ಗರ್ಭಿಣಿಯರಿಗೆ ಕಾಲು ಊತ– ತೊಂದರೆಯೇ?
1. ನನಗೆ 28ವರ್ಷಗಳು. ಮೊದಲಬಾರಿಗೆ ಗರ್ಭಧರಿಸಿದ್ದೇನೆ. ಈಗ ಏಳು ತಿಂಗಳಾಗಿದೆ. ನಿಯಮಿತವಾಗಿ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೇನೆ. ಈಗ ನನ್ನ ಎರಡೂ ಕಾಲು ಊದುತ್ತಿದೆ. ವೈದ್ಯರು ಕೊಡುತ್ತಿರುವ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವೆ. ಏನೂ ತೊಂದರೆ ಇಲ್ಲವೆಂದು ತಿಳಿಸಿದ್ದಾರೆ. ಆದರೂ ನೋಡಿದವರು ’ಇದೇನಿದು ಎರಡು ಕಾಲು ಇಷ್ಟೊಂದು ಊದಿದೆ. ಬಿ.ಪಿ ಇದೆಯಾ’ ಎಂದು ಕೇಳಿದಾಗ ನನಗೆ ಭಯ ಉಂಟಾಗುತ್ತಿದೆ. ಇದರಿಂದ ಏನೂ ತೊಂದರೆ ಇಲ್ಲವೇ ? ಕಾಲು ಊದುವುದನ್ನು ತಡೆಯಲು ಏನು ಮಾಡಬೇಕು?
–ರೂಪಶ್ರೀ, ಕೋಲಾರ
ಉತ್ತರ: ರೂಪಶ್ರೀ ಅವರೇ, ಗರ್ಭಧಾರಣೆಯಲ್ಲಿ ಕಾಲು ಊದುವುದು ಸಾಮಾನ್ಯ. ಅದರಲ್ಲೂ ಕೊನೆಯ ಮೂರು ತಿಂಗಳಲ್ಲಿ ದೊಡ್ಡದಾಗುತ್ತಿರುವ ಗರ್ಭಕೋಶದಿಂದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ರಕ್ತವು ಅಭಿದಮನಿಗಳಿಂದ ಹೃದಯಕ್ಕೆ ವಾಪಸ್ಸು ಹರಿಯುವುದು ತಡವಾಗಿ, ರಕ್ತಸಂಚಾರ ನಿಧಾನವಾಗಿ ನೀರಿನಾಂಶ ಕಾಲು ಗಳಲ್ಲಿ ಸೇರುತ್ತದೆ. ಇದನ್ನು ಗರ್ಭಿಣಿಯರ ಸಹಜ ಶಾರೀರಿಕ ಊತ (ಫಿಸಿಯಲಾಜಿಕಲ್ ಎಡಿಮಾ) ಎನ್ನುತ್ತಾರೆ. ಈ ಕಾಲು ಊತ ರಾತ್ರಿ ವಿಶ್ರಾಂತಿ ಪಡೆಯುವಾಗ ಕಾಲನ್ನು ಎದೆಯ ಮಟ್ಟಕ್ಕಿಂತ ಮೇಲಕ್ಕಿಟ್ಟುಕೊಂಡರೆ ಬೆಳಿಗ್ಗೆಯೊಳಗೆ ಕಡಿಮೆಯಾಗುತ್ತದೆ.
ಗರ್ಭಧಾರಣೆಯಲ್ಲಿ ಹೆಚ್ಚಿಗೆ ಉತ್ಪಾದನೆಯಾಗುವ ಕೆಲವು ಹಾರ್ಮೋನುಗಳ ಪ್ರಭಾವದಿಂದ ಶರೀರದಿಂದ ಹೆಚ್ಚು ನೀರು ಹೀರಿಕೊಳ್ಳುತ್ತದೆ. ಇದೂ ಕೂಡ ಕಾಲು ಊತಕ್ಕೆ ಕಾಣವಾಗುತ್ತದೆ. ಹಾಗಾಗಿ ನಿಮಗೆ ಈ ತರಹದ ಎಡಿಮಾ ಇದ್ದಾಗ ಯಾವುದೇ ರೀತಿಯ ಭಯಬೇಡ.
ಆದರೆ ಒಮ್ಮಿಂದೊಮ್ಮೆಯೇ ಮುಖ, ಕೈಕಾಲು, ಬೆರಳುಗಳೆಲ್ಲವೂ ಊದಿದರೆ ಮಾತ್ರ ಅದು ಗರ್ಭಿಣಿಯರ ಏರು ರಕ್ತದೊತ್ತಡ ಅಥವಾ ಗರ್ಭವಿಷಭಾಧೆಯ (ಪ್ರೀಎಕ್ಲಾಂಪ್ಸಿಯಾ) ಮುನ್ಸೂಚನೆಯಾಗಿರಬಹುದು. ಆಗ ನೀವು ತಕ್ಷಣವೇ ವೈದ್ಯರನ್ನು ಭೇಟಿಮಾಡಿ ತಪಾಸಣೆಗೊಳಗಾಬೇಕು. ಬಿ.ಪಿ ಹೆಚ್ಚು ಇದ್ದರೆ ವೈದ್ಯರು ಸೂಕ್ತ ಮಾತ್ರೆಗಳನ್ನು ಕೊಡುತ್ತಾರೆ. ರಕ್ತಹೀನತೆ, ಅಪೌಷ್ಟಿಕತೆ ಹೆಚ್ಚಾಗಿದ್ದರೂ ಕೂಡಾ ಬರೀ ಕಾಲೂತವಷ್ಟೇ ಅಲ್ಲ ಇಡೀ ಶರೀರವೇ ಊದಿಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿಯೂ ಸೂಕ್ತ ತಪಾಸಣೆ ನಡೆಸಿ ವೈದ್ಯರು ಸೂಕ್ತಔಷಧವನ್ನು ಕೊಡುತ್ತಾರೆ. ಗರ್ಭಿಣಿಯರಲ್ಲಾಗುವ ಸಹಜ ಕಾಲುಊತ ಹೆಚ್ಚಾಗದಿರಲು ನೀವೇ ಅನುಸರಿಸಬಹುದಾದ ವಿಧಾನಗಳೆಂದರೆ:
• ಉಪ್ಪು, ಉಪ್ಪಿನಾಂಶವುಳ್ಳ ತಿನಿಸುಗಳನ್ನು (ಉಪ್ಪಿನಕಾಯಿ, ಹಪ್ಪಳ, ಸಂಡಿಗೆ.. ಇತ್ಯಾದಿ) ತಿನ್ನುವುದನ್ನು ಸಾಧ್ಯವಾದಷ್ಟು ಕಡಿಮೆಮಾಡಿ.
• ಅತಿಯಾಗಿ ಕಾಫಿ, ಟೀ ಕುಡಿಯಬೇಡಿ. ಕೃತಕ ಪಾನೀಯಗಳಿಂದ ದೂರವಿರಿ ಬದಲಾಗಿ ಬಾರ್ಲಿ ಅಕ್ಕಿಯನ್ನು ನೆನೆಸಿ ಬೇಯಿಸಿ ಅದರ ನೀರನ್ನು ಬೆಳಿಗ್ಗೆ ಖಾಲಿಹೊಟ್ಟಯಲ್ಲಿ ಕುಡಿಯಿರಿ.
• ಜಂಕ್‌ಫುಡ್ ಬಳಕೆ ಬೇಡವೇ ಬೇಡ. ಹೆಚ್ಚು ಪ್ರೋಟಿನ್ ಅಂಶ ಇರುವ ಬೇಳೆಕಾಳುಗಳನ್ನು ಸೇವಿಸಿ. ನಾರಿನಾಂಶವುಳ್ಳ ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸಿ.
• ಪ್ರತಿದಿನ 3 ರಿಂದ 4 ಲೀಟರ್ ನೀರನ್ನು ಕುಡಿಯಿರಿ
• ಧೀರ್ಘಾವಧಿ ಒಂದೇಕಡೆ ನಿಲ್ಲುವುದನ್ನು ತಪ್ಪಿಸಿ. ಶಾಲೆಯಲ್ಲಿ ಪಾಠಮಾಡುವವರಿದ್ದರೆ, ಆಗಾಗ್ಗೆ ಓಡಾಡುತ್ತಿರಿ.
• ಕುಳಿತುಕೊಳ್ಳುವಾಗ ಕಾಲನ್ನು ಕ್ರಾಸ್ ಮಾಡಬೇಡಿ. ತುಂಬಾ ಹೊತ್ತು ನಿಂತಿರುವಾಗ ಕಾಲನ್ನು ಹಿಮ್ಮಡಿಯ ಮೇಲೆ ನಿಲ್ಲಿ ವೃತ್ತಾಕಾರವಾಗಿ ತಿರುಗಿಸಲು ಪ್ರಯತ್ನಿಸಬೇಕು. ತುದಿಕಾಲಿನ ಮೇಲೆ ಬರುವುದು ಹಿಮ್ಮಡಿಯ ಮೇಲೆ ಬರುವುದು ಈ ರೀತಿಯ ಚಲನೆ ಮಾಡುತ್ತಿರಬೇಕು. ಕುಳಿತಾಗ ದಿನಾಲೂ ಪಾದಗಳನ್ನ ಹಿಂದೆ ಮುಂದೆ 20ರಿಂದ 30ಬಾರಿ ಚಾಚಬೇಕು. ಎರಡೂಕಾಲು ಪಾದವನ್ನ ವೃತ್ತಾಕಾರವಾಗಿ ತಿರುಗಿಸಬೇಕು.
• ಕಣಕಾಲಿನಸುತ್ತ ಬಿಗಿಯಾಗುವ ಹಾಗೇ ಉಡುಪುಗಳನ್ನ ಧರಿಸಬೇಡಿ. ನಡೆಯುವಾಗ ಸೂಕ್ತವಾದ ಪಾದರಕ್ಷೆಗಳನ್ನ ಧರಿಸಿ.
ಈ ಮೇಲಿನ ಕ್ರಮಗಳಿಂದ ಗರ್ಭಿಣಿಯರ ಸಹಜ ಕಾಲೂತ ಸಹಜವಾಗಿಯೇ ಸರಿಪಡಿಸಿಕೊಳ್ಳಬಹುದು.
2. ನನಗೀಗ 32 ವರ್ಷ. ಮದುವೆಯಾಗಿ 5 ವರ್ಷಗಳಾಗಿವೆ. ಪಿಎಚ್.ಡಿ ವಿದ್ಯಾರ್ಥಿಯಾಗಿರುವುದರಿಂದ ಓದಿನ ಕಡೆ ಗಮನ ಹರಿಸಿ, ಮಗು ಮಾಡಿಕೊಳ್ಳುವ ಯೋಚನೆಯನ್ನು ಮುಂದೂಡಿದ್ದೇನೆ. ನಾನು ಯಾವುದೇ ರೀತಿ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದಿಲ್ಲ. ಆದರೂ ಈ ತಿಂಗಳ ಋತುಚಕ್ರದಲ್ಲಿ ಬದಲಾವಣೆ ಯಾಗಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಋತುಚಕ್ರವಾಗಿದೆ. ಹೀಗೇಕೆ ಆಗುತ್ತದೆ. ಇದರಿಂದ ನನಗೆ ಭಯಕಾಡುತ್ತಿದೆ. ಮುಂದೆ ನನಗೆ ಮಗುವಾಗ ಸಾಧ್ಯತೆ ಇದೆಯೋ ಇಲ್ಲವೋ ? ತಿಳಿಸಿ.
– ಅನಿಕಾ, ಊರು ತಿಳಿಸಿಲ್ಲ
ಉತ್ತರ: ಅನಿಕಾರವರೇ ನಿಮಗೀಗಾಗಲೇ 32 ವರ್ಷವಾಗಿದೆ. ಇನ್ನು ಮುಂದೆ ನಿಮ್ಮಲ್ಲಿ ಫಲವತ್ತತೆ (ಅಂಡೋತ್ಪತ್ತಿ ಸುಗಮವಾಗಿ ಆಗಿ ಗರ್ಭಧಾರಣೆಯಾಗುವುದು) ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ನೀವು ಇನ್ನು ತಡಮಾಡಬೇಡಿ. ಹತ್ತಿರವಿರುವ ತಜ್ಞ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.
ಗರ್ಭಕೋಶದಲ್ಲಿ ಸೋಂಕಿದ್ದರೆ ಅಥವಾ ಅಂಡಾಶಯಗಳಲ್ಲಿ ನೀರುಗುಳ್ಳುಗಳಿದ್ದರೆ, ಹೀಗೆ ಒಂದೇ ತಿಂಗಳಲ್ಲಿ ಎರಡು ಬಾರಿ ಋತುಚಕ್ರಗುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ಒಮ್ಮೆ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಂಡು ಸೂಕ್ತಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ ಪತಿಯೂ ಕೂಡ ತಪಾಸಣೆ ಮಾಡಿಸಿಕೊಂಡು ತಜ್ಞರಿಂದ ವೀರ್ಯಾಣುಗಳ ಗುಣಮಟ್ಟ ಹಾಗೂ ಸಂಖ್ಯೆ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಲಿ.
ಯಾವುದೇ ರೀತಿಯ ತೊಂದರೆಗಳಿದ್ದರೂ ಅದಕ್ಕೆಲ್ಲಾ ಈಗಿನ ಆಧುನಿಕ ಚಿಕಿತ್ಸಾ ಪದ್ಧತಿಗಳಲ್ಲಿ ಉತ್ತಮ ಔಷಧಗಳಿವೆ. ಅವುಗಳ ಸೂಕ್ತ ಬಳಕೆ ಮಾಡಿಕೊಂಡು ನೀವು ಆದಷ್ಟು ಬೇಗನೆ ಮಗುವನ್ನು ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.