ADVERTISEMENT

ಶಾಸಕಿಯರ ಮನದಾಳ: ಸ್ವಾವಲಂಬನೆಗೆ ದಾರಿ ತೋರುವ ಗುರಿ– ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ

ಭೂಮಿಕಾ ಪುರವಣಿ ಜೊತೆ ಮಾತು

ಪ್ರಜಾವಾಣಿ ವಿಶೇಷ
Published 27 ಮೇ 2023, 0:27 IST
Last Updated 27 ಮೇ 2023, 0:27 IST
ನಯನಾ ಮೋಟಮ್ಮ, ಶಾಸಕಿ,
ನಯನಾ ಮೋಟಮ್ಮ, ಶಾಸಕಿ,   

ನನ್ನ ತಾಯಿ ಮೋಟಮ್ಮ ಸಚಿವರಾಗಿದ್ದಾಗ ಮಹಿಳೆಯರ ಅಭ್ಯುದಯಕ್ಕಾಗಿ ಸ್ತ್ರೀಶಕ್ತಿ ಸಂಘ ರಚನೆ ಮಾಡಿ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. ಅಮ್ಮ ನನಗೆ ಪ್ರೇರಣೆ.

ಮಹಿಳೆಯರಿಗೆ ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಕ್ಷೇತ್ರದಲ್ಲೊಂದು ಕೈಗಾರಿಕಾ ಘಟಕ ಸ್ಥಾಪನೆ ಕನಸು ಇದೆ. ಸ್ವಉದ್ಯೋಗ ಕೈಗೊಳ್ಳಲು ಅನುಕೂಲ ಕಲ್ಪಿಸಿ ಸ್ವಾವಲಂಬನೆ ಸ್ವಾಭಿಮಾನದ ಬದುಕಿನ ದಾರಿ ತೋರುವ ಚಿಂತನೆ ಇದೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಕುಟುಂಬದ ಒಡತಿಗೆ ₹ 2 ಸಾವಿರ ನೀಡುವುದಾಗಿ ಭರವಸೆ ನೀಡಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ. ಮಹಿಳೆಯನ್ನು ಮನೆ ಯುಜಮಾನಿ ಆಗಿಸುವ ಆಶಯ ಇಟ್ಟುಕೊಂಡಿದ್ದೇನೆ.

ADVERTISEMENT

ಕ್ಷೇತ್ರದಲ್ಲಿ ವಿವಿಧ ಪ್ರವೇಶ (ನೀಟ್‌, ಸಿಇಟಿ...) ಪರೀಕ್ಷೆ, ನೇಮಕಾತಿ (ಯುಪಿಎಸ್‌ಸಿ, ಕೆಪಿಎಸ್‌ಸಿ, ಐಬಿಪಿಎಸ್‌...) ಪರೀಕ್ಷೆ ಕೋಚಿಂಗ್‌ ಕೇಂದ್ರ ತೆರೆಯುವ ಯೋಚನೆ ಇದೆ. ಗ್ರಾಮೀಣ ಭಾಗದ ಯುವತಿಯರು, ಯುವಕರು ಪರೀಕ್ಷೆಗೆ ಸಿದ್ಧತೆ, ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ.

ಕ್ಷೇತ್ರದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚು ಇದ್ದಾರೆ. ಪ್ಲಾಂಟೇಷನ್‌, ತೋಟಗಳಲ್ಲಿ ಕೆಲಸ ಮಾಡುತ್ತಾರೆ. ಬಹುತೇಕ ಕುಟುಂಬಗಳು ಇಂದಿಗೂ ಕೂಲಿ ಲೈನ್‌ ನಲ್ಲೇ ವಾಸ ಇವೆ. ಇಂಥ ಕುಟುಂಬಗಳಿಗೆ ಸೂರು ಕಲ್ಪಿಸಲು ಶ್ರಮಿಸುತ್ತೇನೆ.

ಕ್ಷೇತ್ರದಲ್ಲೊಂದು ದೊಡ್ಡ ಆಸ್ಪತ್ರೆ ನಿರ್ಮಿಸಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದೇನೆ. ರೋಗಿಗಳು ಚಿಕಿತ್ಸೆಗಾಗಿ ಮಂಗಳೂರು, ಹಾಸನ ಇತರೆಡೆಗಳಿಗೆ ಹೋಗದಂತೆ ಇಲ್ಲಿಯೇ ಎಲ್ಲ ಚಿಕಿತ್ಸೆಗೆ ಪೂರಕ ಸೌಕರ್ಯ ಕಲ್ಪಿಸಲು ಶ್ರಮಿಸುತ್ತೇನೆ.

ಕೌಶಲಾಭಿವೃದ್ಧಿ ಕೇಂದ್ರವನ್ನು ತೆರೆಯುವ ಕನಸು ಇದೆ. ಕೌಶಲ ತರಬೇತಿ ನೀಡಿ ಯುವಜನರನ್ನು ಉದ್ಯಮ ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡುತ್ತೇನೆ. ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿಯಾಗಿ ರೂಪಿಸುವ ಗುರಿ ಇಟ್ಟುಕೊಂಡಿದ್ದೇನೆ.

==
ಸಂಕ್ಪಿಪ್ತ ಪರಿಚಯ

ನಯನಾ ಅವರು ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಅಮ್ಮನಂತೆಯೇ ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ. ರಾಜಕೀಯದಲ್ಲಿ ಅಮ್ಮನ ಜೊತೆ ಪಳಗಿದ್ದಾರೆ. ನಯನಾ ಪತಿ ಬಿಕಶ್ ಜವಾರ್‌.

ನಯನಾ ಅವರು ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಲ್‌ಎಲ್‌ಎಂ) ಪಡೆದಿದ್ದಾರೆ. 2014ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಪಯಣ ಆರಂಭಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ತವರೂರು ಮೂಡಿಗೆರೆ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ನಿರೂಪಣೆ: ಬಿ.ಜೆ.ಧನ್ಯಪ್ರಸಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.