ADVERTISEMENT

ರಂಗಭೂಮಿಯಿಂದ ಕಲಿಕೆ ಸರಳಗೊಳಿಸುವ ಶಿಕ್ಷಕಿ ಶೈಲಜಾ

ಅನಿತಾ ಎಚ್.
Published 20 ಅಕ್ಟೋಬರ್ 2023, 23:55 IST
Last Updated 20 ಅಕ್ಟೋಬರ್ 2023, 23:55 IST
   

ದಲಿತರು, ದಮನಿತರು, ಮಹಿಳೆಯರ ಬದುಕಿನಲ್ಲಿ ಶಿಕ್ಷಣದ ಜ್ಯೋತಿ ಬೆಳಗಿಸಿದ 19ನೇ ಶತಮಾನದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರನ್ನು ತಮ್ಮ ಅಮೋಘ ಅಭಿನಯದ ಮೂಲಕ ಇಂದಿಗೂ ಜೀವಂತವಾಗಿರಿಸಿದವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಎಚ್‌. ಕಲ್ಲುಕೊಪ್ಪ ಗ್ರಾಮದ ಎ.ಎಸ್‌.ಶೈಲಜಾ ಪ್ರಕಾಶ್‌.

ಬಾಲ್ಯದಲ್ಲಿಯೇ ರಂಗಭೂಮಿಯ ಗೀಳು ಹಚ್ಚಿಸಿಕೊಂಡಿದ್ದ ಶೈಲಜಾ ಹೆಗ್ಗೋಡಿನ ನೀನಾಸಂ, ಕೆ.ವಿ. ಸುಬ್ಬಣ್ಣ ರಂಗ ಸಮೂಹ ಮತ್ತು ನಾಡ ಚಾವಡಿ ತಂಡದ ಮೂಲಕ 27 ವರ್ಷಗಳಲ್ಲಿ ಹಲವು ಸಮಾಜಮುಖಿ ನಾಟಕಗಳಲ್ಲಿ ಅಭಿನಯಿಸಿ ಸಮಾಜಕ್ಕೂ, ತಮ್ಮ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದ್ದಾರೆ.

ಬಡತನದ ಕಾರಣ ಶಾಲೆ ಬಿಟ್ಟು ಕೂಲಿಕೆಲಸಕ್ಕೆ ಹೋಗುತ್ತಿದ್ದ ಶೈಲಜಾ ಅವರನ್ನು ಗ್ರಾಮದ ಹಸನ್‌ ಸಾಹೇಬರು ಪ್ರೌಢಶಾಲೆಗೆ ಸೇರಿಸಿದ್ದರು. ಮುಂದೆ ತಾವು ಶಿಕ್ಷಕಿಯಾದ ನಂತರ ಶಿಕ್ಷಣದಿಂದ ದೂರ ಉಳಿದಿದ್ದ, ಕನ್ನಡವೇ ಅರಿಯದ ಹಾವುಗೊಲ್ಲರ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಮಕ್ಕಳಿಲ್ಲದೆ ಸ್ಥಗಿತಗೊಂಡಿದ್ದ ಗಡಿಕಟ್ಟೆ ಶಾಲೆಯಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಗುಣಮಟ್ಟದ ಶಿಕ್ಷಣ ನೀಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕಿರಿಯ ಪ್ರಾಥಮಿಕ ಶಾಲೆಯಾಗಿಸಿದ್ದು ಅವರ ಸಾಧನೆ.

ADVERTISEMENT

ಶಾಲಾ ವಿದ್ಯಾರ್ಥಿಗಳ ಗುಣ ಸ್ವಭಾವ ಮತ್ತು ಅವರ ಕಲಿಕಾ ಸಾಮರ್ಥ್ಯ ಅರಿತು ಪಠ್ಯವನ್ನು ಸರಳವಾಗಿ ಅರ್ಥಪಡಿಸಲು ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವುದು ಶೈಲಜಾ ಅವರ ವಿಶೇಷತೆಯಾಗಿದೆ. ಶೈಲಜಾ ಅವರು ಅಭಿನಯಿಸಿರುವ ‘ಸಾವಿತ್ರಿಬಾಯಿ ಫುಲೆ’ ಏಕವ್ಯಕ್ತಿ ಪ್ರದರ್ಶನ ವರ್ಷಕ್ಕೂ ಹೆಚ್ಚು ಸಮಯದಿಂದ ನಾಡಿನ ವಿವಿಧೆಡೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.