ಮಹಿಳಾ ಉದ್ಯೋಗಿಗಳ ಮುಂದೆ ಎರಡು ಅಲಗಿನ ಕತ್ತಿಯಂತೆ ನಿಂತಿದೆ ಆ ದಿನಗಳ ಕಡ್ಡಾಯ ರಜೆಯ ಚರ್ಚೆ. ಮುಟ್ಟಿನ ರಜೆ ಆ ದಿನಗಳ ಕಸಿವಿಸಿ, ನೋವು, ಸಂಕಟದ ಸಮಯದಲ್ಲಿ ವಿಶ್ರಾಂತಿ ನೀಡುವ ಜೊತೆಗೆ ಮುಂದಿನ ಕೆಲಸಕ್ಕೆ ಸಜ್ಜುಗೊಳ್ಳಲು ಬಲ ತುಂಬಬಹುದೇನೊ ನಿಜ. ಆದರೆ, ಇದು ಮಹಿಳಾ ಉದ್ಯೋಗಿಗಳ ಔದ್ಯೋಗಿಕ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವೂ ಇದೆ ಏನೊ ಎನ್ನುವ ಕಳವಳ ಮನೆ ಮಾಡಿದೆ...
ತುಂಬಾ ಮುಖ್ಯವಾದ ಮೀಟಿಂಗಿಗೆ ತಯಾರಿ ನಡೀತಿತ್ತು, ಇದ್ದಕ್ಕಿದ್ದಂತೆ ಕಿಬ್ಬೊಟ್ಟೆಯಲ್ಲಿ ಚಿರಪರಿಚಿತ ನೋವು. ಬೆನ್ನ ಹುರಿಯಲ್ಲಿ ಅಸಾಧ್ಯ ಸೆಳೆತ... ಮೀಟಿಂಗ್ ಬಿಟ್ಟು ಅರ್ಧಕ್ಕೇ ಮನೆಗೆ ಹೋದರೆ ನನ್ನನ್ನು ನಾನು ನಿರೂಪಿಸುವ ಅವಕಾಶವೊಂದನ್ನು ನಾನೇ ಕೈಬಿಟ್ಟ ಹಾಗೆ... ಅಲ್ಲದೆ, ಆಫೀಸಿನಿಂದ ಮನೆ ತಲುಪಲು ಒಂದೂವರೆ ಗಂಟೆ ಬೇಕು. ಆ ಸಮಯದಲ್ಲಿ ನೋವಿನ ತೀವ್ರತೆ ಕಡಿಮೆಯಾಗಬಹುದು... ಇದರ ಬದಲು ಒಂದರ್ಧ ಗಂಟೆ ರಿಲ್ಯಾಕ್ಸ್ ಆಗಿ ಬರಲು ಕೆಲಸದ ಸ್ಥಳದಲ್ಲೇ ರೆಸ್ಟ್ ರೂಮ್ ಒಂದಿದ್ದರೆ ನೋವೂ ಉಪಶಮನವಾಗುತ್ತಿತ್ತು... ಕೆಲಸಕ್ಕೂ ತಡೆಯಾಗುತ್ತಿರಲಿಲ್ಲ...
ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ನಳಿನಿ ಹೇಳಿದ ಮಾತುಗಳಿವು.
‘ಇಡೀ ದಿನ ಇರುವ ನೋವಲ್ಲ ಅಂತ ಗೊತ್ತು... ಒಂದೆರಡು ಗಂಟೆ ರಿಲ್ಯಾಕ್ಸ್ ಆಗಿ ಮತ್ತೆ ಕೆಲಸದಲ್ಲಿ ತೊಡಗಬಹುದು. ಈ ಸಮಯದಲ್ಲಿ ವರ್ಕ್ ಫ್ರಮ್ ಹೋಮ್‌ಗೆ ಅವಕಾಶವಿದ್ದರೆ ಸಾಕು’ ಎನ್ನುವುದು ಜಾಹೀರಾತು ಏಜೆನ್ಸಿಯಲ್ಲಿ ಡಿಸೈನರ್ ಆಗಿರುವ ಪ್ರತಿಭಾ ಅವರ ಅಭಿಮತ.
ಋತುಚಕ್ರದ ಸಮಯದಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ರಜೆ ಬೇಕು ಎನ್ನುವ ಕೂಗು ಪ್ರಬಲವಾಗುತ್ತಿರುವ ಈ ಹೊತ್ತು ಬೇಕಾಗಿರುವುದು ಇಂತಹ ಪರಿಹಾರಾತ್ಮಕ ಮಾರ್ಗಗಳೇ ಹೊರತು, ರಜೆ ಎನ್ನುವ ತೂಗುಕತ್ತಿಯಲ್ಲ ಎನ್ನುವುದು ಅನೇಕ ಮಹಿಳಾ ಉದ್ಯೋಗಿಗಳ ಅಭಿಪ್ರಾಯವೂ ಆಗಿದೆ. ಮುಟ್ಟಿನ ರಜೆ ಬೇಡ ಎನ್ನುವುದಲ್ಲ, ಅದೊಂದು ಆಯ್ಕೆಯಾಗಿ ಇರಲಿ. ತೀರಾ ಅಗತ್ಯವಿದ್ದವರು ಉಪಯೋಗಿಸಿಕೊಳ್ಳಲಿ ಎನ್ನುವ ನಿಲುವುಳ್ಳವರೂ ಸಾಕಷ್ಟು ಜನರಿದ್ದಾರೆ. ಹೆರಿಗೆ ರಜೆಗಳು, ಮಕ್ಕಳ ಪೋಷಣೆಯ ರಜೆಗಳು, ಕಡ್ಡಾಯ ರಜೆಗಳು ಸೇರಿ ಉದ್ಯೋಗಿಗಳ ಅವಕಾಶಗಳನ್ನು ಕಡಿತಗೊಗೊಳಿಸುವ ವಾತಾವರಣ ನಿರ್ಮಾಣವಾಗುವುದೇನೊ ಎನ್ನುವ ಕಳವಳ ಕೆಲವರಲ್ಲಿದೆ. ವಿನಾಯತಿಗಿಂತ ಒಂದಷ್ಟು ಸಡಿಲಿಕೆ ಬೇಕು ಅನ್ನುವವರೇ ಹೆಚ್ಚು.
‘ಆ ದಿನಕ್ಕೊಂದು ರಜೆ ಕೊಡಿ’ ಎನ್ನುವ ಕೂಗು ಹಳೆಯದೇ. ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಕಡ್ಡಾಯ ರಜೆ ನೀಡುವ ವಿಚಾರ ಕುರಿತು 2023ರಲ್ಲಿಯೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಈ ವಿಚಾರ ‘ಸುಪ್ರೀಂ’ ಬಾಗಿಲು ತಟ್ಟಿ, ಅಲ್ಲಿಂದ ಮತ್ತೆ ಕೇಂದ್ರದ ಮುಂದೆ ಹೋಗಿ ನಿಂತಿದೆ.
ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಕಡ್ಡಾಯ ರಜೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು, ‘ಕಡ್ಡಾಯ ಮುಟ್ಟಿನ ರಜೆ ನೀಡುವಂತೆ ಆದೇಶ ಹೊರಡಿಸಿದಲ್ಲಿ ಅದು ಮಹಿಳಾ ಉದ್ಯೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವೂ ಇದೆ’ ಎನ್ನುವ ಆತಂಕವನ್ನು ಹೊರಹಾಕಿದೆ. ‘ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯವಾದ್ದರಿಂದ ಇದಕ್ಕೊಂದು ಸ್ಪಷ್ಟ ನೀತಿ ರೂಪಿಸಬೇಕಾದ ಅಗತ್ಯವಿದೆ’ ಎಂದೂ ಹೇಳಿದೆ. ಅದಕ್ಕೂ ಮುನ್ನ ರಜೆಯ ಬದಲು ಪರ್ಯಾಯ ಮಾರ್ಗಗಳಿಗಾಗಿ ದುಡಿಯುವ ಹೆಣ್ಣುಮಕ್ಕಳ ಮನಸುಗಳು ತುಡಿಯುತಿವೆ.
ಮುಟ್ಟಿನ ನೋವು, ಅದರ ತೀವ್ರತೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದ್ದರಿಂದ ಮುಟ್ಟಿನ ಕಡ್ಡಾಯ ರಜೆ ಬದಲು, ಅದೊಂದು ಆಯ್ಕೆ ರಜೆಯಾಗಿ ಇರಲಿ. ಆ ಅವಧಿಯಲ್ಲಿ ಕೆಲಸದಲ್ಲಿ ತೊಡಗಲು ಸಾಧ್ಯವೇ ಇಲ್ಲ ಎನ್ನುವವರಿಗೆ ಅನುಕೂಲ. ಇನ್ನೂ ಕೆಲವರಿಗೆ ಈ ಅವಧಿಯ ನೋವು ಕೆಲಸಕ್ಕೆ ತೊಂದರೆಯಾಗುಷ್ಟು ಇರುವುದಿಲ್ಲ. ಅಂಥವರಿಗೆ ಕೆಲಸದ ಅವಧಿಯಲ್ಲಿ, ಸಮಯದಲ್ಲಿ ಒಂದಷ್ಟು ಸಡಿಲಿಕೆ ಅಥವಾ ವರ್ಕ್ ಫ್ರಮ್ ಹೋಮ್ ಅನುಕೂಲ ಮಾಡಿಕೊಟ್ಟರೆ ಸಾಕು
- ಡಿ. ಯಶೋಧಾ, ಬರಹಗಾರ್ತಿ
‘ಮುಟ್ಟು’ ಹೆಣ್ಣಿನ ಅಸ್ಮಿತೆ- ಸಹಜಕ್ರಿಯೆ, ಸ್ವಾಭಾವಿಕ. ಅನೂಚಾನವಾಗಿ ಶತ ಶತಮಾನಗಳಿಂದ ನಡೆದುಕೊಂಡು ಬಂದಿರುವ ಸ್ರಾವ. ಹಿಂದೆಲ್ಲ ಅಪರಿಮಿತ ಮನೆಗೆಲಸ, ಹೊಲದ ದುಡಿಮೆಯ ಸಂದರ್ಭದಲ್ಲಿ ಅವಳಿಗೆ ವಿಶ್ರಾಂತಿ-ರಜೆ ಬೇಕೆಂದರೂ ಸಾಧ್ಯವಿತ್ತೇ? ಹೆಣ್ಣು ಒಳ-ಹೊರಗೆ ಪುರುಷನಿಗೆ ಸರಿಮಿಗಿಲಾಗಿ ಹೆಜ್ಜೆ ಇಡುತ್ತಿರುವ ದಿನಮಾನಗಳಲ್ಲಿ ಅವಳಿಗದು ಅಂಥ ವಿಷಮಸಮಸ್ಯೆ ಏನೂ ಅಲ್ಲ. ಈಗಾಗಲೇ ಸರ್ಕಾರಿ ಉದ್ಯೋಗಗಳಲ್ಲಿ ತಿಂಗಳಿಗೆ ಹದಿನೈದು ದಿನಗಳು ಸಾಂದರ್ಭಿಕ ರಜೆ, 30 ದಿನ ಗಳಿಕೆರಜೆ, 2 ದಿನ ಪರಿಮಿತ ರಜೆ ಮತ್ತು 18 -20 ಹಬ್ಬಗಳ-ವಿಶೇಷ ಜಯಂತಿಗಳ ರಜೆಗಳು ಇದ್ದೇ ಇವೆ. ಜೊತೆಗೆ ಯಾರಾದರೂ ದೇಶದ, ರಾಜ್ಯದ ಪ್ರಮುಖವ್ಯಕ್ತಿಗಳು ಮರಣಿಸಿದರೆ ವರ್ಷಕ್ಕೆ ಒಂದೆರಡು ರಜಗಳು ದೊರಕುತ್ತವೆ. ಧಂಡಿಯಾಗಿ ರಜೆಗಳು ಇರುವುದರಿಂದ, ಸ್ತ್ರೀಯರಿಗೆ, ತೀವ್ರ ಮುಟ್ಟಿನ ತೊಂದರೆಯಾದಾಗ ತಮ್ಮ ಸ್ವಂತದ ರಜೆಗಳನ್ನು ಬಳಸಿಕೊಳ್ಳಲು ಯಾರದೇನು ಅಡ್ಡಿ?
-ವೈ.ಕೆ.ಸಂಧ್ಯಾ ಶರ್ಮ,ಲೇಖಕಿ, ರಂಗಕರ್ಮಿ
ಈದೀಗ ಚರ್ಚೆಗೆ ಬಂದಿರುವ ಮಹಿಳಾ ಉದ್ಯೋಗಿಗಳ ಕಡ್ಡಾಯ ರಜೆಯ ವಿಷಯ ನನ್ನನ್ನು ಪುಳಕಗೊಳಿಸಬೇಕಿತ್ತು. ಆದರೆ, ಮನಸು ಅದರಾಚೆಗಿನ ಸವಾಲುಗಳನ್ನು ಮೆಲುಕು ಹಾಕುತ್ತಿದೆ. ತುಂಬಾ ಹಿಂದೆ ಪ್ರಸಿದ್ಧ ಮ್ಯಾಗಝೀನ್ ಒಂದರಲ್ಲಿ ಶ್ರೀಮತಿ ಇಂದಿರಾಗಾಂಧಿಯವರ ಸಂದರ್ಶನ ಪ್ರಕಟವಾಗಿತ್ತು. ತೀಕ್ಷ್ಣ ಆಡಳಿತಗಾರ್ತಿಯಾಗಿದ್ದ ಇಂದಿರಾ ಆ ದಿನಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆಯದು. ‘ಅಂತಹ ದಿನಗಳಲ್ಲೂ ನನ್ನ ದೃಢತೆ ಏನೂ ಕಡಿಮೆಯಗುವುದಿಲ್ಲ’ ಎಂದಿದ್ದರು. ಒಂದು ಕಡೆ ಪಿ.ಟಿ ಊಷಾ ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದರು. ಕೂಲಿ ಕಾರ್ಮಿಕರ, ಮನೆಗೆಲಸದವರ ಕಾರ್ಯಾಗಾರವೊಂದರಲ್ಲಿ ಈ ಬಗ್ಗೆ ಕೇಳಿದಾಗ, ‘ಅದರ ಪಾಡಿಗೆ ಅದು ಬರುತ್ತೆ ಹೋಗುತ್ತೆ, ನಮ್ಮ ಕೆಲಸ ನಾವು ಮಾಡ್ತೀವಿ’ ಎಂದ ಅವರ ಮಾತು ಕಿವಿಯಲ್ಲಿ ಅನುರಣಿಸುತ್ತಿದೆ...
ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಫ಼್ಯಾಮಿಲಿ ಕೋರ್ಟಿನ ಕಾರಿಡಾರ್, ರೀಲ್ಸ್, ಕಥೆ ಪುಸ್ತಕಗಳು ಎಲ್ಲೆಲ್ಲೂ ಮುಟ್ಟು ಎಂದರೆ ಮಾನಸಿಕ ಅಸ್ವಸ್ಥೆಯಾಗುವ ದಿನ ಎಂತಲೇ ಬಿಂಬಿತವಾಗಿರುವುದನ್ನು ವಾಕರಿಕೆ ಬರುವಷ್ಟು ಕಂಡಿದ್ದೇನೆ. ಆಗೆಲ್ಲಾ ಅನ್ನಿಸಿದ್ದು, ದೇಶವನ್ನಾಳಿದ ಇಂದಿರಮ್ಮ, ದೇಶಕ್ಕೆ ಕೀರ್ತಿ ತಂದುಕೊಟ್ಟ ಉಷಾ, ಕಾರ್ಮಿಕ ವರ್ಗ ಇವರಿಗೆಲ್ಲಾ ಇಲ್ಲದ ಮುಟ್ಟಿನ ಸಂಕಟ ನಮಗೇಕೆ? ಆ ಸಂಕಟವನ್ನೇ ಇಟ್ಟುಕೊಂಡು ವಿಶೇಷ ರಿಯಾಯಿತಿ ಪಡೆಯುವ ಹುರುಪಿನಲ್ಲಿ ನಾವು ನಮ್ಮ ಅವಕಾಶಗಳಿಂದ ವಂಚಿತರಾಗುವುದಿಲ್ಲವೆ? ಸಂಬಳ ಸಹಿತ ಮುಟ್ಟಿನ ರಜೆಯನ್ನು ಎಂದಿನಿಂದಲೋ ನೀಡುತ್ತಿರುವ ಜಪಾನ್‌ನಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಅಂಶ ಈ ಕೂಗಿಗೆ ಹಿನ್ನೆಲೆಯಾಗಿ ಕೇಳಿಸುತ್ತಿದೆ...
ಮುಟ್ಟು ಎನ್ನುವುದನ್ನು ಅಸ್ತ್ರವನ್ನಾಗಿ ಬಳಿಸಿಕೊಳ್ಳುವ ಎಲ್ಲಾ ಹೆಣ್ಣುಮಕ್ಕಳಿಗೂ ತಿಳಿದಿದೆ ಅದೊಂದು ಪ್ರಾಕೃತಿಕವಾಗಿ ಒದಗಿ ಬಂದಿರುವ ಗುರಾಣಿ ಎಂದು. ವೈಜ್ಞಾನಿಕವಾಗಿ ಮುಟ್ಟು ದೈಹಿಕ ಮತ್ತು ಮಾನಸಿಕವಾಗಿ ಹಿಂಸಾತ್ಮಕವಾಗಿ ಕಾಡುವುದು ಶೇ 3ರಷ್ಟು ಜನರನ್ನು ಮಾತ್ರ. ಮುಟ್ಟಿನ ರಜೆಯನ್ನು ತನ್ನ ಲಾಭಕ್ಕೆ ಹೇಗೆ ಬಳಿಸಿಕೊಳ್ಳಬೇಕೆಂದು ವ್ಯವಸ್ಥೆಗೂ ಗೊತ್ತಿದೆ, ಕಾರ್ಪೋರೇಟ್ ಸಂಸ್ಕೃತಿಗೂ ಗೊತ್ತಿದೆ, ಗಂಡಾಳಿಕೆಯ ಮನಸ್ಥಿತಿಗೂ ಗೊತ್ತಿದೆ. ಅದಕ್ಕೆ ಅವಕಾಶ ಕೊಡದಂತೆ ನಾವು ಎಚ್ಚರ ವಹಿಸಬೇಕು. ಮುಟ್ಟು ಎಂದು ಅಂತರದಲ್ಲಿ ಉಳಿಯುವ ಬದಲು, ಪೌಷ್ಟಿಕ ಆಹಾರ ಸೇವಿಸಿ, ನೈರ್ಮಲ್ಯದತ್ತ ಗಮನ ಕೊಡಿ, ಕೆಲಸ ಮುಗಿಸಿ ಬಂದು ತುಸು ಆರಾಮಾಗಿ ರಿಲ್ಯಾಕ್ಸ್ ಆಗಿ.
-ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ಮತ್ತು ಲೇಖಕಿ
ನೋವಿಗೆ ಪರಿಹಾರ ಅಂತ ಇರೋದಿಲ್ಲ. ಆದರೆ ಉಪಶಮನ ಖಂಡಿತ ಸಾಧ್ಯ. ಮುಟ್ಟಿನ ನೋವಿಗೆ ರಜೆ ಪಡೆದು ಕೆಲಸದಿಂದ ತಪ್ಪಿಸಿಕೊಳ್ಳುವ ಬದಲು, ಆ ನೋವನ್ನು ಉಪಶಮನ ಮಾಡಿಕೊಂಡು ನಮ್ಮ ಕೆಲಸದಲ್ಲಿ ನಾವು ಮಗ್ನರಾಗುವಂತೆ ಮಾಡುವ ದಾರಿಗಳನ್ನು ಕಂಡುಕೊಳ್ಳಬೇಕು.
ದೈಹಿಕ ವ್ಯಾಯಾಮ, ಉಸಿರಾಟದ ವ್ಯಾಯಾಮ, ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹ ಸುಸ್ಥಿಯಲ್ಲಿರುತ್ತವೆ. ಒತ್ತಡ ಕಡಿಮೆಯಾಗುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ, ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಹೀಟಿಂಗ್ ಪ್ಯಾಡ್ ಅಥವಾ ಬಿಸಿನೀರಿನ ಬ್ಯಾಗ್‌ಗಳನ್ನು ಬೆನ್ನು ಮತ್ತು ಕೆಳ ಹೊಟ್ಟೆಯ ಮೇಲೆ ಇಟ್ಟುಕೊಳ್ಳುವುದು ಹಿತವಾದ ಅನುಭವವನ್ನು ನೀಡುತ್ತದೆ. ಉಷ್ಣತೆಯು ಸ್ನಾಯುಗಳ ವಿಶ್ರಾಂತಿಗೆ ಮತ್ತು ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನು ಕೆಲಸ ಮಾಡುವ ಸ್ಥಳಗಳಲ್ಲಿಯೂ ಬಳಸಬಹುದು.
ಈ ಸಮಯದಲ್ಲಿ ಸಮತೋಲಿತ ಪೌಷ್ಟಿಕಾಂಶ ಸೇವಿಸಿ. ಅಗಸೆ ಬೀಜಗಳು, ಮೀನು, ಆವಕಾಡೊಗಳಂತಹ ಒಮೆಗಾ 3 ಕೊಬ್ಬಿನಾಮ್ಲಗಳನ್ನು ಬಳಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಸಾಕಷ್ಟು ನೀರು ಹಾಗೂ ಜ್ಯೂಸ್ ಕುಡಿಯಿರಿ. ಡಾರ್ಕ್ ಚಾಕೊಲೇಟ್ ಸಹ ಈ ಅವಧಿಯ ನೋವು ಶಮನಕ್ಕೆ ಸಹಾಯಕಾರಿ.
ಈ ಅವಧಿಯಲ್ಲಿ ಕನಿಷ್ಠ 8 ಗಂಟೆ ಸಮರ್ಪಕ ನಿದ್ದೆ ಮಾಡಿ. ಮುಂದಿನ ಕೆಲಸಕ್ಕೆ ಇದು ಹೆಚ್ಚು ಚೈತನ್ಯವನ್ನು ನೀಡುತ್ತದೆ. ಬಿಸಿನೀರಿನ ಎಣ್ಣೆ ಸ್ನಾನ ದೇಹದ ಸ್ನಾಯುಗಳು ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ನೋವು ಸಹಿಸಲಸಾಧ್ಯವಾಗಿರುವ ಸಂದರ್ಭದಲ್ಲಿ ಮಾತ್ರ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮಾತ್ರೆಗಳನ್ನು ತೆಗೆದುಕೊಳ್ಳಿ.
-ಡಾ. ಪ್ರಿಯಾ ಎಸ್.ಪಿ. ಪಾಟೀಲ, ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.