ಅಯ್ಯೊ... ಮನೆಗೆ ಹೋಗೋದು ಲೇಟಾಯ್ತು, ಮಗನಿಗೆ ಏನಾದರೂ ತೊಗೊಂಡು ಹೋಗ್ತೀನಿ...
ತರಬೇತಿಗೆಂದೇ ಬೇರೆ ಊರಿಗೆ ಹೋದರೂ.. ಮಕ್ಕಳು ಕಾಯ್ತಿರ್ತಾರೆ ಬರಿಗೈಲಿ ಹೇಗೆ ಹೋಗೋದು...
ಅದ್ಯಾವ ಕಾಲವಾಗಿತ್ತು, ಒಂದು ಸಿನಿಮಾ ನೋಡಿ.. ಪಾಪ... ಮಕ್ಕಳನ್ನ ಬಿಟ್ಬಂದ್ವಿ... ಪಾಪ್‌ಕಾರ್ನ್ ತಿನ್ನಬೇಕಾದರೆ ಮಗನೇ ನೆನಪಾಗ್ತಾನೆ...
ಹೀಗೆ, ಅನಿವಾರ್ಯ ಇದ್ದಾಗಲೂ, ಆಯ್ಕೆ ಮಾಡಿಕೊಂಡು ಮಕ್ಕಳನ್ನು ಬಿಟ್ಟು ಹೊರಗೆ ಹೋದಾಗಲೂ ಸಣ್ಣದೊಂದು ಪಾಪ ಪ್ರಜ್ಞೆ ಅಮ್ಮನಾದವರಿಗೆ ಕಾಡುತ್ತಲೇ ಇರುತ್ತದೆ. ಈ ಅಪರಾಧಿ ಪ್ರಜ್ಞೆಯನ್ನು ತೊಡೆದುಹಾಕಲು ಉಡುಗೊರೆಗಳ ನೆಪ ಹೂಡುವುದು ಸಹಜ ಮತ್ತು ಸಾಮಾನ್ಯ.
ಆದರೆ ಈ ಗಿಲ್ಟ್ ಸದಾ ಅಮ್ಮನಿಗೇ ಕಾಡುವುದೇಕೆ? ಅಪ್ಪನೂ ಆಚೆ ಹೋಗ್ತಾನೆ. ಬರೋದು ತಡವಾಗುತ್ತದೆ. ಊರಿಗೆ ಹೋಗಿ ಬರ್ತಾರೆ. ಸ್ನೇಹಿತರೊಂದಿಗೆ ಸಮಯ ಕಳೆದುಬರುತ್ತಾರೆ. ಅವರಿಗೆ ಕಾಡದ ಪಾಪ ಪ್ರಜ್ಞೆ ಅಮ್ಮನಿಗೆ ಮಾತ್ರ ಕಾಡುವುದೇಕೆ?
ನಮ್ಮ ಸಾಮಾಜಿಕ ನಿಯಮಗಳು, ಮಕ್ಕಳ ಆರೈಕೆ ಪೊರೆಯುವಿಕೆ, ಅಗತ್ಯದನ್ನು ಪೂರೈಸುವುದು ಅಮ್ಮನ ಜವಾಬ್ದಾರಿ ಎಂಬ ನಿಯಮವನ್ನು ಹೇರಿರುವುದರಿಂದ ತಾಯಂದಿರು ಸಹಜವಾಗಿಯೇ ಈ ಅಪರಾಧಿ ಪ್ರಜ್ಞೆಯಲ್ಲಿ ನರಳುತ್ತಾರೆ. ಬಳಲುತ್ತಾರೆ.
ಮಕ್ಕಳಿಗೆ ಉಡುಗೊರೆ ಕೊಡುವ ಬದಲು ತಡವಾಗಿ ಹೋದಾಗ, ಒಂದ್ಹತ್ತು ನಿಮಿಷ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಮಲಗುವ ಮುನ್ನ ಕತೆ ಓದಿರಿ. ತಡವಾದುದು ಯಾಕೆ ಎಂಬುದನ್ನು ಅವರಿಗೆ ಅರ್ಥವಾಗುವಂತೆ, ಅರ್ಥವಾಗುವಷ್ಟು ತಿಳಿಸಿ. ಮುನಿಸಿದ್ದರೆ ಸಮಾಧಾನಿಸಿ, ಕಚಗುಳಿ ಇಟ್ಟು ಮಲಗಿಸಿ.
ಅಪರಾಧಿ ಪ್ರಜ್ಞೆ ಬೆಳೆಯದಂತೆ ನೋಡಿಕೊಳ್ಳುವಲ್ಲಿ ಸಂಗಾತಿಯ ಪಾತ್ರವೂ ಮಹತ್ತರವಾಗಿದೆ. ದುಡಿಯುವ ಮಹಿಳೆಗೆ ಆಯ್ಕೆಯೇ ಇರುವುದಿಲ್ಲ. ಕೆಲವೊಮ್ಮೆ ತರಬೇತಿ, ಮೀಟಿಂಗು ಎಂದು ಮಕ್ಕಳನ್ನು ಬಿಟ್ಟಿರಲೇಬೇಕಾದ ಅನಿವಾರ್ಯ ಇರುತ್ತದೆ., ಗೃಹಿಣಿಗೂ ದೈನಂದಿನ ಬದುಕಿನಿಂದ ಸಣ್ಣದೊಂದು ಬಿಡುವ ಬೇಕಿರುತ್ತದೆ. ಇಂಥ ಸಂದರ್ಭಗಳಲ್ಲಿ ಸಂಗಾತಿಯು ಮಗುವಿನ ದೇಖುರೇಕಿ ಮಾಡಿಕೊಂಡಿದ್ದು, ಅಮ್ಮ ಮನೆಗೆ ಬಂದಾಗ ಬೆಚ್ಚನೆಯ ಸ್ವಾಗತ ದೊರೆತರೆ ಸಾಕು. ತಾಯ್ತನವೆಂಬುದು ಹೊರೆಯಾಗುವುದಿಲ್ಲ.
ಬದಲಾವಣೆ ಬರಬೇಕಿರುವುದು ಹೆಣ್ಣುಮಕ್ಕಳ ಮನಸ್ಥಿತಿಯಲ್ಲಿ ಜೊತೆಗೆ ಪುರುಷರಲ್ಲಿಯೂ. ಮಕ್ಕಳ ಪೋಷಣೆ ಪಾಲಕರು ಇಬ್ಬರಿಗೂ ಸಮವಾಗಿ ಸೇರಿದ್ದು. ದುಡಿಯುವ ಮಹಿಳೆಯೇ ಆಗಿರಲಿ, ಗೃಹಿಣಿಯೇ ಆಗಿರಲಿ, ಪರಿಪೂರ್ಣ ಜವಾಬ್ದಾರಿ ಅಮ್ಮನಿಗೆ ಸೇರಿದ್ದು ಎಂದು ಸುಮ್ಮನಾಗುವಂತಿಲ್ಲ. ವಿಘಟಿತ ಕುಟುಂಬಗಳಲ್ಲಿ ಮಾನಸಿಕ ನೆಮ್ಮದಿ ನೆಲೆಸಬೇಕೆಂದರೆ ಇಂಥ ಸಹಬಾಳ್ವೆ ಅತ್ಯಗತ್ಯ. ತಾಯ್ತನದ ಒತ್ತಡ ನಿರ್ವಹಣೆಗೂ ಇದು ಸಹಕಾರಿಯಾಗಿರುತ್ತದೆ. ತಾಯ್ತನವೆಂಬುದು ಅಮ್ಮನ ಹೊಣೆಗಾರಿಕೆ ಮಾತ್ರವಲ್ಲ ಎಂಬ ಭಾವ ಇಬ್ಬರಲ್ಲಿಯೂ ಒಡಮೂಡಿದರೆ ಈ ಪಾಪಪ್ರಜ್ಞೆಯಿಂದಾಚೆ ಬರಬಹುದು.
ಮಕ್ಕಳೂ ಅಮ್ಮ ಅಪ್ಪನ ಸಮಯದ ಬದಲಿಗೆ ಉಡುಗೊರೆ ಪಡೆಯಬಹುದಾದ ಲಾಲಸೆ ಬೆಳೆಯುವುದರಿಂದ ತಪ್ಪಿಸಬಹುದಾಗಿದೆ. ತಾಯ್ತನ ಕೇವಲ ಹೊತ್ತವರ ಸ್ವತ್ತಲ್ಲ. ಹೆತ್ತವರಿಬ್ಬರ ಪಾಲುದಾರಿಕೆ. ತಾಯ್ತನ ಅನುಭವಿಸಬಹುದಾದ ಎಲ್ಲ ಪುರುಷರಿಗೂ ’ಮದರ್ಸ್ ಡೇ ಶುಭಾಶಯ‘ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.