ADVERTISEMENT

ಭೂಮಿಕ | ಸಹಮತದ ಸಮ್ಮಿಲನ: ಅಂಕೆ ಬೇಕೆ?

ಲೈಂಗಿಕ ಸಮ್ಮತಿಯ ಕನಿಷ್ಠ ಕಾನೂನುಬದ್ಧ ವಯೋಮಾನವನ್ನು 18ರಿಂದ 16ಕ್ಕೆ

ಸುಶೀಲಾ ಡೋಣೂರ
Published 18 ಆಗಸ್ಟ್ 2023, 23:36 IST
Last Updated 18 ಆಗಸ್ಟ್ 2023, 23:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

-ಉಂಡಾಡುವ ವಯಸ್ಸಿನ ಮಕ್ಕಳ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಮತ್ತೆ ಪುಕಾರುಗಳೆದ್ದಿವೆ. ಲೈಂಗಿಕ ಸಮ್ಮತಿಯ ವಯೋಮಾನವನ್ನು 16ಕ್ಕೆ ಇಳಿಸುವ ಬಗ್ಗೆ ವಿರುದ್ಧ ನಿಲುಗಳಿವೆ. ಲೈಂಗಿಕ ಶಿಕ್ಷಣವಿನ್ನೂ ಮೊದಲ ಮೆಟ್ಟಿಲಲ್ಲಿ ನಿಂತಿರುವ ಈ ಹೊತ್ತು ಮಕ್ಕಳ ಕೈಗೆ ಲೈಂಗಿಕ ಸ್ವಾತಂತ್ರ್ಯ ಕೊಡುವ ವಯೋಮಾನವನ್ನು ಇಳಿಸಿದರೆ ಪ್ರಸ್ತುತ ನಮ್ಮೆದುರು ನಿಂತಿರುವ ಈ ಸವಾಲನ್ನು ನೀಗಲಾದೀತೆ?...

ಗಂಡು–ಹೆಣ್ಣಿನ ಸಮ್ಮಿಲನಕ್ಕೆ ಅದರದೇ ಆದ ವ್ಯಾಖ್ಯಾನವಿದೆ. ಎರಡು ಮನಸುಗಳು, ಎರಡು ದೇಹಗಳು ಒಂದಾಗುವ ಈ ಕ್ರಿಯೆಗೆ ಸಮಾಜ, ಕಾನೂನು, ಕೌಟುಂಬಿಕ ವ್ಯವಸ್ಥೆಗಳು ಹಿಂದಿನಿಂದಲೂ ಹಲವು ತಡೆಗೋಡೆಗಳನ್ನು ನಿರ್ಮಿಸುತ್ತ ಬಂದಿವೆ. ಕಾರಣವಿಷ್ಟೆ, ಎರಡು ದೇಹಗಳು ಒಂದಾಗುವುದು  ಅಲ್ಲೇ ಆರಂಭವಾಗಿ, ಅಲ್ಲೇ ಮುಕ್ತಾಯಗೊಳ್ಳುವ ವ್ಯವಹಾರವಲ್ಲ. ಅಲ್ಲಿಂದ ಶುರುವಾಗಿ ಜೀವನದ ಎಲ್ಲಾ ಪದರುಗಳಿಗೂ ಚಾಚಿಕೊಳ್ಳುವ ಅನುಭೂತಿ.

ಅದರಲ್ಲೂ ಭಾರತದಂತಹ ಸಾಂಪ್ರದಾಯಿಕ ನೆಲದಲ್ಲಿ ಅದು ಭಾವನಾತ್ಮಕ, ಸಾಮಾಜಿಕ, ಕೌಟುಂಬಿಕ ಸಂಗತಿಗಳನ್ನೂ ಒಳಗೊಳ್ಳುವ ಸಂವೇದನೆ. ಆದ್ದರಿಂದ ಇದನ್ನು ಪ್ರತ್ಯೇಕ ತಕ್ಕಡಿಯಲ್ಲಿಟ್ಟು ನೋಡಬೇಕಾಗುತ್ತದೆ. ಅದರಲ್ಲೂ, ಹರೆಯದ ಮಕ್ಕಳ ವಿಚಾರಕ್ಕೆ ಬಂದಾಗ ಈ ತಕ್ಕಡಿ ಇನ್ನೂ ಹೆಚ್ಚಿನ ಜವಾಬ್ದಾರಿ ಹಾಗೂ ಹೊಣೆಗಾರಿಕೆಯಿಂದ ಕೂಡಿರಬೇಕಾಗುತ್ತದೆ. 

ADVERTISEMENT

ಲೈಂಗಿಕ ಸಮ್ಮತಿಯ ಕನಿಷ್ಠ ಕಾನೂನುಬದ್ಧ ವಯೋಮಾನವನ್ನು 18 ರಿಂದ 16ಕ್ಕೆ ಇಳಿಸುವ ಬಗ್ಗೆ ಮರುಚಿಂತನೆ ನಡೆಸಬೇಕೆಂದು ಬಾಂಬೆ ಹೈಕೋರ್ಟ್ ಹೇಳಿ‌ದ ಬಳಿಕ ಈ ವಿಚಾರವಾಗಿ ಸಾಕಷ್ಟು ಪರ–ವಿರೋಧ ಮಾತುಗಳೆದ್ದಿವೆ. ಇದು ಮಕ್ಕಳ ವಿಚಾರವಾದ್ದರಿಂದ ಈ ಚರ್ಚೆ ಸೂಕ್ಷ್ಮವೂ ಆಗಿದೆ. ಕಣ್ಣತುಂಬ ಕುತೂಹಲವನ್ನೇ ತುಂಬಿಸಿಟ್ಟುಕೊಂಡು ಪ್ರಪಂಚಕ್ಕೆ ತೆರೆದುಕೊಳ್ಳುತ್ತಿರುವ ಹದಿಹರೆಯದ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಆತಂಕಕ್ಕೀಡಾಗಿದ್ದಾರೆ. ಮಕ್ಕಳ ತಜ್ಞರು ಅವರ ಮನೋದೈಹಿಕ ಸ್ವಾಸ್ಥ್ಯದ ಬಗ್ಗೆ ಕಳವಳಗೊಂಡಿದ್ದಾರೆ.

ಇಲ್ಲಿ ಎರಡು ವಾದಗಳಿವೆ; ಭಾರತದಂತಹ ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಸಮ್ಮತಿಯ ವಯೋಮಾನವನ್ನು ಇಳಿಸುವುದು ಸಮಂಜಸವಲ್ಲ ಎನ್ನುವುದು ಒಂದು; ನಾವು ನಿಂತ ನೆಲವೇ ತನ್ನ ಹರವನ್ನು ವಿಸ್ತರಿಸಿಕೊಂಡಿರುವಾಗ, ನಮ್ಮ ಆಲೋಚನೆಗಳು, ವರ್ತನೆಗಳೂ, ನಿಲುವುಗಳು, ಅಭಿಪ್ರಾಯಗಳೂ ಪಲ್ಲಟಗೊಂಡಿರುವಾಗ ಈ ಬದಲಾವಣೆ ಅನಿವಾರ್ಯ ಎನ್ನುವುದು ಮತ್ತೊಂದು ವಾದ.  ಪೋಷಕರು ಹಾಗೂ ಕೆಲವು ಪ್ರಾಧ್ಯಾಪಕರು ಲೈಂಗಿಕ ಸಮ್ಮತಿಯ ವಯೋಮಾನವನ್ನು ಇಳಿಸುವುದು ಬೇಡ ಎಂದರೆ, ವಿದ್ಯಾರ್ಥಿಗಳು, ಕಾನೂನಾತ್ಮಕ ವಯೋಮಾನ ಮುಖ್ಯವಾಗುವುದಿಲ್ಲ, ಅದು ವಿವೇಚನೆಗೆ ಬಿಟ್ಟಿದ್ದು ಎನ್ನುತ್ತಾರೆ. ಮಕ್ಕಳ ಸ್ವಾಭಾವಿಕ ಬಯಕೆಗಳನ್ನು ಕಾನೂನಿನ ದಾರದಿಂದ ಕಟ್ಟಿಹಾಕುವುದು ತರವಲ್ಲ ಎನ್ನುವುದು ಪ್ರಗತಿಪರ ಚಿಂತಕರ, ಮಕ್ಕಳ ಹಕ್ಕುಗಳ ಹೋರಾಟಗಾರರ ಕಳಕಳಿ. ಇದೆಲ್ಲವನ್ನು ಅಳೆದು –ತೂಗಿ ನಿರ್ಧಾರ ಕೈಗೊಳ್ಳಬೇಕಾದ ಜರೂರು ನಮ್ಮ ಮುಂದಿದೆ.

ಹದಿಹರೆಯದವರ ಸ್ವಾಭಾವಿಕ ಕಾಮನೆಗಳು ಅವರನ್ನು ಅಪರಾಧವಲ್ಲದ ಅಪರಾಧಗಳಿಗೆ ಶಿಕ್ಷೆ ಅನುಭವಿಸುವಂತೆ ಮಾಡುತ್ತಿವೆ. ಇಬ್ಬರ ನಡುವೆ ಸಮ್ಮತಿಯಿಂದ ನಡೆಯುವ ಕ್ರಿಯೆಯಿಂದ ಸಂಗಾತಿ ಬಾಲಕ ಮಾತ್ರ ಶಿಕ್ಷೆಗೆ ಗುರಿಯಾಗುತ್ತಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಲೈಂಗಿಕ ಸಮ್ಮತಿಯ ವಯೋಮಾನವನ್ನು ಮರುಪರಿಶೀಲನೆ ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ವಿಭಾಗೀಯ ಪೀಠವು ಪ್ರತಿಪಾದಿಸಿದೆ. ನೈಜೀರಿಯಾದಂತಹ ದೇಶಗಳಲ್ಲಿ ಈ ವಯಸ್ಸು 11ಕ್ಕಿಂತ ಕಡಿಮೆಯಿದೆ. ಬಹ್ರೇನ್‌ನಂತಹ ದೇಶಗಳಲ್ಲಿ 21 ವರ್ಷಕ್ಕಿಂತ ಹೆಚ್ಚಿದೆ. ಅರಬ್ ದೇಶಗಳಲ್ಲಂತೂ ಮದುವೆಗೆ ಮುನ್ನ ಲೈಂಗಿಕ ಸಮ್ಮಿಲನ  ಅಪರಾಧ. ಆದರೆ, ಈ ಬಗ್ಗೆ ವಯೋಮಾನವನ್ನು ಮಾತ್ರ ಚರ್ಚಿಸಿದರಾಗದು, ನಾವು ನಿಂತ ನೆಲದ ಗುಣ, ನಂಬಿಕೆಗಳು, ಸಂಪ್ರದಾಯಗಳು, ಆಯಾ ದೇಶದ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ನಿಲುವುಗಳನ್ನೂ ಪರಿಗಣಿಸಬೇಕಾಗುತ್ತದೆ. ಭಾರತದಲ್ಲಿ, ಲೈಂಗಿಕ ಶಿಕ್ಷಣ ಮಕ್ಕಳ‌ ಮನಸುಗಳನ್ನು ತಲುಪುವ ಮೊದಲೇ ಲೈಂಗಿಕ ಸ್ವಾತಂತ್ರ್ಯದ ವಯೋಮಾನವನ್ನು ಇಳಿಸಬಹುದೇ ಎನ್ನುವುದು ವಿಸ್ತೃತ ಚರ್ಚೆಗೆ ಒಳಪಡಬೇಕಾದ ತುರ್ತು ಅಗತ್ಯವಿದೆ.  

ಅಕಾಲ ಪ್ರೌಢಿಮೆ

ಮಕ್ಕಳು ಬಹಳ ಬೇಗ ದೈಹಿಕ ಸಂಪರ್ಕಕ್ಕೆ ತೆರೆದುಕೊಳ್ಳುತ್ತಿದ್ದಾರೆ ಎನ್ನುವುದು ವಾಸ್ತವ. ಆದರೆ ಅವರಿಗೆ ಸುರಕ್ಷತೆಯ ಬಗ್ಗೆ ಅರಿವಿಲ್ಲ ಎನ್ನುವುದು ಕಳವಳ ತರುವ ವಿಚಾರ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಬಗ್ಗೆ ವಿಸ್ತೃತ ಕೆಲಸ ಮಾಡಿರುವ ಕವಿತಾ ರತ್ನ. ಇದಕ್ಕೆ ಪ್ರೌಢಾವಸ್ಥೆ ತಲುಪುವ ವಯೋಮಾನ ತಗ್ಗಿರುವುದೂ ಒಂದು ಕಾರಣ. ಅಷ್ಟೇ ಬೇಗ ಮಾನಸಿಕ–ದೈಹಿಕ ಬಯಕೆಗಳೂ ಒಡಮೂಡಲಾರಂಭಿಸುತ್ತವೆ. ಈ ಸಂದಿಗ್ಧತೆಯನ್ನು ನಿವಾರಿಸಿಕೊಳ್ಳುವ ತಿಳಿವಳಿಕೆ ಅವರಿಗಿಲ್ಲ. ಭಾವನೆಗಳನ್ನು, ಕಾಮನೆಗಳನ್ನು ಹೇಗೆ ನಿಗ್ರಹಿಸಬೇಕು, ಹೇಗೆ ನಿರ್ವಹಿಸಬೇಕು ಎಂದು ಚರ್ಚಿಸುವ ಅವಕಾಶ ಶಾಲಾ–ಕಾಲೇಜುಗಳಲ್ಲೂ ಇಲ್ಲ, ಮನೆಗಳಲ್ಲೂ ಇಲ್ಲ. ಇದರಿಂದ ತಮಗೆ ತಿಳಿದಂತೆ ತಮ್ಮ ಮನಸಿನ–ದೇಹದ ಬಯಕೆಗಳಿಗೆ ಪ್ರತಿಸ್ಪಂದಿಸುತ್ತಿದ್ದಾರೆ. ಹೀಗಾಗಿ, ಅಕಾಲಿಕ ಗರ್ಭಧಾರಣೆ, ಅಸುರಕ್ಷಿತ ಗರ್ಭಪಾತಗಳು, ಬಾಲ ತಾಯಂದಿರ ಸಂಖ್ಯೆ ಅಧಿಕವಾಗುತ್ತಿದೆ.

ಹೆಚ್ಚುತ್ತಿರುವ ಒತ್ತಡ

ಹದಿಹರೆಯದ ಮಕ್ಕಳ ಮೇಲೆ ಆಂತರಿಕ ಮತ್ತು ಬಾಹ್ಯ ಒತ್ತಡಗಳು ಹೆಚ್ಚುತ್ತಿವೆ ಮತ್ತು ಅವೆರಡೂ ವಿರುದ್ಧ ದಿಕ್ಕಿನೆಡೆಗೆ ಎಳೆಯುತ್ತಿವೆ. ಒಂದೆಡೆ ಮನೋದೈಹಿಕ ಬಯಕೆಗಳನ್ನು ಕೆರಳಿಸುವ ವಾತಾವರಣ; ಇನ್ನೊಂದೆಡೆ ಕುಟುಂಬ–ಸಮಾಜದ ನಿರ್ಬಂಧಗಳು. ಇಬ್ಬರು ಸಮಾನ ವಯಸ್ಕರರ ನಡುವೆ ಏರ್ಪಡುವ ಸಂಬಂಧವನ್ನು ಕುಟುಂಬ–ಸಮಾಜ ನೋಡುವುದಕ್ಕೂ, ಆ ಪೀಳಿಗೆ ಗ್ರಹಿಸುವುದಕ್ಕೂ ವ್ಯತ್ಯಾಸವಿದೆ. ಯಾವುದನ್ನು ಹಿರಿಯರು ಮಹಾದುರಂತ, ಅಕ್ಷಮ್ಯ, ಅನೈತಿಕ ಎನ್ನುತ್ತಾರೊ, ಅದು ಯುವಜನರ ದೃಷ್ಟಿಯಲ್ಲಿ ಹಾಗಿಲ್ಲ. ಈ ಎರಡೂ ದೃಷ್ಟಿಕೋನಗಳ ನಡುವೆ ಈಗ ಸೇತುವೆಯೊಂದು ನಿರ್ಮಾಣವಾಗಬೇಕು. ಇಂದಿನ ಪೀಳಿಗೆ ಹಿಮ್ಮುಖವಾಗಿ ಕ್ರಮಿಸಲಾರದು, ಹಿರಿಯರೇ ಒಂದು ಹೆಜ್ಜೆ ಮುಂದಿಡಬೇಕು. ಆಗ ಬಹುಶಃ ಮಕ್ಕಳ ಮುಂದಿನ ಹಾದಿ ನಿಚ್ಚಳವಾಗಬಹುದು.

ವಿವೇಚನೆಗೆ ಸಂಬಂಧಿಸಿದ್ದು...

ಲೈಂಗಿಕ ಜೀವನದ ಸ್ವಾತಂತ್ರ್ಯವನ್ನು 18ಕ್ಕೆ ಕೊಡುತ್ತಾರೊ, 16ಕ್ಕೊ, 21ಕ್ಕೊ ಎನ್ನುವುದು ಮುಖ್ಯವಾಗುವುದೇ ಇಲ್ಲ. ಸ್ನೇಹ ಸಲುಗೆಗೆ ತಿರುಗುವಾಗ, ಸಲುಗೆ ಸಾಮೀಪ್ಯಕ್ಕೆ ಹಾತೊರೆಯುವಂತೆ ಮಾಡುವಾಗ ಯಾರಿಗೂ 
ಯಾವ ಕಾನೂನೂ ನೆನಪಾಗುವುದಿಲ್ಲ. ಅದು ಅವರವರ ವಿವೇಚನೆ ಹಾಗೂ ಸಿಗುವ ಅವಕಾಶಗಳ ಮೇಲೆ ಅವಲಂಬಿಸಿರುತ್ತದೆ. ನಮ್ಮ ಸ್ನೇಹ–ಸಂಬಂಧ ಯಾರೊಂದಿಗೆ, ಎಷ್ಟಿರಬೇಕು ಎನ್ನುವುದನ್ನು ನಮ್ಮ ವಿವೇಕ ಎಚ್ಚರಿಸುತ್ತದೆ, ಕಾನೂನೂ ಅಲ್ಲ, ಕೋರ್ಟೂ ಅಲ್ಲ ಎನ್ನುವುದು ಬಿಬಿಎ ವಿದ್ಯಾರ್ಥಿನಿ ಮಂದಾರ ನೇರನುಡಿ. 

‘ಮೊದಲೇ ಇಂದಿನ ಸೂಪರ್‌ ಸ್ಪೀಡ್‌ ಪೀಳಿಗೆ ನಮ್ಮ ಲಗಾಮಿಗೆ ಸಿಗುತ್ತಿಲ್ಲ. ಮಕ್ಕಳ ಚಿತ್ತಚಾಂಚಲ್ಯಕ್ಕೆ ಕಾರಣವಾಗುವ ಎಲ್ಲಾ ಅವಕಾಶಗಳೂ ಅವರ ಅಂಗೈಯಲ್ಲೇ ಇವೆ. ಹೀಗಿರುವಾಗ 16ನೇ ವಯಸ್ಸಿಗೇ ಲೈಂಗಿಕ ಜೀವನಕ್ಕೆ ಲೈಸನ್ಸ್‌ ಕೊಡುವುದು ಭಾರತದ ಮಟ್ಟಿಗಂತೂ ಅಪಾಯಕಾರಿ’ ಎನ್ನುತ್ತಾರೆ ಎರಡು ಗಂಡುಮಕ್ಕಳ ತಾಯಿಯೂ, ಶಾಲೆಯೊಂದರ ಪ್ರಾಚಾರ್ಯರೂ ಆಗಿರುವ ನರ್ಮದಾ ಕಿಲೇದಾರ.

ಚರ್ಚೆ ಏನೇ ಇರಲಿ,  ಹದಿಹರೆಯದ ಮಕ್ಕಳ ಮಾನಸಿಕ, ದೈಹಿಕ, ಲೈಂಗಿಕ ಆರೋಗ್ಯವನ್ನು  ಗಮನದಲ್ಲಿಟ್ಟು ಕೊಂಡು ಬಹಳ ಎಚ್ಚರಿಕೆಯಿಂದ ಈ ವಿಷಯವನ್ನು ತೀರ್ಮಾನಿಸಬೇಕು. ಮಕ್ಕಳಿಗೆ ಮಾಹಿತಿ ಸಕಲ ದಿಕ್ಕುಗಳಿಂದಲೂ ಹರಿದು ಬರುತ್ತಿದೆ. ಲೈಂಗಿಕ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಅರೆಕ್ಷಣದಲ್ಲಿ ಅದನ್ನು ಹೆಕ್ಕಿಕೊಳ್ಳುತ್ತಾರೆ. ಆದರೆ, ಮನೋದೈಹಿಕ–ಲೈಂಗಿಕ ಸ್ವಾಸ್ಥ್ಯದ ಬಗ್ಗೆ ಸರಿಯಾದ ಅರಿವು ಮೂಡಿಸಬೇಕಾದ ಹೊಣೆಗಾರಿಕೆ ಪೋಷಕರ ಮೇಲೂ ಇದೆ, ಶಿಕ್ಷಣ ಸಂಸ್ಥೆಗಳ ಮೇಲೂ ಇದೆ.

ಮಡಿವಂತಿಕೆ ಸಾಕು...

ಇದು ಮಡಿವಂತಿಕೆಯ ಕಾಲವಲ್ಲ. ಕಾರಣ–ಪರಿಣಾಮಗಳ ಬಗ್ಗೆ ಸಮಗ್ರ ತಿಳಿವಳಿಕೆ ಪಸರಿಸಬೇಕಾದ ಸಮಯ.  ಮಕ್ಕಳೊಂದಿಗೆ ಮನೋದೈಹಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಲೈಂಗಿಕ–ಭಾವನಾತ್ಮಕ ಸಂಬಂಧ ಅಪರಾಧ ಅಥವಾ ಅನೈತಿಕ ಎಂದು ಹೇಳಿದರೆ ಅವರು ಅದನ್ನು ಗೌಪ್ಯವಾಗಿ ಮುಂದುವರೆಸುತ್ತಾರೆ. ವಯಸ್ಸು ಯಾವುದೇ ಇರಲಿ ದೈಹಿಕ ಹಾಗೂ ಮಾನಸಿಕ ಸಂಬಂಧ ಜೀವನದ ಒಂದು ಭಾಗವಾಗಬೇಕು. ಅದುವೇ ಜೀವನವಾಗಬಾರದು. ಲೈಂಗಿಕ–ಭಾವನಾತ್ಮಕ ಜೀವನವನ್ನು ಆರೋಗ್ಯಪೂರ್ಣವಾಗಿ ತೆಗೆದು ಕೊಳ್ಳುವ ಮನಸ್ಥಿತಿ ನಿರ್ಮಾಣವಾಗಬೇಕು. ತಪ್ಪಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗುತ್ತಿರುವ ಮಕ್ಕಳನ್ನು ಕಾಪಾಡುವ ದೃಷ್ಟಿಯಿಂದ ಲೈಂಗಿಕ ಸಮ್ಮತಿಯ ವಯೋಮಾನವನ್ನು ಇಳಿಸುವುದು ಅತ್ಯಗತ್ಯ.

-ಕವಿತಾ ರತ್ನ ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಯ ನಿರ್ದೇಶಕಿ

ಶಕ್ತಿ ರೂಪಾಂತರಗೊಳ್ಳಬೇಕು

ಹದಿಹರೆಯದ ಮಕ್ಕಳು ನೈಸರ್ಗಿಕ ಅಗತ್ಯಗಳನ್ನು ಮತ್ತು ಆ ಕ್ರಿಯೆಯಿಂದ ಎದುರಾಗಬಹುದಾದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಲೈಂಗಿಕ ಸಂಬಂಧ ಇಬ್ಬರ ನಡುವೆ ಭಾವನಾತ್ಮಕ ಮತ್ತು ದೈಹಿಕ ಅವಲಂಬನೆಯನ್ನೂ ಬೆಳೆಸುತ್ತದೆ. ಹೀಗಾಗಿ ಲೈಂಗಿಕ ಕ್ರಿಯೆಯ ನಂತರ ಮನೋಕ್ಷೋಭೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಇದರಿಂದ ಅವರ ಶೈಕ್ಷಣಿಕ ಸಾಮಾಜಿಕ ಬದುಕಿಗೂ ಪೆಟ್ಟು ಬೀಳಬಹುದು. ಇದರಿಂದ ತಪ್ಪಿಸಲು ಅವರ ಮನಸನ್ನು ಶಕ್ತಿಯನ್ನು ರೂಪಾಂತರಗೊಳಿಸಬೇಕು. ಸೃಜನಾತ್ಮಕ ಚಟುವಟಿಕೆಗಳತ್ತ ಸಕ್ರಿಯಗೊಳಿಸಬೇಕು. ಲೈಂಗಿಕ ಭಾವನಾತ್ಮಕ ಸೃಜನಾತ್ಮಕ ಶಕ್ತಿಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಭಾವನಾತ್ಮಕ ಹಾಗೂ ಸೃಜನಾತ್ಮಕ ಸಂಗತಿಗಳತ್ತ ಮಕ್ಕಳ ಶಕ್ತಿಯನ್ನು ರೂಪಾಂತರಗೊಳಿಸಬೇಕು. ಕಲೆ ಸಾಹಿತ್ಯ ಮನರಂಜನೆ ಕ್ರೀಡೆಗಳಲ್ಲಿ ತೊಡಗಿಸಬೇಕು.

ಡಾ. ಶುಭಾ ಮಧುಸೂಧನ್ ಮನೋಚಿಕಿತ್ಸಕಿ 

ಡಾ. ರತ್ನಮಾಲಾ ದೇಸಾಯಿ

ಸುರಕ್ಷತೆ ಪ್ರಧಾನವಾಗಲಿ

ತಡೆಹಿಡಿದಷ್ಟು ಮುಸುಕಿನಲ್ಲಿ ನಡೆಯುತ್ತದೆಯೇ ಹೊರತು ನಿಯಂತ್ರಣ ಕಷ್ಟಸಾಧ್ಯ. ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಹಾರ್ಮೋನುಗಳು ಮಾತನಾಡಲಾರಂಭಿಸುತ್ತವೆ. ಇದು ನೈಸರ್ಗಿಕ ಕ್ರಿಯೆ. ಇದಕ್ಕೆ ವಯೋಮಾನದ ನಿರ್ಬಂಧವನ್ನು ಹೇರುವ ಬದಲು ಸುರಕ್ಷಿತ ಸಂಪರ್ಕದ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು. ಅಸುರಕ್ಷಿತ ಸಂಪರ್ಕದಿಂದ ಸೋಂಕುಗಳ ಅಪಾಯ ಹಾಗೂ ಗರ್ಭಧಾರಣೆಯ ಅಪಾಯ ಹೆಚ್ಚು. ಈ ಅಪಾಯಗಳಿಂದ ಸುರಕ್ಷಿತವಾಗಿರಲು ತಿಳಿಸಬೇಕು. ಈ ಅವಧಿಯಲ್ಲಿ ಅವರ ದೇಹ ಗರ್ಭಧಾರಣೆಯ ಭಾರವನ್ನು ಗರ್ಭಪಾತದ ಆಘಾತವನ್ನೂ ತಡೆದುಕೊಳ್ಳಲಾರದು. ಮಕ್ಕಳನ್ನು ನಿಯಂತ್ರಿಸುವ ಮೊದಲು ಅವರಿಗೆ ಸುರಕ್ಷತೆಯ ಜ್ಞಾನವನ್ನು ನೀಡಬೇಕು.

ಡಾ. ರತ್ನಮಾಲಾ ದೇಸಾಯಿ ಸ್ತ್ರೀರೋಗ ತಜ್ಞೆ ಹಾಗೂ ಪ್ರಾಚಾರ್ಯೆ ಎಸ್.ಡಿ.ಎಂ ಮೆಡಿಕಲ್‌ ಕಾಲೇಜು ಧಾರವಾಡ

ಮಕ್ಕಳ ಹಕ್ಕುಗಳನ್ನು ಕಸಿಯಬೇಡಿ

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ (1989) ಅನ್ವಯ ನಮ್ಮ ಎಲ್ಲ ತೀರ್ಮಾನ ಗಳು ಮಕ್ಕಳ ಹಿತಾಸಕ್ತಿಗೆ ಪೂರಕವಾಗಿರಬೇಕು. ಜೊತೆಗೆ ಈ ಬಗೆಯ ತೀರ್ಮಾನಗಳನ್ನು ಕೈಗೊಳ್ಳುವಾಗ ಮಕ್ಕಳ ಪ್ರಬುದ್ಧತೆಗೆ ಅನುಗುಣವಾಗಿ ಅವರ ಅಭಿಪ್ರಾಯವನ್ನೂ ಪಡೆಯ ಬೇಕು. ಹದಿಹರೆಯದ ಬೆಳವಣಿಗೆಯ ಹಂತದಲ್ಲಿ ಲೈಂಗಿಕ ಆಸಕ್ತಿ ಮತ್ತು ಬಯಕೆ ಒಂದು ಸಾಮಾನ್ಯ ಸಹಜ ಬೆಳವಣಿಗೆ. ಅದನ್ನು ಬಲವಂತವಾಗಿ ಹತ್ತಿಕ್ಕಲು ಹೋದರೆ ಬೇರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬದಲಾಗಿ ಅವರಿಗೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಮತ್ತು ಪೋಕ್ಸೊ ಕಾಯ್ದೆ ಏನು ಈ ನಿಯಮಗಳನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬ ಬಗ್ಗೆ ಅರಿವು ಮೂಡಿಸಬೇಕು. ಈ ಕುರಿತ ಮಾಹಿತಿ ನೀಡುವಂತೆ ಎಲ್ಲಾ ಶಾಲೆ ಕಾಲೇಜುಗಳಿಗೆ ಸೂಚಿಸಬೇಕು.

ವಿ.ಪಿ.ನಿರಂಜನಾರಾಧ್ಯ ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.