಂಡ ಮಕ್ಕಳೂ ಕೂಡ ಈ ಬಗ್ಗೆ ಪಟಪಟ ಎಂದು ಉದ್ದ ಪಟ್ಟಿಯನ್ನೇ ಕೊಟ್ಟುಬಿಡುತ್ತಾರೆ. ಇವುಗಳ ಹೊರತಾಗಿ ಪರೋಕ್ಷವಾಗಿ ಹೊಸ ಹೊಸ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಂದರ್ಭ ಸೃಷ್ಟಿಸುತ್ತಿದೆಯೇ ಎಂಬ ಅನುಮಾನ ಇತ್ತೀಚಿನ ಕೆಲವು ಪ್ರಕರಣಗಳಿಂದ ದಟ್ಟವಾಗುತ್ತಿರುವುದಂತೂ ಹೌದು. ಕಳೆದ ಒಂದೂವರೆ ವರ್ಷಗಳಿಂದ ಕಾಡುತ್ತಿರುವ ಈ ಪಿಡುಗು ಸಾಮಾಜಿಕವಾಗಿಯೂ ಗಂಡು– ಹೆಣ್ಣಿನ ಮಧ್ಯೆ ಹಲವು ವಿಷಯಗಳಲ್ಲಿ ಸಾಕಷ್ಟು ಅಂತರವನ್ನು ಹೆಚ್ಚಿಸಿದೆ. ಉದಾಹರಣೆಗೆ ಡಿಜಿಟಲ್ ಕೌಶಲದ ವಿಷಯವನ್ನೇ ತೆಗೆದುಕೊಳ್ಳಿ. ಸಾಂಸ್ಕೃತಿಕ, ಸೃಜನಶೀಲ ಕ್ಷೇತ್ರಗಳಾದ ಸಂಗೀತ, ನೃತ್ಯ, ಕಲೆ, ಬರವಣಿಗೆ ಮೊದಲಾದ ಕಡೆ ಹೆಚ್ಚಿನ ಕಲಾವಿದೆಯರು, ಬರಹಗಾರ್ತಿಯರು ಆರಾಮವಾಗಿ ತಮ್ಮ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಕೋವಿಡ್–19, ಅದರ ಹಿಂದೆಯೇ ಶುರುವಾದ ಲಾಕ್‌ಡೌನ್ ಸಂದರ್ಭದಲ್ಲಿ ಡಿಜಿಟಲ್ ಕೌಶಲ, ಅಂದರೆ ಅಂತರ್ಜಾಲ ಬಳಕೆಯ ಕೊರತೆಯಿಂದಾಗಿ ಸಾಕಷ್ಟು ಮಹಿಳೆಯರ ಕೈ ಕಟ್ಟಿದಂತಾಗಿದೆ.
‘ನನಗೇನೋ ಸಾಕಷ್ಟು ವ್ಯವಸ್ಥೆ ಮಾಡಲು ಸಂಘಟಕರಿದ್ದಾರೆ. ತಂತ್ರಜ್ಞಾನದಲ್ಲಿ ನುರಿತ ಸಹಾಯಕರಿದ್ದಾರೆ. ಹೀಗಾಗಿ ಲಾಕ್‌ಡೌನ್ ಸಂದರ್ಭದಲ್ಲೂ ನಾನು ಸಾಕಷ್ಟು ಕಾರ್ಯಕ್ರಮಗಳನ್ನು ತಂತ್ರಜ್ಞಾನದ ಸಹಾಯದಿಂದ ನೀಡಿದ್ದೇನೆ. ಆದರೆ ಇಂತಹ ನೆರವಿಲ್ಲದ ಸಣ್ಣಪುಟ್ಟ ಕಲಾವಿದೆಯರು, ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವವರ ಪಾಡೇನು?’ ಎಂದು ಖ್ಯಾತ ಹಿಂದೂಸ್ತಾನಿ ಗಾಯಕಿ ಕೌಶಿಕಿ ಚಕ್ರವರ್ತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸಾಂಸ್ಕೃತಿಕ ಕ್ಷೇತ್ರದಲ್ಲಿ...
ಹೌದು, ಆಫ್‌ಲೈನ್‌ನಲ್ಲಿ ಹೆಚ್ಚಿನ ಶ್ರಮವಿಲ್ಲದೇ ತಮ್ಮ ಪ್ರತಿಭೆಯ ಮೂಲಕ ಹೆಸರು, ಹಣ ಸಂಪಾದನೆ ಮಾಡುತ್ತ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದ ಹಲವು ಕಲಾವಿದೆಯರು ಈಗ ಆನ್‌ಲೈನ್‌ನಲ್ಲಿ ಪರಿಣತಿಯಿಲ್ಲದೇ ಕಂಗಾಲಾಗಿದ್ದಾರೆ. ಆದರೆ ಅವರದ್ದೇ ಆದ ಕ್ಷೇತ್ರದಲ್ಲಿರುವ ಪುರುಷ ಸಹೋದ್ಯೋಗಿಗಳಲ್ಲಿ ಹೆಚ್ಚಿನವರಿಗೆ ಇಂತಹ ಸಮಸ್ಯೆ ಎದುರಾಗಿಲ್ಲ ಎನ್ನುತ್ತದೆ ಸಮೀಕ್ಷೆ. ಯುನೆಸ್ಕೊ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಕೂಡ ಇತ್ತೀಚೆಗೆ ವರದಿಯೊಂದರಲ್ಲಿ ಇದನ್ನೇ ಹೇಳಿದೆ. ‘ಪ್ರಪಾತದತ್ತ ಪ್ರಗತಿ’ ಎಂಬ ಸಮೀಕ್ಷಾ ವರದಿಯಲ್ಲಿ ಅಂತರ್ಜಾಲ ಮತ್ತು ತಂತ್ರಜ್ಞಾನದ ಟೂಲ್‌ಗಳು ಲಭ್ಯವಿಲ್ಲದೇ ಈ ಹಿಂದೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದ್ದ ಲಿಂಗ ಅಸಮಾನತೆ ಈ ಕೋವಿಡ್ ಸಂದರ್ಭದಲ್ಲಿ ಇನ್ನಷ್ಟು ಜಾಸ್ತಿಯಾಗಿದೆ; ಕಲಾವಿದೆಯರು ತಂತ್ರಜ್ಞಾನದ ಕೊರತೆಯಿಂದಾಗಿ ಡಿಜಿಟಲ್ ವೇದಿಕೆ, ಆನ್‌ಲೈನ್ ತರಗತಿ ಮತ್ತಿತರ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದು ಯುನೆಸ್ಕೊ ಹೇಳಿತ್ತು. ಯುನೆಸ್ಕೊ ಪ್ರಕಾರ ಜಗತ್ತಿನಾದ್ಯಂತ ಪುರುಷರಿಗೆ ಹೋಲಿಸಿದರೆ 25 ಕೋಟಿ ಮಹಿಳೆಯರು ಮಾತ್ರ ಅಂತರ್ಜಾಲ ಬಳಸುತ್ತಿದ್ದಾರಂತೆ!
ಭಾರತದಲ್ಲಂತೂ ಕೇಳುವುದೇ ಬೇಡ, ಮಹಿಳೆಯರಲ್ಲಿ ತಂತ್ರಜ್ಞಾನ ಸಾಕ್ಷರತೆ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದೆ ಎಂದು ಯುನೆಸ್ಕೊ ಈ ಹಿಂದೆ ಹೇಳಿತ್ತು. ಅಂತರ್ಜಾಲ ಬಳಸುವ ಪುರುಷರ ಸಂಖ್ಯೆಗೆ ಹೋಲಿಸಿದರೆ ಇಂತಹ ಮಹಿಳೆಯರ ಸಂಖ್ಯೆ ಅವರ ಅರ್ಧದಷ್ಟಿದೆಯಂತೆ.
‘ಇತ್ತೀಚೆಗೆ ಖ್ಯಾತ ದಿನಪತ್ರಿಕೆಯೊಂದರ ಸುದ್ದಿ ವಿಭಾಗದವರು ಫೇಸ್‌ಬುಕ್ ಲೈವ್ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಕರೆ ಮಾಡಿದ್ದರು. ನಾನು ಕಂಪ್ಯೂಟರ್‌ನಲ್ಲಿ ಬರೆಯಲು ಕಲಿತಿದ್ದೇ ಇತ್ತೀಚೆಗೆ. ಡಿಜಿಟಲ್‌ಗೆ ತೆರೆದುಕೊಂಡಿದ್ದು ಕಡಿಮೆಯೇ. ಹೀಗಾಗಿ ಇಂತಹದ್ದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಆಹ್ವಾನವನ್ನು ನಿರಾಕರಿಸಿಬಿಟ್ಟೆ’ ಎಂದು ಖ್ಯಾತ ಲೇಖಕಿಯೊಬ್ಬರು ಹೇಳಿದಾಗ ಈ ಡಿಜಿಟಲ್ ಅಂತರದ ಅರಿವಾಗದೇ ಇರದು.
ಮೊಬೈಲ್ ಫೋನ್ ಹೆಚ್ಚಿನ ಮಹಿಳೆಯರ ಕೈಯಲ್ಲಿ ಕಾಣಿಸಿಕೊಂಡರೂ ಕರೆ ಮಾಡುವುದು, ಸ್ವೀಕರಿಸುವುದು ಬಿಟ್ಟರೆ ತಂತ್ರಜ್ಞಾನದ ಕುರಿತ ಅರಿವಿನ ಅಭಾವದಿಂದ ಅಂತರ್ಜಾಲ, ವಾಟ್ಸ್‌ಆ್ಯಪ್, ಸಾಮಾಜಿಕ ಜಾಲತಾಣ ಎಂದು ಹಿಂಜರಿಯುವವರ ಸಂಖ್ಯೆ ಸಾಕಷ್ಟಿದೆ ಎನ್ನುತ್ತದೆ ಮೊಬೈಲ್ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ.
ಟ್ರೋಲಿಂಗ್ ಭಯ
ಈ ಡಿಜಿಟಲ್ ಅಂತರ ಎನ್ನುವುದು ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಟ್ರೋಲಿಂಗ್ ಮಾಡುವುದಕ್ಕೆ, ಬೆದರಿಸುವುದಕ್ಕೆ ಕೂಡ ದಾರಿ ಮಾಡಿಕೊಟ್ಟಿದೆ ಎನ್ನಬಹುದು. ಇದು ಯಾವ ರೀತಿಯ ಪರಿಸ್ಥಿತಿ ಸೃಷ್ಟಿಸಿದೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಮನೆಯವರ ಉತ್ತೇಜನದಿಂದ ತನ್ನದೊಂದು ಕೃತಿಯನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಹಿರಿಯ ಲೇಖಕಿಯೊಬ್ಬರಿಗೆ ಇನ್ನಿಲ್ಲದಂತೆ ಟ್ರೋಲಿಂಗ್ ನಡೆಯಿತು. ಅಶ್ಲೀಲ ಶಬ್ದಗಳ ಪ್ರಹಾರ ಸಹಿಸಲಾಗದೆ ಅವರು ತಮ್ಮ ಫೇಸ್‌ಬುಕ್ ಖಾತೆಯನ್ನೇ ಸ್ಥಗಿತಗೊಳಿಸಬೇಕಾಯಿತು. ಇಂತಹ ಸೈಬರ್ ನಿಂದನೆ, ದೌರ್ಜನ್ಯದಿಂದ ಮಾನಸಿಕ ಒತ್ತಡ, ಭಯ ಅನುಭವಿಸುವುದಕ್ಕಿಂತ ದೂರ ಉಳಿಯುವುದೇ ಲೇಸು ಎಂದು ಹಲವು ಮಹಿಳೆಯರು ಡಿಜಿಟಲ್ ಬಳಕೆಯನ್ನೇ ಕಡಿಮೆ ಮಾಡಿಬಿಡುತ್ತಾರೆ. ಇದು ಅಂತರ್ಜಾಲದಂತಹ ತಂತ್ರಜ್ಞಾನದ ಬಳಕೆಯಲ್ಲಿ ಪುರುಷ– ಮಹಿಳೆಯರ ಮಧ್ಯೆ ಭಾರಿ ಅಂತರವನ್ನೇ ಸೃಷ್ಟಿಸುತ್ತಿದೆ. ಪರಿಣಾಮ, ಮಹಿಳೆಯರು, ವಿಶೇಷವಾಗಿ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವಂಥವರು ಅವಕಾಶಗಳಿಂದ ವಂಚಿತರಾಗುವಂತೆ ಮಾಡುತ್ತಿದೆ. ಲಿಂಗ ಅಸಮಾನತೆ ವಿರುದ್ಧ ಹಾಗೂ ಕ್ರಿಯಾತ್ಮಕ ಕಲಾಕ್ಷೇತ್ರದಲ್ಲಿ ಸ್ವಾತಂತ್ರ್ಯದ ಪರವಾದ ಹೋರಾಟಕ್ಕೆ ವೇದಿಕೆ ಎನಿಸಿದ ಈ ಅಂತರ್ಜಾಲ ಎಂಬುದು ಈ ರೀತಿ ಮಹಿಳೆಯರ ಮೌನಕ್ಕೆ ಮುದ್ರೆ ಒತ್ತುವ ತಾಣವಾಗಿ ಮಾರ್ಪಟ್ಟಿದ್ದು ವಿಪರ್ಯಾಸ.
‘ಕಲಾ ಮಾಧ್ಯಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಾಗಲು ಡಿಜಿಟಲ್ ದೌರ್ಬಲ್ಯವೂ ಒಂದು ಕಾರಣ ಎನ್ನಬಹುದು. ಕೇವಲ ಸಂಗೀತ, ನೃತ್ಯ, ಚಿತ್ರಕಲೆ ಮಾತ್ರವಲ್ಲ, ಸಿನಿಮಾ ಕ್ಷೇತ್ರದಲ್ಲೂ ಇದು ಎದ್ದು ಕಾಣುತ್ತಿದೆ’ ಎಂದು ನಟಿ ವಿದ್ಯಾ ಬಾಲನ್ ಈಚೆಗೆ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಈಗಾಗಲೇ ಕೋವಿಡ್‌ನಿಂದಾಗಿ ಮನರಂಜನೆ, ಗಾರ್ಮೆಂಟ್, ಪ್ರವಾಸೋದ್ಯಮ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳು ಗಣನೀಯವಾಗಿ ಕೆಲಸ ಕಳೆದುಕೊಂಡಿದ್ದು, ಕಲಾ ಕ್ಷೇತ್ರವೂ ಇವುಗಳ ದಾರಿಯಲ್ಲೇ ಹೊರಟಿರುವುದು ಗಾಯದ ಮೇಲೆ ಬರೆ ಎಳೆದಂತೆ.
ಏನು ಮಾಡಬಹುದು?
ಡಿಜಿಟಲ್‌ಗೆ ಮಹಿಳೆಯರು ಹೆಚ್ಚು ತೆರೆದುಕೊಳ್ಳುವಂತೆ ಪ್ರೋತ್ಸಾಹಿಸಲು ಆನ್‌ಲೈನ್ ಗ್ರೂಪ್‌ಗಳನ್ನು ರಚಿಸಿಕೊಳ್ಳಬಹುದು.
ಇದೇನು ಮಹಾ ವಿದ್ಯೆಯಲ್ಲ, ಹಿಂಜರಿಕೆ ಬಿಟ್ಟರೆ ಆರಾಮವಾಗಿ ಕಲಿಯಬಹುದು ಎಂಬ ನಂಬಿಕೆ ಮೂಡಿಸಬೇಕು.
ಮುಖ್ಯವಾಗಿ ಸೈಬರ್ ಟ್ರೋಲಿಂಗ್ ಎದುರಿಸಲು, ನೆಮ್ಮದಿ ಕೆಡಿಸಿದರೆ ಸೈಬರ್ ಪೊಲೀಸ್ ಸಂಪರ್ಕಿಸಲು ಧೈರ್ಯ ಮೂಡಿಸುವಂತಹ ಕೆಲಸವನ್ನು ಮಹಿಳಾ ಸಂಘಟನೆಗಳು ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.