ಮದುವೆಯಾಗಲು ವಿಧಿಸಲಾಗಿರುವ ಕನಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಸಂಬಂಧ ದೇಶದಾದ್ಯಂತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಾಲ್ಯವಿವಾಹ ನಿಷೇಧ ಕಾಯ್ದೆ–2006 ಮೂಲಕ ದೇಶದಲ್ಲಿ ಬಾಲ್ಯವಿವಾಹಗಳಿಗೆ ಸಂಪೂರ್ಣ ನಿರ್ಬಂಧವನ್ನು ಹೇರಲಾಗಿದ್ದು, ಮದುವೆಯಾಗಲು ಹುಡುಗಿಗೆ ಕನಿಷ್ಠ 18 ವರ್ಷ ಹಾಗೂ ಹುಡುಗನಿಗೆ ಕನಿಷ್ಠ 21 ವರ್ಷ ಆಗಿರಬೇಕು ಎಂಬ ಮಿತಿಯನ್ನೂ ವಿಧಿಸಲಾಗಿದೆ. ಚಿಕ್ಕವಯಸ್ಸಿನಲ್ಲೇ ಗರ್ಭ ಧರಿಸುವುದನ್ನು ತಪ್ಪಿಸಲು, ಬಸುರಿನ ತೊಂದರೆಗಳಿಂದ ತಾಯಿಮರಣ ಸಂಭವಿಸದಂತೆ ನೋಡಿಕೊಳ್ಳಲು ಮದುವೆಯ ಕನಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಕುರಿತು ಸರ್ಕಾರ ಈಗ ಯೋಚಿಸುತ್ತಿದೆ.
ಮದುವೆಯ ವಯೋಮಿತಿ ಹೆಚ್ಚಿಸುವ ಈ ಚರ್ಚೆಯು ಕೆಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಹುಡುಗಿಯ ಕನಿಷ್ಠ ವಯೋಮಿತಿಯನ್ನು 18ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಿದರೆ ಸಾಕೇ? ಲಿಂಗಾಧಾರಿತವಾಗಿ ವಯೋಮಿತಿಯಲ್ಲಿ ವ್ಯತ್ಯಾಸಗಳು ಇರಬೇಕೇ ಅಥವಾ ಸಮಾನವಾದ ವಯೋಮಿತಿಯನ್ನೇ ನಿಗದಿ ಮಾಡಬೇಕೇ? – ಇವೇ ಆ ಪ್ರಶ್ನೆಗಳು.
ಬಾಲ್ಯವಿವಾಹ ತಡೆ ಕಾಯ್ದೆಗೆ 1978ರಲ್ಲಿ ತಿದ್ದುಪಡಿ ತಂದಾಗ, ಮದುವೆಗೆ ಈಗಿರುವ ಕನಿಷ್ಠ ವಯೋಮಿತಿಯನ್ನೂ ನಿಗದಿಮಾಡಲಾಗಿತ್ತು. ಅದಾದ ಬಳಿಕ ಬಾಲ್ಯವಿವಾಹ ನಿಷೇಧ ಕಾಯ್ದೆ–2006 ಜಾರಿಗೆ ಬಂತು. ಆಗಲೂ ಹುಡುಗ–ಹುಡುಗಿಗೆ ನಿಗದಿ ಮಾಡಿದ ವ್ಯತ್ಯಾಸದ ಕನಿಷ್ಠ ವಯೋಮಿತಿ ನಿಯಮವನ್ನು ಹಾಗೇ ಉಳಿಸಿಕೊಳ್ಳಲಾಯಿತು. ಮದುವೆಯ ಕನಿಷ್ಠ ವಯೋಮಿತಿಯಲ್ಲಿ ಉಳಿಸಲಾಗಿರುವ ಈ ವ್ಯತ್ಯಾಸವು ಹಳಸಲಾದ ಪಿತೃಪ್ರಧಾನ ವ್ಯವಸ್ಥೆಯ ದ್ಯೋತಕ. ಏಕೆಂದರೆ, ಗಂಡನಿಗಿಂತ ಹೆಂಡತಿ ಚಿಕ್ಕವಳಾಗಿರಬೇಕು ಎನ್ನುವುದು ಅಂತಹ ವ್ಯವಸ್ಥೆಯ ಧೋರಣೆ. ಇಬ್ಬರೂ ಒಂದೇ ವಯಸ್ಸಿನವರಾದರೆ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಪ್ರಬುದ್ಧರಾಗಿರುತ್ತಾರೆ. ಆದ್ದರಿಂದ ಹುಡುಗಿಯರ ವಯೋಮಿತಿ ಹುಡುಗರಿಗಿಂತ ಕಡಿಮೆ ಮಾಡಬೇಕು ಎಂಬ ಯೋಚನೆ ಇಂತಹ ನಿರ್ಧಾರಗಳ ಹಿಂದಿದೆ. ಹುಡುಗಿಯರನ್ನು ಬಲುಬೇಗ ಮದುವೆಯ ಬಂಧನಕ್ಕೆ ಒಳಪಡಿಸುವುದು ಮಾನವ ಹಕ್ಕುಗಳ ಉಲ್ಲಂಘನೆ. ಆದರೆ, ಸದ್ಯ ಹಾಗೆ ನೋಡದಂತೆ ಕಾನೂನಿನಲ್ಲಿ ಉಳಿದಿರುವ ಇಂತಹ ಹಳಸಲು ನಿಯಮಗಳ ರಕ್ಷಣೆ ಇದೆ.
ಎಲ್ಲ ಕಾಯ್ದೆಗಳಲ್ಲೂ 18 ವರ್ಷ ತುಂಬಿದ ಯಾವುದೇ (ಏಕರೂಪವಾಗಿ) ಮಗು ಪ್ರಾಪ್ತ ವಯಸ್ಕ ಎಂದೇ ವ್ಯಾಖ್ಯಾನ ಮಾಡಲಾಗಿದೆ. ಪ್ರಾಪ್ತ ವಯಸ್ಕರ ಕಾಯ್ದೆ–1875, ಪ್ರಜಾಪ್ರತಿನಿಧಿ ಕಾಯ್ದೆ–1951, ಮಗು ಮತ್ತು ಪೋಷಕರ ಕಾಯ್ದೆ–1890, ಹಿಂದೂ ಉತ್ತರಾಧಿಕಾರ ಕಾಯ್ದೆ–1956, ಭಾರತೀಯ ಕರಾರು ಕಾಯ್ದೆ–1872 –ಹೀಗೆ ಎಲ್ಲ ಕಾಯ್ದೆಗಳಲ್ಲೂ 18 ವರ್ಷ ತುಂಬಿದವರು (ಲಿಂಗದ ವಿಷಯವಾಗಿ ತಟಸ್ಥ – ಅಂದರೆ ಎಲ್ಲ ಮಕ್ಕಳು) ಪ್ರಾಪ್ತ ವಯಸ್ಕರು ಎಂದು ವ್ಯಾಖ್ಯಾನಿಸಲಾಗಿದೆ. ಬಾಲನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆ–2000ರಲ್ಲಿ ಮಗುವೆಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿ ಎಂದು ವ್ಯಾಖ್ಯಾನಿಸಲಾಗಿದೆ. ಸುಪ್ರೀಂ ಕೋರ್ಟ್, ಪ್ರಕರಣವೊಂದರ ಕುರಿತು ತೀರ್ಪು ನೀಡುವಾಗ, ಮಗುವಿನ ಮೇಲಿನ ವೈವಾಹಿಕ ಅತ್ಯಾಚಾರದ ವಿಷಯವನ್ನು ಸಂಪೂರ್ಣವಾಗಿ ನಿಕಷೆಗೆ ಒಳಪಡಿಸಿತು ಮತ್ತು ಅದನ್ನು ಅಪರಾಧವೆಂದೇ ಸಾರಿತು. ಮಗು, ಪ್ರಾಪ್ತ ವಯಸ್ಕ ಎನಿಸುವುದು 18 ವರ್ಷವಾದ ಬಳಿಕ ಎಂದೂ ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನ ಹಕ್ಕು ಹೊಂದಿದ್ದಾರೆಂದೂ ತೀರ್ಪು ನೀಡಿತು. ತೀರ್ಪಿನ ಸಾಲುಗಳು ಹೀಗಿವೆ: ‘ಮೊದಲನೆಯದಾಗಿ, ಮಗುವಿನ ಹಿನ್ನೆಲೆ, ಶಾರೀರಿಕ ರಚನೆ ಹೇಗೆ ಇದ್ದರೂ ಮಗು, ಮಗುವೇ. ನಮ್ಮ ದೇಶದ ಎಲ್ಲ ಶಾಸನಗಳಲ್ಲಿ ಉಲ್ಲೇಖಿಸಿರುವಂತೆ 18 ವರ್ಷಕ್ಕಿಂತ ಕಡಿಮೆ ವಯೋಮಾನದ ಪ್ರತೀ ವ್ಯಕ್ತಿಯೂ ಮಗುವೇ’.
ಹುಡುಗ, ಹುಡುಗಿ ಇಬ್ಬರಿಗೂ ಮದುವೆಯ ಕನಿಷ್ಠ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿ ಮಾಡಬೇಕು ಎಂದು ಕಾನೂನು ಆಯೋಗದ 2008ರ ವರದಿಯಲ್ಲಿ ತಿಳಿಸಲಾಗಿತ್ತು. ಕೌಟುಂಬಿಕ ಕಾನೂನುಗಳ ಸುಧಾರಣೆಗಾಗಿ 2018ರ ಆಗಸ್ಟ್‌ನಲ್ಲಿ ಮಾಡಲಾಗಿರುವ ಶಿಫಾರಸುಗಳಲ್ಲಿ ‘ಲಿಂಗ ತಾರತಮ್ಯ ಮಾಡದೆ ಮದುವೆಯ ಕನಿಷ್ಠ ವಯೋಮಿತಿಯನ್ನು ಎಲ್ಲರಿಗೂ 18 ವರ್ಷಕ್ಕೆ ನಿಗದಿ ಮಾಡಬೇಕು’ ಎಂಬುದೂ ಒಂದಾಗಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಏಕರೂಪದ ವಯೋಮಿತಿ ನಿಗದಿ ಕುರಿತು ಯೋಚಿಸುವಂತೆ 2018ರಲ್ಲಿ ಶಿಫಾರಸು ಮಾಡಿತ್ತು. 125 ದೇಶಗಳಲ್ಲಿ ಇದೇ ಪರಿಪಾಟವಿದೆ ಎಂಬುದನ್ನೂ ಅದು ಉಲ್ಲೇಖ ಮಾಡಿತ್ತು.
ಜಗತ್ತಿನ ಬೆಳವಣಿಗೆಗಳನ್ನು ಗಮನಿಸಿದಾಗ, ಬಹುತೇಕ ದೇಶಗಳಲ್ಲಿ ಮದುವೆಯ ಕನಿಷ್ಠ ವಯೋಮಿತಿಯನ್ನು ಏಕರೂಪವಾಗಿ 18 ವರ್ಷಕ್ಕೆ ನಿಗದಿ ಮಾಡಿರುವುದು ಕಂಡುಬರುತ್ತದೆ. ಮಹಿಳೆಯರ ವಿರುದ್ಧದ ಎಲ್ಲ ತಾರತಮ್ಯಗಳನ್ನು ಹೋಗಲಾಡಿಸುವ ಕುರಿತು ವಿಶ್ವಸಂಸ್ಥೆ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು, ಗೊತ್ತುವಳಿಗೆ ಭಾರತ ಕೂಡ ಸಹಿ ಹಾಕಿದೆ. ಸಮಾವೇಶದ 21ನೇ ಗೊತ್ತುವಳಿಯಲ್ಲಿ (ಮದುವೆ ಮತ್ತು ಕೌಟುಂಬಿಕ ಸಂಬಂಧಗಳಲ್ಲಿ ಸಮಾನತೆ) ಕೂಡ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಮದುವೆಯ ಕನಿಷ್ಠ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಹೀಗಾಗಿ ಲಿಂಗ ತಾರತಮ್ಯ ಮಾಡದೆ ಕನಿಷ್ಠ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿ ಮಾಡುವುದು ಅಗತ್ಯವಾಗಿದೆ.
ಲಿಂಗ ಸಮಾನತೆ ಸಾಧಿಸುವ ದೃಷ್ಟಿಯಿಂದಲೂ ವಯೋಮಿತಿಯಲ್ಲಿ ಏಕರೂಪತೆ ಅನಿವಾರ್ಯ. ಸದ್ಯದ ಕಾನೂನಿನ ಪ್ರಕಾರ, ಪ್ರಾಪ್ತ ವಯಸ್ಕರಾದ ಎರಡು ವರ್ಷಗಳೊಳಗೆ ಬಾಲ್ಯವಿವಾಹವನ್ನು ರದ್ದುಗೊಳಿಸಿಕೊಳ್ಳಲು ಅವಕಾಶವಿದೆ. ಹುಡುಗಿಯು 18 ವರ್ಷಕ್ಕೆ ಪ್ರಾಪ್ತ ವಯಸ್ಕಳಾದ ಬಳಿಕ ಎರಡು ವರ್ಷಗಳಲ್ಲಿ ತನ್ನ ಬಾಲ್ಯವಿವಾಹವನ್ನು ರದ್ದುಗೊಳಿಸಿಕೊಳ್ಳಬಹುದು. ಅದೇ ಹುಡುಗನಿಗಾದರೆ 23 ವಯೋಮಾನದವರೆಗೆ ಅದಕ್ಕೆ ಅವಕಾಶವಿದೆ. ಕಾನೂನಿನಲ್ಲಿರುವ ಈ ವಯೋಮಿತಿಯ ವ್ಯತ್ಯಾಸ ಲಾಗಾಯ್ತಿನಿಂದ ಬೆಳೆದುಬಂದ ಲಿಂಗ ಅಸಮಾನತೆಗೂ ಕಾರಣವಾಗುತ್ತದೆ. ಹೀಗಾಗಿ ಕನಿಷ್ಠ ವಯೋಮಿತಿಯಲ್ಲಿ ಏಕರೂಪತೆಯನ್ನು ತರುವುದು ಅತ್ಯಗತ್ಯವಾಗಿದೆ.
ಬಾಲ್ಯವಿವಾಹವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಭಾವಿಸದ ಹೊರತು ಈ ಚರ್ಚೆ ಅಪೂರ್ಣ. ಬಾಲ್ಯವಿವಾಹಗಳು ಹುಡುಗಿಯರ ಬದುಕನ್ನು ಗಂಡಾಂತರಕ್ಕೆ ನೂಕುತ್ತವೆ. ಕೌಟುಂಬಿಕ ಹಿಂಸೆಗೆ, ವೈವಾಹಿಕ ಅತ್ಯಾಚಾರಕ್ಕೆ, ಚಿಕ್ಕ ವಯಸ್ಸಿನಲ್ಲೇ ಬಸುರಿಯಾಗುವುದಕ್ಕೆ ಕಾರಣವಾಗುತ್ತವೆ. ಅದಲ್ಲದೆ, ಹಲವು ಹಕ್ಕುಗಳನ್ನೂ ಕಸಿಯುತ್ತವೆ. ಭಾರತದಲ್ಲಿ ಈಗಲೂ 18 ತುಂಬುವುದಕ್ಕಿಂತ ಮದುವೆಯಾಗುವ ಹುಡುಗಿಯರ ಪ್ರಮಾಣ ಶೇಕಡ 17ರಷ್ಟಿರುವುದು ಕಳವಳಕಾರಿಯಾಗಿದೆ. ಮದುವೆಯಾಗುವ ಕನಿಷ್ಠ ವಯೋಮಿತಿಯನ್ನು ಏಕರೂಪಗೊಳಿಸುವುದು ಮತ್ತು ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಇಂದಿನ ಅಗತ್ಯವಾಗಿದೆ. ಈ ಕ್ರಮಗಳಿಂದ ಮಾತ್ರ ಮಹಿಳೆಯರಿಗೆ ಸಮಾನತೆ, ಬದುಕಿನ ಹಕ್ಕು ಹಾಗೂ ಕಳೆದುಹೋದ ಅಸ್ಮಿತೆ ಸಿಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಲೇಖಕಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.