ADVERTISEMENT

ತಾಯಿಯ ಮನದ ಮಾತು...

ದೀಪಾ ಗಿರೀಶ್
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.    

ಪ್ರಸೂತಿಕೋಣೆಯಿಂದ ವಾರ್ಡಿಗೆ ಕರೆತಂದು ಮಲಗಿಸಿದ ಅಮ್ಮ-ಮಗುವನ್ನು ಕಂಡ ಐದು ವರ್ಷದ ಮಗಳು ಕೇಳುತ್ತಾಳೆ, ‘ಅಮ್ಮಾ, ಈ ಪಾಪು ಹೊಟ್ಟೆಯಿಂದ ಬಂತು ಸರಿ, ಆದ್ರೆ ಹೊಟ್ಟೆಗೆ ಹೇಗೆ ಹೋಗಿ ಕೂತ್ಕೊಳ್ತು?’ ಸುತ್ತಲೂ ನೆರೆದ ಮನೆಮಂದಿಯೆಲ್ಲಾ ಗೊಳ್ಳೆಂದು ನಗುವಾಗ, ಅಮ್ಮ ಪೆಚ್ಚುಪೆಚ್ಚಾಗಿ ಹಲ್ಕಿರಿಯುತ್ತಾ, ನಾಚಿಕೆ, ಮುಜುಗರದಿಂದ ಯಾವ ಉತ್ತರವನ್ನೂ ನೀಡದೆ ಮಾತನ್ನು ಮರೆಸುತ್ತಾಳೆ.

ಹನ್ನೊಂದು ದಾಟಿದ ಮಗಳಿಗೆ ಋತುಚಕ್ರದ ಬಗ್ಗೆ ಹೇಳಿಟ್ಟಿರುವುದು ಒಳ್ಳೆಯದೆಂದು ಬೆಳಿಗ್ಗೆಯಿಂದಲೂ ತಲೆಯಲ್ಲೇ ಮಂಥನ ನಡೆಸಿ, ಅವಳನ್ನು ಹತ್ತಿರಕ್ಕೆ ಕರೆದು ತಲೆ ನೇವರಿಸುತ್ತಾ ನಾಜೂಕಾಗಿ ಮಾತು ಶುರುವಿಡುವಾಗ, ‘ಅಮ್ಮಾ, ಅದು ಹಾಗಲ್ಲ, ಹೀಗೆ. ಇಲ್ಲಿ ನೋಡು ಈ ಚಿತ್ರಗಳನ್ನು’ ಎನ್ನುತ್ತಾ ಕಂಪ್ಯೂಟರ್ ಆನ್ ಮಾಡಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಿಬಿಡುವ ಮಗಳ ವೇಗವನ್ನು ಕಂಡು ಬೆರಗಾಗಿ, ಅವಳ ಜೊತೆ ಕ್ರಮಿಸಲಾಗದ ತನ್ನ ಮಿತಿಗೆ ತಾನೇ ನಾಚುತ್ತಾ, ಬೆರಗಿನಿಂದ ಪಾಠ ಕೇಳುತ್ತಾ ಕೂರುತ್ತಾಳೆ.

ಕಾಲೇಜಿಗೆ ಹೋಗುವ ಮುನ್ನ ಮಗಳು ತನ್ನ ಕೈಗೆ ಸಿಕ್ಕಲೆಂದು ಸಕ್ಕರೆ ಡಬ್ಬಿಯಲ್ಲಿ ಮುಚ್ಚಿಟ್ಟಿದ್ದ ಪತ್ರದಲ್ಲಿ, ಒಲ್ಲದ ಪ್ರೇಮಕ್ಕೆ ಜಿದ್ದಿಗೆ ಬಿದ್ದ ಪುಂಡನೊಬ್ಬ ಕೊಡುತ್ತಿರುವ ಕಿರುಕುಳವನ್ನು ಹೇಳುತ್ತಾ ‘ಇದರಲ್ಲಿ ನನ್ನ ತಪ್ಪೇನೂ ಇಲ್ಲಮ್ಮಾ’ ಎಂದು ಬರೆದ ಕೊನೆ ಸಾಲು ಓದುತ್ತಾ ಕುಸಿದು ಕೂತವಳಿಗೆ, ಮಗಳು ಇಷ್ಟು ದಿನ ಒಬ್ಬಳೇ ಅನುಭವಿಸಿರಬಹುದಾದ ಸಂಕಟಗಳೆಲ್ಲಾ ಕಣ್ಣ ಮುಂದೆ ಬಂದು ‘ನಾನು ಜೊತೆಗಿದ್ದೇನೆ’ ಎಂದು ಅವಳಿಗೆ ಅರ್ಥಮಾಡಿಸದೇ ಹೋದದ್ದಕ್ಕೆ ತನ್ನನ್ನೇ ಶಪಿಸಿಕೊಂಡು ಪಶ್ಚಾತ್ತಾಪದ ಮುದ್ದೆಯಾಗುತ್ತಾಳೆ.
ಹಟ ಹಿಡಿದು ಪ್ರೀತಿಸಿದ ಹುಡುಗನೊಂದಿಗೇ ಮದುವೆಯಾಗಿ, ವರ್ಷ ತುಂಬುವುದರೊಳಗೆ ‘ಅವ ಸರಿ ಇಲ್ಲಮ್ಮಾ’ ಎಂದು ಮನೆಗೆ ಮರಳುವ ಗರ್ಭಿಣಿಮಗಳಿಗೆ ಏನೂ ಹೇಳಲು ತೋಚಲೊಲ್ಲದ ಅಮ್ಮನ ತಳಮಳವು ಅವಳಿಗಷ್ಟೇ ಗೊತ್ತು.

ADVERTISEMENT

ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ಮಗಳ ಜೊತೆಗೆ ಮಾತು ಕಟ್ಟುವ ಕಲೆ ಎಲ್ಲಾ ಅಮ್ಮಂದಿರಿಗೂ ಒಲಿದು ಬಂದಿರುವುದಿಲ್ಲ. ಅವಳು ಮಗಳಿಗಷ್ಟೇ ‘ಅಮ್ಮ’ ಹೌದಾದರೂ, ಅವಳ ಇಷ್ಟಾನಿಷ್ಟಗಳು ತನಗೂ ಒಪ್ಪಿತವಾದರೂ ಸಮಾಜ ಅವಳಿಗೆ ಹೊರೆಸಿರುವ ಪ್ರಭಾವಳಿಗಳನ್ನು ಸದಾ ಉಳಿಸಿಕೊಳ್ಳಬೇಕಾದ ದರ್ದು ಆಕೆಯದು. ಇಂಥ ಮುಳ್ಳಿನ ಸಿಂಹಾಸನದ ಮೇಲೆ ಕುಳಿತ ಅವಳು ಅನೇಕ ಸಲ ತನ್ನ ಮನದ ಮಾತಿಗಿಂತಲೂ ಸಮಾಜದ ಮುಖವಾಣಿಯಾಗಿ ಮಾತನಾಡತೊಡಗುತ್ತಾಳೆ. ತನ್ನ ಮಗಳು ತೊಡಬೇಕಾದ ಬಟ್ಟೆ, ಬೆಳೆಸಿಕೊಳ್ಳುವ ಸಂಗ, ಉಳಿಸಿಕೊಳ್ಳುವ ನಂಟು – ಹೀಗೆ ಎಲ್ಲದರಲ್ಲೂ ಅವಳ ನೆರಳನ್ನೇ ಹುಡುಕಲಾಗುತ್ತದೆ. ತನ್ನ ಪಾತ್ರಪೋಷಣೆಯಲ್ಲಿ ಅವಳಿಗೆ ಮಗಳ ಭಾವನೆಯ ಏರಿಳಿತಗಳು ಮುಸುಕಾಗಿಬಿಡುವ ಸಾಧ್ಯತೆ ಇದೆ.

ಇನ್ನು ಮಗಳ ಕಣ್ಣೋಟದಲ್ಲಿ ತಾಯಿ ಸದಾ ಕರುಣಾಮೂರ್ತಿಯೇ ಆಗಿರಬೇಕು. ತನ್ನನ್ನು ಹೆತ್ತ ಅಮ್ಮನಿಂದ ತನ್ನ ಮಕ್ಕಳು, ಮೊಮ್ಮಕ್ಕಳ ಆರೈಕೆಯೂ ಆಗಬೇಕೆಂದು ಬಯಸೋದೇ ಹೆಚ್ಚು. ಅವಳೂ ಹಾಗೆಯೇ... ಅಷ್ಟೇ ಪ್ರೀತಿಯಿಂದ ನೆರವೇರಿಸುತ್ತಾಳೆ ಕೂಡ. ಆದರೆ ಅನೇಕ ಸಂದರ್ಭದಲ್ಲಿ ಆಕೆಗೆ ತನ್ನ ಆಯ್ಕೆ ಸ್ವಾತಂತ್ರ್ಯವೇ ಇರುವುದಿಲ್ಲ. ಅದು ನಿರಾಕರಿಸಬಾರದ ಕರ್ತವ್ಯವೆಂದು ಬಿಂಬಿಸಿರುವ ಸಮಾಜ ನಮ್ಮದು.

‘ಮಗುವನ್ನು ಹೆತ್ತ ದಿನದಿಂದ ಅದನ್ನು ಬೆಳೆಸಿ ದೊಡ್ಡದಾಗಿಸುವ ಹೊತ್ತಿಗೆ ತಾಯಿ ಅದರ ನಿಂಬೆ ಗಾತ್ರದ ಹೇಲು ನುಂಗಿರುತ್ತಾಳೆ’ ಎಂಬ ಮಾತಿದೆ. ತನ್ನ ಪಾತ್ರ ಬಯಸುವ ಕರ್ತವ್ಯಗಳನ್ನು ನಡೆಸುವ ಅವಳು ಸದಾ ಸಮಾಜ ಮತ್ತು ಮಗಳ ನಡುವೆ ನಿರೀಕ್ಷೆಗಳ ಅಡಕತ್ತರಿಯಲ್ಲಿ ಸಿಲುಕಿ ನಲುಗುತ್ತಲೇ ಇರುತ್ತಾಳೆ.

ದೀಪಾ ಗಿರೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.