ನಮ್ಮದು ಚಿಕ್ಕ ಸಂಸಾರ. ನಾನು, ನನ್ನ ಪತಿ, ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ಅತ್ತೆ ಕೂಡ ನಮ್ಮ ಜೊತೆಗೆ ಇದ್ದರು. ಕೋವಿಡ್ ನನ್ನ ಗಂಡನನ್ನು ಬಲಿ ತೆಗೆದುಕೊಂಡಿತು. ಆಕಾಶವೇ ತಲೆ ಮೇಲೆ ಬಿದ್ದಂತೆ, ಜೀವನವೇ ಸಾಕು ಎನ್ನುವಂತಾಯಿತು.
ಆದರೆ, ಇಬ್ಬರು ಹೆಣ್ಣುಮಕ್ಕಳು ಹಾಗೂ ವಯಸ್ಸಾದ ಅತ್ತೆಯ ಜವಾಬ್ದಾರಿ ನನ್ನ ಮೇಲೆ ಇತ್ತು. ಅಸಹಾಯಕತನ ಕಾಡತೊಡಗಿತು. ನನ್ನ ನೋವನ್ನೆಲ್ಲಾ ಅದುಮಿಟ್ಟು ಅವರ ಭವಿಷ್ಯತ್ತಿಗಾಗಿ ಬದುಕಿನ ಜೊತೆ ಹೋರಾಡಲು ಆರಂಭಿಸಿದೆ ಎನ್ನುತ್ತಾರೆ ಬೆಂಗಳೂರಿನ ಸರಸ್ವತಿ.
ಪದವೀಧರೆಯಾಗಿದ್ದೆ. ಖಾಸಗಿ ಕಂಪನಿಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ಕೋವಿಡ್‌ನಿಂದಾಗಿ ಕಂಪನಿ ಬಾಗಿಲು ಮುಚ್ಚಿತು. ಈ ಸಂದರ್ಭದಲ್ಲಿ, ನನ್ನ ಪಾಲಿಗೆ ದೇವರಂತೆ ಕಂಡಿದ್ದು ಆಟೊ ಓಡಿಸೋದು. ಮೆಟ್ರೋರೈಡ್ ಸಂಸ್ಥೆ ಮಹಿಳೆಯರಿಗೆ ಉಚಿತವಾಗಿ ಆಟೊ ಡ್ರೈವಿಂಗ್ ಕಲಿಸಿ, ಡ್ರೈವಿಂಗ್ ಲೈಸೆನ್ಸ್ ನೀಡಿ, ಚಲಾಯಿಸಲು ಆಟೊವನ್ನು ಕೂಡ ನೀಡುತ್ತದೆ ಎಂದು ತಿಳಿದುಕೊಂಡೆ. ಕೂಡಲೇ ಹೋಗಿ ಅವರನ್ನು ಸಂಪರ್ಕಿಸಿ, ನನ್ನ ಜೀವನ ವೃತ್ತಾಂತವನ್ನು ಹೇಳಿದೆ. ಅವರು ನನಗೆ ಸಹಾಯ ಮಾಡಲು ಮುಂದಾದರು.
ಒಂದೇ ತಿಂಗಳಲ್ಲಿ ಆಟೊ ಓಡಿಸುವುದು ಕಲಿತೆ. ಅಲ್ಲಿಂದ ಆಟೊ ಚಲಾಯಿಸಲು ಆರಂಭಿಸಿದೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಆಟೊ ಓಡಿಸುತ್ತಿದ್ದೇನೆ. ದಿನಕ್ಕೆ ₹800 ವರೆಗೆ ದುಡಿಯುತ್ತಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾದೆ. ದೊಡ್ಡವಳು ಬಿಎಸ್ಸಿ ಓದುತ್ತಿದ್ದರೆ, ಚಿಕ್ಕವಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.
ನಾನು ಬ್ಯೂಟಿಷಿಯನ್, ನನ್ನ ಗಂಡ ಸಿನಿಮಾದಲ್ಲಿ ಮೇಕಪ್ ಆರ್ಟಿಸ್ಟ್. ಆರತಿ–ಕೀರ್ತಿಗೆ ಎನ್ನುವಂತೆ ಇಬ್ಬರು ಮಕ್ಕಳು. ಸಂಸಾರ ಸರಾಗವಾಗಿ ನಡೆಯುತ್ತಿತ್ತು. ನನ್ನ ಗಂಡನಿಗೆ ಬ್ರೈನ್ ಸ್ಟ್ರೋಕ್ ಆಯಿತು. ಚಿಕಿತ್ಸೆಗಾಗಿ ದುಡ್ಡೆಲ್ಲಾ ಖರ್ಚಾಯಿತು. ಬ್ರೈನ್ ಸ್ಟ್ರೋಕ್‌ನಿಂದಾಗಿ ನನ್ನ ಗಂಡನೂ ಮಗುವಿನಂತಾದ. ಒಟ್ಟು ನನಗೆ ಮೂವರು ಮಕ್ಕಳಾದರು. ಕುಟುಂಬದ ಜವಬ್ದಾರಿ ನನ್ನ ಹೆಗಲಿಗೆ ಬಿತ್ತು ಎನ್ನುತ್ತಾರೆ ವೀರಕುಮಾರಿ.
ಬ್ಯೂಟಿಷಿಯನ್ ಕೆಲಸದಿಂದ ಬರುತ್ತಿದ್ದ ಆದಾಯವು ಕುಟುಂಬಕ್ಕೆ ಸಾಕಾಗುತ್ತಿರಲ್ಲಿಲ್ಲ. ಎಸ್‌ಎಸ್‌ಎಲ್‌ಸಿ ಓದಿದ್ದ ನಾನು ಆಗ ಆಟೊ ವೃತ್ತಿಯನ್ನು ಆರಂಭಿಸಿದೆ. ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಆಟೊ ಓಡಿಸುವೆ, ನಂತರ ಬ್ಯೂಟಿಷಿಯನ್ ಕೆಲಸ ಮಾಡುವೆ. ಮಗ ಡಿಪ್ಲೊಮಾ, ಮಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಹೆಣ್ಣು ಮನ್ಯಾಗೆ ಇರ್ಬೇಕು, ಹೊರಗಡೆ ಬರಬಾರ್ದು, ನೆಟ್ಟಗೆ ಅಡುಗೆ ಮಾಡೋಕೇ ಬರೋಲ್ಲ ನಿನಗೆ. ಗಂಡನ ಈ ಮಾತು ಕೇಳಿ ಕೇಳಿ ದಿನನಿತ್ಯವೂ ಸಾಕಾಯಿತು. ಜೊತೆಗೆ ಮಕ್ಕಳೂ ಇದನ್ನೇ ನಿಜವೆಂದು ಭ್ರಮಿಸಿ, ಅವರೂ ಹಾಗೇ ಹೇಳಲಾರಂಭಿಸಿದರು. ಸಹನೆಯ ಕಟ್ಟೆ ಒಡೆಯಿತು.
ನನಗೆ ಏನಾದರೂ ಜೀವನದಲ್ಲಿ ಸಾಧಿಸಬೇಕು, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಲೇಬೇಕೆಂಬ ಹಟದಿಂದ ಸೈಕಲ್ ಕೂಡ ಓಡಿಸದೇ ಇದ್ದ ನಾನು, ಆಟೊ ಓಡಿಸುವುದು ಕಲಿತೆ. ಕಲಿಯುವ ವೇಳೆ ನನ್ನ ಗಂಡ, ಆಟೊ ಓಡಿಸುವಾಗ ಆ್ಯಕ್ಸಿಡೆಂಟ್ ಆದರೆ ನನಗೆ ಪೋನ್ ಮಾಡಲೇಬೇಡ ಎಂದು ಹೇಳಿದ್ದರು. ಆಗ ನನ್ನ ತವರು ನನಗೆ ಧೈರ್ಯ ನೀಡಿತು ಎನ್ನುತ್ತಾರೆ ಭುವನೇಶ್ವರಿ.
ಈಗ ನಾನು ಆಟೊ ಓಡಿಸುತ್ತಿದ್ದೇನೆ. ನನ್ನಿಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಕುಟುಂಬವು ಈಗ ನನಗೂ, ನನ್ನ ಕೆಲಸಕ್ಕೂ ಬೆಂಬಲ ನೀಡುತ್ತಿದೆ. ಛಲವಿದ್ದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎನ್ನುತ್ತಾರೆ ಭುವನೇಶ್ವರಿ.
ಐದು ವರ್ಷ ನಾನು ಶಿಕ್ಷಕಿಯಾಗಿ ಕೆಲಸ ಮಾಡಿದೆ. ಕೋವಿಡ್‌ನಿಂದಾಗಿ ಕೆಲಸ ಕಳೆದುಕೊಂಡೆ. ಶಿಕ್ಷಕ ವೃತ್ತಿ ಬಿಟ್ಟರೆ ನನಗೆ ಗೊತ್ತಿದ್ದು ಆಟೊ ಓಡಿಸೋದು. ಗಂಡನಿಗೆ ಆಟೊ ಓಡಿಸುವೆ ಎಂದು ಕೇಳಿದೆ. ಅವರು ಅದು ನಿನ್ನಿಂದ ಆಗದು ಎಂದರು. ‘ಆಗಲ್ಲ’ ಎನ್ನುವ ಮೂರಕ್ಷರದ ಪದವನ್ನು ‘ಆಗುತ್ತೆ’ ಎನ್ನುವ ಮೂರಕ್ಷರದ ಪದವನ್ನಾಗಿ ಮಾಡಲೇಬೇಕೆಂದು ದೃಢನಿಶ್ಚಯದಿಂದ ಆಟೊ ಓಡಿಸಲು ಆರಂಭಿಸಿದೆ. ಇಂದಿಗೆ ಸತತ ನಾಲ್ಕೂವರೆ ವರ್ಷಗಳಿಂದ ಆಟೊ ಓಡಿಸುತ್ತಿದ್ದೇನೆ. ಹತ್ತಾರು ಹೆಣ್ಣುಮಕ್ಕಳಿಗೆ ಆಟೊ ತರಬೇತಿ ನೀಡುತ್ತಿದ್ದೇನೆ ಎನ್ನುತ್ತಾರೆ ಬೆಂಗಳೂರಿನ ಸಗಾಯಿ ರಾಣಿ.
ಮೂಲತಃ ತಮಿಳುನಾಡಿನವಳಾದ ನಾನು ಬಿಬಿಎಂ ಓದಿದ್ದೇನೆ. ಇದೀಗ ಆಟೊ ವೃತ್ತಿಯ ಜೊತೆಗೆ ಕುಟುಂಬವನ್ನೂ ನೋಡಿಕೊಳ್ಳುತ್ತಿದ್ದೇನೆ. ಆಟೊ ಓಡಿಸುವಾಗ ಕೆಲ ಪ್ರಯಾಣಿಕರು ಕಿರಿಕಿರಿ ನೀಡುತ್ತಾರೆ, ಕೆಲವರು ತೆಗಳುತ್ತಾರೆ, ಹಲವರು ಹೊಗಳುತ್ತಾರೆ. ಶಹಭಾಷ್ ಮೇಡಂ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ಆಟೊ ಓಡಿಸುವಂತಹ ನಿಮ್ಮನ್ನು ಕಂಡರೆ ನಮಗೆ ಖುಷಿಯಾಗುತ್ತೆ ಎನ್ನುತ್ತಾರೆ. ಇಂಥ ಮಾತುಗಳು ನಮಗೆ ಸ್ಫೂರ್ತಿ ನೀಡುತ್ತವೆ. ಇದೀಗ ನನ್ನ ಕುಟುಂಬವು ನನಗೆ ಹಾಗೂ ನನ್ನ ಕೆಲಸಕ್ಕೆ ಬೆಂಬಲ ನೀಡುತ್ತಿದೆ.
ಬೆಂಗಳೂರಿನಲ್ಲಿರುವ ಮೆಟ್ರೋರೈಡ್ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಇದುವರೆಗೆ 25 ಮಹಿಳೆಯರಿಗೆ ಇ–ಆಟೊ ಡ್ರೈವಿಂಗ್ ತರಬೇತಿ ನೀಡಿದೆ. ಈ ಆಟೊ ಚಾಲಕಿಯರು ಪ್ರಸ್ತುತ ಯಲಚೇನಹಳ್ಳಿ ಜೆ.ಪಿ.ನಗರ ಇಂದಿರಾನಗರ ಕೋಣನಕುಂಟೆ ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಆಲ್ ಸ್ಟ್ರಂ ಕಂಪನಿ ಜೊತೆ ಕೈ ಜೋಡಿಸಿದೆ. ಕಂಪನಿಯು ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಬಿಲಿಟಿ ಅಡಿಯಲ್ಲಿ ಡಬ್ಲ್ಯುಆರ್‌ಐ ಸಹಯೋಗದೊಂದಿಗೆ ಲೀಪ್ (ಲೋ ಎಮಿಷನ್ ಆಕ್ಸೆಸ್ ಟು ಪಬ್ಲಿಕ್ ಟ್ರಾನ್ಸ್‌ಪೋರ್ಟ್– ಎಲ್‌ಇಎಪಿ) ಕಾರ್ಯಕ್ರಮದಡಿ ಮುಂದಿನ ವರ್ಷದೊಳಗೆ 200 ಮಹಿಳೆಯರಿಗೆ ಆಟೊ ತರಬೇತಿ ನೀಡುವ ಗುರಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.