ADVERTISEMENT

ಒಳಗೊಳ್ಳುವಿಕೆಯ ಒಳನೋಟಗಳು

ಪ್ರಜಾವಾಣಿ ವಿಶೇಷ
Published 8 ಮಾರ್ಚ್ 2024, 23:30 IST
Last Updated 8 ಮಾರ್ಚ್ 2024, 23:30 IST
   

ಮತ್ತೊಂದು ಮಹಿಳಾ ದಿನ...
ನಮ್ಮ ಮೊಬೈಲ್‌ನ ಇನ್ಬಾಕ್ಸ್ ಮತ್ತದೇ ಟೆಂಪ್ಲೇಟ್ ಮೆಸೇಜ್ ಗಳಿಂದ ತುಂಬಿದ್ದವು...
‘ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಜಗತ್ತನ್ನು ಸುಂದರಗೊಳಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು’ ಎನ್ನುವ ಮತ್ತದೇ ಸಂದೇಶಗಳು ಇವೆಲ್ಲ ಪಾತ್ರಗಳ ಆಚೆಗೆ ಆಕೆಗೊಂದು ಬದುಕು, ಕೆರಿಯರ್ ಇದೆ ಎನ್ನುವುದನ್ನೇ ಮರೆಸಿಬಿಡುತ್ತವೆ.

ಈ ವರ್ಷದ ಮಹಿಳಾ ದಿನ ಒಳಗೊಳ್ಳುವಿಕೆಯ ಕುರಿತಾದದ್ದು. ಡೈವರ್ಸಿಟಿ(ವಿವಿಧತೆ) ಮತ್ತು ಇನ್ಕ್ಲೂಷನ್ (ಒಳಗೊಳ್ಳುವಿಕೆ) ಇವೆರೆಡೂ ನಾವು ಐಟಿ ಮಂದಿ ಪ್ರತಿನಿತ್ಯ ಕೇಳುವ ಮಾತುಗಳು. ಹಾಗೆ ನೋಡಿದರೆ ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಒಳಗೊಳ್ಳುವಿಕೆ ಎನ್ನುವುದು ಕೇವಲ ಮಹಿಳೆಯರಿಗಷ್ಟೆ ಸೀಮಿತವಾಗಿಲ್ಲ. ಬದಲಿಗೆ LGBTQ+ ಸಮುದಾಯದ ಕುರಿತದ್ದೂ ಆಗಿದೆ.

ಮೇಲ್ಮಟ್ಟದ ಆಡಳಿತವರ್ಗದಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆ ಕಡಿಮೆಯಾಗಲು ಹಲವು ಕಾರಣಗಳಿವೆ.  ಮುಖ್ಯವಾಗಿ ಸಮಾಜ ಕಟ್ಟಿಕೊಂಡಿರುವ ಸಿದ್ಧ ಮಾದರಿಗಳು. ಅವೆಲ್ಲ ಮೀರಿಯೂ ಇಂದು ಹೆಣ್ಣು ಜಗತ್ತಿನ 'ಫಾರ್ಚೂನ್- 500' ಕಂಪನಿಗಳನ್ನ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾಳೆ.

ADVERTISEMENT

ಒಳಗೊಳ್ಳುವಿಕೆಯನ್ನು ಪ್ರೇರೇಪಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಒಳಗೊಳ್ಳುವಿಕೆಯಲ್ಲಿ ಮಹಿಳೆಯರದಷ್ಟೆ ಅಲ್ಲದೆ ಮನೆಯೊಳಗಿನ ಮತ್ತು ಮನೆಯಾಚೆಯ ಪುರುಷ ಸದಸ್ಯರ ಒಳಗೊಳ್ಳುವಿಕೆಯನ್ನೂ ಸಾಧ್ಯವಾಗಿಸಬೇಕು.

ಇನ್ನೊಂದು, ಮುಖ್ಯವಾಗಿ ಕೆಲಸ ಮಾಡುವ ಪರಿಸರ ನಮ್ಮದು ಎನ್ನುವ ಭಾವನೆ ಮೂಡಿಸುವಂತಿರಬೇಕು. ತಾವು ಕೆಲಸ ಮಾಡುವಲ್ಲಿ ತಮಗೆ ಸುರಕ್ಷತೆ, ಗೌರವ ಸಿಗುವುದರಲ್ಲಿ ಬೇಧ ಭಾವ ಇದೆ ಅನ್ನಿಸಬಾರದು.

ಅಂತಿಮವಾಗಿ ಎಲ್ಲ ಹಿನ್ನಲೆಯ ಜನರಿಗೂ ಸಮಾನ ಅವಕಾಶಗಳನ್ನು ಸೃಷ್ಟಿಸುವುದು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಎತ್ತಿಹಿಡಿಯುವುದು ಒಳಗೊಳ್ಳುವಿಕೆಗೆ ಪ್ರೇರೇಪಿಸುತ್ತದೆ.

ಇದೆಲ್ಲ ಹೆಣ್ಣು ಕಾರ್ಯಕ್ಷೇತ್ರ ಗಳಲ್ಲಿ ಒಳಗೊಳ್ಳುವಿಕೆಯನ್ನ ಪ್ರೇರೇಪಿಸಲು ಕೈಗೊಳ್ಳಲೇ ಬೇಕಾದ ಕಾರ್ಯಗಳು. ಆದ್ರೆ ಈ ರೀತಿಯ ಪಾಲಿಸಿ, ಕಾರ್ಯಕ್ರಮಗಳ ಹೊರತಾಗಿಯೂ ಅಲ್ಲಲ್ಲಿ ಬ್ಲೈಂಡ್ ಸ್ಪಾಟ್‌ಗಳು ಇವೆ. ಅವನ್ನ ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ.

ಇಂಪೋಸ್ಟರ್ ಸಿಂಡ್ರೋಮ್ ಅಂದರೆ ತಮ್ಮ ಸಾಮರ್ಥ್ಯದ ಕುರಿತಾಗಿ ಇರುವ ಅಪನಂಬಿಕೆ ಮತ್ತು ಆಂತರಿಕ ಭಯ ಇದು ಎಲ್ಲಾ ವರ್ಗದ ಹೆಣ್ಣು ಮಕ್ಕಳು ಎದುರಿಸುವ ಸವಾಲು.

ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳು ಹಲವಾರು ರೀತಿಯಲ್ಲಿ ಮತ್ತೆ ಮತ್ತೆ ಹೊರಬರುತ್ತಲೆ ಇರುತ್ತವೆ. ಮಹಿಳಾ ಸಹೋದ್ಯೋಗಿಗಳ ಬಗೆಗಿನ ಅಸಹನೆ, ಟೀ ಬ್ರೇಕುಗಳಲ್ಲಿ ಮಾಡುವ ಸೆಕ್ಸಿಸ್ಟ್ ಜೋಕುಗಳ ಮೂಲಕ ಕಿವಿಗೆ ಬೀಳುತ್ತವೆ. ಇದ್ಯಾವುದೂ ಸಹ ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸದಂತೆ ನೋಡಿಕೊಳ್ಳುವುದು ಮತ್ತು ಈ ತರದ ಘಟನೆಗಳು ನಡೆದಾಗ ಅವು ನಡೆದ ಜಾಗಗಳಲ್ಲೆ ಅವುಗಳನ್ನ ಹೈಲೈಟ್ ಮಾಡಿ ನಮಗೆ ಆಗುವ ಕಸಿವಿಸಿಯನ್ನು ಹೇಳುವುದು ಸಹ ಒಂದು ಜವಾಬ್ದಾರಿ. ನಮಗೆ ಸಹಜವಾಗಿ ಸಿಗಬೇಕಾದ ಗೌರವವನ್ನು ಎಷ್ಟೋ ಸಲ ನಾವು ಕೇಳಿ ಪಡೆಯಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ!

ಅಪ್ರಜ್ಞಾಪೂರ್ವಕವಾದ ಪೂರ್ವಾಗ್ರಹ (unconsious bias) ಇದು ಹೆಣ್ಣು ತನ್ನ ಜೀವನದ ಪ್ರತಿ ಹಂತದಲ್ಲೂ ಎದುರಿಸುವ ಸವಾಲು. ಅದರಲ್ಲೂ ಅಧಿಕಾರಯುತವಾದ ಹುದ್ದೆಗಳಲ್ಲಿರುವವರು ನಿರ್ಧಾರಗಳನ್ನು ಕೈಗೊಳ್ಳುವಾಗ ಎದುರಿಸಬೇಕಾದ ಸವಾಲು ಸಹ. ಆಕೆ ಹೆಣ್ಣು ಆಕೆಯ ಕೈಲಿ ಇದನ್ನ ನಿಭಾಯಿಸಲು ಸಾಧ್ಯ ಇಲ್ಲ ಅನ್ನೋ ಮನೋಭಾವ.

ಹೆಣ್ಣಾಗಿರುವ ಕಾರಣಕ್ಕಾಗಿಯೆ ಎದುರಿಸಬೇಕಾದ ಸವಾಲುಗಳಿಗೆ ಸೂಕ್ತ ಮಾರ್ಗದರ್ಶನ ಸಿಗದೇ ಇದ್ದಾಗ ಅವರ ವೃತ್ತಿಬದುಕಿನ ಏಳಿಗೆಗೆ ಅಡ್ಡಿಯಾಗುತ್ತದೆ.

ಈ ಎಲ್ಲಾ ಪೂರ್ವಗ್ರಹಕ್ಕಿಂತ ಹೆಚ್ಚಾಗಿ ಹೆಣ್ಣು ಎದುರಿಸುವುದು ಕೌಟುಂಬಿಕ ಬೆಂಬಲದ ಕೊರತೆ...

ನನ್ನ ಪಕ್ಕದ ಮನೆಯಾಕೆ ಐಟಿ ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್. 250ಕ್ಕೂ ಹೆಚ್ಚು ಜನ ಆಕೆಗೆ ರಿಪೋರ್ಟ್ ಮಾಡ್ತಾರೆ. ಅಷ್ಟೆಲ್ಲ ಇದ್ದೂ ಸಹ ಆಕೆ ಮನೆಯಲ್ಲಿ ಎರಡನೇ ದರ್ಜೆಯ ಪ್ರಜೆಯಂತೆ ಬದುಕುತ್ತಾಳೆ. ಇದು ಬಹಳಷ್ಟು ಜನ ಹೆಣ್ಣು ಮಕ್ಕಳ ಕತೆ.

ಎಷ್ಟೋ ಹೆಣ್ಣು ಮಕ್ಕಳು ಮದುವೆ, ಮಕ್ಕಳಾದ ತಕ್ಷಣ ತಮ್ಮ ಔದ್ಯೋಗಿಕ ಬದುಕು ಮುಗಿಯಿತು ಅಂದುಕೊಳ್ಳುತ್ತಾರೆ. ಇದಕ್ಕೆ ಕಾರಣ ಹೆಣ್ಣು ಮನೆಯ ಒಳಗೂ ಹೊರಗೂ ದುಡಿಯಬೇಕಾದ ಅನಿವಾರ್ಯ. ಮಹಿಳೆಯರು ಕೆಲಸ ಮಾಡಲು ಆಗದೆ ಅಥವ ವೃತ್ತಿಜೀವನದಲ್ಲಿ ಬದ್ಧತೆ ಇಲ್ಲದ ಕಾರಣಗಳಿಗೆ ಉದ್ಯೋಗ ತೊರೆಯುವುದಿಲ್ಲ. ತಾಯ್ತನ/ಆದರ್ಶ ಗೃಹಿಣಿಯ ಬೇಡಿಕೆಗಳ ಎದುರು ವೃತ್ತಿ ಬೇಡಿಕೆಗಳಿಗೆ ತಾಳೆ ಆಗದಿದ್ದಾಗ ಮಹಿಳೆಯರು ಕೆಲಸ ಬಿಡುತ್ತಾರೆ.

 ಪ್ರತಿ ಮಹಿಳೆಯೂ ಮಾನಸಿಕವಾಗಿ ಗಟ್ಟಿಗಿತ್ತಿಯಾಗುವುದನ್ನು ನಾವು ಖಾತರಿಪಡಿಸಿಕೊಳ್ಳಬೇಕು. ಸಂಸ್ಥೆಯ ಮಟ್ಟದಲ್ಲಿ ಎಷ್ಟೆಲ್ಲ ಪಾಲಿಸಿಗಳಿದ್ದರೂ ಸಹ ವೈಯುಕ್ತಿಕವಾಗಿ ಮಾರ್ಗದರ್ಶನದ ಅವಶ್ಯಕತೆ ತುಂಬಾ ಇದೆ. ಕಾರ್ಯಕ್ಷೇತ್ರಗಳಲ್ಲಿ ಸಹೋದ್ಯೋಗಿಗಳು ಎದುರಿಸುವ ಸವಾಲುಗಳಿಗೆ ಕಿವಿಯಾಗಿ ಅವರಿಗೆ ಒಂದು ಮಟ್ಟಿಗಿನ ಚೇತರಿಕೆ ಸಿಗುವ ಹಾಗೆ ಮಾಡುವುದು ಈಗಿರುವ ತುರ್ತು.

ಮಹಿಳೆಯರನ್ನು ಔದ್ಯೋಗಿಕ ಸ್ಥಳಗಳಲ್ಲಿ ಹೆಚ್ಚಾಗಿ ಒಳಗೊಳ್ಳುವಂತೆ ಮಾಡುವಲ್ಲಿ ಹಾಗೂ ಬೆಂಬಲಿಸುವಲ್ಲಿ ಪುರುಷರ ಪಾತ್ರ ಮಹತ್ವದ್ದಾಗಿದೆ. ಕೌಟುಂಬಿಕ ಪರಿಸರ ಒಳಗೊಂಡಂತೆ ಎಲ್ಲ ಕಡೆಗಳಲ್ಲೂ ಪುರುಷರು ಮಹಿಳೆಯರಿಗೆ ಬೆಂಬಲವಾಗಿ ನಿಲ್ಲಬೇಕು. ಮಹಿಳೆಯರಿಗೆ ಸಮಾನ ಅವಾಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ, ಪಕ್ಷಪಾತಗಳಂತಹ ಸವಾಲುಗಳನ್ನು ಎದುರಿಸುವಲ್ಲಿ, ಮಹಿಳಾ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪುರುಷರು ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು.

ಹಾಗಂತ ಪುರುಷರು ಪ್ರಖರ ಮಹಿಳಾವಾದಿಗಳಾಗಿರಬೇಕು ಅಥವಾ ಲಿಂಗ ಸಮಾನತೆಯ ಹೋರಾಟಗಾರರಾಗಿರಬೇಕು ಎಂದೇನಿಲ್ಲ. ಅನುಭೂತಿ ತೋರುವ ಗುಣಗಳನ್ನು ಹೊಂದಿದ್ದರೆ ಸಾಕು. ಮಹಿಳೆಯರಿಗೆ ಕಸಿವಿಸಿ ಉಂಟುಮಾಡುವಂತಹ ಕೆಟ್ಟ ಜೋಕ್‌ಗಳ ಅಥವಾ ಕಾಮೆಂಟ್‌ಗಳನ್ನು ಪ್ರಶ್ನಿಸುವಷ್ಟು ಸಂವೇದನೆ ಬೆಳೆಸಿಕೊಳ್ಳಬೇಕು.

ಮನೆ ಮತ್ತು ಮನೆಯ ಹೊರಗೆ ಎರಡೂ ಕಡೆಗಳಲ್ಲಿ ಮಹಿಳೆಯರನ್ನು ಒಳಗೊಳ್ಳುವ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಪುರುಷರು ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅದರ ಪರಿಣಾಮ ಸಾಮಾಜಿಕವಾಗಿ ಬದಲಾವಣೆಯನ್ನು ತರುತ್ತದೆ. ಮಹಿಳೆಯರ ಇಚ್ಛಾಶಕ್ತಿಯನ್ನು ಹೆಚ್ಚು ಮಾಡುತ್ತದೆ. ಸಮಸಮಾಜವನ್ನು ನಿರ್ಮಿಸುತ್ತದೆ. ಮುಂದಿನ ಪೀಳಿಗೆಗಳಿಗೆ ಪ್ರಬಲ ಅನುಕರಣೀಯ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತದೆ.

ಮುಂದಿನ ಮಹಿಳಾ ದಿನಕ್ಕೆ ನಾವು ಈ ರೀತಿಯ ಮೆಸೇಜ್ ಗಾಗಿ ಕಾಯೋಣವೇ??
‘ಎಂಜಿನಿಯರ್ ಆಗಿ, ವೈದ್ಯೆಯಾಗಿ, ಶಿಕ್ಷಕಿಯಾಗಿ, ಚಾಲಕಿಯಾಗಿ, ಗೃಹಿಣಿಯಾಗಿ ಹೀಗೆ ಎಲ್ಲಾ ವಲಯಗಳಲ್ಲೂ ಸಮಾನತೆಗಾಗಿ ಮತ್ತು ತಮ್ಮ ಆತ್ಮ ಗೌರವಕ್ಕಾಗಿ ಅವಿರತವಾಗಿ ಹೋರಾಡುತ್ತಿರುವ ಎಲ್ಲ ಮಹಿಳೆಯರಿಗೆ ನಿಮ್ಮ ದಿನದ ಶುಭಾಶಯಗಳು’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.