ADVERTISEMENT

ನಮ್ಮ ಕೈಯಲ್ಲೇ ಇದೆ ಸ್ವಂತ ಸಮಯ

ಹೇಮಾ ವೆಂಕಟ್
Published 24 ಮೇ 2019, 19:30 IST
Last Updated 24 ಮೇ 2019, 19:30 IST
Bored woman at end of day.
Bored woman at end of day.   

ಮುಂಜಾನೆ ಅಲಾರ್ಮ್‌ ಶಬ್ದಕ್ಕೆ ಎಚ್ಚರಾದ ಕೂಡಲೇ ನೆನಪಾಗುವ ಕೆಲಸಗಳ ಉದ್ದನೆಯ ಪಟ್ಟಿಯಿಂದ ನಿದ್ರೆಯ ಸವಿಯೇ ಹೊರಟುಹೋಗುತ್ತದೆ. ತಿಂಡಿ ರೆಡಿ ಮಾಡಬೇಕು, ಪುಟ್ಟ ಮಕ್ಕಳಾದರೆ ಎಬ್ಬಿಸಿ, ರಮಿಸಿ ತಿಂಡಿ ತಿನ್ನಿಸಿ, ಸ್ಕೂಲ್‌ಗೆ ರೆಡಿ ಮಾಡಬೇಕು, ಗಂಡನಿಗೆ ತಿಂಡಿ, ಮಧ್ಯಾಹ್ನಕ್ಕೆ ಬುತ್ತಿ ರೆಡಿ ಮಾಡಬೇಕು. ಅಷ್ಟೆಲ್ಲ ಮಾಡಿ, ತಾನೂ ಹೊರಡಬೇಕು. ಮಧ್ಯೆ ಮಧ್ಯೆ ಫೋನಿನಲ್ಲಿ ನೆನಪಿಸುವ ಅವತ್ತಿನ ಕಚೇರಿ ಕೆಲಸಗಳು. ದಿನದ ಎಂಟು ತಾಸನ್ನೂ ನುಂಗಿ ಮುಂದುವರಿಯುವ ಕಚೇರಿ ಕೆಲಸ. ಎಷ್ಟು ಹೋರಾಡಿದರೂ ಮನೆ– ಕುಟುಂಬದ ಕೆಲಸ ಪೆಂಡಿಂಗ್‌! ಎಲ್ಲದಕ್ಕೂ ಸಮಯ ಕೊಟ್ಟುಕೊಳ್ಳುತ್ತ ಹೋದರೆ ಅವಳಿಗೆಲ್ಲಿ ಉಳಿಯುತ್ತದೆ ಸ್ವಂತ ಸಮಯ?

ವೃತ್ತಿ, ಮದುವೆ, ಮಕ್ಕಳೆಂಬ ಆಪ್ತ ವಲಯದಲ್ಲಿ ಸಿಕ್ಕಿ ಹಾಕಿಕೊಂಡ ನಗರದ ಮಹಿಳೆಯರ ಬದುಕೇ ಹೀಗೆ. ಅದೆಷ್ಟೋ ಮಹಿಳೆಯರಿಗೆ ಬಸ್‌, ಮೆಟ್ರೊ, ಕ್ಯಾಬ್‌ನಲ್ಲಿ ಸಿಗುವ ಸಮಯವೇ ವಿರಾಮದ ಸಮಯ. ಕಚೇರಿಯ ಜವಾಬ್ದಾರಿ ಮುಗಿಯುತ್ತಿದ್ದಂತೆ ಮನೆ ಜವಾಬ್ದಾರಿ ಹೆಗಲೇರಿರುತ್ತದೆ. ಮನೆಗೆ ಹೋಗಿ ಮತ್ತೆ ಅಡುಗೆ ಮಾಡಬೇಕು, ಮಕ್ಕಳ ಕಡೆ ಗಮನ ಕೊಡಬೇಕು. ಅಷ್ಟರಲ್ಲಿ ಉಸ್ಸಪ್ಪ ಅಂತಿರುತ್ತದೆ ಮನಸ್ಸು. ಮಧ್ಯಮ ವರ್ಗದ ಮಹಿಳೆಯರ ಬದುಕು ಇಷ್ಟರಲ್ಲೇ ಗಿರಕಿ ಹೊಡೆಯುತ್ತಿರುತ್ತದೆ. ಇಷ್ಟೆಲ್ಲ ತುರ್ತಿನ ನಡುವೆ ಆಕೆಗೆ ಮೊದಲಿದ್ದ ಕುಸುರಿ, ಪೇಂಟಿಂಗ್, ಗಾರ್ಡನಿಂಗ್‌ ಹವ್ಯಾಸಗಳನ್ನು ಮುಂದುವರಿಸುವುದಾಗಲಿ, ನಾಟಕ– ಸಿನಿಮಾ ಅಂತ ವಾರಂತ್ಯವನ್ನು ಕಳೆಯುವುದಾಗಲಿ ಸಾಧ್ಯವೇ! ಇದು ಹಲವರ ಕೊರಗು.

ಆದರೆ, ಇದರ ನಡುವೆಯೂ ಕೆಲಸವನ್ನು ಸುಲಭ ಮಾಡಿಕೊಳ್ಳುವ ಉಪಾಯಗಳನ್ನು ಅನೇಕರು ಕಂಡುಕೊಂಡಿದ್ದಾರೆ. ಎರಡು ಮೂರು ದಿನಕ್ಕಾಗುವಷ್ಟು ದೋಸೆ ಹಿಟ್ಟು ರುಬ್ಬಿಡುವುದು, ತರಕಾರಿ, ಈರುಳ್ಳಿ ಹೆಚ್ಚಿ ಡಬ್ಬಗಳಲ್ಲಿ ತುಂಬಿ ಫ್ರಿಜ್‌ನಲ್ಲಿಡುವುದು, ದಿಢೀರ್ ಅಂತ ತಯಾರಿಸಬಹುದಾದ ತಿಂಡಿಗಳನ್ನು ಮಾಡುವುದು, ವಾರಕ್ಕೆ ಬೇಕಾಗುವ ಉಡುಪುಗಳನ್ನು ಜೋಡಿಸಿಡುವುದು... ಹೀಗೆ. ಈಗ ಹೆಜ್ಜೆ ಹೆಜ್ಜೆಗೂ ಉಡುಪು ಮಳಿಗೆಗಳಿವೆ. ಹೀಗಾಗಿ, ಷಾಪಿಂಗ್‌ಗೆ ಪ್ರತ್ಯೇಕ ಸಮಯ ಬೇಕಿಲ್ಲ ಅಥವಾ ಅನಗತ್ಯ ಷಾಪಿಂಗ್‌ ಹುಚ್ಚನ್ನು ಕಡಿಮೆ ಮಾಡಿಕೊಳ್ಳುವುದೂ ಸಮಯ ಹೊಂದಾಣಿಕೆಗೆ ಅನಿವಾರ್ಯವಾದೀತು.

ADVERTISEMENT

ಈಗಷ್ಟೇ ಮದುವೆಯಾಗಿ ಮಗುವಿನ ತಾಯಿಯಾಗಿ ಅದರ ಪೋಷಣೆಯ ಜೊತೆಗೆ ಹೊರಗೆ ದುಡಿಯುತ್ತಿರುವ ಮಧುಮಿತಾಗೆ ಇದೆಲ್ಲ ಹೊಸದು. ‘ನನ್ನೆಲ್ಲ ಹವ್ಯಾಸ, ಇಷ್ಟಗಳನ್ನು ಮರೆತೇ ಬಿಟ್ಟಿದ್ದೇನೆ. ಇಬ್ಬರೂ ಒಂದೇ ವೃತ್ತಿ. ಹಾಗಾಗಿ ಸಮಯ ಹೊಂದಾಣಿಕೆ ಸಮಸ್ಯೆಯಾಗಿದೆ. ಬೆಳಗ್ಗೆದ್ದು ಕಚೇರಿಗೆ ಬಂದರೆ ಅದೇ ನನ್ನ ವಿರಾಮದ ಸಮಯ ಅನ್ನೋವಷ್ಟು ಮನೆಯಲ್ಲಿ ಒತ್ತಡ ಅನುಭವಿಸುತ್ತಿದ್ದೇನೆ’ ಎನ್ನುತ್ತಾಳೆ.

ಈಗ ಶುರು ನಿಮ್ಮ ಸಮಯ

ಸ್ವಲ್ಪ ತಾಳಿ, ಕೆಲವು ಸಂಶೋಧಕರು ಒಂದಿಷ್ಟು ಸರಳ ಉಪಾಯಗಳನ್ನು ಅಳವಡಿಸಿಕೊಂಡರೆ ದಿನಕ್ಕೆ ಎರಡು ಗಂಟೆಯವರೆಗೂ ಸಮಯ ಉಳಿಸಿ ನಿಮ್ಮ ಸ್ವಂತ ಆಸಕ್ತಿಗಳಿಗೆ ಒಗ್ಗಿಸಿಕೊಳ್ಳಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. ಅವು ನಿಮಗೆಂದೇ ಹೇಳಿ ಮಾಡಿಸಿದಂತಹವು.

ಮೊದಲಿಗೆ ಕೆಲಸಕ್ಕೆ ಒಂದು ಡೆಡ್‌ಲೈನ್‌ ಇಟ್ಟುಕೊಳ್ಳಿ. ಫಟಾಫಟ್‌ ಮುಗಿಸಿದರೆ ಕೊನೆಯ ಕ್ಷಣದ ಒತ್ತಡ, ಅದರಿಂದಾಗುವ ವಿಳಂಬ ತಪ್ಪುವುದಲ್ಲದೆ ನಿಮಗೆ ಕೊಂಚ ಸಮಯವೂ ಮಿಗುತ್ತದೆ. ಬೆಳಿಗ್ಗೆ ಎದ್ದಾಗ ಅಂದಿನ ತುರ್ತು ಕೆಲಸವನ್ನು ನೆನಪಿಸಿಕೊಂಡು ಆದ್ಯತೆಯ ಮೇಲೆ ಕೆಲಸ ಮಾಡಿ. ಕೆಲವೊಮ್ಮೆ ಎಲ್ಲವನ್ನೂ ಮಾಡಲು ಸಾಧ್ಯವಾಗದಿದ್ದರೂ ಮಾಡಿದ ಕೆಲಸದಿಂದ ಧಾವಂತ ತಪ್ಪುತ್ತದೆ.

ಈಗ ನಿಮ್ಮ ಸಮಯ ಹಾಳು ಮಾಡುವ ಸಾಮಾಜಿಕ ಜಾಲತಾಣ. ದಿನಕ್ಕೆ ಎಷ್ಟು ಗಂಟೆ ಅಂತರ್ಜಾಲದಲ್ಲಿ ಕಳೆಯುತ್ತೀರಿ ಎಂಬುದನ್ನು ನೆನಪಿಸಿಕೊಳ್ಳಿ. ಒಂದು ಗಂಟೆ.. ಎರಡು ಗಂಟೆ.. ಅದು ಅವಶ್ಯಕವಾ? ಇಲ್ಲ, ಅಲ್ಲವೇ? ಅದಕ್ಕೊಂದು ಪೂರ್ಣ ವಿರಾಮ ಹಾಕಿ ಎಂದು ಹೇಳುವುದಿಲ್ಲ, ಆದರೆ ಅಲ್ಪವಿರಾಮವಂತೂ ಸಾಧ್ಯವಿದೆ. ಕ್ರಮೇಣ ಇಳಿಸುತ್ತ 5–10 ನಿಮಿಷ ಸಾಕು, ಅದೂ ಊಟವಾದ ಮೇಲೆ ವಿರಮಿಸುವಾಗ. ಈಗ ಎಷ್ಟು ಸಮಯ ಉಳಿಯಿತು? ಜೊತೆಗೆ ಅನವಶ್ಯಕ ಫೋನ್‌ ಕರೆಗಳು. ಸ್ನೇಹಿತರಿಗೆ ಸಂಜೆ ಮಾಡುವುದಾಗಿ ಹೇಳಿ. ಬಸ್‌, ಮೆಟ್ರೊದಲ್ಲಿ ಪಯಣ ಮಾಡುವಾಗ ಮಾಡಿ. ಕೊಂಚ ರಿಲ್ಯಾಕ್ಸ್‌ ಕೂಡ ಸಿಗುತ್ತದೆ. ಸಹೋದ್ಯೋಗಿಗಳ ಜೊತೆ ಮಾತನಾಡುವುದು.. ಅದನ್ನೂ ಊಟ, ತಿಂಡಿ ಮಾಡುವಾಗ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಕೆಲಸ ಸರಾಗವಾಗಿ ಆಗುವುದಲ್ಲದೇ, ನಿಜಕ್ಕೂ ತೃಪ್ತಿಯ ಭಾವ ಸಿಗುತ್ತದೆ. ಸಮಯದ ಉಳಿತಾಯ– ಕನಿಷ್ಠ ಒಂದರಿಂದ ಎರಡು ತಾಸು.

ಒಂದರ ನಂತರ ಇನ್ನೊಂದು

ಒಂದೇ ಸಾರಿ ಎಲ್ಲ ಕೆಲಸವನ್ನೂ ಮಾಡಲು ಯತ್ನಿಸುವುದು. ಇದಕ್ಕೊಂದು ಗುಡ್‌ಬೈ ಹೇಳಿ. ಏಕೆಂದರೆ ಒಂದು ಕೆಲಸ ಮುಗಿಸಿ, ಇನ್ನೊಂದನ್ನು ಕೈಗೆತ್ತಿಕೊಳ್ಳುವುದರಿಂದ ಆ ಕೆಲಸವನ್ನು ಕರಾರುವಕ್ಕಾಗಿ ಮಾಡಬಹುದಂತೆ. ನಮ್ಮ ಮೆದುಳೂ ಒಂದೇ ಬಾರಿ ಹಲವು ಕೆಲಸ ಮಾಡಗೊಡುವುದಿಲ್ಲ. ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇರುತ್ತದೆ. ‘ಮೊದಲು ಇ–ಮೇಲ್‌ ನೋಡಿ ಮುಗಿಸುತ್ತೇನೆ. ನಂತರ ಅಂದಿನ ಅಸೈನ್‌ಮೆಂಟ್‌ ಪರಿಶೀಲನೆ ಮಾಡುವುದು. ಅದನ್ನರ್ಧ, ಇದನ್ನರ್ಧ ಮಾಡಿದರೆ ಯಾವುದೂ ಮುಗಿಯುವುದಿಲ್ಲ. ಸಮಯವೂ ಹಾಳು’ ಎನ್ನುತ್ತಾರೆ ಮಾಧ್ಯಮದಲ್ಲಿ ಕೆಲಸ ಮಾಡುವ ಸುನೀತಾ ರಮೇಶ್‌.

ಷಾಪಿಂಗ್‌ ಕೂಡ ಅಷ್ಟೆ. ಸೀರೆ ಕೊಂಡರೆ ಅದಕ್ಕೊಂದು ಚಂದದ ರವಿಕೆ ಹೊಲಿಸಬೇಕು ಎಂದು ಡಿಸೈನರ್ ಬಳಿ ಹೋಗುತ್ತೇವೆ. ಅದಕ್ಕೆ ಮ್ಯಾಚಿಂಗ್‌ ಬಳೆ, ಓಲೆ ಕೊಳ್ಳಲು ಇನ್ನೊಂದು ಬೀದಿಗೆ ಹೋಗುತ್ತೇವೆ. ಒಂದೇ ಕಡೆ ಮಾಲ್‌ನಲ್ಲಿ ಖರೀದಿಸಿ ಅಥವಾ ಪದೇ ಪದೇ ಹೋಗುವ ಬದಲು ಒಂದು ದಿನ ಫಿಕ್ಸ್‌ ಮಾಡಿಕೊಂಡು ಸಿದ್ಧಪಡಿಸಿಕೊಂಡ ಪಟ್ಟಿಯ ಪ್ರಕಾರ ಷಾಪಿಂಗ್‌ ಮಾಡಬಹುದು. ಬಟ್ಟೆ ಖರೀದಿಗೊಂದು ದಿನ, ಕಿರಾಣಿ ಸಾಮಾನುಗಳಿಗೊಂದು ದಿನ ಎಂದು ಸಮಯ ವ್ಯರ್ಥ ಮಾಡುವುದಕ್ಕಿಂತ ಎಲ್ಲವೂ ಎಲ್ಲಿ ಸಿಗುತ್ತದೋ ಅಲ್ಲಿಯೇ ಖರೀದಿಸಿ ಅಥವಾ ಆನ್‌ಲೈನ್‌ ಷಾಪಿಂಗ್‌ ಮೊರೆ ಹೋಗಿ.

ಮಕ್ಕಳಿಗೆ ಆಡಲು ಅಕ್ಕಪಕ್ಕದ ಮನೆಯ ಮಕ್ಕಳ ಜೊತೆ ಬಿಡಿ. ಆ ಸಮಯದಲ್ಲಿ ನೀವೊಂದಿಷ್ಟು ನಿಮಗೆ ಬೇಕಾದಂತೆ ಸಮಯ ಕಳೆಯಬಹುದು.

ಹೌದು ಸಮಯ ತುಂಬಾ ಅಮೂಲ್ಯ. ಆ ಸಮಯವನ್ನು ವ್ಯರ್ಥ ಮಾಡದೆ ಪ್ರಾಡಕ್ಟಿವ್‌ ಆಗಿ ಬಳಸಿಕೊಳ್ಳುವುದು ಜಾಣತನ. ಒಂದಿಷ್ಟು ಆಚೀಚೆ ಹೊಂದಾಣಿಕೆ ಮಾಡಿಕೊಳ್ಳಬೇಕಷ್ಟೆ.

ಯೋಜನೆ ರೂಪಿಸಿಕೊಳ್ಳಿ

ಅಡುಗೆ ವಿಷಯದಲ್ಲಿಯೂ ಮೊದಲು ಟೈಂ ಟೇಬಲ್‌ ಮಾಡಿಕೊಳ್ಳಿ. ಮನೆಯ ಸದಸ್ಯರ ನೆರವು ಪಡೆಯಿರಿ. ವಾರದ ಇಂತಹ ದಿನ ಇಂತಹ ತಿಂಡಿ, ರಾತ್ರಿಯೂಟ ಎಂದು ಮೆನು ಸಿದ್ಧಪಡಿಸಿಕೊಂಡರೆ ಅದಕ್ಕೆ ಬೇಕಾದ ಪದಾರ್ಥ, ತರಕಾರಿ ಹೊಂದಿಸಿಕೊಂಡು ಮಾಡಬಹುದು. ಮಕ್ಕಳು, ನಿಮ್ಮ ಟಿಫನ್‌ ಬಾಕ್ಸ್‌ ವಿಷಯದಲ್ಲೂ ಇದೇ ಪ್ಲ್ಯಾನ್‌ ಮಾಡಿಕೊಳ್ಳಿ. ಕೊನೆಯ ಕ್ಷಣದಲ್ಲಿ ಸಮೀಪದ ಕಾಕಾನ ಅಂಗಡಿಗೆ ಓಡಿ ಒಗ್ಗರಣೆಗೆ ಸಾಸಿವೆ, ಕರಿಬೇವು ತರುವುದು ತಪ್ಪುತ್ತದೆ. ಕಚೇರಿಗೆ ತೊಡುವ ಉಡುಪುಗಳೂ ಅಷ್ಟೆ. ವಾರದ ಐದು ದಿನಗಳ ಕಾಲ ತೊಡುವ ಉಡುಪನ್ನು ಸಮಯ ಸಿಕ್ಕಾಗ ಜೋಡಿಸಿಡಿ. ಇದರಿಂದ ಬೆಳಗಿನ ಧಾವಂತ ತಪ್ಪಿ ನಿಮಗೊಂದಿಷ್ಟು ಸಮಯ ಮಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.