ADVERTISEMENT

ಲಹರಿ: ಆನ್‌ಲೈನ್ ಶಾಪಿಂಗು...

ಪವಿತ್ರಾ ಭಟ್
Published 14 ಸೆಪ್ಟೆಂಬರ್ 2024, 0:04 IST
Last Updated 14 ಸೆಪ್ಟೆಂಬರ್ 2024, 0:04 IST
<div class="paragraphs"><p>ಆನ್‌ಲೈನ್ ಶಾಪಿಂಗು</p></div>

ಆನ್‌ಲೈನ್ ಶಾಪಿಂಗು

   

ಕ್ಲಿಕ್‌ ಮಾಡುತ್ತಾ ಹೋದಂತೆಲ್ಲಾ ಹೊಸ ಹೊಸ ಪ್ರಾಡಕ್ಟ್‌ಗಳು. ಒಂದಾದ ಮೇಲೊಂದರಂತೆ ಸಜೆಷನ್‌ಗಳು. ಬೇರೆ ಬೇರೆ ರೀತಿಯ ವಿನ್ಯಾಸ, ತರಹೇವಾರಿ ಬ್ರ್ಯಾಂಡ್‌… ಸ್ಕ್ರೋಲ್ ಮಾಡಿ‌ ಮಾಡಿ ಬೆರಳು ದಣಿದರೂ ಮುಗಿಯದ ಚಿತ್ರಗಳು... ನೋಡಿದಷ್ಟೂ ಕಾಣುವ ಆಫರ್‌ಗಳು... ಬ್ರ್ಯಾಕೆಟ್‌ನಲ್ಲಿ ಶೇ 80ರಷ್ಟು ರಿಯಾಯಿತಿ!, ಇನ್ನರ್ಧ ಗಂಟೆಯಲ್ಲಿ ಆರ್ಡರ್‌ ಮಾಡಿದರೆ ಮಾತ್ರ ಎನ್ನುವ ಷರತ್ತು. ಇದು ಆನ್‌ಲೈನ್‌ ಶಾಪಿಂಗ್‌ನ ಮಾಯಾಲೋಕ.

ಮೊದಲೆಲ್ಲ ಅವಶ್ಯಕತೆಯಿದ್ದಾಗ, ಮದುವೆ- ಸಮಾರಂಭ, ಹಬ್ಬಗಳಿದ್ದರೆ ಹೊಸ ಬಟ್ಟೆ, ಮನೆಗೆ ಹೊಸ ವಸ್ತು ಖರೀದಿಸುವ ಪದ್ಧತಿಯಿತ್ತು. ಆದರೆ ಈಗ ನಾವೇನು ಯೋಚಿಸುತ್ತೇವೆ ಎನ್ನುವುದು ನಮ್ಮ ಮೊಬೈಲ್‌ಗಳಿಗೇ ತಿಳಿಯುತ್ತದೆ. ಅದಕ್ಕೆ ಮೊಬೈಲ್‌ ತೆರೆದಾಗಲೆಲ್ಲ ಭಾರೀ ಡಿಸ್ಕೌಂಟ್‌ ಎಂಬ ಜಾಹೀರಾತು ಕಣ್ಣಿಗೆ ರಾಚುತ್ತದೆ. ಮೂರೂ ಹೊತ್ತು ಅದರೊಟ್ಟಿಗೆ ಇರುವಾಗ ಮೊಬೈಲ್‌ಗೆ ಗೊತ್ತಾಗದೆ ಇರದು ಬಿಡಿ. ಡಿಸ್ಕೌಂಟ್‌ ಎಂದ ತಕ್ಷಣ ಕಣ್ಣು, ಕಿವಿ ಎರಡೂ ನೆಟ್ಟಗಾಗುತ್ತದೆ. ಒಂದು ಬಾರಿ ನೋಡಿ ಬಿಡೋಣ ಎಂದರೆ ಮುಗಿಯಿತು. ಕ್ಲಿಕ್‌ ಮಾಡಿದಷ್ಟೂ ದೂರ ಹೋಗಬಹುದು. ಕೊನೆಗೆ ಯುವರ್‌ ಆರ್ಡರ್‌ ಈಸ್‌ ಪ್ಲೇಸ್ಡ್‌ ಎನ್ನುವ ಮೆಸೇಜ್‌, ಅತ್ತ ಬ್ಯಾಂಕ್‌ ಕಡೆಯಿಂದ ಯುವರ್‌ ಬ್ಯಾಲೆನ್ಸ್‌ ಈಸ್‌… ಮತ್ತದೇ ನೋವು ಕೊಡುವ ಮೆಸೇಜು. ಆಗ ಎಚ್ಚರವಾಗುತ್ತದೆ ನಮಗೆ ಅಯ್ಯೋ ಸುಮ್ಮನೆ ನೋಡೋಕೆ ಅಂತಾ ಹೋಗಿ ಆರ್ಡರ್‌ ಮಾಡಿಬಿಟ್ಟೆನಲ್ಲ ಅಂತಾ.

ADVERTISEMENT

ಇತ್ತೀಚೆಗೆ ಒಂದು ದಿನ ಆನ್‌ಲೈನ್‌ ಸ್ಟೋರ್‌ ಡೆಲಿವರಿ ಹುಡುಗ ಬೆಲ್‌ ಮಾಡಿ ಮೇಡಂ, ನಿಮ್ಮ ಆರ್ಡರ್‌ ಎಂದ, ಯಾರು, ಏನು, ಎತ್ತ ಎಂದು ವಿಚಾರಿಸುವಷ್ಟರಲ್ಲಿ ಪಟ ಪಟ ಮೆಟ್ಟಿಲಿಳಿದು ಹೋಗಿದ್ದ. ನಾನೇನೂ ಆರ್ಡರ್‌ ಮಾಡಿಲ್ಲ, ಆದರೂ ನನ್ನ ಹೆಸರಿನಲ್ಲಿ ಆರ್ಡರ್‌ ಬಂದಿದೆ ಎಂದು ತಲೆ ಕೆರೆದುಕೊಳ್ಳುವಷ್ಟರಲ್ಲಿ ನನ್ನ ಗೆಳತಿ

‘ನಾನೇ ಮಾಡಿದ್ದು ಆರ್ಡರ್‌. ಕೊಡು ಸೈಜ್‌ ಸರಿಯಾಗಿದ್ಯಾ ನೋಡಬೇಕು' ಎಂದಳು.

‘ಅರೇ ನನ್ನ ಹೆಸರಲ್ಲಿ ಯಾಕೆ ಆರ್ಡರ್‌ ಮಾಡಿದ್ದೆ’ ಎಂದೆ.

ಅದಕ್ಕೆ, ‘ನನ್ನದು ಮತ್ತು ನನ್ನ ಅಮ್ಮನದು ಒಂದೇ ಅಕೌಂಟ್‌. ನನ್ನ ಹೆಸರಿನಲ್ಲಿ ತರಿಸಿದರೆ ಸುಮ್ಮನೆ ಬೈಸ್ಕೋಬೇಕು. ಅದಕ್ಕೆ ನಿನ್ನ ಹೆಸರು ಹಾಕಿದ್ದೆ ಅಂದಳು’. ಸರಿ ಅಂದೆ.

ಆ ಡೆಲಿವರಿ ಬಾಯ್‌ ವಾರಕ್ಕೆ ಮೂರು ಬಾರಿ ಬರತೊಡಗಿದ. ಮೇಡಂ ಆಪ್‌ ಕಾ ಆರ್ಡರ್‌ ಅಂದ. ಇನ್ನೊಂದು ದಿನ ಬಂದು ಮೇಡಂ ಯುವರ್‌ ಆರ್ಡರ್‌ ಅಂದ. ನಾನು ಗಲಿಬಿಲಿಯಿಂದ ಯಾಕೆ ಇಷ್ಟೊಂದು ಆನ್‌ಲೈನ್‌ ಶಾಪಿಂಗ್‌ ಮಾಡ್ತಾ ಇದೀಯಾ? ಕಬೋರ್ಡ್‌‌ನಲ್ಲಿ ಜಾಗ ಇಲ್ಲ, ಯಾವಾಗ ಹಾಕ್ತೀಯಾ ಇದನ್ನೆಲ್ಲ ಅಂದೆ. ಅದಕ್ಕೆ ಅವಳ ಉತ್ತರ, ನನ್ನ ಮೂಡ್‌ ಸರಿ ಇಲ್ಲ, ಅದಕ್ಕೆ ಶಾಪಿಂಗ್‌ ಮಾಡ್ದೆ, ಸಮಾಧಾನ ಆಯ್ತು ಅಂದಳು.

ನಾನು ಗಾಬರಿಯಾದೆ. ಅರೇ, ಮೂಡ್‌ ಸರಿ ಇಲ್ಲದ್ದಕ್ಕೂ ಆನ್‌ಲೈನ್‌ ಶಾಪಿಂಗ್‌ಗೂ ಏನು ಸಂಬಂಧ? ದುಡ್ಡು ನಿಂದೇ ಅಲ್ವಾ ಖರ್ಚಾಗೋದು? ಸುಮ್ಮನೆ ಯಾಕೆ ಅಂದೆ. ಅದಕ್ಕವಳು ಅದೆಲ್ಲಾ ಗೊತ್ತಿಲ್ಲ, ಇದರಲ್ಲಿ ಒಂಥರಾ ಖುಷಿ ನನಗೆ ಅಂದಳು. ಆನ್‌ಲೈನ್‌ ಶಾಪಿಂಗೇ ನಮ್ಮ ನೇಚರು ಎಂದಾಗ ನಾವೇನು ಹೇಳೋದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.