ನಾನು ತೋಟಗಾರಿಕೆ ಇಲಾಖೆಯಲ್ಲಿ ಗಣಕಯಂತ್ರ ಆಪರೇಟರ್ ಆಗಿ ಆಯ್ಕೆ ಆಗಿದ್ದೇನೆ. ಆದರೆ ನನಗೆ ಕೆಲವೊಂದು ಹಳೆಯ ನೆನಪುಗಳನ್ನು ಮರೆಯಲು ಆಗುತ್ತಿಲ್ಲ. ಒಂದು ದಿನ ಖುಷಿಯಾಗಿ ಇದೀನಿ ಅನ್ನೋವಷ್ಟರಲ್ಲಿ ಮಾರನೆಯ ದಿನ ಮತ್ತದೇ ನೆನಪು ಕಾಡುತ್ತದೆ. ಆ ನೆನಪುಗಳು ಮನಸ್ಸಿನಿಂದ ದೂರಾಗಲು ಏನು ಮಾಡಬೇಕು.
ಮುತ್ತುರಾಜ್, ಊರು ಬೇಡ
ಯಾವಾಗ ನಮ್ಮ ಮನಸ್ಸಿನೊಳಗೆ ಇಷ್ಟವಿಲ್ಲದ ಯೋಚನೆಗಳು ದಾಳಿ ಮಾಡುತ್ತವೋ ಆಗ ಅದನ್ನು ನಿರ್ಬಂಧಿಸಲು ಬಯಸುವುದು ಮನುಷ್ಯ ಸಹಜ ಗುಣ. ಕೆಲವು ನೋವು ತರುವ ನೆನಪುಗಳನ್ನು ನೀವು ಮರೆಯಬೇಕು ಎಂದುಕೊಂಡಿರಬಹುದು. ಆದರೆ ಎಲ್ಲ ನೆನಪುಗಳನ್ನು ಮನಸ್ಸಿನಿಂದ ಅಳಿಸಿ ಹಾಕಲು ಸಾಧ್ಯವಿಲ್ಲ. ಕೆಲವೊಂದು ತಂತ್ರಗಳ ಮೂಲಕ ಆ ನೆನಪುಗಳು ಮನಸ್ಸಿಗೆ ದಾಳಿ ಇಡುವುದು ಕಡಿಮೆ ಮಾಡಿಕೊಳ್ಳಬಹುದು. ಮನಸ್ಸಿಗೆ ಖುಷಿ ನೀಡುವ ರೀತಿ ಮನಸ್ಸನ್ನು ಬದಲಾಯಿಸಿಕೊಳ್ಳಬಹುದು. ಹೊಸ ಆಹ್ಲಾದಕರ ನೆನಪುಗಳೊಂದಿಗೆ ಹಳೆಯ ಕೆಟ್ಟ ನೆನಪುಗಳನ್ನು ಮರೆಯಬಹುದು. ಪ್ರತಿಯೊಬ್ಬರೂ ಕೆಲ ಹಂತದವರೆಗೆ ತಮ್ಮ ಭೂತಕಾಲದ ಬಗ್ಗೆ ಯೋಚಿಸುತ್ತಾರೆ. ಇದರಿಂದ ಭವಿಷ್ಯದ ವಿಶ್ವಾಸದ ಬಗ್ಗೆ ಅಡ್ಡಿಯುಂಟಾಗಬಹುದು. ನೀವು ಈಗಾಗಲೇ ಘಟಿಸಿದ ಘಟನೆಗಳ ಬಗ್ಗೆ ಯೋಚಿಸುತ್ತಲೇ ಇದ್ದರೆ ಈಗ ಏನು ನಡೆಯುತ್ತಿದೆ ಮತ್ತು ಮುಂದೆ ಏನು ನಡೆಯಬಹುದು ಎಂಬುದರ ಬಗ್ಗೆ ಯೋಚಿಸಲು ನಿಮ್ಮ ಬಳಿ ಶಕ್ತಿ ಇರುವುದಿಲ್ಲ. ಮನಸ್ಸಿನಲ್ಲಿ ಸಾವಧಾನತೆಯನ್ನು ರೂಢಿಸಿಕೊಂಡರೆ ಪ್ರಸ್ತುತ ಘಟನೆಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸು ಸಮಾಧಾನದಿಂದಿದ್ದರೆ ಕೆಟ್ಟ ನೆನಪುಗಳು ಬಂದರೂ ಆರಾಮಾಗಿ ವರ್ತಮಾನದೊಂದಿಗೆ ಜೀವಿಸಬಹುದು. ಈ ರೀತಿ ಮಾಡುವುದರಿಂದ ಋಣಾತ್ಮಕ ಯೋಚನೆಗಳು ಮನಸ್ಸಿಗೆ ದಾಳಿ ನೀಡುವುದರಿಂದ ತಪ್ಪಿಸಿಕೊಳ್ಳಬಹುದು. ಒಂದು ವಿಷಯವನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ, ಹಳೆಯ ನೆನಪುಗಳನ್ನು ಮರೆಯುವುದು ಕಷ್ಟ. ತಜ್ಞರ ಸಹಾಯ ಪಡೆದುಕೊಂಡು ನೀವು ಆ ನೆನಪುಗಳಿಂದ ಹೊರ ಬರಬಹುದು.
ಮೇಡಂ, ನನಗೆ ಕೆಲವೊಮ್ಮೆ ತುಂಬಾ ಬೇಸರವಾಗುತ್ತದೆ. ಕಾರಣ ನನ್ನ ಗಂಡ ಎಲ್ಲಿಗಾದರೂ ಜೊತೆಗೆ ಹೋಗೋಣ ಎಂದರೆ ಬರುವುದಿಲ್ಲ. ಅವರಿಗೆ ಎಲ್ಲದಕ್ಕೂ ಒತ್ತಾಯ ಮಾಡಬೇಕು. ಆಗ ನಾನು ಅವರ ಜೊತೆ ಜಗಳ ಮಾಡುತ್ತೇನೆ. ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ. ಅವರು ಶ್ರೀಮಂತರೊಬ್ಬರ ಮನೆಯಲ್ಲಿ ಡ್ರೈವರ್ ಕೆಲಸ ಮಾಡುವ ಜೊತೆಗೆ ಅವರ ಮನೆಕೆಲಸದ ವ್ಯವಹಾರವನ್ನೂ ನೋಡಿಕೊಳ್ಳುತ್ತಾರೆ. ಏನಾದ್ರೂ ಕೇಳಿದ್ರೆ ‘ಓನರ್ ಬೈಯ್ತಾರೆ‘ ಎಂದು ಅದು ಇದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಯಾವಾಗಲೂ ಅವರ ಮನೆಯ ಕೆಲಸದಲ್ಲೇ ಬ್ಯುಸಿ ಇರ್ತಾರೆ. ನಾನು ಏನು ಮಾಡಲಿ.
ಹೆಸರು, ಊರು ಬೇಡ
ನಿಮ್ಮ ಗಂಡ ಬೇರೆಯವರ ಬಳಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅವರು ಪ್ರತಿಯೊಂದಕ್ಕೂ ಆ ಓನರ್ ಬಳಿ ಅನುಮತಿ ಪಡೆದುಕೊಳ್ಳಬೇಕು. ಅವರು ನಿಮ್ಮ ಬಳಿ ಸತ್ಯವನ್ನೇ ಹೇಳಿರಬಹುದು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಅವರು ನಿಜವಾಗಿಯೂ ಬ್ಯುಸಿ ಇರಬಹುದು. ದೂರುವ ರೀತಿಯಲ್ಲಿ ನಿಮ್ಮ ಗಂಡನೊಂದಿಗೆ ಮಾತನಾಡಬೇಡಿ. ಜೊತೆಗೆ ಕುಳಿತು, ಶಾಂತಚಿತ್ತರಾಗಿ ಮಾತನಾಡಿ. ಅವರಿಗೆ ನಿಮ್ಮ ಜೊತೆ ಕೆಲ ಹೊತ್ತು ಸುಮಧುರ ಕ್ಷಣಗಳನ್ನು ಕಳೆಯಲು ತಿಳಿಸಿ. ಮನಸ್ಸಿಗೆ ಇಷ್ಟವಾಗುವ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅಡುಗೆ ಮಾಡುವುದು, ಗಾರ್ಡನಿಂಗ್ ಮಾಡುವುದು, ಟೈಲರಿಂಗ್ ಮಾಡುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಇದರಿಂದ ಸದಾ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಯಾವಾಗಲೂ ಕೆಟ್ಟಯೋಚನೆ ಮಾಡಿ, ಮನಸ್ಸು ಕೆಡಿಸಿಕೊಳ್ಳಬೇಡಿ.
ನಾನು ಬಿ.ಎ. ಓದುತ್ತಿದ್ದೇನೆ. ನನ್ನ ಮನಸ್ಸಿನಲ್ಲಿ ತುಂಬಾ ಋಣಾತ್ಮಕ ಯೋಚನೆಗಳು ಬರುತ್ತವೆ. ನಾನು ಯಾವುದಾದರೂ ಋಣಾತ್ಮಕ ಯೋಚನೆ ಮನಸ್ಸಿನಲ್ಲಿ ಇಟ್ಟುಕೊಂಡರೆ ಬರೀ ಅದರ ಬಗ್ಗೆಯೇ ಯೋಚಿಸುತ್ತೇನೆ. ಅದನ್ನು ಮರೆಯಲು ಆಗುವುದೇ ಇಲ್ಲ. ಇದಕ್ಕೆ ಏನಾದರೂ ಪರಿಹಾರ ತಿಳಿಸಿ. ಈ ಕಾರಣದಿಂದ ನನಗೆ ಓದಲು ಸಾಧ್ಯವಾಗುತ್ತಿಲ್ಲ.
ಅಭೀಷ್, ಮಂಗಳವಾಡಿ
ಕೆಲವೊಂದು ಸಂದರ್ಭಗಳಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಋಣಾತ್ಮಕ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ನಾವು ಅದರ ಬಗ್ಗೆ ಪದೇ ಪದೇ ಯೋಚಿಸುವುದನ್ನು ನಿಲ್ಲಿಸಿ, ಪ್ರಜ್ಞಾಪೂರ್ವಕವಾಗಿ ಅದು ನಮ್ಮ ಮನಸ್ಸಿನಿಂದ ದೂರಾಗುವಂತೆ ಮಾಡಬೇಕು. ಯಾವಾಗ ನಿಮಗೆ ನಿಮ್ಮ ಯೋಚನೆಗಳು ಋಣಾತ್ಮಕವಾಗಿವೆ ಎಂದು ಅನ್ನಿಸುತ್ತದೋ ಆಗ ನಿಮ್ಮಷ್ಟಕ್ಕೆ ನೀವು ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ಉಸಿರಾಟದ ಪ್ರಕ್ರಿಯೆಯನ್ನು ಗಮನಿಸಿಬೇಕು. ಆಗ ನೀವು ನಿಧಾನಕ್ಕೆ ನಿಮ್ಮ ಋಣಾತ್ಮಕ ಯೋಚನೆಗಳಿಂದ ಹೊರ ಬರುತ್ತೀರಿ. ಈ ಅಭ್ಯಾಸವನ್ನು ನೀವು ರೂಢಿಸಿಕೊಂಡರೆ ಯಾವಾಗ ನಿಮ್ಮ ಮನಸ್ಸಿನಲ್ಲಿ ಋಣಾತ್ಮಕ ಯೋಚನೆಗಳು ಬರುತ್ತವೆಯೋ ಆಗ ನಿಮ್ಮ ಮನಸ್ಸಿಗೆ ಆರಾಮ ಎನ್ನಿಸುತ್ತದೆ. ಜೊತೆಗೆ ಶ್ರಮವಿಲ್ಲದೇ ನಿಮ್ಮ ಮನಸ್ಸಿನಿಂದ ಅಂತಹ ಕೆಟ್ಟ ಯೋಚನೆಗಳು ದೂರಾಗುತ್ತವೆ. ಅದರೊಂದಿಗೆ ಒಳ್ಳೆಯ ಆಹಾರ ಸೇವಿಸಿ, ವ್ಯಾಯಾಮ ಮಾಡಿ. ಪ್ರತಿದಿನ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಹಾಗೂ ದೇಹ ಎರಡೂ ಆರೋಗ್ಯದಿಂದಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.