ADVERTISEMENT

Pv Web Exclusive| ಹವ್ಯಾಸದ ಕನಸು ಉದ್ದಿಮೆಯಾದಾಗ

ರೇಷ್ಮಾ
Published 26 ಸೆಪ್ಟೆಂಬರ್ 2020, 9:42 IST
Last Updated 26 ಸೆಪ್ಟೆಂಬರ್ 2020, 9:42 IST
ಸಂಧ್ಯಾ ಪಾರ್ಥಸಾರಥಿ
ಸಂಧ್ಯಾ ಪಾರ್ಥಸಾರಥಿ   
""
""

ಸೀಮಾ ಅಂತರರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿ. ಕೈ ತುಂಬಾ ಸಂಬಳ ತರುವ ಕೆಲಸದಲ್ಲಿ ಒತ್ತಡವೂ ಸಂಬಳದಷ್ಟೇ ಹೆಚ್ಚಿತ್ತು. ಬಾಲ್ಯದಿಂದಲೂ ಹವ್ಯಾಸವಾಗಿ ಜೊತೆಯಾದ ನೃತ್ಯ ಆಕೆಯ ಒತ್ತಡ ನಿವಾರಣೆಗೆ ದಾರಿಯಾಗಿತ್ತು. ಆದರೆ ಈ ನಡುವೆ ಒಂಬತ್ತಕ್ಕೆ ಆರಂಭವಾಗಿ ಆರು ಗಂಟೆಗೆ ಮುಗಿಯುವ ಕೆಲಸ ಆಕೆಯ ಮನಸ್ಸಿಗೆ ಹಿಡಿಸುತ್ತಿರಲಿಲ್ಲ. ಜೊತೆಗೆ ಇನ್ನೊಬ್ಬರ ಕೈ ಕೆಳಗೆ ದುಡಿಯುವ ಬದಲು ತಾನೇ ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಕನಸು ಚಿಗುರಿತ್ತು. ಆ ಕಾರಣಕ್ಕೆ ಕೆಲಸಕ್ಕೆ ‘ಗುಡ್‌ ಬೈ’ ಹೇಳಿ ತನ್ನದೇ ಸ್ವಂತ ನೃತ್ಯ ತರಗತಿ ಆರಂಭಿಸಿದ್ದಳು. ಹೀಗೆ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಂಡು ಖುಷಿಯಿಂದ ಬದುಕುತ್ತಿರುವ ಸೀಮಾಳಂತಹ ಅದೆಷ್ಟೋ ಮಂದಿ ನಮ್ಮ ನಡುವಿದ್ದಾರೆ.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಹವ್ಯಾಸವಿರುತ್ತದೆ. ಆದರೆ ಆ ಹವ್ಯಾಸಕ್ಕೆ ನೀರೆರೆದು ಪೋಷಿಸುವವರು ಕಡಿಮೆ. ಆದರೆ ಸೀಮಾಳಂತೆ ಹವ್ಯಾಸವನ್ನೇ ಭವಿಷ್ಯದ ದಾರಿಯನ್ನಾಗಿಸಿಕೊಂಡು ಯಶಸ್ಸು ಕಂಡುಕೊಂಡ ಮಹಿಳೆಯರ ಸಂಖ್ಯೆಯೇನೂ ಕಡಿಮೆ ಇಲ್ಲ.

ಹವ್ಯಾಸ ಉದ್ಯಮವಾಗಿ ಅಥವಾ ವೃತ್ತಿಯಾಗಿ ಬದಲಾಗಲು ಇಂತಹದ್ದೇ ಆಗಿರಬೇಕು ಎಂದೇನಿಲ್ಲ. ಒಬ್ಬರಿಗೆ ಬರೆಯುವುದೇ ಹವ್ಯಾಸವಾದರೆ, ಇನ್ನೊಬ್ಬರಿಗೆ 3ಡಿ ಪೇಂಟಿಂಗ್ ಮಾಡುವುದು ಹವ್ಯಾಸ, ಕೆಲವರಿಗೆ ಕೋಡಿಂಗ್ ಬರೆಯುವುದು, ಬೇರೆ ಬೇರೆ ಪ್ರಯೋಗಗಳನ್ನು ಮಾಡುವ ಮೂಲಕ ಪ್ರಾಜೆಕ್ಟ್ ತಯಾರಿಸುವುದೇ ಹವ್ಯಾಸ. ಹೀಗೆ ಹವ್ಯಾಸ ಯಾವುದೇ ಇರಲಿ ನಿರಂತರ ಅಭ್ಯಾಸ, ಪರಿಶ್ರಮ, ದೃಢನಿರ್ಧಾರ ಹಾಗೂ ಅರ್ಪಣಾ ಮನೋಭಾವ ತುಂಬಾ ಮುಖ್ಯ. ಜೊತೆಗೆ ನಮ್ಮ ಹವ್ಯಾಸದ ಮೇಲೆ ಒಲವು ಇರಬೇಕು.

ADVERTISEMENT

ಸಂಬಳಕ್ಕಿಂತ ಮಾನಸಿಕ ತೃಪ್ತಿಯೇ ಮುಖ್ಯ ಎಂದು ಭಾವಿಸುವ ಅನೇಕರು ತಮ್ಮ ಹೃದಯಕ್ಕೆ ಆಪ್ತವಾದ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳುತ್ತಾರೆ.ಹಲವರಿಗೆ ತಮ್ಮಲ್ಲಿರುವ ಅಪರೂಪದ ಹವ್ಯಾಸದ ಬಗ್ಗೆ ತಿಳಿದಿದ್ದರೂ ಅದನ್ನು ಪ್ರಾಪಂಚಿಕವಾಗಿ ತೆರೆದುಕೊಳ್ಳುವತ್ತ ಮನಸ್ಸು ಮಾಡಿರುವುದಿಲ್ಲ. ಇನ್ನೂ ಕೆಲವರು ಹವ್ಯಾಸಕ್ಕೆ ವೃತ್ತಿಯ ರೂಪ ಕೊಟ್ಟು ಬದುಕು ಕಟ್ಟಿಕೊಳ್ಳುತ್ತಾರೆ. ಹೀಗೆ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಂಡ ಕೆಲವರ ಪರಿಚಯ ಇಲ್ಲಿದೆ.

ಅರ್ಚನಾ ಹೆಬ್ಬಾರ್

ಅರ್ಚನಾ ಹೆಬ್ಬಾರ್: ಹೆಬ್ಬಾರ್ ಕಿಚನ್‌

ಉಡುಪಿ ಮೂಲದ ಅರ್ಚನಾ ಹೆಬ್ಬಾರ್ ಎಂ.ಟೆಕ್ ಪದವಿಧರೆ. ಬಾಲ್ಯದಿಂದಲೂ ಅವರಿಗೆ ಅಡುಗೆ ಮೇಲೆ ಆಸಕ್ತಿಯಿತ್ತು. ಆದರೆ ಮದುವೆಯಾದ ಮೇಲೆ ಆ ಆಸಕ್ತಿಯ ಸ್ವರೂಪ ಬದಲಾಗಿತ್ತು. ಮದುವೆಯಾಗಿ ದೂರದ ಆಸ್ಟ್ರೇಲಿಯದಲ್ಲಿ ನೆಲೆಸಿದಾಗ ದಕ್ಷಿಣ ಭಾರತದ ಹೊಸ ಹೊಸ ಅಡುಗೆಗಳ ಪ್ರಯೋಗ ಆರಂಭಿಸಿದರು. ಹೀಗೆ ‘ಹೆಬ್ಬಾರ್ ಕಿಚನ್’ ಎಂಬ ಹೆಸರಿನಲ್ಲಿ ಯುಟ್ಯೂಬ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಹಲವೆಡೆ ಖಾತೆ ಹೊಂದಿರುವ ಇವರು ಅಡುಗೆಯ ಹವ್ಯಾಸವನ್ನೇ ಉದ್ದಿಮೆಯನ್ನಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಹೆಬ್ಬಾರ್ ಕೈ ರುಚಿ’ ಎಂಬ ಹೊಸ ಪೇಜ್ ಒಂದನ್ನು ತೆರೆದಿದ್ದಾರೆ. ಇದು ಅವರಿಗೆ ಗಳಿಕೆಯ ಮಾರ್ಗವೂ ಹೌದು. ಇವರು ಈವರೆಗೆ 1600ಕ್ಕೂ ಅಧಿಕ ರೆಸಿಪಿಗಳನ್ನು ತಯಾರಿಸಿದ್ದಾರೆ.

ಸಂಧ್ಯಾ ಪಾರ್ಥಸಾರಥಿ

ಸಂಧ್ಯಾ ಪಾರ್ಥಸಾರಥಿ: ಕೇಕ್ ಮೈ ಹಾರ್ಟ್

ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸಂಧ್ಯಾ ಅವರಿಗೆ ಕೇಕ್ ತಯಾರಿಯ ಮೇಲೆ ಆಸಕ್ತಿ ಮೂಡಿತು. ಬಿಡುವಿನ ವೇಳೆಯಲ್ಲಿ ಕಣ್ಮನ ಸೆಳೆಯುವ ಕೇಕ್‌ಗಳನ್ನು ತಯಾರಿಸುತ್ತಿದ್ದರು. ಈ ಕೇಕ್‌ ತಯಾರಿ ಹವ್ಯಾಸವೇ ಇವರನ್ನು ಉದ್ಯಮದತ್ತ ಸೆಳೆಯುವಂತೆ ಮಾಡಿತ್ತು. ಬೆಂಗಳೂರಿನ ಇಂದಿರಾನಗರದಲ್ಲಿ ‘ಕೇಕ್‌ ಮೈ ಹಾರ್ಟ್’ ಎಂಬ ಬೇಕರಿ ತೆರೆಯುವ ಮೂಲಕ ಹವ್ಯಾಸವನ್ನು ಉದ್ದಿಮೆಯನ್ನಾಗಿಸಿಕೊಂಡರು.ಕಂಪ್ಯೂಟರ್‌ನಲ್ಲಿ ಕೋಡಿಂಗ್ ಬರೆಯುವುದಕ್ಕಿಂತ ಹೆಚ್ಚಿನ ಸಮಯವನ್ನು ಅಡುಗೆಮನೆಯಲ್ಲಿ ಕಳೆಯುತ್ತಿದ್ದರು ಸಂಧ್ಯಾ. ಆ ಕಾರಣಕ್ಕೆ ಲಕ್ಷಕ್ಕೂ ಹೆಚ್ಚು ಸಂಬಳವಿದ್ದ ಸಾಫ್ಟ್‌ವೇರ್ ಕೆಲಸ ಬಿಟ್ಟು ಈ ಉದ್ಯಮವನ್ನು ಆರಂಭಿಸಿದ್ದಾರೆ. ಕೇಕ್‌ ಮೈ ಹಾರ್ಟ್‌ಗೆ ಈಗ 6ರ ಹರೆಯ. ‘ಹವ್ಯಾಸವನ್ನು ಉದ್ಯಮವನ್ನಾಗಿಸುವುದು ಸುಲಭವಲ್ಲ. ಆದರೆ ನಾನು ಇದರಲ್ಲಿ ಯಶಸ್ಸು ಗಳಿಸಿದ್ದೇನೆ. ಇದರಿಂದ ನನ್ನ ಬಗ್ಗೆ ಹೆಮ್ಮೆ ಮೂಡುತ್ತದೆ’ ಎನ್ನುವುದು ಸಂಧ್ಯಾ ಅವರ ಅಭಿಮಾನದ ಮಾತು.

ಲಕ್ಷ್ಮಿ ಶೆಟ್ಟಿ

ಗ್ಲಾಮ್‌ಡಸ್ಟ್ ಮೇಕ್‌ಓವರ್‌ಸ್ಟುಡಿಯೊ: ಲಕ್ಷ್ಮಿ ಶೆಟ್ಟಿ

ಆಕೆಗೆ ಬಾಲ್ಯದಿಂದಲೂ ಮೇಕಪ್ ಮಾಡಿಕೊಳ್ಳುವುದೆಂದರೆ ಅಚ್ಚುಮೆಚ್ಚು. ಲಿಪ್‌ಸ್ಟಿಕ್‌, ನೈಲ್‌ಪಾಲಿಶ್‌ಗಳನ್ನು ನೋಡಿದರೆ ಅದೇನೋ‍ಪ್ರೀತಿ. ಆ ಪ್ರೀತಿ ಮುಂದೆ ಹವ್ಯಾಸವಾಗಿ ಮುಂದುವರಿಯಿತು. ಮನೆಯವರು, ಸ್ನೇಹಿತರಿಗೆ ಮೇಕಪ್ ಮಾಡುತ್ತಾ ಹವ್ಯಾಸ ಮುಂದುವರಿದರು. ಹೀಗೆ ಸಾಗುವ ಪಯಣದಲ್ಲಿ ನಟಿಯೂ ಆದರು. ಹಿರಿತೆರೆ, ಕಿರುತೆರೆಯಲ್ಲಿ ನಟಿಸುವಾಗ ಬೇರೆಯವರಿಂದ ಮೇಕಪ್ ಮಾಡಿಸಿಕೊಳ್ಳುವುದಕ್ಕಿಂತ ತಾನೇ ಬೇರೆಯವರಿಗೆ ಮೇಕಪ್ ಮಾಡಿದರೆ ಹೇಗೆ ಎನ್ನಿಸುತ್ತಿತ್ತು.. ಎಂದು ಆರಂಭವಾದ ಯೋಚನೆಗೆ ತಳಹದಿಯಾಗಿದ್ದು ಅವರ ಹವ್ಯಾಸ.ಕಳೆದ ಮೂರೂವರೆ ವರ್ಷದಿಂದ ಮೇಕಪ್ ಕಲಾವಿದೆಯಾಗಿರುವ ಇವರು ಸುಮಾರು 70 ಮಂದಿಗೆ ತರಬೇತಿ ನೀಡಿದ್ದಾರೆ. ಅಲ್ಲದೇ ಇವರ ಬಳಿ ಸುಮಾರು 7ರಿಂದ 8 ಮಂದಿ ಬ್ಯೂಟಿಶಿಯನ್‌ಗಳಿದ್ದಾರೆ. ಅನೇಕ ಸೆಲೆಬ್ರಿಟಿಗಳೂ ಇವರ ಮೇಕಪ್ ಕೈ ಚಳಕಕ್ಕೆ ಮನಸೋತಿದ್ದಾರೆ.

ಕೆಲಸ ಬಿಡುವ ಮುನ್ನ..

ಹವ್ಯಾಸಕ್ಕೆ ನಿಮ್ಮನ್ನು ತೆರೆದುಕೊಂಡು ಕೆಲಸ ಬಿಡುವ ಮುನ್ನ ದೀರ್ಘವಾಗಿ ಯೋಚಿಸಿ. ಭವಿಷ್ಯದ ಜೀವನದ ಕುರಿತು ಚಿಂತನೆ ನಡೆಸಿ.

* ಉದ್ದಿಮೆ ಆರಂಭಿಸುವ ಮೊದಲೇ ಚೆನ್ನಾಗಿ ತಯಾರಿ ನಡೆಸಿ.

* ಮಾರುಕಟ್ಟೆ ಸಂಶೋಧನೆ ನಡೆಸಿ.

* ನಿಮ್ಮ ಸಂಪರ್ಕವನ್ನು ವೃದ್ಧಿಸಿಕೊಳ್ಳಿ.

* ನಿಮ್ಮ ಗ್ರಾಹಕರು ಅಥವಾ ಕೊಳ್ಳುವ ವರ್ಗವನ್ನು ಗಮನದಲ್ಲಿಟ್ಟುಕೊಂಡು, ಅವರಿಂದ ನಿಮ್ಮ ಉದ್ಯಮ ಯಶಸ್ಸು ಕಾಣಬಹುದೇ ಎಂದು ಮಾರುಕಟ್ಟೆ ಸಮೀಕ್ಷೆ ನಡೆಸಿ.

*ಮಾರುಕಟ್ಟೆ ಸಂಶೋಧನೆ ಮುಗಿಸಿದ ಮೇಲೆ ನಿಮ್ಮ ಮೂಲ ಯೋಜನೆಗಳನ್ನು ಬರೆದಿಟ್ಟುಕೊಳ್ಳಿ.

* ಅಂತರ್ಜಾಲದಲ್ಲಿ ನಿಮ್ಮ ಉಪಸ್ಥಿತಿಯನ್ನು ತಿಳಿಸಿ.

* ಎಲ್ಲವೂ ಕಾನೂನಾತ್ಮಕವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.