ADVERTISEMENT

ಫ್ಯಾಷನ್‌ಗೂ ಸಂಪ‍್ರದಾಯಕ್ಕೂ ಪೋಟ್ಲಿ ಬ್ಯಾಗ್‌

ರೇಷ್ಮಾ
Published 21 ಜನವರಿ 2022, 20:00 IST
Last Updated 21 ಜನವರಿ 2022, 20:00 IST
ಪೋಟ್ಲಿ ಬ್ಯಾಗ್‌
ಪೋಟ್ಲಿ ಬ್ಯಾಗ್‌   

ಫ್ಯಾಷನ್ ಕ್ಷೇತ್ರಕ್ಕೂ ಹೆಣ್ಣುಮಕ್ಕಳಿಗೂ ಎಲ್ಲಿಲ್ಲದ ನಂಟು. ಫ್ಯಾಷನ್ ಮೇಲೆ ಒಲವು ಮೂಡಿಸಿಕೊಳ್ಳದ ಹೆಣ್ಣುಮಕ್ಕಳು ಕಡಿಮೆಯೇ ಸರಿ. ಫ್ಯಾಷನ್‌ ಎಂದರೆ ಕೇವಲ ಸೀರೆ, ಚೂಡಿದಾರ್, ಕುರ್ತಾ ಹೀಗೆ ಉಡುಪುಗಳಷ್ಟೇ ಅಲ್ಲ. ಉಡುಪುಗಳಾಚೆಗೂ ಫ್ಯಾಷನ್ ಕ್ಷೇತ್ರ ವಿಸ್ತರಿಸಿದೆ.

ದಿರಿಸಿಗೆ ಹೊಂದುವ ಚಪ್ಪಲಿ, ಬ್ಯಾಗ್‌, ಕಿವಿಯೋಲೆ, ಸರದಂತಹ ಮ್ಯಾಚಿಂಗ್‌ ವಸ್ತುಗಳನ್ನು ಧರಿಸಿದಾಗ ಇನ್ನಷ್ಟು ಸುಂದರವಾಗಿ ಕಾಣಬಹುದು. ಈಗ ಫ್ಯಾಷನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವುದು ಪೋಟ್ಲಿ ಬ್ಯಾಗ್‌. ನೋಡುವುದಕ್ಕೆ ಹಿಂದಿನ ಕಾಲದ ಅಜ್ಜಿಯರು ಬಳಸುತ್ತಿದ್ದ ಎಲೆ–ಅಡಿಕೆ ಚೀಲದ ಮುಂದುವರಿದ ವಿನ್ಯಾಸದಂತೆ ಕಾಣುತ್ತದೆ. ಹಿಂದೆಲ್ಲಾ ಇದೇ ರೀತಿಯ ಚೀಲವನ್ನು ಮನೆಯ ಬೀಗದ ಗೊಂಚಲು ಇರಿಸಿಕೊಳ್ಳಲು ಬಳಸುತ್ತಿದ್ದರು. ಅರಸೊತ್ತಿಗೆಯ ಕಾಲದಲ್ಲಿ ರಾಣಿಯರು ಪೋಟ್ಲಿ ಬ್ಯಾಗ್‌ ಬಳಸುತ್ತಿದ್ದದ್ದನ್ನು ನಾವು ಸಿನಿಮಾಗಳಲ್ಲಿ, ಚಿತ್ರಗಳಲ್ಲಿ ಕಾಣಬಹುದು.

ಏನಿದು ಪೋಟ್ಲಿ ಬ್ಯಾಗ್‌?

ADVERTISEMENT

ಸುಂದರವಾದ ಅಗಲ ಅಥವಾ ಉದ್ದನೆಯ ಚಿಕ್ಕದಾದ ಬ್ಯಾಗ್‌ಗೆ ಹಿಡಿಕೆ ರೂಪದಲ್ಲಿ ಎರಡು ದಾರಗಳನ್ನು ಪೋಣಿಸಿರಲಾಗುತ್ತದೆ. ಈ ದಾರವನ್ನು ಕೈಗೆ ಸಿಕ್ಕಿಸಿಕೊಳ್ಳಬಹುದು. ಹಿಂದಿನ ಕಾಲದ ಮಹಿಳೆಯರು ಇದನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು. ಇದು ಪಾಶ್ಚಿಮಾತ್ಯ ದೇಶಗಳಲ್ಲೂ ಬಹಳ ಹಿಂದಿನದಲ್ಲೂ ಬಳಕೆಯಲ್ಲಿದ್ದ ಬ್ಯಾಗ್‌ ಟ್ರೆಂಡ್ ಆಗಿದೆ. ಈಗ ಈ ಟ್ರೆಂಡ್‌ ನವೀನ ರೂಪ ಪಡೆದುಕೊಂಡು ಫ್ಯಾಷನ್ ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿದೆ.

ಸಾಂಪ್ರದಾಯಿಕ ಉಡುಪಿನೊಂದಿಗೆ

ಭಾರತೀಯ ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಚೂಡಿದಾರ್‌, ಘಾಗ್ರಾದಂತಹ ಉಡುಪುಗಳೊಂದಿಗೆ ಅದೇ ರೀತಿಯ ವಿನ್ಯಾಸವಿರುವ ಪೋಟ್ಲಿ ಬ್ಯಾಗ್‌ ಧರಿಸಬಹುದು. ಈ ಬ್ಯಾಗ್‌ ನಿಮ್ಮನ್ನು ಇನ್ನಷ್ಟು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಹಿಂದಿನ ಕಾಲದ ಹೆಣ್ಣುಮಕ್ಕಳು ಐಷಾರಾಮಿ ಪೋಟ್ಲಿ ಧರಿಸುತ್ತಿದ್ದರು.

ಪಾಶ್ಚಾತ್ಯ ಉಡುಪಿನೊಂದಿಗೆ

ಜೀನ್ಸ್‌, ಕುರ್ತಾ, ಟಾಪ್‌, ಕ್ರಾಪ್‌ ಟಾಪ್‌, ಮಿಡ್ಡಿ, ಸ್ಕರ್ಟ್‌ನಂತಹ ಪಾಶ್ಚಿಮಾತ್ಯ ಶೈಲಿಯ ಉಡುಪು ಧರಿಸಿದಾಗಲೂ ಪೋಟ್ಲಿ ಬ್ಯಾಗ್‌ ಧರಿಸಬಹುದು. ಆದರೆ ಪಾಶ್ಚಿಮಾತ್ಯ ಉಡುಪಿನೊಂದಿಗೆ ಸರಳ ವಿನ್ಯಾಸದ ಬ್ಯಾಗ್ ಹೆಚ್ಚು ಹೊಂದುತ್ತದೆ. ಜೀನ್ಸ್ ಟಾಪ್‌ ಅಥವಾ ಯಾವುದೇ ರೀತಿಯ ಟಾಪ್ ಧರಿಸಿದಾಗ ಅದೇ ಬಣ್ಣದ ಮಣಿಗಳಿರುವ ಅಥವಾ ಬಣ್ಣದ ನೂಲಿನ ಎಂಬ್ರಾಯಿಡರಿ ಇರುವ ಪೋಟ್ಲಿ ಧರಿಸಬಹುದು. ಇದರಿಂದ ನಿಮ್ಮ ನೋಟವೇ ಬದಲಾಗುತ್ತದೆ.

ಬಾಲಿವುಡ್‌ ತಾರೆಯರಿಗೂ ಮೆಚ್ಚು

ಬಾಲಿವುಡ್‌ ತಾರೆಯರು ಈ ಬ್ಯಾಗ್‌ ಅನ್ನು ಧರಿಸಿದ್ದಾರೆ. ಸೀರೆ, ಲೆಹಂಗಾದಂತಹ ಸಾಂಪ್ರದಾಯಿಕ ಉಡುಪು ತೊಟ್ಟಾಗ ಪೋಟ್ಲಿ ಬ್ಯಾಗ್ ಧರಿಸಲು ಇಷ್ಟ ಪಡುತ್ತಾರೆ. ಇದನ್ನು ಧರಿಸುವ ಮೂಲಕ ಈ ಬ್ಯಾಗ್‌ ಟ್ರೆಂಡ್ ಅನ್ನು ಇನ್ನಷ್ಟು ಖ್ಯಾತಿಗೊಳಿಸಿದ್ದಾರೆ ಬಿಟೌನ್ ಸುಂದರಿಯರು. ಕರೀಶ್ಮಾ ಖಾನ್ ಕಪೂರ್‌, ತಾರಾ ಸುತ್ರಿಯಾ, ಕಾಜಲ್‌, ಕಿಯಾರಾ ಅಡ್ವಾನಿ ಮುಂತಾದ ಬಾಲಿವುಡ್‌ ನಟಿಯರು ವಿಶೇಷ ಸಂದರ್ಭಗಳಲ್ಲಿ ಪೋಟ್ಲಿ ಬ್ಯಾಗ್‌ ಧರಿಸುವ ಮೂಲಕ ಮಿಂಚಿದ್ದಾರೆ.

ಐಷಾರಾಮಿ ಬ್ಯಾಗ್‌

ಪೋಟ್ಲಿ ಬ್ಯಾಗ್‌ ಐಷಾರಾಮದ ಸಂಕೇತವು ಹೌದು. ಅಬ್ಬರದ ವಿನ್ಯಾಸದಿಂದ ಕೂಡಿರುವ ಈ ಪುಟ್ಟ ಬ್ಯಾಗ್ ಧರಿಸಿದವರಿಗೂ ಐಷಾರಾಮಿ ನೋಟ ಸಿಗುವಂತೆ ಮಾಡುತ್ತದೆ. ಇದರಲ್ಲಿ ಸಂಪೂರ್ಣ ಜರಿ ವಿನ್ಯಾಸ, ಎಂಬ್ರಾಯಿಡರಿ, ಮುತ್ತಿನ ವಿನ್ಯಾಸ, ಗ್ಲಾಸ್‌ಗಳ ಜೋಡಣೆ, ಹೂವಿನ ಚಿತ್ತಾರ, ಮಣಿಗಳ ಜೋಡಣೆ ಹೀಗೆ ಹಲವು ರೀತಿಯ ಐಷಾರಾಮಿ ವಿನ್ಯಾಸಗಳಿರುತ್ತವೆ. ಹಿಡಿಕೆಗೂ ಮಣಿಗಳನ್ನು ಜೋಡಿಸುವುದು ಇತ್ತೀಚಿನ ಟ್ರೆಂಡ್‌.

ಉಡುಗೊರೆಗಾಗಿ

ಮದುವೆ, ಗೃಹಪ್ರವೇಶದಂತಹ ಶುಭಸಮಾರಂಭಗಳಲ್ಲಿ ಅತಿಥಿಗಳಿಗೆ ಉಡುಗೊರೆ ರೂಪದಲ್ಲಿ ಪೋಟ್ಲಿ ಬ್ಯಾಗ್ ಆಯ್ಕೆ ಮಾಡಿಕೊಳ್ಳಬಹುದು. ಇದು ಎಲ್ಲಾ ವಯೋಮಾನದವರಿಗೂ ಹೊಂದುವ ಕಾರಣ ಹೆಣ್ಣುಮಕ್ಕಳು ಬಹಳ ಇಷ್ಟಪಟ್ಟು ಧರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.