ADVERTISEMENT

ಸ–ಮುದ್ರ ಯುವ ಮನಸ್ಸುಗಳಿಗೆ ಚೈತನ್ಯದ ಮುದ್ರೆ

ರೇಷ್ಮಾ
Published 16 ಜುಲೈ 2021, 19:30 IST
Last Updated 16 ಜುಲೈ 2021, 19:30 IST
ತಮ್ಮ ತಂಡದ ಸದಸ್ಯೆಯೊಂದಿಗೆ ಭಾರತಿ
ತಮ್ಮ ತಂಡದ ಸದಸ್ಯೆಯೊಂದಿಗೆ ಭಾರತಿ   

ಇತ್ತೀಚೆಗೆ ಯುವಜನರನ್ನು ಖಿನ್ನತೆ, ಆತಂಕ, ಒತ್ತಡದಂತಹ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಜೊತೆಗೆ ಅವರಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದು ಕಳವಳಕಾರಿ ವಿಷಯವೂ ಹೌದು. ಇಂತಹ ಸಂದರ್ಭದಲ್ಲಿ ಯುವ ಮನಸ್ಸುಗಳ ಮಾನಸಿಕ ತಲ್ಲಣ ಹಾಗೂ ಗೊಂದಲಗಳನ್ನು ಪರಿಹರಿಸಿ ಆತ್ಮಹತ್ಯೆಯ ಯೋಚನೆಯೂ ಬಾರದಂತೆ ಆಪ್ತ ಸಮಾಲೋಚನೆ ನೀಡುವ ಮೂಲಕ ಜೀವನ ಪ್ರೀತಿ ಹುಟ್ಟಿಸುವ ಕೆಲಸ ಮಾಡುತ್ತಿದೆ ‘ಸ–ಮುದ್ರ ಫೌಂಡೇಶನ್‌’.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ–ಮುದ್ರ ಫೌಂಡೇಶನ್‌ ಸಂಸ್ಥೆಯ ರೂವಾರಿ ಭಾರತಿ ಸಿಂಗ್‌. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ಇವರು ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಮುಗಿಸಿದ್ದಾರೆ. ನಿಮ್ಹಾನ್ಸ್‌ನಲ್ಲಿ ಒಂದಿಷ್ಟು ದಿನಗಳ ಕಾಲ ಆಪ್ತಸಮಾಲೋಚಕಿಯಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ.

‘ಸ–ಮುದ್ರ’ ಹುಟ್ಟಿನ ಹಿಂದೆ
ಇಗ್‌ಫೈ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ವೃತ್ತಿ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದಾಗ ಭಾರತಿ ಅವರ ಜೀವನದಲ್ಲಿ ನಡೆದ ಘಟನೆಯೊಂದು ಅವರಿಗೆ ಈ ಸಂಸ್ಥೆ ಸ್ಥಾಪಿಸಲು ಕಾರಣವಾಗಿತ್ತು. ಅದರೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಖಿನ್ನತೆ, ಗೊಂದಲ, ನಿರಾಶೆ, ಆತ್ಮಹತ್ಯೆ ಮನೋಭಾವಗಳನ್ನು ನೋಡಿ ಉಚಿತವಾಗಿ ಯುವಕರಿಗೆ ಸಮಾಲೋಚನೆ ನೀಡಬೇಕು, ಆ ಮೂಲಕ ಅವರಲ್ಲಿ ಆತ್ಮಹತ್ಯೆ ಮನೋಭಾವ ನಿವಾರಿಸಿ ಮಾನಸಿಕ ಸ್ಥೈರ್ಯ ಹೆಚ್ಚುವಂತೆ ಮಾಡಬೇಕು ಎಂಬ ಉದ್ದೇಶ ಅವರ ಮನಸ್ಸಿನಲ್ಲಿ ಮೂಡಿತ್ತು.

ADVERTISEMENT

2007ರಿಂದ ಕಾರ್ಯನಿರ್ವಹಿಸುತ್ತಿರುವ ಸ–ಮುದ್ರ ಸಂಸ್ಥೆ ದೇಶದಾದ್ಯಂತ 1 ಲಕ್ಷದ 88 ಸಾವಿರಕ್ಕೂ ಅಧಿಕ ಮಂದಿಗೆ ಆಪ್ತಸಮಾಲೋಚನೆ ನೀಡಿದೆ. ಭಾರತಿ ಅವರನ್ನೂ ಸೇರಿ 4 ಮಂದಿ ಆಪ್ತಸಮಾಲೋಚಕರು ಸಂಸ್ಥೆಯಲ್ಲಿದ್ದಾರೆ. ಬದುಕಿನಲ್ಲಿ ಆತ್ಮಹತ್ಯೆಯೊಂದೇ ನಮಗಿನ್ನು ದಾರಿ ಎಂದುಕೊಂಡವರು ಕೂಡ ಆ ಯೋಚನೆಯನ್ನು ಬಿಟ್ಟು ಸುಂದರ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡುತ್ತಿದೆ ಈ ಸಂಸ್ಥೆ.

‘ತಮ್ಮ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳಿವೆ ಎಂದು ತಿಳಿದ ಪೋಷಕರು ಸಮಾಜಕ್ಕೆ ಹೆದರಿ ಆಪ್ತಸಮಾಲೋಚನೆ ಕೊಡಿಸುವುದಿಲ್ಲ. ಹಾಗೆಯೇ ದುಶ್ಚಟಗಳಿಗೆ ಬಲಿಯಾದ ಮಕ್ಕಳನ್ನು ಸರಿದಾರಿಗೆ ತರಲು ಒದ್ದಾಡುವ ಪೋಷಕರು ಕೂಡ ಆ‍ಪ್ತಸಮಾಲೋಚನೆಗೆ ಮುಂದೆ ಬರುವುದಿಲ್ಲ. ಹಾಗಾಗಿ ಮಕ್ಕಳು ಹಾಗೂ ಪೋಷಕರು ಇಬ್ಬರಿಗೂ ತಮ್ಮ ಮನದ ಮಾತುಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ನನ್ನ ಗುರುಗಳಾದ ರಾಧಕೃಷ್ಣ ಅವರ ನೆರವಿನೊಂದಿಗೆ ನಾನು ಸ–ಮುದ್ರವನ್ನು ಆರಂಭಿಸಿದೆ’ ಎಂದು ತಮ್ಮ ಸಂಸ್ಥೆಯ ಹುಟ್ಟಿನ ಹಿಂದಿನ ಕತೆಯನ್ನು ಭಾರತಿ ವಿವರಿಸುತ್ತಾರೆ.

ಸಂಸ್ಥೆ ಆರಂಭಕ್ಕೂ ಮೊದಲು ಯುವಕರಲ್ಲಿ ಆತ್ಮಹತ್ಯೆ ಹಾಗೂ ಮಾನಸಿಕ ತೊಂದರೆಗಳು ಈ ವಿಷಯವಾಗಿ ಪ್ರಾಜೆಕ್ಟ್ ಮಾಡಿದ್ದರು ಭಾರತಿ. ಇದರೊಂದಿಗೆ ಸಂಶೋಧನೆಗಳ ಅನುಭವಗಳನ್ನು ಪಡೆವ ಮೂಲಕ ಸಂಸ್ಥೆಯನ್ನು ಆರಂಭಿಸಿದರು.

ಸ–ಮುದ್ರದ ಆಪ್ತಸಮಾಲೋಚನಾ ವಿಭಾಗಗಗಳು

ಸಾಂತ್ವನ ಸಮಾಲೋಚನ: ಟೆಲಿಫೋನ್‌ ಮೂಲಕ ಹಾಗೂ ನೇರವಾಗಿ ನಡೆಸುವ ಸಂದರ್ಶನ. ಇದರಲ್ಲಿ ಪೋಷಕರು ಹಾಗೂ ಮಕ್ಕಳು ಇಬ್ಬರೂ ಭಾಗವಹಿಸಬೇಕಾಗುತ್ತದೆ.

ಮೌಲ್ಯಕೌಶಲ: ವೃತ್ತಿ ಹಾಗೂ ಜೀವನಕ್ಕೆ ಸಂಬಂಧಿಸಿದ ಕೌನ್ಸೆಲಿಂಗ್‌ ‌

ಕಲಾ ಹೃದಯ: ಈ ವಿಭಾಗದಲ್ಲಿ ಕಲೆ ಮತ್ತು ಹೃದಯವನ್ನು ಒಗ್ಗೂಡಿಸುವ ಮೂಲಕ ಸಮಾಲೋಚನೆ ನೀಡಲಾಗುತ್ತದೆ. ನಾಟಕ, ಸಂಗೀತ ಮುಂತಾದ ಕಲಾಪ್ರಕಾರಗಳ ಕಡೆಗೆ ಒಲವು ಮೂಡಿಸುವ ಮೂಲಕ ಮಾನಸಿಕ ಸ್ಥಿಮಿತ ಸಾಧಿಸುವ ಪ್ರಯತ್ನವನ್ನು ಈ ವಿಧಾನದಲ್ಲಿ ಮಾಡಲಾಗುತ್ತದೆ. ಈ ಸಂಸ್ಥೆಯು ವಿವಿಧ ರಂಗತಂಡಗಳ ಜೊತೆ ಸೇರಿ ಡಿಪ್ರೆಶನಾಸುರ ಹಾಗೂ ಆರದಿರಲಿ ಬೆಳಕು ಎಂಬ 2 ನಾಟಕಗಳನ್ನು ಮಾಡಿದೆ.

–ಭಾರತಿ ಸಿಂಗ್


ಯುವಜನರಿಗೆ ಕಿವಿಮಾತು
ಕೆಟ್ಟ ಹಟ, ಕೆಟ್ಟ ಚಟಗಳನ್ನು ತಜ್ಯಿಸಿ ಛಲ, ಹವ್ಯಾಸ ರೂಢಿಸಿಕೊಳ್ಳಿ. ನಿಮ್ಮ ಬಗ್ಗೆ ನೀವು ಅರಿವು ಮೂಡಿಸಿಕೊಳ್ಳಿ. ಸ್ವಯಂ–ಗುರುತಿಸಿಕೊಳ್ಳುವಿಕೆ ತುಂಬಾ ಮುಖ್ಯ. ಯಾವುದೇ ತೊಂದರೆ ಆದರೆ ಒಂದು ಫೋನ್ ಕರೆಯ ಮೂಲಕ ತೊಂದರೆಯನ್ನು ಹಂಚಿಕೊಳ್ಳಿ. ಜೀವನವನ್ನು ಪ್ರೀತಿಸಿ. ಜೀವನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜೀವನವನ್ನು ನಾವು ಪ್ರೀತಿಸಿದರೆ ಎಲ್ಲವೂ ನಮ್ಮನ್ನು ಪ್ರೀತಿಸುತ್ತದೆ. ಆತ್ಮಸ್ಥೈರ್ಯ ಹುಟ್ಟುವ ಮೊದಲು ಸ್ವ ಪ್ರೀತಿ ಬಹಳ ಮುಖ್ಯ.
–ಭಾರತಿ ಸಿಂಗ್

**
ಭವಿಷ್ಯದ ಕನಸು
ಸಾವಿರಾರು ಯುವಮನಸ್ಸುಗಳಲ್ಲಿ ಜೀವನ ಪ್ರೀತಿಯನ್ನು ಹುಟ್ಟು ಹಾಕಿ, ಬದುಕಿನ ಬೆಲೆಯನ್ನು ಕಲಿಸಿದ ಭಾರತಿ ಅವರಿಗೆ ಮುಂದೆ ತಮ್ಮ ಸಂಸ್ಥೆಯನ್ನು ಒಂದು ಉತ್ತಮ ಯುವ ತಂಡದ ಕೈಗೆ ನೀಡಬೇಕು ಎನ್ನುವ ಹಂಬಲವಿದೆ. ಇದರೊಂದಿಗೆ ಮಾದಕ ವ್ಯಸನಿಗಳಾಗಿರುವ ಹಾಗೂ ಮಾನಸಿಕ ಸಮಸ್ಯೆಗಳಿರುವ ಹೆಣ್ಣುಮಕ್ಕಳಿಗಾಗಿ ‘ಹಾರ್ಮೊನಿ ಹೋಮ್‌’ ಸ್ಥಾಪಿಸುವ ಕನಸೂ ಇದೆ.
ಸ–ಮುದ್ರ ಯುವ ಸಹಾಯವಾಣಿ: 98803 96331, ಮಹಿಳಾ ಸಹಾಯವಾಣಿ: 94804 88430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.