ಈ ಗಂತೂ ಸಹಜೀವನ (ಲಿವ್ ಇನ್ ರಿಲೇಷನ್‌ಶಿಪ್) ಎನ್ನುವುದು ಗುಟ್ಟಾಗಿ ಮಾತನಾಡಿಕೊಳ್ಳುವಂತಹ ವಿಷಯವೇನೂ ಅಲ್ಲ; ಇಂತಹ ಸಂಬಂಧ ಹೊಂದಿರುವ ಹುಡುಗಿಯರ ನಡತೆ ಸರಿಯಿಲ್ಲ ಎಂದು ಗಾಸಿಪ್ ಮಾತನಾಡುವಾಗ ಚರ್ಚೆಯಾಗುವಂತಹ ಪರಿಸ್ಥಿತಿಯೂ ಈಗಿಲ್ಲ. ಮದುವೆಯ ಬಂಧನವಿಲ್ಲದೇ ಮನಮೆಚ್ಚಿದವನ ಜೊತೆ ಸಹಜೀವನ ನಡೆಸುವ ಅವಳ ಆಯ್ಕೆಯನ್ನು ಅವಳ ಹಕ್ಕು ಎಂದೇ ಪರಿಗಣಿಸುವಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಹಿಂದೆಮುಂದೆ ಯೋಚಿಸದೇ ಹುಡುಗನ ಜೊತೆ ಕೂಡಿಕೆ ಮಾಡಿಕೊಂಡು ನಂತರ ವಂಚನೆಗೋ, ದೌರ್ಜನ್ಯಕ್ಕೋ ಒಳಗಾದ ಹಲವಾರು ಪ್ರಕರಣಗಳು ನಮ್ಮ ಮುಂದಿವೆ.
ಒಂದಿಷ್ಟು ದಿನಗಳ ಕಾಲ ಇಂತಹ ಸಂಬಂಧದಲ್ಲಿದ್ದು, ಮುಂದಿನ ಹಂತವಾದ ಮದುವೆಗೆ ಒತ್ತಾಯಿಸಿದ ಹುಡುಗಿಯಿಂದ ದೂರವಾಗಲು ಅಥವಾ ಇನ್ನೊಂದು ಯುವತಿಯ ಸಂಬಂಧ ಬೆಳೆಸುವ ಸಲುವಾಗಿ ಮೊದಲಿನವಳನ್ನು ನಿವಾರಿಸಿಕೊಳ್ಳಲು ಕೊಲೆಯಂತಹ ಹೀನ ಕೃತ್ಯಕ್ಕೆ ಕೈ ಹಾಕಿದ ಪ್ರಕರಣಗಳು ಬೇಕಾದಷ್ಟು ಸಂಭವಿಸಿವೆ. ಹೀಗಾಗಿ ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಎಚ್ಚರಿಕೆ ವಹಿಸುವುದು ಒಳಿತು.
ಕಾನೂನಾತ್ಮಕವಾಗಿಯೂ ಇಂತಹ ಸಂಬಂಧಕ್ಕೆ ಸರ್ಕಾರ ಮುದ್ರೆ ಒತ್ತಿದ್ದು, ನಿಯಮಗಳನ್ನು ರೂಪಿಸಿದೆ. ಆದರೂ ಕೂಡ ಇಂತಹ ಸಂಬಂಧಕ್ಕೆ ಒಳಪಡುವಾಗ ಕೆಲವು ವಿಷಯಗಳನ್ನು ಅರಿತುಕೊಳ್ಳುವುದು ಒಳಿತು.
ಸಹಜೀವನ ನಡೆಸುವ ನಿರ್ಧಾರ ಕೈಗೊಂಡಾಗ ಒಂದೇ ಮನೆಯಲ್ಲಿ ಬಾಳುವ ಬಗ್ಗೆ ಇಬ್ಬರೂ ಕೂತು ಚರ್ಚೆ ನಡೆಸಿ ಒಮ್ಮತಕ್ಕೆ ಬರುವುದು ಉತ್ತಮ. ನೀವು ವೈಯಕ್ತಿಕವಾಗಿ ಹಾಗೂ ಆರ್ಥಿಕವಾಗಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಿದ್ಧರಿರಬೇಕು. ಮುಂದೆ ಮದುವೆಯಾಗುವುದೋ, ಬಿಡುವುದೋ ಕೂಡ ಈ ಮಾತುಕತೆಯಲ್ಲಿ ಸೇರಿರಬಹುದು.
ವೆಚ್ಚದ ಮಾತು
ಮೊದಲು ಖರ್ಚು– ವೆಚ್ಚವನ್ನು ಯಾವ ರೀತಿ ನಿಭಾಯಿಸಬೇಕು; ಇಬ್ಬರೂ ಭರಿಸಬೇಕೇ? ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಇಬ್ಬರೂ ದುಡಿಯುವ ಗಂಡ- ಹೆಂಡತಿ ಮಧ್ಯೆಯೇ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಬರುವಾಗ ಇನ್ನು ಈ ರೀತಿಯ ಸಂಬಂಧದಲ್ಲಿ ಅದು ಸಹಜವೇ. ಮನೆಯ ಖರ್ಚು, ಓಡಾಟ, ಪ್ರವಾಸ, ವಾಹನ, ಇತರ ಗೃಹಬಳಕೆ ವಸ್ತುಗಳ ಖರೀದಿ.. ಹೀಗೆ ಎಲ್ಲವನ್ನೂ ಪಟ್ಟಿ ಮಾಡಿ. ಉಳಿತಾಯ, ಹೂಡಿಕೆ ಬಗ್ಗೆಯೂ ಯೋಜನೆ ರೂಪಿಸಿ. ಆದಷ್ಟೂ ಈ ಹೂಡಿಕೆ, ಉಳಿತಾಯಗಳು ಜಂಟಿಯಾಗಿರದೇ, ವೈಯಕ್ತಿಕವಾಗಿದ್ದರೆ ಒಳಿತು. ಕುಟುಂಬದ ಸದಸ್ಯರಿಗೆ ಹಣ ಕೊಡುವಂತಹ ಬದ್ಧತೆಗಳಿದ್ದರೆ ಆ ಬಗ್ಗೆಯೂ ಮಾತನಾಡಿ. ಬೆಂಗಳೂರಿನಲ್ಲಿ ಇತ್ತಿಚೆಗೆ ಇಂತಹ ಜೋಡಿಯೊಂದರ ಮಧ್ಯೆ ವೈಮನಸ್ಯ ಸೃಷ್ಟಿಸಿದ್ದು ಹುಡುಗನ ದುಂದು ವೆಚ್ಚ. ಅದನ್ನು ಪ್ರಶ್ನಿಸಿದ್ದಕ್ಕೆ ಹುಡುಗಿಯ ಕೊಲೆ ಮಾಡಿದ್ದ.
ಮನೆಗೆ ಅತಿಥಿಗಳು, ಕೆಲವೊಮ್ಮೆ ಕುಟುಂಬದ ಸದಸ್ಯರು ಬಂದರೆ ಹೇಗೆ ಹೊಂದಿಕೊಳ್ಳಬೇಕು ಎಂಬುದು ಕೂಡ ಮುಖ್ಯ. ಈ ಬಗ್ಗೆ ಮೊದಲೇ ಮಾತನಾಡಿ ಒಮ್ಮತಕ್ಕೆ ಬರುವುದು ಉತ್ತಮ.
ಇಬ್ಬರು ಡೇಟಿಂಗ್ ಮಾಡುವಾಗ ಪರಸ್ಪರರ ಹವ್ಯಾಸ, ಚಟಗಳು, ನಡವಳಿಕೆಗಳು ಅಷ್ಟೊಂದು ಮುಖ್ಯ ಎನಿಸುವುದಿಲ್ಲ. ಆದರೆ ಸಹಜೀವನ ನಡೆಸುವಾಗ ಇಂತಹ ವಿಷಯಗಳೇ ಸಮಸ್ಯೆ ಹುಟ್ಟು ಹಾಕಬಹುದು. ಹವ್ಯಾಸವೇ ಈ ಸಂದರ್ಭದಲ್ಲಿ ಚಟ ಎನ್ನಿಸಿ ಕಿರಿಕಿರಿ, ಜಗಳಕ್ಕೆ ಕಾರಣವಾಗಬಹುದು.
ಹೊಂದಾಣಿಕೆ
ಹೊಂದಾಣಿಕೆ ಬಹು ಮುಖ್ಯವಾದ ಅಂಶ. ಯಾರು ಅಡುಗೆ ಮಾಡಬೇಕು, ಯಾರು ದಿನಸಿ, ತರಕಾರಿ ತರಬೇಕು, ಮನೆಯನ್ನು ಯಾರು ಸ್ವಚ್ಛಗೊಳಿಸಬೇಕು.. ಇಂತಹುದೇ ಸಣ್ಣಪುಟ್ಟ ಅಂಶಗಳಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಮುಂದೆ ಅದೇ ದೊಡ್ಡ ರಂಪಾಟಕ್ಕ ಕಾರಣವಾಗಬಹುದು. ಹಾಗೆಯೇ ಇನ್ನೊಬ್ಬರ ದುರಭ್ಯಾಸಗಳು ಅಂದರೆ ಮನೆಯನ್ನು ನೀಟಾಗಿಡದೆ ಎಲ್ಲೆಂದರಲ್ಲಿ ಬಟ್ಟೆ, ಪೇಪರ್, ಇತರ ವಸ್ತಗಳನ್ನು ಹರಡಿಕೊಂಡು ಕೂರುವ ವಿಷಯವೂ ಜಗಳಕ್ಕೆ ಕಾರಣವಾಗಬಹುದು. ಹೀಗಾಗಿ ಇಂತಹ ವಿಷಯದಲ್ಲಿ ಹೊಂದಾಣಿಕೆ ಮುಖ್ಯವಾಗುತ್ತದೆ. ಗಂಡ- ಹೆಂಡತಿ ಮಧ್ಯೆಯೂ ಇದು ಜಗಳಕ್ಕೆ ಕಾರಣವಾದರೂ ಅಲ್ಲಿ ಬಹಳಷ್ಟು ಸಲ ಹೊಂದಾಣಿಕೆ ಮುನ್ನೆಲೆಗೆ ಬರುತ್ತದೆ. ಕುಟುಂಬದ ಇತರ ಸದಸ್ಯರು ಸಂಧಾನಕ್ಕೆ ಸಿದ್ಧರಿರುತ್ತಾರೆ. ಆದರೆ ಸಹಜೀವನ ನಡೆಸುವಾಗ ಈ ಜಗಳ ತಾರಕಕ್ಕೇರಿ ನೆಮ್ಮದಿ ಹಾಳು ಮಾಡಬಹುದು.
ಮುಖ್ಯವಾದ ಇನ್ನೊಂದು ಅಂಶವೆಂದರೆ ಇಂತಹ ಸಂಬಂಧ ಸರಿ ಹೋಗದಿದ್ದರೆ ಹೆಚ್ಚಿನ ಸಮಸ್ಯೆ ಸೃಷ್ಟಿಯಾಗದಂತೆ ದೂರವಾಗುವುದು ಹೇಗೆ? ಒಂದು ವೇಳೆ ಮದುವೆಯಾಗುವ ನಿರ್ಧಾರ ಮಾಡಿದರೆ ಸರಿ, ಇಲ್ಲದಿದ್ದರೆ ಕಹಿ ಮರೆತು ತಮ್ಮ ತಮ್ಮ ಬದುಕನ್ನು ಬೇರೆಯವರ ಜೊತೆ ಮುಂದುವರಿಸಿಕೊಂಡು ಹೋಗುವುದು ಹೇಗೆ ಎಂದು ಅರಿತರೆ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.