ADVERTISEMENT

Body shaming: ಬದಲಾಗುವುದೇ ಸೌಂದರ್ಯದ ವ್ಯಾಖ್ಯಾನ...

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 23:30 IST
Last Updated 16 ಫೆಬ್ರುವರಿ 2024, 23:30 IST
   
ಸೌಂದರ್ಯ ಎಂಬುದರ ವ್ಯಾಖ್ಯಾನ ಬದಲಾಗಬೇಕಿದೆ. ಬರೀ ದೇಹಕ್ಕಷ್ಟೇ ಮೀಸಲಿರುವ ಈ ಪದ ಮನಸಿನ ವ್ಯಾಪ್ತಿಯನ್ನು ಮೀರಬೇಕಿದೆ. ಏಕೆಂದರೆ ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ.. ಪರಿಪೂರ್ಣತೆ ಎಂಬುದು ಒಂದು ಕಲ್ಪನೆಯಷ್ಟೇ. 

ವರ್ಷದ ಹಿಂದಷ್ಟೆ ನಾನು ಸ್ನಾತಕೋತ್ತರ ಪದವಿ ಮುಗಿಸಿ ಪಿ ಯು ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ್ದೆ. ನೆರೆಹೊರೆಯವರು ಕೆಲಸ,ಸಂಬಳದ ಕುರಿತು ಕೇಳುವ ಪ್ರಶ್ನೆಗಳು  ಮತ್ತು ನಾನದಕ್ಕೆ ಉತ್ತರಿಸುವುದು ದಿನಚರಿಯಾಗಿತ್ತು. ಆದರೆ ದಿನಕಳೆದಂತೆ ವೃತ್ತಿಯ ಕುರಿತಾದ ಪ್ರಶ್ನೆಗಳು ಕೊಂಚ ಕೊಂಚವೇ ಬದಲಾಗುತ್ತ ದೈಹಿಕ ಸ್ವರೂಪದ ಬಗೆಗೆ ನಾಟಕೀಯ ನೋಟಗಳು ಪ್ರಾರಂಭವಾದವು.

ಕಾಲೇಜಿನಲ್ಲಿ ಮಕ್ಳು ನಿನ್ ಮಾತ್ ಕೇಳ್ತಾರಾ? ನಾನೆಲ್ಲೋ ನಿನ್ನ ಹೈಸ್ಕೂಲ್ ಹುಡ್ಗಿ ಅನ್ಕೊಂಡಿದ್ದೆ! ಮಕ್ಳು ನಿನ್ನನ್ನು ರೇಗ್ಸೋದಿಲ್ಲ ತಾನೆ? ಇತ್ಯಾದಿ ಸಾಲು ಸಾಲು ಟೀಕೆಗಳು ಹಾಸ್ಯಮಿಶ್ರಿತ ವ್ಯಂಗ್ಯ ಧ್ವನಿಯಲ್ಲಿ ನನ್ನನ್ನು ದಾಳಿಮಾಡಲಾರಂಭಿಸಿದವು. ಆರಂಭದಲ್ಲಿ ಎಲ್ಲದಕ್ಕೂ ನಗುನಗುತ್ತಲೇ ನಯವಾಗಿ ಉತ್ತರಿಸುತ್ತಿದ್ದ ನನಗೆ ದಿನಕಳೆದಂತೆ ಇಂತಹ ಅಸಂಬದ್ಧ ಪ್ರಶ್ನೆಗಳು ರೇಗಿ ಹೋದವು. ಅವರು ಯಾರೂ ನಾನು ಮಾಡುವ ಪಾಠ ಕೇಳಿದವರಲ್ಲ,  ನನ್ನ ವಿದ್ಯಾರ್ಹತೆಯ ಬಗ್ಗೆ ಅವರಿಗೆ ಸಂಶಯವೂ ಇರಲಿಲ್ಲ, ಆದರೆ ಅವರಿಗೆ ಸಮಸ್ಯೆಯಾಗಿದ್ದು ನನ್ನ  ಎತ್ತರ!

ದೇಹದ ಆಕಾರ, ತೂಕ, ಎತ್ತರ, ವಯಸ್ಸು, ಉಡುಪು, ಚರ್ಮದ ಬಣ್ಣದ ಕುರಿತ ಟೀಕೆಗಳಲ್ಲಿ ಮಹಿಳೆ ಮತ್ತು ಪುರುಷರಿಬ್ಬರೂ ನಲಗುತ್ತಿದ್ದಾರೆ. ತೆಳ್ಳಗಿದ್ದರೆ ಕಡ್ಡಿ, ಎತ್ತರವಿದ್ದರೆ ಲಂಬು, ಬೆಳ್ಳಗಿದ್ದರೆ ಬಿಳಿ ಜಿರಲೆ , ಕುಳ್ಳಗಿದ್ದರೆ ಕುಳ್ಳಿ, ದಪ್ಪಗಿದ್ದರೆ ಡುಮ್ಮಿ, ಕಪ್ಪಗಿದ್ದರೆ ಕರಿಯಮ್ಮ, ಮೊಡವೆ ತುಂಬಿದ ಮುಖ, ವಯಸ್ಸಾಗದೆ ವಯಸ್ಸಾದವರಂತೆ ಕಂಡರೆ ಆಂಟಿ/ ಅಂಕಲ್ ...ದೈಹಿಕ ಸ್ವರೂಪದ ಅವಹೇಳಿಸುವ ಮಾತುಗಳು ನೂರಾರು. 

ADVERTISEMENT

ಜಗತ್ತು ತನ್ನಷ್ಟಕ್ಕೆ ತಾನೇ ಹೆಣ್ಣು ಮತ್ತು ಗಂಡಿನ ಭೌತಿಕ ನಿಲುವಿನ ಕುರಿತು ಕೆಲವು ಕೃತಕ ಕಲ್ಪನೆಗಳನ್ನು ಸೃಷ್ಟಿಸಿಕೊಂಡಿದೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು  ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡಲಾಗುತ್ತಿದೆ. ಸಹಿಸಲಾಗದೇ ಹತಾಶರಾಗುವವರು ಖಿನ್ನತೆಗೆ ಒಳಗಾಗುತ್ತಾರೆ. ‌ಬಾಡಿ ಶೇಮಿಂಗ್ ಗೆ ಸಾಮಾಜಿಕ ಜಾಲತಾಣಗಳು ಮುಖ್ಯ ವೇದಿಕೆಯಯಾಗುತ್ತಿದೆ ಎಂಬುದು ವಿಚಿತ್ರ ಸತ್ಯ.

ಇಂದಿನ ನಟಿಯರು ದೇಹದ ವಿವಿಧ ಭಾಗಗಳನ್ನು ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸುತ್ತಿರುವುದು ವಿಪರ್ಯಾಸ. ಅಸಲಿಗೆ ಈ ಪರಿವರ್ತನೆ ಲೋಕ ತೃಪ್ತಿಗಾಗಿಯೇ ಹೊರತು ಆತ್ಮತೃಪ್ತಿಗಾಗಿ ಅಲ್ಲ!"ನಾನು ಸುಂದರವಾಗಿ ಕಾಣಬೇಕು..", "ನಾನು ಆಕರ್ಷಕ ಮೈಕಟ್ಟನ್ನು ಹೊಂದಿರಬೇಕು..","ಇತರರು ನನ್ನನ್ನು ನೋಡಿ ಮೆಚ್ಚಬೇಕು ಎಂಬ ಗೀಳು ಈಗ ಸಾಂಕ್ರಾಮಿಕವಾಗಿದೆ. 

ಸೌಂದರ್ಯ ಎಂಬುದರ ವ್ಯಾಖ್ಯಾನ ಬದಲಾಗಬೇಕಿದೆ. ಬರೀ ದೇಹಕ್ಕಷ್ಟೇ ಮೀಸಲಿರುವ ಈ ಪದ ಮನಸಿನ ವ್ಯಾಪ್ತಿಯನ್ನು ಮೀರಬೇಕಿದೆ. ಏಕೆಂದರೆ ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ.. ಪರಿಪೂರ್ಣತೆ ಎಂಬುದು ಒಂದು ಕಲ್ಪನೆಯಷ್ಟೇ. 

ನಮ್ಮ ದೇಹವನ್ನು ನಾವು ಪ್ರೀತಿಸಿ, ಸಕಾರಾತ್ಮಕವಾಗಿ ಸ್ವೀಕರಿಸಬೇಕು ಅಷ್ಟೇ ಅಲ್ಲ  ಒಂದಲ್ಲ ಒಂದು ರೀತಿಯಲ್ಲಿ ಅಪರಿಪೂರ್ಣರಾದ ನಾವು ಬೇರೆಯವರ ದೇಹಾಕೃತಿಯನ್ನು ಕುರಿತು ಆಡಿಕೊಳ್ಳುವ  ಅನುಚಿತ ಮಾರ್ಗವನ್ನು ತುಳಿಯಬಾರದು. ಎದುರಿಗೆ ನಿಂತ ವ್ಯಕ್ತಿಯ ದೈಹಿಕ ನಿಲುವನ್ನು ನೋಡಿ ನಾವು ಏನನ್ನು ನಿರ್ಧರಿಸಲಾಗದು ಆ ವ್ಯಕ್ತಿಯ ಸ್ವಭಾವ ತಿಳಿದಾಗಲೇ ಅವನ ವ್ಯಕ್ತಿತ್ವದ ಪರಿಚಯವಾಗುವುದು. 

ವ್ಯಕ್ತಿಯ ದೇಹಾಕಾರದ ಮೂಲಕ ಆತನ ಯೋಗ್ಯತೆ ಅಳೆಯುವುದಕ್ಕಿಂತ ವ್ಯಕ್ತಿತ್ವ ನೋಡುವುದು ನಿಜವಾದ ಮಾನವೀಯ ಮಾರ್ಗವಲ್ಲವೇ...?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.