ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಹೆಸರು ಕೇಳಿ ಬಂದಾಗ ದೇಶದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿತ್ತು. ದೇಶವಾಸಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದಲೇ ಮುರ್ಮು ಅವರನ್ನು ಆ ಸ್ಥಾನಕ್ಕೇರಿಸಿ ಸಂಭ್ರಮಿಸಿದ್ದು, ಭಾರತದ ಹೆಮ್ಮೆ.
ಅದೇ ರೀತಿ ಹಿರಿಯ ವಿಜ್ಞಾನಿ ಡಾ.ನಲ್ಲತಂಬಿ ಕಲೈಸೆಲ್ವಿ, ಅವರ ಹೆಸರು ಭಾರತೀಯ ವಿಜ್ಞಾನ ಕ್ಷೇತ್ರದ ಹಲವು ದಿಗ್ಗಜರಲ್ಲಿ ಹುಬ್ಬೇರಿಸಿರುವುದಂತೂ ದಿಟ. ಇದಕ್ಕೆ ಕಾರಣವಿಷ್ಟೇ 80 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ’ಯ (ಸಿಎಸ್‌ಐಆರ್) ಮಹಾನಿರ್ದೇಶಕ ಹುದ್ದೆಗೆ ಮಹಿಳೆಯೊಬ್ಬರು ಆಯ್ಕೆ ಆಗಿರುವುದು. ಅದೂ ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವಾಗ ಇಂಥ ಮಹೋನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಕಲೈಸೆಲ್ವಿ. ಪುರುಷ ಪ್ರಾಬಲ್ಯದ ಸರಪಳಿ ಮುರಿದು ‘ನಾರಿ ಶಕ್ತಿಯ’ ಅನಾವರಣ ಮಾಡಿದ ಕೀರ್ತಿ ಇವರದು. ವಿಜ್ಞಾನ ಕ್ಷೇತ್ರದಲ್ಲಿ ಇಂತಹದ್ದೊಂದು ಬದಲಾವಣೆ ಈ ಹಂತದಲ್ಲಿ ಅಗತ್ಯವಿತ್ತು ಎಂದೇ ಹಲವರು ಪ್ರತಿಪಾದಿಸಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಅಂಬಸಮುದ್ರಂ ಎಂಬ ಸಣ್ಣ ಪಟ್ಟಣದ ಕಲೈಸೆಲ್ವಿ. ತಮಿಳು ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಈಗ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ‘ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಿದ್ದು, ಮುಂದೆ ವಿಜ್ಞಾನದ ಪರಿಕಲ್ಪನೆಗಳನ್ನು ಅರಿತುಕೊಳ್ಳಲು ಸುಲಭವಾಯಿತು‘ ಎಂದು ಸೆಲ್ವಿ ಹೇಳಿದ್ದಾರೆ.
ನಲ್ಲತಂಬಿಯವರ ಈ ಮಹಾ ಸಾಧನೆಯ ಹಿಂದೆ ಅಪಾರ ಪರಿಶ್ರಮವಿದೆ. ವೈಜ್ಞಾನಿಕ ಸಾಧನೆಗಳೂ ಸಾಕಷ್ಟಿವೆ. ಈ ನೇಮಕಕ್ಕೆ ದೇಶ ವ್ಯಾಪಿ ಅಪಾರ ಶ್ಲಾಘನೆಯೂ ವ್ಯಕ್ತವಾಗಿದೆ. ಶೇಖರ್ ಮಂಡೆ ಅವರ ನಿವೃತ್ತಿಯ ಬಳಿಕ ಈ ಹುದ್ದೆಗೆ ಯಾರು ಎಂಬ ಪ್ರಶ್ನೆ ಕೇಂದ್ರ ಸಂಪುಟ ನೇಮಕ ಸಮಿತಿ ಮುಂದೆ ಬಂದಾಗ ಮರು ಮಾತಿಲ್ಲದೇ ಕಲೈಸೆಲ್ವಿ ಹೆಸರನ್ನು ಅಂತಿಮಗೊಳಿಸಿತು. ಅಲ್ಲದೇ, ಇವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಅತಿ ಉನ್ನತ ಸ್ಥಾನಕ್ಕೇರುವುದು ಸುಲಭದ ಮಾತಲ್ಲ. ಮಹಿಳೆಯಾಗಿ ತನ್ನ ‘ಕರ್ತವ್ಯ’ಗಳ ಜತೆಗೆ ಪ್ರಯೋಗಾಲಯಗಳಲ್ಲಿ ಪುರುಷ ವಿಜ್ಞಾನಿಗಳ ‘ಅಹಂ’ನೊಂದಿಗೆ ಗುದ್ದಾಡುತ್ತಲೇ ಮೆಟ್ಟಿಲೇರಬೇಕಾದ ಸ್ಥಿತಿ ಈಗಲೂ ಇದೆ. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ನಿಜ. ಆದರೆ, ಇತರ ಎಲ್ಲ ಕ್ಷೇತ್ರಗಳಂತೆ ಅಲ್ಲೂ ಜಡ್ಡುಗಟ್ಟಿದ ಮತ್ತು ಪುರುಷ ಪ್ರಧಾನ ವ್ಯವಸ್ಥೆ ಇರುವುದು ನಿಜ. ಅಲ್ಲಿ ಚಲನಶೀಲತೆ ತುಂಬಲು ಈ ನೇಮಕ ಅತಿ ಮಹತ್ವದ್ದು.
ಅದರಲ್ಲೂ ಸಿಎಸ್‌ಐಆರ್ ಸಾಮಾನ್ಯ ಸಂಸ್ಥೆಯೇನಲ್ಲ. ದೇಶದ ವೈಜ್ಞಾನಿಕ ಆದ್ಯತೆಯ ವಲಯಕ್ಕೆ ಸೇರಿದ ಅತ್ಯಂತ ಮಹತ್ವದ ಸಂಶೋಧನಾ ಪ್ರಯೋಗಾಲಯ ಸಂಸ್ಥೆಗಳ ಜಾಲವನ್ನು ಹೊಂದಿರುವ ಸಂಸ್ಥೆ ಇದು. ಸಿಎಸ್‌ಐಆರ್ ಅಡಿ 38 ಸಂಶೋಧನಾ ಸಂಸ್ಥೆಗಳಿವೆ. ಇಂಥದ್ದೊಂದು ಸಂಸ್ಥೆಗೆ ನಾಯಕಿಯಾಗಿ, ಅದನ್ನು ಮುನ್ನೆಡಸುವ ಜವಾಬ್ದಾರಿ ಬಹಳ ಮಹತ್ವದ್ದು.
ಲಿಥಿಯಮ್ ಅಯಾನ್ ಬ್ಯಾಟರಿಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಎಲೆಕ್ಟ್ರೋಡ್‌ಗಳನ್ನು ನವೀನ ವಿಧಾನವನ್ನು ಅಭಿವೃದ್ಧಿಪಡಿಸಿದ್ದು ಕಲೈಸೆಲ್ವಿ ಅವರಿಗೆಗರಿ ಮೂಡಿಸಿದೆ. ಕಿರಿಯ ವಿಜ್ಞಾನಿಯಾಗಿ 25 ವರ್ಷಗಳ ಸಂಶೋಧನಾ ಪಯಣದಲ್ಲಿ ಎಲೆಕ್ಟ್ರೋಕೆಮಿಕಲ್ ಪವರ್ ಸಿಸ್ಟಂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೋಡಿಯಂ ಅಯಾನ್/ಲಿಥಿಯಂ ಸಲ್ಫರ್ ಬ್ಯಾಟರಿಗಳು ಮತ್ತು ಸೂಪರ್ ಕೆಪಾಸಿಟರ್‌ಗಳ ಅಭಿವೃದ್ಧಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. 125 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಿಸಿದ್ದು, ಆರಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.
ಕಲೈಸೆಲ್ವಿ ಅವರು ಮಹಾನಿರ್ದೇಶಕ ಹುದ್ದೆ ಅಲಂಕರಿಸುವುದಕ್ಕೂ ಮೊದಲು ತಮಿಳುನಾಡಿನ ಕಾರೈಕುಡಿಯಲ್ಲಿರುವ ಸಿಎಸ್‌ಐಆರ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ವಿದ್ಯುತ್ ಚಲನೆ ಎಂದರೆ ಮೊದಲಿಂದಲೂ ಕಲೈಸೆಲ್ವಿ ಅವರಿಗೆ ಅತೀವ ಕುತೂಹಲ ಮತ್ತು ಅವರ ಹೃದಯಕ್ಕೆ ಆಪ್ತವಾದ ವಿಷಯ. ಅಷ್ಟೇ ಅಲ್ಲ ನವೀಕರಿಸಬಹುದಾದ ಪವನ ಮತ್ತು ಸೌರ ಇಂಧನ ಮೂಲಗಳ ವ್ಯಾಪಕ ಬಳಕೆಯ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ದೇಶದ ಇಂಧನ ಕೊರತೆ ನೀಗಿಸುವ ಮತ್ತು ಕ್ಷಮತೆಯನ್ನು ಹೆಚ್ಚಿಸುವುದೇ ಅವರಿಗಿದ್ದ ಕಾಳಜಿ. ಪಳೆಯುಳಿಕೆ ಇಂಧನ ಮೂಲದ ಭಾರದಿಂದ ಹೊರಬಂದು ಅಧಿಕ ಕ್ಷಮತೆಯ ಬ್ಯಾಟರಿಗಳ ಬಳಕೆಯ ಬಗ್ಗೆ ಗಮನಹರಿಸಲಾಗಿದೆ. ಆದರೆ, ಇದು ಸಾಕಾರಗೊಳ್ಳಲು ಸಾಕಷ್ಟು ದೂರ ಕ್ರಮಿಸಬೇಕಾಗಿದ್ದು, ಈ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಲು ಕಲೈಸೆಲ್ವಿ ಸಿಎಸ್‌ಐಆರ್‌ನ ಉನ್ನತ ಸ್ಥಾನದಲ್ಲಿರುವುದು ನೆರವಾಗಲಿದೆ.
ದೇಶದ ಹಲವು ಮಹತ್ವದ ಹುದ್ದೆಗಳಿಗೆ ಮಹಿಳೆಯರು ತಮ್ಮ ಸಾಧನೆಯ ಮೂಲಕವೇ ಏರುತ್ತಿರುವುದು ಹೊಸ ಗಾಳಿ ಬೀಸುತ್ತಿರುವುದಕ್ಕೆ ಸಂಕೇತ. ಅದರಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಕಲೈಸೆಲ್ವಿ ಅವರ ಸಾಧನೆ ಹೊಸ ಪೀಳಿಗೆಯ ಮಹಿಳಾ ವಿಜ್ಞಾನ ಹೊಸ ಆಶಾಕಿರಣ ಮೂಡಿಸಬಲ್ಲದು. ಸಂಶೋಧನಾ ಸಂಸ್ಥೆಗಳಲ್ಲಿ ಹೊಸ ಚೈತನ್ಯ ಕಾಣಬಹುದು ಎಂಬ ಅಪೇಕ್ಷೆ ವಿಜ್ಞಾನ ವಲಯದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.