ಶಕ್ತಿಯೋಜನೆಯಡಿ ಹೆಣ್ಣುಮಕ್ಕಳೆಲ್ಲ ಪ್ರವಾಸ ಹೊರಟರೆ ಅದನ್ನು ಆಡಿಕೊಂಡು ನಗುವುದನ್ನು ಮೊದಲು ನಿಲ್ಲಿಸೋಣ. ಯಾರ ಹಂಗಿಲ್ಲದೆಯೂ ಬದುಕು ಕಟ್ಟಿಕೊಂಡ ಕೆಳ ಹಾಗೂ ಮಧ್ಯಮ ವರ್ಗದ ಹೆಣ್ಣುಮಕ್ಕಳು ಉಚಿತವಿರಲಿ, ಇಲ್ಲದಿರಲಿ; ತಮಗಿರುವ ಪ್ರವಾಸದ ಆಸಕ್ತಿಯನ್ನು ಕಡೆಗಣಿಸಿದವರಲ್ಲ. ಸಣ್ಣ ಉಳಿತಾಯದಲ್ಲಿ ಹೇಗೆಲ್ಲ ಪ್ರವಾಸ ಮಾಡಬಲ್ಲರು ಎಂಬುದರ ಚಿತ್ರಣ ಇಲ್ಲಿದೆ.
ದಾವಣಗೆರೆಯಲ್ಲಿರುವ ಚಿಕ್ಕಮ್ಮ ಮನೆಗೆ ಬಂದರೆ ಸ್ವಲ್ಪವೂ ಬಿಡುವಿರದಂತೆ ಆಕೆಯ ಫೋನ್ ಸದಾ ರಿಂಗಣಿಸುತ್ತಿರುತ್ತದೆ. ಆಕೆ ಫೋನ್ ಎತ್ತಿದರೆ ಸಾಮಾನ್ಯವಾಗಿ ಕೇಳಿ ಬರುವ ಮಾತು; ‘ಅಕ್ಕಾ ಯಾವತ್ತ್ ಬರ್ತಿಯಾ, ಆ ಸಂಘದಲ್ಲೊಂದು ಲೋನ್ ಬೇಕಿತ್ತಲ್ಲಕ್ಕಾ, ನನ್ ಮಗ ಕೆಲಸ್‌ಕ್ಕೆ ಹೋಗಕ್ಕೆ ಗಾಡಿ ತೆಕ್ಕೊಡು ಅಂತ ಗಂಟ್ ಬಿದ್ದವ್ನೆ, ಸಂಗದಾಗೆ ಲೋನ್ ಬೇಕಿತ್ತು’ .. ಇಂಥವೇ.
ಹಲವು ಸಂಘಗಳಲ್ಲಿರುವ ಚಿಕ್ಕಮ್ಮನಿಗೆ ಬಿಡುವಿರದಷ್ಟು ಕೆಲಸ. ‘ನೀನು ಎಲೆಕ್ಷನ್‌ಗೆ ನಿಲ್ಲು ಮಾರಾಯ್ತಿ’ ಅಂಥ ತಮಾಷೆ ಮಾಡಿದಾಗ ‘ಇಲ್ಲ ಒಬ್ಬರದ್ದು ಟೂರ್ ಚೀಟಿ ದುಡ್ಡು ಕಟ್ಟೊದಿತ್ತು. ಅದಕ್ಕೆ ಫೋನ್ ಮಾಡಿದ್ಲು’ ಎನ್ನುವ ಮಾತು ಬಂತು.
‘ಇದ್ಯಾವ ಚೀಟಿ?’ ಎಂದು ಆಶ್ಚರ್ಯ ವ್ಯಕ್ತಪಡಿಸುವಾಗಲೇ, ಅದೇ ಟೂರಿಗೆ ಹೋಗೋಕೆ ಎಂದು ಹೇಳಿದಾಗ ನನಗೆ ಇದು ಏನು ಎತ್ತ ಅಂಥ ಗೊತ್ತಾಗಲಿಲ್ಲ. ಇದೆಂಥ ಮಾರಾಯ್ತಿ ಟೂರ್ ಚೀಟಿ ಅಂಥ ಕೇಳಿದೆ. ಆಗ ಆಕೆ ತೆರೆದಿಟ್ಟ ವಿವರದಿಂದ ಹೊಸ ಲೋಕದ ಪರಿಚಯವಾಯಿತು. ಈ ಟೂರ್ ಚೀಟಿಯ ಮೂಲಕ ಬಡತನ ರೇಖೆಗಿಂತ ಕೆಳಗಿರುವವರಲ್ಲಿ, ಕೆಳ ಮಧ್ಯಮ ವರ್ಗದವರಲ್ಲಿ ಪ್ರವಾಸದ ಹವ್ಯಾಸಗಳು ಹೇಗಿರುತ್ತವೆ ಎಂಬ ಚಿತ್ರಣ ಸಿಕ್ಕಿತು. ನಿಜಕ್ಕೂ ಅಬ್ಬಾ ಅನಿಸುವಂತೆ ಮಾಡಿತು. ಸದ್ಯಕ್ಕೆ ‘ಶಕ್ತಿ’ ಯೋಜನೆಯಡಿ ಹೆಣ್ಣುಮಕ್ಕಳೆಲ್ಲ ಪ್ರವಾಸಕ್ಕೆ ಹೊರಡುತ್ತಿರುವುದರ ಬಗ್ಗೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ ’ಟೂರ್ ಪ್ಲಾನ್‘ ಅನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿತು.
ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಈ ಬಡ ಹಾಗೂ ಕೆಳಮಧ್ಯಮ ಹೆಣ್ಣುಮಕ್ಕಳು ಬದುಕಿನ ಅಷ್ಟೂ ಜಂಜಾಟಗಳ ನಡುವೆ ವರ್ಷಕ್ಕೊಂದು ಪ್ರವಾಸ ಹೋಗಬೇಕೆಂದು ನಿಶ್ಚಯಿಸುತ್ತಾರೆ. ನಮ್ಮ ಹಾಗೆ ಗೂಗಲ್ ರೇಟಿಂಗ್ ನೋಡಿ ಹೋಟೆಲ್, ಹೊರಡಲು ಫ್ಲೈಟ್ ಬುಕ್ ಮಾಡುವುದಿಲ್ಲ. ಹಪ್ಪಳ ಮಾಡುವುದು, ಶಾವಿಗೆ ಒಣಗಿಸುವುದು, ರೊಟ್ಟಿ ತಟ್ಟುವುದು, ಚಟ್ನಿಪುಡಿ ಕುಟ್ಟುವುದು, ಹೋಳಿಗೆ ಮಾಡಿ ಮಾರುವುದು, ಹೊಲಿಗೆ, ಮೆಹೆಂದಿ ಹಾಕುವುದು ಹೀಗೆ ನಾನಾ ಕೆಲಸ ಮಾಡಿ ಹಣ ಸಂಪಾದನೆ ಮಾಡಿ ತಿಂಗಳ ಖರ್ಚು ಕಳೆದು ಉಳಿತಾಯದ ಆ ಹಣವನ್ನು ಟೂರ್ ಚೀಟಿಗೆ ಕಟ್ಟುತ್ತಾರೆ.
ಪರಿಚಯದವರ ಫ್ಯಾಕ್ಟರಿಯಲ್ಲಿ ಖಾರದ ಪುಡಿ, ಸಾರಿನ ಪುಡಿ ಪ್ಯಾಕ್ ಮಾಡುವುದು, ಆಷಾಢದಲ್ಲಿ ಸೀರೆ ಅಂಗಡಿಗೆ ಸೀರೆ ಮಡಚಲಿಕ್ಕೆ ಹೋಗುವುದು, ಅಂಗಡಿಯಲ್ಲಿ ದಿನಸಿ ಸಾಮಾನು ಶುಚಿಗೊಳಿಸುವುದು, ಸರ್ಕಾರದ ಸರ್ವೇಗಳಲ್ಲಿ ಪಾಲ್ಗೊಳ್ಳುವುದು.. ಹೀಗೆ ಇವರು ಯಾವ ಕೆಲಸಕ್ಕೂ ಹಿಂಜರಿದವರಲ್ಲ. ಕೊನೆಗೆ ಹಣಕೊಟ್ಟು ಜನಸೇರಿಸುವ ಚುನಾವಣಾ ಪ್ರಚಾರ ಸಭೆಗಳಾದರೂ ಸರಿಯೇ. ಯಾವುದೇ ಕೆಲಸ ದೊಡ್ಡದಿರಲಿ, ಚಿಕ್ಕದಿರಲಿ ಈ ಹೆಣ್ಣಮಕ್ಕಳು ದುಡಿದು ಪೈಸೆಗೆ ಪೈಸೆ ಸೇರಿಸಿ ಟೂರ್ ಹೊರಡಲು ರೆಡಿಯಾಗುತ್ತಾರೆ.
ಈ ಮಹಿಳೆಯರು ತಾವೇ ಹೋಗುವುದಾದರೆ ಸಾಮಾನ್ಯವಾಗಿ ಅವರ ಆಯ್ಕೆ ರೈಲು. ಅದೂ ಜನರಲ್ ಬೋಗಿಯಲ್ಲಿ. ಇವರಿಗೆ ರೈಲು ಮುಂಗಡ ಕಾದಿರಿಸುವ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲ. ಇದ್ದರೂ ಅದಕ್ಕೆ ಬೇರೆಯವರ ಸಹಾಯ ಬೇಕು. ಕಾಲು ಇಡಲೂ ಜಾಗ ಇಲ್ಲದ ರೈಲಿನಲ್ಲಿಯೇ ನಿಂತುಕೊಂಡೆ ಕನ್ಯಾಕುಮಾರಿ, ರಾಮೇಶ್ವರ, ಮಧುರೈ, ಕಾಶಿ, ಗಯಾ ಹೀಗೆ ದೂರದ ಊರುಗಳನ್ನು ನೋಡ ಹೊರಡುತ್ತಾರೆ. ರೈಲಿಗೆ ಹೋಗುವುದಕ್ಕೆ ಬೆಲೆ ಕಡಿಮೆ ಎಂಬುದು ಒಂದಾದರೆ ಪ್ರಯಾಣದ ವೇಳೆಯಲ್ಲಿಯೇ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಬಹುದು ಎಂಬುದು ಇನ್ನೊಂದು.
‘ಬಾಯಿ ಇದ್ರೆ ಬೊಂಬಾಯಿಗೂ ಹೋಯಿಲಕ್ಕ್’ ಅನ್ನುವ ಹಾಗೆ ಭಾಷೆ ಬಾರದ, ಗೊತ್ತಿಲ್ಲದ ಊರುಗಳಲ್ಲಿಯೂ ಆತ್ಮವಿಶ್ವಾಸದಿಂದ ಅಡ್ಡಾಡಿ ಬರುತ್ತಾರೆ. ನಮ್ಮ ಹಾಗೆ ಆಯಾ ಊರಿನ ಸಿಗ್ನೇಚರ್ ಡಿಶ್ ಏನಿದೆ ಅಂಥ ಹುಡುಕಿಕೊಂಡು ಊಟಕ್ಕೆ ಸಾವಿರಾರು ರೂಪಾಯಿ ವ್ಯಯಿಸುವುದಿಲ್ಲ. ನಾಲ್ಕು ದಿನದ ಪ್ರವಾಸವಾದರೆ ಮೊದಲಿನ ದಿನಕ್ಕೆ ಎರಡು ಹೊತ್ತಿಗೆ ಆಗುವಷ್ಟು ಚಿತ್ರಾನ್ನ ಕಟ್ಟಿಕೊಂಡು ಬಂದಿರುತ್ತಾರೆ. ಅದರಲ್ಲಿಯೇ ಪ್ರಯಾಣ ಕಳೆದುಹೋಗುತ್ತದೆ. ಮಧ್ಯೆ ಬಾಯಿ ಆಡಿಸಲು ಖಾರಾ ಮಂಡಕ್ಕಿ ಇದ್ದರೆ, ರೈಲಿನಲ್ಲಿ ಬರುವ ಒಂದು ಕಪ್ ಚಹಾ ತೆಗೆದುಕೊಂಡರೆ ಅಲ್ಲಿಗೆ ಮುಗಿಯಿತು.
ಕಟ್‌ಕಲ್ ರೊಟ್ಟಿ ಮತ್ತು ಚಟ್ನಿಪುಡಿ ಈ ರೀತಿ ಪ್ರವಾಸ ಹೊರಡುವವರ ಆಪ್ತ ಸಂಗಾತಿ. ಎಷ್ಟೂ ದಿನ ಇಟ್ಟರೂ ಕೆಡದ ಒಣ ರೊಟ್ಟಿ ಮತ್ತು ಚಟ್ನಿಪುಡಿ ಉಳಿದ ಪ್ರವಾಸದ ದಿನಗಳಿಗೆ ಇವರ ಸಹಾಯಕ್ಕೆ ಒದಗಿ ಬರುತ್ತದೆ. ಒಂದೋ ಮೊಸರಿನ ಪ್ಯಾಕ್ ತಗೊಂಡು ಚಟ್ನಿಪುಡಿಗೆ ಮೊಸರು ಕಲ್ಸಿ ತಿಂತೀವಿ. ಇಲ್ಲಾಂದ್ರೆ ಟ್ರೈನ್‌ನಲ್ಲಿ ಬರೋವಾಗ್ಲೆ ಒಂದು ಡಬ್ಬಿಲಿ ಹೆಸರುಕಾಳು ನೆನೆ ಹಾಕಿರ್ತೀವಿ. ಅದಕ್ಕೆ ಚಟ್ನಿಪುಡಿ ಸೇರಿಸಿ, ಮೊಸರು ಹಾಕಿ ಪಲ್ಯದ ಥರ ಮಾಡ್ಕೊಂಡು ತಿಂತೀವಿ’ ಅಂತ ಚಿಕ್ಕಮ್ಮನ ಗೆಳತಿ ಹೇಳಿದಾಗ ಅರೆ ಹೀಗೂ ಇರುತ್ತಾ ಅಂಥ ನನಗೆ ಆಶ್ಚರ್ಯ.
‘ಕಳೆದ ಸಾರಿ ಕನ್ಯಾಕುಮಾರಿಗೆ ಹೋದಾಗ ಅಲ್ಲಿ ಬಿಳಿ ಅನ್ನ ಹೋಟೆಲ್‌ನಲ್ಲಿ ಸಿಗುತ್ತೆ ಅದ್ನ ತಗೊಂಡಿದ್ವಿ. ಒಂದು ಕೆಜಿ ಅನ್ನಕ್ಕೆ ನಲ್ವತ್ತೋ-ಐವತ್ತೊ ರೂಪಾಯಿ. ಅದಕ್ಕೆ ನಾವು ಪುಳಿಯೋಗರೆ ತಗೊಂಡು ಹೋಗಿದ್ವಲ್ಲಾ ಅದನ್ನ ಕಲ್ಸ್‌ಕೊಂಡು ತಿಂದ್ವಿ. ಎರಡು ಹೊತ್ತು ಅದೇ ತಿಂದ್ವಿ. ಬರೀ ಟೀ ಗೆ ಅಷ್ಟೆ ನೋಡು ನಾವು ದುಡ್ಡು ಖರ್ಚು ಮಾಡಿದ್ದು’ ಅಂದಾಗ ಬೆರಗಾಗುವ ಸರದಿ ನನ್ನದು.
ಇದೇ ಹೆಣ್ಣು ಮಕ್ಕಳೆಲ್ಲ ಸೇರಿ ದುಡಿಮೆಯ ಒಂದು ಭಾಗ ಚೀಟಿ ಕಟ್ಟಿ ಕಳೆದ ಬಾರಿ ಕೋವಿಡ್ ಭಯದ ನಡುವಿನಲ್ಲಿಯೂ ಸರ್ಕಾರ ಒದಗಿಸಿರುವ ಕಾಶಿಯಾತ್ರೆ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಅತಿ ಪ್ರಯಾಸಕರ ಪ್ರವಾಸ ಕೇದಾರನಾಥ ಯಾತ್ರೆಯನ್ನೂ ಮುಗಿಸಿಬಂದಿದ್ದಾರೆ. ಈ ಬಾರಿ ಗಯಾ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಈ ಪ್ರವಾಸದ ಚಿತ್ರಣವನ್ನು ಯಾಕೆ ಹೇಳಬೇಕಾಯಿತು ಎಂದರೆ ಎಷ್ಟೋ ಊರುಗಳಲ್ಲಿ ಹೆಣ್ಣುಮಕ್ಕಳು ಯಾರ ಅವಲಂಬನೆಯಿಲ್ಲದೇ ಹೊರಗೆ ಹೋಗುವುದೇ ತಪ್ಪು ಎಂಬ ಭಾವನೆಯಿದೆ. ಆಯಾ ಊರಿನಲ್ಲಿರುವ ವಿಶೇಷತೆ ಏನು? ಎಂಬುದನ್ನು ಆಯಾ ಊರಿನ ಹೆಣ್ಣುಮಕ್ಕಳಿಗೆ ಗೊತ್ತಿಲ್ಲದಿರುವಾಗ ಹೆಣ್ಣುಮಕ್ಕಳೆಲ್ಲ ಗುಂಪು ಗುಂಪಾಗಿ ಪ್ರವಾಸ ಹೊರಟರೆ ತಪ್ಪೇನು?. ಇಷ್ಟೆಲ್ಲ ಕಷ್ಟದ ನಡುವೆ ಹೊರಡುವ ಹೆಣ್ಣುಮಕ್ಕಳ ಪ್ರಯಾಣದ ಖರ್ಚು ಉಚಿತವಾದ ಮಾತ್ರಕ್ಕೆ ಏನೋ ದೊಡ್ಡ ಅನಾಹುತವೇ ಆಯಿತು ಎಂದು ಬೊಬ್ಬೆ ಹೊಡೆಯುವವರನ್ನು ನೋಡುವಾಗ ನಗು ಬರುತ್ತದೆ.
ಶಕ್ತಿ ಯೋಜನೆಯಡಿ ಉತ್ತರ ಕರ್ನಾಟಕದಿಂದ ಉಡುಪಿ, ದಕ್ಷಿಣ ಕನ್ನಡದ ಕಡೆ ಚಿಕಿತ್ಸೆಗೆಂದು ಹೋಗುವ ಅದೆಷ್ಟೋ ಕುಟುಂಬದ ಹೆಣ್ಣುಮಕ್ಕಳ ಬಸ್ ಚಾರ್ಜ್ ಉಳಿತಾಯವಾದರೆ ಅವರ ಹೊರೆ ತುಸು ಹಗುರವಾಗುವುದು ದಿಟವಲ್ಲವೇ?.
ಉಚಿತ ಯೋಜನೆಯಡಿ ಪ್ರವಾಸ ಮಾಡುವವರು ಎಂದು ಮೂದಲಿಸುವ ಮೊದಲು ಈ ಬಡ ಹೆಣ್ಣುಮಕ್ಕಳು ಸಣ್ಣ ಉಳಿತಾಯ ಮಾಡಿಯಾದರೂ ಪ್ರವಾಸ ಮಾಡಬೇಕು ಎಂದು ಯೋಜಿಸಿ ಅದನ್ನು ಕಾರ್ಯರೂಪಕ್ಕೆ ತಂದವರು ಎಂಬುದನ್ನು ನೆನಪಿಡೋಣ. ಎಲ್ಲ ಟೀಕೆಗಳ ನಡುವೆಯೂ ಕಷ್ಟಪಟ್ಟು, ಸೀಟು ಹಿಡಿದು ಹೇಗಾದರೂ ಸರಿ ಹೊರಟೇ ಹೊರಡುತ್ತೇನೆ ಎಂದು ಹೊರಟ ಈ ಹೆಣ್ಣುಮಕ್ಕಳದ್ದು ಅಪ್ಪಟ ಜೀವನಪ್ರೀತಿಯಲ್ಲದೇ ಮತ್ತೇನು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.