ADVERTISEMENT

Saree: ನೀರೆಯರ ಮನ ಅರಳಿಸುವ ಸೀರೆಗಳು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 8:47 IST
Last Updated 11 ಅಕ್ಟೋಬರ್ 2024, 8:47 IST
   

ಹಬ್ಬ ಹರಿದಿನಗಳು ಬಂತೆಂದರೆ ಮನೆಯ ಹೆಂಗಳೆಯರಿಗೆ ಬಣ್ಣ ಬಣ್ಣದ ಸೀರೆ ಖರೀದಿಯ ಸಂಭ್ರಮ. ಹಬ್ಬಗಳಲ್ಲಿ ಸೀರೆ ಉಟ್ಟು ಪೂಜೆಯಲ್ಲಿ ತೊಡಗಿದಾಗ ಮನಕ್ಕೆ ಏನೋ ಆನಂದ.ಅದೆಷ್ಟೇ ಆಧುನಿಕ ಉಡುಗೆಗಳು ಬಂದರೂ ಸೀರೆಯತ್ತ ನೀರೆಯರ ಒಲವು ಸದಾ ಇದ್ದೇ ಇರುತ್ತದೆ.

ಸ್ಫೂರ್ತಿ ನೀಡುವ ಟೀಚರ್ ಸೀರೆ

ಪುಟಾಣಿ ಮಕ್ಕಳು ತಾವು ಪ್ರತಿದಿನ ಸಮವಸ್ತ್ರ ತೊಟ್ಟರೂ,ತಮ್ಮ ಟೀಚರ್ ಉಡುವ ಬಣ್ಣ ಬಣ್ಣದ ಸೀರೆ ನೋಡಿ ಖುಷಿ ಪಡುತ್ತಾರೆ.ಟೀಚರ್ ಹೊಸ ಸೀರೆ ಉಟ್ಟಾಗೆಲ್ಲ “ಸೀರೆ ಚಂದ ಇದೆ” ಎಂಬ ಮೆಚ್ಚುಗೆ ಕೊಡುವ ಮುದ್ದು ಹೆಣ್ಣು ಮಕ್ಕಳ ಕಂಗಳಲ್ಲಿ ತಾವೂ ಸೀರೆಯುಡುವ ಕನಸು ಹಾದು ಹೋಗುತ್ತದೆ. ಮನೆಯಲ್ಲಿ ಟೀಚರ್ ಆಟ,ಗೊಂಬೆ ಆಟ...ಹೀಗೆ ಹಲವು ಆಟಗಳನ್ನು ತಾವೇ ಸೃಜಿಸಿ ಆಡುವಾಗ ತಾವೇ ಕನ್ನಡಿ ಮುಂದೆ ನಿಂತು ಅಮ್ಮನ ಸೀರೆಯುಡುವ ಹೆಣ್ಮಕ್ಕಳ ಬಾಲ್ಯ ಮರೆಯೋದುಂಟೇ? ಅದೆಷ್ಟೋ ಹೆಣ್ಣು ಮಕ್ಕಳು ತಾವೂ ಮುಂದೆ ಟೀಚರ್ ಆಗುವ,ಒಳ್ಳೆಯ ಫ್ಯಾಷನ್ ಡಿಸೈನರ್ ಆಗುವ ಗುರಿ ಇಟ್ಟುಕೊಂಡು ಸಾಗಲು ಕೂಡಾ ತಮ್ಮ ಟೀಚರ್ ಉಡುವ ಬಣ್ಣ ಬಣ್ಣದ ಸೀರೆಯೇ ಒಂದು ರೀತಿಯಲ್ಲಿ ಸ್ಫೂರ್ತಿ ಎನ್ನಬಹುದು.

ಕಾಲೇಜಿನ ಸಾರೀ ಡೇ

ಹದಿಹರಯದ ಮನಸ್ಸು ತರಹೇವಾರಿ ಆಧುನಿಕ ಉಡುಗೆಗಳಲ್ಲೇ ಮುಳುಗಿರುತ್ತದೆ.ಪ್ಯಾಂಟ್- ಟೀ ಶರ್ಟ್, ಕುರ್ತಾ,ಲೆಹಂಗ,ಫ್ರಾಕ್ ...ಹೀಗೆ ದಿನವೂ ಬಗೆಬಗೆಯ ಡ್ರೆಸ್ ತೊಟ್ಟರೂ ಸೀರೆ ಉಡಲು ಮನಸ್ಸು ತುಡಿಯುತ್ತಿರುತ್ತದೆ.ವರ್ಷದಲ್ಲಿ ಒಂದು ದಿನ ಸಾರೀ ಡೇ ಮಾಡುವುದಕ್ಕಾಗಿ ತಿಂಗಳ ಹಿಂದೆಯೇ ಸೀರೆ ಸೆಲೆಕ್ಷನ್ ನಡೆದಿರುತ್ತದೆ.ಈ ಸೀರೆಯ ಸೆಳೆತವೇ ಹಾಗೆ.ಚಂದದ ಸೀರೆಗೆ ವಿಶೇಷ ಡಿಸೈನ್ ನ ರವಿಕೆ ಹೊಲಿಸೋದೆ ಒಂದು ಟ್ರೆಂಡ್. ಕಾಲೇಜು ಲೈಫ್ ಗೆ ಮೆಮೊರೇಬಲ್ ಡೇ ಆಗಿ ನಿಲ್ಲುವ ಡೇ ಗಳಲ್ಲಿ ಸಾರೀ ಡೇ ಕೂಡ ಒಂದು.

ADVERTISEMENT

ಫೆಸ್ಟೀವ್ ವೈಬ್ಸ್

ಯುಗಾದಿ,ಗೌರಿ ಗಣೇಶ,ದಸರ ಯಾವುದೇ ಹಬ್ಬ ಬರಲಿ ಆ ಹಬ್ಬಕ್ಕೊಂದು ಕಳೆ ಕಟ್ಟುವುದೇ ಮನೆಯ ಹೆಂಗಳೆಯರ ಸಂಭ್ರಮದಿಂದ. ಹಬ್ಬದ ಪೂರ್ವದಲ್ಲಿ ಶಾಪಿಂಗ್ ಪಟ್ಟಿಯಲ್ಲಿ ಅದೆಷ್ಟು ಬಟ್ಟೆಗಳು ಇದ್ದರೂ ಮೊದಲ ಸ್ಥಾನ ಪಡೆಯುವುದು ಸೀರೆ ಎಂಬುದರಲ್ಲಿ ಎರಡು ಮಾತಿಲ್ಲ.ಸಂಕ್ರಾಂತಿಯಲ್ಲಿ ಎಳ್ಳು ಬೀರುವ ಸಂಭ್ರಮದಲ್ಲಿ ಬಾಲಕಿಯರು ಲಂಗ ದಾವಣಿ (ಹಾಫ್ ಸಾರಿ ) ಹಾಕಿದಾಗಲೂ ಸೀರೆ ಉಡುವ ಪುಳಕ ಮನದಲ್ಲೇ ಹಾದು ಹೋಗುತ್ತದೆ.ಪ್ರತಿದಿನ ಆಫೀಸ್ ಗೆ ಕಂಫರ್ಟ್ ಎನಿಸುವ ಯಾವುದೇ ಬಟ್ಟೆ ಧರಿಸಿದರೂ,ಹಬ್ಬದ ದಿನಗಳಲ್ಲಿ ಹೆಣ್ಣು ಮಕ್ಕಳ ಮೊದಲ ಆಯ್ಕೆ ಸೀರೆಯೇ ಆಗಿದೆ.

ಮದುವೆಗೆ ಮೊದಲ ಆಯ್ಕೆ

ಮದುಮಗಳಂತೂ ಸಾವಿರಾರು ರೂಪಾಯಿ ಬೆಲೆಬಾಳುವ,ಚಂದದ ಸೀರೆ ಉಡಬೇಕು ಎಂಬುದು ಎಲ್ಲಾ ಯುವತಿಯರ ಕನಸು.ಸೀರೆ,ಸೊಂಟದ ಪಟ್ಟಿ,ತೋಳಿನ ಬಂಧಿ,ಅದಕ್ಕೊಪ್ಪುವ ಆಭರಣ...ಹೀಗೆ ಸೀರೆಯ ಮೆರುಗನ್ನು ಹೆಚ್ಚಿಸುವ ಅಲಂಕಾರಕ್ಕೆ ಸಾಟಿಯಿಲ್ಲ.ಮದುಮಗಳು ಮಾತ್ರವಲ್ಲದೇ ಮದುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡುವ ಬಂಧುಗಳು ಕೂಡ ತಿಂಗಳ ಹಿಂದೆಯೇ ಮದುವೆಗೆ ಉಡುವ ಸೀರೆಯನ್ನು ಜೋಡಿಸಿಕೊಳ್ಳುವ ಗುಂಗು ವಿಶೇಷವಾದದ್ದು.

ಕಣ್ಮನ ತಣಿಸುವ ಸೀರೆಗಳು

ಮೈಸೂರ ಸಿಲ್ಕ್ ಸೀರೆ , ಇಳಕಲ್ ಸೀರೆ, ಮೊಳಕಾಲ್ಮುರ್ ಸಿಲ್ಕ್ ಸೀರೆ,ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ ,ವೆಂಕಟಕಿರಿ ಸೀರೆ, ಗಡ್ವಾಲ್ ಸೀರೆ ,ಗುಂಟೂರ ಸೀರೆ ನಾರಾಯಣ ಪೇಠ್ ಸೀರೆ ,ಮಂಗಲಮುರಿ ಸೀರೆ ಧರ್ಮಾವರಂ ಸೀರೆ,ಹೀಗೆ ಆಯಾ ಪ್ರದೇಶದ ಮೂಲಕ ಗುರುತಿಸಿಕೊಂಡಿರುವ ಸೀರೆಗಳು ತಮ್ಮದೇ ಆದ ಗುಣಮಟ್ಟ,ತಯಾರಿ ವಿಧಾನಗಳಿಂದ ಸೀರೆ ಪ್ರಿಯರ ಮನ ಗೆದ್ದಿವೆ.ಸಾಂಪ್ರದಾಯಿಕ ನೇಯ್ಗೆ ಪದ್ಧತಿಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಪಾರಂಪರಿಕವಾಗಿ ಬಂದಿವೆ.

ಸೀರೆಯು ಯಾವುದೇ ಮಹಿಳೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಭಾರತದಲ್ಲಿ ಹಲವಾರು ರೀತಿಯ ಸೀರೆಗಳಿವೆ, ಮತ್ತು ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಹೊಂದಿದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯು ವಿವಿಧ ರೀತಿಯ ಸೀರೆಗಳನ್ನು ಹೊಂದಿರಬೇಕು ಮತ್ತು ಅವುಗಳನ್ನು ಆಗಾಗ್ಗೆ ಧರಿಸಬೇಕು. ಇದು ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿ ಮತ್ತು ಜೀವಂತವಾಗಿಡಲು ಸಹಾಯ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.