ADVERTISEMENT

ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು

ಸತೀಶ ಬೆಳ್ಳಕ್ಕಿ
Published 26 ಆಗಸ್ಟ್ 2023, 0:40 IST
Last Updated 26 ಆಗಸ್ಟ್ 2023, 0:40 IST
ಕುರಿಗಳ ಜತೆಗೆ ಮಂಗಳಾ ಕಿರಣ್‌ ನೀಲಗುಂದ
ಕುರಿಗಳ ಜತೆಗೆ ಮಂಗಳಾ ಕಿರಣ್‌ ನೀಲಗುಂದ   

ಗದಗ ತಾಲ್ಲೂಕಿನ ಮುಳಗುಂದದ ಮಂಗಳಾ ಕಿರಣ್ ಒಮ್ಮೆ ತಮ್ಮ ಕುರಿಗಳನ್ನು ಮಾರಾಟ ಮಾಡಲು ಸಮೀಪದ ಮಾರ್ಕೆಟ್‌ಗೆ ಹೋದರು. ಅಲ್ಲಿ, ದಲ್ಲಾಳಿಗಳ ಆಟಕ್ಕೆ ಬೇಸತ್ತು ಕುರಿಗಳನ್ನು ಮಾರದೇ ವಾಪಸ್ ಬಂದರು.

ಮನೆಗೆ ಬಂದವರು ಸುಮ್ಮನೆ ಕೂರಲಿಲ್ಲ. ‘ಇಂಥ ಆಟಕ್ಕೆಲ್ಲ ಪರಿಹಾರ ಹುಡಕಲೇಬೇಕು’ ಎಂದು ಸಂಕಲ್ಪ ಮಾಡಿದರು. ಮನೆಯ ಸಮೀಪ ದಲ್ಲೇ ಜನರಿಗೆ ಕಾಣುವಂತೆ ಕುರಿ ಶೆಡ್‌ ಮಾಡಿಸಿದರು. ಶೆಡ್‌ನಲ್ಲಿರುವ ಕುರಿಗಳನ್ನು ನೋಡಿ, ಗ್ರಾಹಕರೇ ಇವರ ಮನೆ ಬಳಿಗೆ ಬಂದರು. ವ್ಯಾಪಾರ ಚಿಗುರಿತು. ಕುರಿಗಳ ಸಂಖ್ಯೆ ವಿಸ್ತರಣೆಯಾಯಿತು. ಕುರಿ ಸಾಕಣೆ ಕಿರು ಉದ್ಯಮವಾಯಿತು. 

ಕುರಿ ಸಾಕಣೆಯ ಹಿಂದೆ..

ಮಂಗಳಾ ಕಿರಣ್‌ ಕೃಷಿ ಪದವೀಧರೆ. ಬಾಲ್ಯದಿಂದಲೂ ಕೃಷಿಯ ಬಗ್ಗೆ ಆಸಕ್ತಿ. ಮದುವೆಯಾಗಿ ಗಂಡನ ಮನೆಗೆ ಬಂದಾಗ ಅವರ ಮಾವ ಹೈನುಗಾರಿಕೆ ಮಾಡುತ್ತಿದ್ದರು. ಇದು ಆದಾಯದ ಕೆಲಸವಾದರೂ, ಬಿಡುವು ಸಿಗುತ್ತಿರಲಿಲ್ಲ. ಇದನ್ನು ಗಮನಿಸಿದ ಮಂಗಳಾ ಅವರು ಕುರಿ ಸಾಕಣೆ ಆಯ್ದುಕೊಂಡರು.

ADVERTISEMENT

ಹೈನುಗಾರಿಕೆಯಂತೆ ಕುರಿ ಸಾಕಣೆ ಹೆಚ್ಚು ಶ್ರಮ ಬೇಡುವುದಿಲ್ಲ. ನಿರಂತರ ಮುತುವರ್ಜಿ ವಹಿಸಬೇಕಿಲ್ಲ. ಅವುಗಳ ನಿರ್ವಹಣೆಗೆ ಹೆಚ್ಚಿನ ಜನರೂ ಬೇಕಾಗುವುದಿಲ್ಲ. ಈ ಕಾರಣದಿಂದ ಮಂಗಳಾ ಅವರು ಕುರಿ ಸಾಕಣೆಯೇ ಸರಿ ಎಂಬ ನಿರ್ಧಾರಕ್ಕೆ ಬಂದರು. ಆದರೆ, ‘ದೊಡ್ಡ ಮನೆತನದ ಸೊಸೆ, ಕುರಿ ಸಾಕೋದು. ಬೇಡಪ್ಪ‘ ಎಂದಿದ್ದರು ಮಾವ. ಆದರೆ, ಮಂಗಳಾ, ಪತಿ ಕಿರಣ್ ನೀಲಗುಂದ ಅವರ ನೆರವಿನಿಂದ ಮಾವನನ್ನು ಒಪ್ಪಿಸಿ 2012ರಲ್ಲಿ ಕುರಿ ಸಾಕಣೆ ಆರಂಭಿಸಿದರು.

ಕೃಷಿ ಪದವಿಯಲ್ಲಿ ಕಲಿತಿದ್ದ ಜ್ಞಾನ, ಕುರಿ ಸಾಕಣೆ ಮತ್ತು ಅದರಲ್ಲಿ ಎದುರಾಗುವ ಸವಾಲುಗಳ ನಿರ್ವಹಣೆಗೆ ನೆರವಾಯಿತು. ಗದಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕುರಿ ಸಾಕಣೆಯ ವಿಶೇಷ ತರಬೇತಿ ಪಡೆದಿದ್ದು ಆಸಕ್ತಿಗೆ ಬಲತುಂಬಿತು. ಆರಂಭದಲ್ಲಿ ತಮ್ಮ ಮನೆಯ ಹಿಂಬದಿಯಲ್ಲಿದ್ದ 4 ಎಕರೆ ಜಾಗದಲ್ಲಿ 25X50 ಜಾಗದಲ್ಲಿ ಪುಟ್ಟ ಶೆಡ್‌ ಮಾಡಿಕೊಂಡರು. ಸುತ್ತ ತಂತಿ ಬೇಲಿ ಹಾಕಿಸಿದರು. ಎರಡು ಮೂರು ತಿಂಗಳಿನ 30 ಟಗರುಗಳನ್ನು ತಂದು ಸಾಕಣೆ ಆರಂಭಿಸಿದರು. ಟಗರು ಹಾಗೂ ಶೆಡ್‌ ಎಲ್ಲ ಸೇರಿ ಆಗ ₹3 ಲಕ್ಷ ಖರ್ಚು ಮಾಡಿದ್ದರು.

ಉದ್ಯಮದ ವಿಸ್ತರಣೆ

2017ರವರೆಗೆ ಟಗರುಗಳನ್ನಷ್ಟೇ ಮಾರಾಟ ಮಾಡುತ್ತಿದ್ದರು. ನಂತರ ಉದ್ಯಮ ವಿಸ್ತರಣೆಗೆ ಮುಂದಾದರು. 50 ಕುರಿಗಳನ್ನು ತಂದರು. ಅವುಗಳು ಮರಿ ಹಾಕಿದ್ದನ್ನು ಉಳಿಸಿಕೊಂಡು, ಟಗರುಗಳನ್ನಷ್ಟೇ ಮಾರುತ್ತಾ ಬಂದರು. ಮರಿಗಳ ಸಂಖ್ಯೆ ಹೆಚ್ಚಾದಂತೆ ಅವುಗಳಿಗೆ ಅನುಕೂಲ ಕಲ್ಪಿಸಲು ₹18 ಲಕ್ಷ ವೆಚ್ಚದಲ್ಲಿ ಅಟ್ಟಣಿಗೆ ಶೆಡ್‌ ಮಾಡಿಸಿದರು. ಪಕ್ಕದಲ್ಲೇ ₹8 ಲಕ್ಷ ವೆಚ್ಚದಲ್ಲಿ ನೆಲದ ಮೇಲೆ ಮತ್ತೊಂದು ಶೆಡ್‌  ಕಟ್ಟಿಸಿದರು. ಆರ್ಥಿಕವಾಗಿ ಸುಸ್ಥಿರವಾಗಿದ್ದ ಕುಟುಂಬವಾದ ಕಾರಣ, ಬ್ಯಾಂಕ್‌ ಸಾಲ ಪಡೆಯದೇ, ಸರ್ಕಾರದ ಸಬ್ಸಿಡಿ ಇತ್ಯಾದಿ ಸೌಲಭ್ಯಗಳನ್ನು ಬಳಸಿಕೊಳ್ಳದೇ ಸ್ವಂತ ಹಣದಲ್ಲೇ ಶೆಡ್‌ಗಳನ್ನು ನಿರ್ಮಿಸಿಕೊಂಡರು.

ಸ್ವಾವಲಂಬಿ ಬದುಕು.. 

ಈಗ ಕುರಿಗಳ ನಿರ್ವಹಣೆಗೆ ಒಬ್ಬರು, ಕುರಿಗಳನ್ನು ಮೇಯಿಸಲು ಇಬ್ಬರು ಕೆಲಸಗಾರರನ್ನು ನೇಮಿಸಿಕೊಂಡಿದ್ದಾರೆ. ಆದರೂ, ಕುರಿಗಳ ಪೋಷಣೆಗೆ ತಾವೂ ನಿಲ್ಲುತ್ತಾರೆ. ಮನೆಗೆಲಸ ಮುಗಿಸಿ, ಮಕ್ಕಳನ್ನು ಶಾಲೆಗೆ ಕಳಿಸಿ, ಕುರಿ ನಿರ್ವಹಣೆಯತ್ತ ಹೊರಡುತ್ತಾರೆ ಮಂಗಳಾ. ಸುಸಜ್ಜಿತ ಶೆಡ್‌ಗೆ ಸಿಸಿಟಿವಿ ಅಳವಡಿಸಿದ್ದಾರೆ. ಶೆಡ್‌ನಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಈಗ ಅವರು ತಮ್ಮ ಮೊಬೈಲ್‌ನಲ್ಲೇ ವೀಕ್ಷಿಸುತ್ತಾರೆ.

ಮಂಗಳಾ ಅವರು ಡೆಕ್ಕನಿ ಮತ್ತು ಎಳಗಾ ತಳಿಯ ಕುರಿಗಳನ್ನು ಸಾಕುತ್ತಿದ್ದಾರೆ. ಇವುಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿದೆ. ಸ್ಥಳೀಯವಾಗಿ ಬೇಡಿಕೆ ಕೂಡ ಹೆಚ್ಚಾಗಿದೆ. ಮಳೆಯಾಶ್ರಿತ ವಾತಾವರಣಕ್ಕೆ ಇವು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಪೊಗದಸ್ತಾಗಿ ಬೆಳೆಯುತ್ತವೆ ಎಂಬುದು ಮಂಗಳಾ ಅವರ ಅನುಭವದ ಮಾತು.

ಹಸುವಿನ ಮೈತಡವುತ್ತಿರುವ ಮಂಗಳಾ

ಕುರಿಗಳಿಗೆ ಬೇಕಾದ ಆಹಾರವನ್ನು ತಮ್ಮ ಹೊಲದಲ್ಲೇ ಬೆಳೆಯುತ್ತಾರೆ. ಜತೆಗೆ ರಸಮೇವು ತಯಾರಿಸಿ, ವರ್ಷಪೂರ್ತಿ ಕುರಿಗಳಿಗೆ ಕೊಡುತ್ತಾರೆ. ಜತೆಗೆ ಗೋವಿನ ಜೋಳದ ನುಚ್ಚಿನ ಜತೆಗೆ ಶೇಂಗಾ ಹಿಂಡಿಯನ್ನೂ ಮೇವಾಗಿ ನೀಡುತ್ತಾರೆ.

ಪ್ರತಿ ಹಂತದಲ್ಲೂ ಖರ್ಚು ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸುವ ಮಂಗಳಾ ಅವರ ಕುರಿಸಾಕಣೆಗೆ ಈಗ ದಶಕದ ಸಂಭ್ರಮ. ಸದ್ಯ ಇವರ ಶೆಡ್‌ನಲ್ಲಿ 250 ಕುರಿ,100 ಟಗರುಗಳು ಮತ್ತು 50 ಆಡುಗಳಿವೆ. ಹಸು, ಕೋಳಿಗಳನ್ನೂ ಸಾಕಿದ್ದಾರೆ.

‘ಆಡು, ಟಗರುಗಳನ್ನು ಈಗ ಜಮೀನಿನಲ್ಲೇ ಮಾರಾಟ ಮಾಡುತ್ತೇನೆ. ಹಾವೇರಿ, ಕೊಪ್ಪಳ, ಶಿರಸಿ ಮೊದಲಾದ ಕಡೆಗಳಿಂದ ಗ್ರಾಹಕರು ಬರುತ್ತಾರೆ. ತೂಕದ ಲೆಕ್ಕದಲ್ಲಿ (ಲೈವ್‌ ವೇಯ್ಟ್‌) ಮಾರಾಟ ಮಾಡುತ್ತಿದ್ದೇನೆ. ಮೇವು, ಸಾಕಣೆ ವೆಚ್ಚ ಹಾಗೂ ಆ ದಿನ ಮಾರುಕಟ್ಟೆ ದರ ನೋಡಿಕೊಂಡು ಬೆಲೆ ನಿಗದಿ ಮಾಡುತ್ತೇನೆ’ ಎಂದು ತನ್ನ ವ್ಯಾಪಾರದ ಕ್ರಮವನ್ನು ವಿವರಿಸುತ್ತಾರೆ ಮಂಗಳಾ.

ಸದ್ಯ ಕುರಿ ಸಾಕಣೆಯಲ್ಲಿ ಖರ್ಚೆಲ್ಲಾ ಕಳೆದು ವರ್ಷಕ್ಕೆ ಏಳರಿಂದ ಎಂಟು ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ.

ಗೊಬ್ಬರದಿಂದಲೂ ಆದಾಯ

ಕಿರು ಉದ್ಯಮಕ್ಕೆ ಬೆನ್ನೆಲುಬಾಗಿರುವ ಪತಿ ಕಿರಣ್‌ ಜತೆಗೆ ಮಂಗಳಾ

ಕುರಿ, ಮೇಕೆ ಮಾತ್ರವಲ್ಲ, ಅವುಗಳ ಹಿಕ್ಕೆಯೂ(ಗೊಬ್ಬರ) ಇವರಿಗೆ ಆದಾಯ ತಂದುಕೊಡುತ್ತಿದೆ. ಪ್ರತಿ ತಿಂಗಳು ಐದರಿಂದ ಆರು ಟನ್‌ನಷ್ಟು ಕುರಿ ಗೊಬ್ಬರ ಸಿಗುತ್ತಿದೆ. ಶಿರಸಿ, ಚಿಕ್ಕಮಗಳೂರು ಗ್ರಾಹಕರು ಇವರಲ್ಲಿಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಹಸುಗಳ ಸೆಗಣಿಯಿಂದ ಬೆರಣಿ ತಯಾರಿಸುತ್ತಾರೆ. ಅದನ್ನು ಪೂಜೆ, ಹೋಮಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವವರು ಖರೀದಿ ಮಾಡುತ್ತಾರಂತೆ.

ದುಡಿಮೆಯ ಅನಿವಾರ್ಯವಿರದಿದ್ದರೂ, ಕೃಷಿ–ಕುರಿಸಾಕಣೆಯನ್ನು ಆಸಕ್ತಿಯಿಂದ ಮುಂದುವರಿಸುತ್ತಾ, ಯಶಸ್ಸಿನ ಹೆಜ್ಜೆ ಇಟ್ಟಿರುವ ಮಂಗಳಾ ಅವರ ಕಾರ್ಯವನ್ನು ಗೌರವಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಕೃಷಿ ಜತೆಗೆ ಪರಿಸರ ಕಾಳಜಿ ಮೂಡಿಸುತ್ತಿರುವ ಮಂಗಳಾ ಅವರು ಗಿಡನೆಡುವುದರಲ್ಲೂ ಮುಂದಿದ್ದಾರೆ

ಪರಿಸರ ಪ್ರೀತಿ, ಮಹಿಳಾ ಸಬಲೀಕರಣ

ಕಿರು ಉದ್ಯಮದ ಜೊತೆಗೆ ಪರಿಸರ ಪ್ರೀತಿ ಹೊಂದಿರುವ ಮಂಗಳಾ ಅವರು, ಮನೆಗೆ ಬರುವ ಅತಿಥಿಗಳಿಗೆ, ಪರೀಕ್ಷೆಯಲ್ಲಿ ರ‍್ಯಾಂಕ್‌ ಬಂದ ವಿದ್ಯಾರ್ಥಿಗಳಿಗೂ ಸಸಿಗಳನ್ನೇ ಉಡುಗೊರೆಯಾಗಿ ನೀಡುತ್ತಾರೆ. ಈವರೆಗೆ ಐದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಹಿಳೆಯರಿಗೆ ಗಿಡಗಳನ್ನೇ ಉಡಿ ತುಂಬಿದ್ದಾರೆ. ಸ್ಮಶಾನ ಹಾಗೂ ಶಾಲಾ ಕಾಲೇಜು ಆವರಣ, ರಸ್ತೆ ಬದಿಯಲ್ಲಿ ಈವರೆಗೆ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. 

ಕುರಿಗಳ ಜತೆಗೆ ಮಂಗಳಾ ಕಿರಣ್‌ ನೀಲಗುಂದ

ಉನ್ನತಿ ಮಹಿಳಾ ಸಮಾಜಸೇವೆ ಹಾಗೂ ವಿವಿಧೋದ್ದೇಶಗಳ ಸಂಘ ಪ್ರಾರಂಭಿಸಿದ್ದಾರೆ. ಸಂಘದಲ್ಲಿ 120 ಮಂದಿ ಮಹಿಳೆಯರು ಇದ್ದಾರೆ. ಸಂಘದಿಂದ ಹೋಳಿಗೆ, ರೊಟ್ಟಿ, ಶೇಂಗಾ ಚಟ್ನಿ, ವಿವಿಧ ಬಗೆಯ ಉಂಡೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅದೇರೀತಿ, ಶ್ರೀ ಅನ್ನಪೂರ್ಣೇಶ್ವರಿ ಫುಡ್‌ ಪ್ರಾಡೆಕ್ಟ್ಸ್‌ನಿಂದ ಖಾರದ ಪುಡಿ ಮಾರಾಟ ಮಾಡುತ್ತಿದ್ದಾರೆ. ಇವರ ಉತ್ಪನ್ನಗಳಿಗೆ ಹೊರ ರಾಜ್ಯಗಳಿಂದಲೂ ಬೇಡಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.