ADVERTISEMENT

ಅಕ್ಕಂದಿರ ಸಂಖ್ಯೆ ನೂರ್ಮಡಿಯಾಗಲಿ: ಗಾಯಕಿ ಎಂ.ಡಿ.ಪಲ್ಲವಿ ಮಾತು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 19:31 IST
Last Updated 6 ಮಾರ್ಚ್ 2021, 19:31 IST
ಎಂ.ಡಿ.ಪಲ್ಲವಿ
ಎಂ.ಡಿ.ಪಲ್ಲವಿ   

ಜಗತ್ತಿನಲ್ಲಿ ಹೆಣ್ಣು ಓದಬಾರದು, ಕಲಿಯಬಾರದು ಎಂಬ ಸ್ಥಿತಿಯಿಂದ ಓದಿ, ಕಲಿತು ಸಾಧಿಸಬೇಕು ಎಂಬ ಸ್ಥಿತಿಗೆ ಬಂದು ತಲುಪಿದ್ದಾಳೆ. ಅನ್ಯಗ್ರಹದಲ್ಲಿ ಹೆಜ್ಜೆ ಇಡುವ ತವಕದಲ್ಲಿ ಮಹಿಳೆ ಇದ್ದಾಳೆ. ಈಗಾಗಲೇ ಯುದ್ಧ ಭೂಮಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾಳೆ. ಜಗತ್ತು ದೊಡ್ಡ ಪ್ರಮಾಣದಲ್ಲಿ ಬದಲಾವಣೆಗೆ ತೆರೆದುಕೊಂಡಿದ್ದರೂ ಪುರುಷ ಪ್ರಧಾನ ನೋಟ ಹೋಗಿಲ್ಲ. ಹೆಣ್ಣಿನ ಮೇಲೆ ನಿತ್ಯ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ ಪ್ರಕರಣಗಳೇ ಇದಕ್ಕೆ ಸಾಕ್ಷಿ.

ಹೆಣ್ಣು ಕೂಡ ಮನುಷ್ಯ ಜಾತಿಗೆ ಸೇರಿದ್ದಾಳೆ ಅಲ್ಲವೇ? ಹಾಗಿದ್ದರೂ ಸ್ವತ್ತು ಎಂಬ ದೃಷ್ಟಿಕೋನವೇಕೆ? ಸಮಾಜದಲ್ಲಿ ಮನುಷ್ಯಳಾಗಿ ಗುರುತಿಸಿಕೊಳ್ಳಲು ಮಹಿಳೆ ಇನ್ನೂ ಹೋರಾಟ ನಡೆಸುತ್ತಲೇ ಇದ್ದಾಳೆ, ಮುಂದೆಯೂ ಹೋರಾಡಲೇಬೇಕಿದೆ.

ಇದು ಮನೋರೋಗವಲ್ಲ, ಪುರುಷರ ಮನಸ್ಥಿತಿಯಷ್ಟೆ. ಮನಸ್ಥಿತಿ ಬದಲಿಸಿಕೊಂಡು ಸಮಾನವಾಗಿ ನೋಡಲೇನು ಕಷ್ಟ? ಸಮಾನವಾಗಿ ಕಾಣಲು ಅವಮಾನವೇ? ಅಹಂಕಾರ ಇರಬಹುದಾ? ಬರೀ ಪ್ರಶ್ನೆಗಳೇ ಮೂಡುತ್ತವೆ.

ADVERTISEMENT

ನಮ್ಮ ಕಲಾ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಸೃಜನಶೀಲತೆಗೆ ಅಗಾಧ ಅವಕಾಶಗಳಿವೆ. ಹೆಣ್ಣು ನಾಲ್ಕು ಗೋಡೆಯ ಪಂಜರದಿಂದ ಹೊರಬಂದು ಹಾಡಬಹುದು, ಕುಣಿಯಬಹುದು, ನಾಟಕ ಮಾಡಬಹುದು, ಸಿನಿಮಾದಲ್ಲಿ ನಟಿಸಬಹುದು. ಕಲಾಕ್ಷೇತ್ರದಲ್ಲಿ ಸುರಕ್ಷತೆಗೆ ಕೊರತೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಗೆ ಸುರಕ್ಷತೆ ಇದೆ. ರಾತ್ರಿ ಪಾಳಿಯಲ್ಲಿ ಕೆಲಸಮಾಡುವ ಧೈರ್ಯ ತೋರಿದ್ದಾಳೆ. ಇಷ್ಟೆಲ್ಲಾ ಇದ್ದರೂ ಸ್ವತ್ತು ಎಂಬಂತೆ ನೋಡುವ ನೋಟ ಬದಲಾಗದೇ ಇರುವುದು ನೋವಿನ ಸಂಗತಿ.

ಇತಿಹಾಸ, ಪುರಾಣಗಳ ಪುಟ ತೆರೆದರೆ ಬರೀ ಬಸವಣ್ಣರೇ ಕಾಣಿಸುತ್ತಾರೆ, ಒಬ್ಬಳೇ ಅಕ್ಕ ಮಹಾದೇವಿ. ಹತ್ತು ಬಸವಣ್ಣರಿಗೆ ಒಬ್ಬಳೇ ಅಕ್ಕ.

ಅಕ್ಕ ಮಹಾದೇವಿಯಂತಹ ಅಕ್ಕಂದಿರ ಸಂಖ್ಯೆ ನೂರ್ಮಡಿಯಾಗಬೇಕು.

ನಿರೂಪಣೆ: ಎಂ.ಎನ್‌.ಯೋಗೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.