ADVERTISEMENT

ಹೊಸ ಸಮಸ್ಯೆಗಳಲ್ಲಿಅವಳು

ಮೇಘನಾ ಸುಧೀಂದ್ರ
Published 4 ಜನವರಿ 2019, 19:30 IST
Last Updated 4 ಜನವರಿ 2019, 19:30 IST
   

ಅ ಮಿತಾ ಆ ದಿನ ಕೋಪಗೊಂಡು ಮನೆಗೆ ಬಂದಿದ್ದಳು. ಹೊಸ ಕೆಲಸಕ್ಕೆ ಸೇರುವ ಮುನ್ನ ಅವಳ ಆಫೀಸಿನ ಎಚ್ಆರ್ ‘ಹೊಸದಾಗಿ ಮದುವೆಯಾಗಿದೆಯಲ್ಲ, ಮುಂದಿನ ಪ್ಲ್ಯಾನ್ ಏನು?’ ಎಂದು ಕೇಳಿದಳು. ಅವರಿಗೆ ಅವಳ ತಾಯ್ತನದ ಬಗ್ಗೆ ಅವಳ ಅತ್ತೆಯ ಮನೆಯವರಿಗಿಂತ ಕೆಟ್ಟ ಕುತೂಹಲ ಇದ್ದಂತಿತ್ತು.

ಇದೇ ಪ್ರಶ್ನೆ ಅವಳ ಗಂಡ ಹೊಸ ಕೆಲಸಕ್ಕೆ ಸೇರಿದಾಗ ಕೇಳಿರಲಿಲ್ಲ. ಆಗಿನ ಕಾಲದಲ್ಲಿ ಓದಿ ಕೆಲಸಕ್ಕೆ ಹೋಗುವುದು ಕ್ರಾಂತಿಕಾರಿಯಾದರೆ ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ಕೆಲಸಕ್ಕೆ ಸೇರಿದ ಮೇಲೆ, ಅವರ ಪರ್ಸನಲ್ ಜೀವನದಲ್ಲಿ ಆಗುವ ಬದಲಾವಣೆಯನ್ನು ಆಫೀಸಿನವರು ಗಮನಿಸುತ್ತಿರುತ್ತಾರೆ ಎಂಬುದೇ ಬಹಳ ಕೋಪ ಬರುವಂಥದ್ದು. ಇದು ಅಮಿತಾಳ ಕಥೆ ಮಾತ್ರವಲ್ಲ, ಸುಮಾರು ಹೆಣ್ಣುಮಕ್ಕಳು ಆಧುನಿಕ ಜಗತ್ತಿಗೆ ಒಡ್ಡಿಕೊಂಡರೂ ನಮ್ಮ ಜಗತ್ತು ಇನ್ನೂ ಒಂದು 10 ಶತಮಾನಗಳಷ್ಟು ಹಿಂದಿದೆ ಎಂಬ ಸತ್ಯವನ್ನು ಅರಿತಾಗ ಆಗುವ ದುಃಖ ಹೇಳಿತೀರದ್ದು.

ಹೊರಗಿನ ಸಮಸ್ಯೆಗಳ ಬಗ್ಗೆ ಮಾತಾಡುವ ಮೊದಲು ಮನೆಯ ಒಳಗಿನ ಸಮಸ್ಯೆಗಳನ್ನು ಗಮನಿಸೋಣ. ಅಡುಗೆಮನೆಯ ಜವಾಬ್ದಾರಿ ಇನ್ನೂ ಹೆಣ್ಣಿನದ್ದೇ; ಅದು ತಲಾತಲಾಂತರದಿಂದಲೂ ಅವಳದ್ದೇ ಜವಾಬ್ದಾರಿ; ಅವಳಿಗದು ಇಷ್ಟವಿದೆಯೋ ಇಲ್ಲವೋ ಅವಳಿಗೆ ಚಾಯ್ಸ್ ಮಾಡೋದಕ್ಕೆ ಸಾಧ್ಯವಿಲ್ಲ. ಇದು ತಲಾತಲಾಂತರದಿಂದ ಅವಳೆಷ್ಟೇ ಮುಂದುವರಿದರೂ ಅವಳ ಆಯ್ಕೆಗೆ ಆ ಜವಾಬ್ದಾರಿ ಇಲ್ಲ ಈಗಲೂ ಇನೆವಿಟಬಲಿ ಅವಳದ್ದೆ. ಅವಳಿಗದು ಇಷ್ಟ ಇದೆಯೋ ಇಲ್ಲವೋ ಎಂಬ ಆಯ್ಕೆಯ ಪ್ರಶ್ನೆ ದೊಡ್ಡ ಸವಾಲಿನದ್ದೇ ಇದೆ.

ADVERTISEMENT

ಸಪ್ನಗೆ 30 ವರ್ಷ ವಯಸ್ಸಾಗಿದೆ. ಅವಳಿಗೂ ಸಾಂಗತ್ಯದ ಖುಷಿ ಬೇಕಾಗಿದೆ. ಆದರೆ ಅವಳನ್ನು ಮದುವೆ ಮಾಡಿಕೊಳ್ಳಲು ಮುಂದೆ ಬರುವ ಎಲ್ಲರಿಗೂ ಅವಳಿಗೆ ತಾಯ್ತನದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅವಳಿಗೆ ಮಗು ಹೆರುವ ಕಾಯಕ ಇಷ್ಟವಿಲ್ಲ. ಆ ಕಾರಣಕ್ಕೆ ಅವಳಿಗೆ ಮದುವೆಯಾಗುತ್ತಿಲ್ಲ. ತಾಯ್ತನ ನನ್ನ ಆಯ್ಕೆಯಾಗಿರಬೇಕು ಎಂಬುದು ಅವಳ ಮಾತು. ಆದರೆ ಸಮಾಜ ಇನ್ನೂ ಅಷ್ಟು ಮುಂದುವರೆದಿಲ್ಲ. ಸಪ್ನಾಳಂತೆ ತುಂಬಾ ಜನ ಆಧುನಿಕ ಕಾಲದ ಹೆಣ್ಣುಮಕ್ಕಳಿಗೆ ಮಗು, ಮನೆ, ಸಂಸಾರ ಯಾವುದರ ಬಗ್ಗೆಯೂ ಆಸಕ್ತಿ ಇಲ್ಲ.

ಇದಕ್ಕೆ ಅವಳಿಗಿಂತ ದೊಡ್ಡ ಹೆಣ್ಣುಮಕ್ಕಳು ‘ಇಂತಹ ಹೆಣ್ಣುಮಕ್ಕಳಿಗೆ ಜವಾಬ್ದಾರಿಯೇ ಬೇಡ’ ಎಂದು ಮೂದಲಿಸುತ್ತಾರೆ. ಅವರ ಜವಾಬ್ದಾರಿ ಮನೆಯನ್ನು ನಡೆಸುವುದು, ಆಫೀಸಿನಲ್ಲಿ ದೊಡ್ಡ ಹುದ್ದೆ ನಿಭಾಯಿಸುವುದು ಎಂಬುದನ್ನು ಪರಿಗಣಿಸದೆಯೇ ಅವಳಂತಹ ಸುಮಾರು ಹೆಣ್ಣುಮಕ್ಕಳನ್ನು ದೂರುತ್ತಾರೆ. ಈಗಲೂ ಅವಳ ದೇಹದ ಮೇಲಿನ ಆಯ್ಕೆಯನ್ನು ಅವಳು ಮಾಡಲು ಸಮಾಜದ ಠಸ್ಸೆ ಬೀಳಬೇಕು. ಇವೆಲ್ಲ ರೀತಿ–ರಿವಾಜುಗಳನ್ನು ಮಾಡುವುದು ಸಹ ಮತ್ತೊಂದು ಹೆಂಗಸೇ ಎಂಬುದು ಖೇದಕರವಾದ ಸಂಗತಿ.

ಆಚೆಗಿನ ಪ್ರಪಂಚಕ್ಕೆ ಬರುವ ಮುನ್ನ ಒಳಗಿನ ಮತ್ತು ಆಚೆಗಿನ ಪ್ರಪಂಚದ ಕೊಂಡಿಯಂತಿರುವ ಸೋಶಿಯಲ್ ಮೀಡಿಯಾದಲ್ಲಿನ ಅವಾಂತರಗಳು, ಅವುಗಳ ಸವಾಲುಗಳ ಬಗ್ಗೆ ಗಮನ ಹರಿಸೋಣ. ಒಂದೆರಡು ತಿಂಗಳ ಹಿಂದೆ ಶುರುವಾದ ಮೀಟೂ ಅಭಿಯಾನದಲ್ಲಿ ಸುಮಾರು ದೊಡ್ಡವರ ಹೆಸರುಗಳು ಕೇಳಿಬಂತು. ಇದರ ಬಗ್ಗೆ ಕಚೇರಿಯಲ್ಲಿ ಮಾತಾಡುತ್ತಿದ್ದಾಗ ನನ್ನ ಸಹೋದ್ಯೋಗಿ ‘ಅಯ್ಯೋ ಸುಮಾರು ಹುಡುಗಿಯರ ಫೇಸ್‌ಬುಕ್ಕಿನ ಅಧರ್ಸ್ ಫೋಲ್ಡರನ್ನು ಎಲ್ಲರಿಗೂ ತೋರಿಸಿದರೆ ಅದೆಷ್ಟು ಮೀಟೂಗಳು ಆಚೆ ಬರುತ್ತದೋ’ ಎಂದು ಹೇಳಿದಳು. ಆ ವಿಷಯ ತುಂಬಾ ಸತ್ಯ.

ದೇಹದ ಮೇಲಿನ ಆಕ್ರಮಣಕ್ಕಿಂತ ಮನಸ್ಸಿನ ಮೇಲಿನ ಆಕ್ರಮಣ ಇನ್ನೂ ಆಳವಾಗಿ ಘಾಸಿಗೊಳಿಸುತ್ತದೆ. ಈಗಲೂ ನನಗೆ ಆಟೊ ಡ್ರೈವರ್ ಒಬ್ಬ ಅಡ್ಡಾದಿಡ್ಡಿ ಸಣ್ಣ ಓಣಿಯಲ್ಲಿ ಓಡಿಸಿ, ಮಿರರಿನಲ್ಲಿ ನನ್ನ ಓರೆ ಕೋರೆಗಳನ್ನೆಲ್ಲ ನೋಡುತ್ತಿದ್ದ, ಅವನು ಫೋನಿನಲ್ಲಿ ‘ಬಾ ಮಗ, ಡೆಡ್ ಎಂಡಿಗೆ‘ ಎಂದು ಅವನ ಗುಂಪನ್ನು ಕರೆಯುವಷ್ಟರಲ್ಲಿ ನಾನು ಮಧ್ಯದಲ್ಲಿಯೇ ಸಿಗ್ನಲಿನ್ನಲ್ಲಿ ಇಳಿದು ಓಡಿದ ಘಟನೆ ಇನ್ನೂ ನೆನಪಿದೆ. ಇಂಥದಕ್ಕೆಲ್ಲ ಏನು ಪರಿಹಾರ ನನಗೀಗಲೂ ತಿಳಿಯುತ್ತಿಲ್ಲ. ಕತ್ತಲಾದ ನಂತರ ಪ್ರಯಾಣ ಮಾಡುವುದಿಲ್ಲ, ಚಿನ್ನವನ್ನು ಮೈಗೆ ಸೋಕಿಸೋದೇ ಇಲ್ಲ, ತಾಲಿಬಾನಿನವರ ಥರ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಮುಖ ಮುಚ್ಚಿಕೊಂಡರೂ ಈ ರಾಕ್ಷಸರು ಬಿಡುವುದಿಲ್ಲವಲ್ಲ ಎಂಬ ಭಯ ಎಲ್ಲಾ ಹೆಣ್ಣುಮಕ್ಕಳಿಗೆ ಈಗಲೂ ಕಾಡುತ್ತದೆ. ಇದಕ್ಕೆ ಪರಿಹಾರ ಗಂಡಸರ ಮನಸ್ಸು ಬದಲಾವಣೆಯೇ ಹೊರತು ಮಿಕ್ಕ ಯಾವುದೂ ಏನೂ ಮಾಡಲು ಸಾಧ್ಯವಿಲ್ಲ.

ಇಕ್ವಾಲಿಟಿ, ಇಕ್ವಾಲಿಟಿ – ಎಂದು ನಾವು ಕೂಗುವ ಸಮಯದಲ್ಲಿಯೇ ನಮಗೇ ಒಂದಷ್ಟು ಮೀಸಲಾತಿಗಳು ಬಂದು ಕೂರುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಈ ಸಾರ್ವಜನಿಕ ಸಾರಿಗೆಗಳಲ್ಲಿ ವಯಸ್ಸಾದವರಿಗೆ, ಅಂಗವಿಕಲರಿಗೆ ಮಾತ್ರ ಮೀಸಲಾತಿ ಇರುತ್ತದೆ. ಇಲ್ಲಿ ಎಲ್ಲಾ ವಯೋಮಾನದ ಹೆಣ್ಣುಮಕ್ಕಳಿಗೂ ಮೀಸಲಾತಿ ಇರುತ್ತದೆ. ಒಂದು ಕೋಚ್ ಸಹ ಇರುತ್ತದೆ. ಕೆಲವೊಮ್ಮೆ ಅದರ ದುರುಪಯೋಗವೂ ಆಗುತ್ತದೆ. ಸಮಾನತೆ ಕೇಳುವಾಗ ಮೀಸಲಾತಿ ಯಾಕೆ ಬೇಕು ಎನ್ನುವ ಪ್ರಶ್ನೆ ತುಂಬಾ ಕಡೆ ಬರುತ್ತದೆ. ಸಮಾನತೆ ಬರುವವರೆಗೆ ಮೀಸಲಾತಿ ಬೇಕೋ ಅಥವಾ ಸಮಾನತೆ ಬರುವುದಕ್ಕೆ ಮೀಸಲಾತಿಯ ಅಗತ್ಯವಿಲ್ಲವೋ ಎಂಬ ಸವಾಲಿಗೆ ಇನ್ನೂ ಜವಾಬು ಸಿಕ್ಕಿಲ್ಲ.

ನನ್ನ ಪ್ರಕಾರ ಈಗಿನ ಕಾಲದ ಹೆಣ್ಣುಮಕ್ಕಳಿಗೆ ತಾವು ಹೇಗೆ ಇರಬೇಕು ಎಂಬುದೇ ದೊಡ್ಡ ಸವಾಲು. ಹೆಣ್ಣು ಯಾವಾಗಲೂ ಒಂದು ಮನೆಯ ಗೌರವದ ಪ್ರತೀಕ ಎಂದೇ ನಂಬುತ್ತಾರೆ. ಈಗಲೂ ವಯಸ್ಸಾದವರು ಆಶೀರ್ವಾದ ಮಾಡುವಾಗ ‘ಇದ್ದ ಮನೆಗೆ, ಹೋದ ಮನೆಗೆ ಬೆಳಕಾಗು’ ಅಂದೇ ಮಂತ್ರಾಕ್ಷತೆ ಹಾಕುವುದು. ಇಲ್ಲಿ ಹೆಣ್ಣು ಮನೆ–ಮನೆಯ ಮರ್ಯಾದೆ ಕಾಪಾಡುವ ಸರಕಾಗುತ್ತಾಳೆ ಹೊರತು ತನ್ನ ಆಸೆ, ಆಕಾಂಕ್ಷೆಯನ್ನು ಚಿಪ್ಪಿನೊಳಗಡೆ ಬಚ್ಚಿಟ್ಟು ಬದುಕುವುದೇ ಅವಳ ಧ್ಯೇಯವಾಗಬೇಕೆಂದು ನಿರೀಕ್ಷಿಸುತ್ತಾರೆ. ಒಟ್ಟಿನಲ್ಲಿ ತನ್ನದು ಎಂಬುದನ್ನು ಬಲವಾಗಿ ಪ್ರತಿಪಾದಿಸಿದಾಗ ಅವಳು ಸ್ವಾರ್ಥಿಯಾಗುತ್ತಾಳೆ.

ತ್ಯಾಗಮಯಿಯೆಂದು ಪಟ್ಟ ಕಟ್ಟಿದು ಈ ಸಮಾಜವೇ ಅಲ್ಲವೇ? ಯಾವುದೇ ಮನುಷ್ಯನಿಗೆ ಅವನದ್ದೋ/ಅವಳದ್ದೋ ಒಂದು ವ್ಯಕ್ತಿತ್ವವಿರಬೇಕು. ಇದ್ದಾಗ ಅವರ ಹೆಸರು ಕೆಲಸದಿಂದ ಗುರುತಿಸಿಕೊಳ್ಳಬೇಕು, ಪರಾವಲಂಬಿಗಳಾಗಿ ಬದುಕಿದಷ್ಟು ನಷ್ಟ ನಮಗೇ. ಆಧುನಿಕತೆಯ ಒಳ್ಳೆಯದನ್ನು ಅಪ್ಪಿಕೊಳ್ಳುತ್ತಾ, ಪುರಾತನದ ಒಳ್ಳೆಯ ತತ್ವಗಳನ್ನು ಪಾಲಿಸುತ್ತಾ ಜೀವನ ಮಾಡಿದರಷ್ಟೆ ಹೆಣ್ಣಿಗೆ ಸವಾಲುಗಳಿಗೆ ಜವಾಬು ಕೊಡಲು ಸಾಧ್ಯ. ಇಲ್ಲದಿದ್ದರೆ ಆಕೆ ಎಷ್ಟೇ ಮುಂದುವರೆದರೂ ಸವಾಲನ್ನು ಎದುರಿಸುತ್ತಲೇ ಇರುತ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.