ಬಾಗಲಕೋಟೆ: ಇಲ್ಲಿನ ನವನಗರದಲ್ಲಿ ರೂಂ ಮಾಡಿಕೊಂಡು ಓದುವ ಕಾಲೇಜು ಹುಡುಗರು, ಸರ್ಕಾರಿ ನೌಕರರ ಅನುಕೂಲಕ್ಕೆ ದಿನಕ್ಕೆ 100 ರೊಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಸೆಕ್ಟರ್ ನಂ 10ರ ನಿವಾಸಿ ಲಕ್ಷ್ಮೀಬಾಯಿ ತಾಳಿಕೋಟಿ, 16 ವರ್ಷಗಳಲ್ಲಿ ಬೃಹತ್ ರೊಟ್ಟಿ ಉದ್ದಿಮೆಯಾಗಿಸಿದ್ದಾರೆ. ಈಗ ನಿತ್ಯ 10 ಸಾವಿರಕ್ಕೂ ಹೆಚ್ಚು ರೊಟ್ಟಿ ಮಾರಾಟ ಮಾಡಿ, ಮಾಸಿಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ!
ತಾಳಿಕೋಟಿ ಅವರ ರೊಟ್ಟಿಗಳು ಬರೀ ಬಾಗಲಕೋಟೆಯಲ್ಲಿ ಮಾತ್ರ ಪ್ರಸಿದ್ಧಿ ಪಡೆದಿಲ್ಲ. ಬದಲಿಗೆ ರಾಜಧಾನಿ ಬೆಂಗಳೂರು, ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೂ ಗ್ರಾಹಕರ ಮನ ಗೆದ್ದಿವೆ. ನಿತ್ಯ ಸಾವಿರಗಟ್ಟಲೇ ರೊಟ್ಟಿ ಬಸ್ ಮೂಲಕ ಅಲ್ಲಿನ ಗ್ರಾಹಕರಿಗೆ ತಲುಪುತ್ತಿವೆ.
ಈ ಭಾಗದಲ್ಲಿ ಮದುವೆ, ಮುಂಜಿವಿ ಸೇರಿದಂತೆ ಯಾವುದೇ ಶುಭ ಸಮಾರಂಭ, ರಾಜಕೀಯ ನಾಯಕರ ಸಭೆ, ಸರ್ಕಾರಿ ಸಭೆಗಳಲ್ಲಿ ಊಟಕ್ಕೆ ತಾಳಿಕೋಟಿ ಅವರ ಅಂಗಡಿಯ ರೊಟ್ಟಿಗಳು ಸಾಥ್ ನೀಡುತ್ತವೆ. ಗ್ರಾಹಕರ ಬೇಡಿಕೆ ಎಷ್ಟೇ ಪ್ರಮಾಣದಲ್ಲಿ ಇದ್ದರೂ ಅಷ್ಟನ್ನೂ ಪೂರೈಸುವುದು ಲಕ್ಷ್ಮೀಬಾಯಿ ಅವರ ವಿಶೇಷ.
ಹಪ್ಪಳದಷ್ಟು ತೆಳು ಅಲ್ಲದಿದ್ದರೂ ಅದರಷ್ಟೇ ಗರಿ ಗರಿಯಾಗಿ, ಬಾಯಲ್ಲಿ ಇಟ್ಟರೆ ಸುಲಭವಾಗಿ ಕರಗುವ ರೊಟ್ಟಿಗಳು ವಿಶೇಷ. ಜೋಳ, ಸಜ್ಜೆಯ ರೊಟ್ಟಿಗಳೇ ಪ್ರಮುಖವಾದರೂ ಗ್ರಾಹಕರ ಆದ್ಯತೆ ಮನಗಂಡು ರಾಗಿ, ಮೆಕ್ಕೆಜೋಳದ ರೊಟ್ಟಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಲಕ್ಷ್ಮೀಬಾಯಿ–ಮನೋಹರ ತಾಳಿಕೋಟಿ ದಂಪತಿ ಮೊದಲು ಹಳೆಬಾಗಲಕೋಟೆಯ ಜೈನಪೇಟೆಯಲ್ಲಿ ವಾಸವಿದ್ದರು. ಮನೋಹರ ಅಲ್ಲಿ ತಾಳಿಕೋಟಿ ಸ್ವೀಟ್ಸ್ ಹೆಸರಿನಲ್ಲಿ ಸಿಹಿ ತಿನಿಸು ವ್ಯಾಪಾರ ಮಾಡುತ್ತಿದ್ದರು. ಸಂತೆ–ಜಾತ್ರೆಗಳಿಗೆ ಹೋಗಿ ಸಿಹಿ ತಿನಿಸು ಮಾರುತ್ತಿದ್ದರು.
ಆ ಪ್ರದೇಶ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ನಂತರ ತಾಳಿಕೋಟಿ ಕುಟುಂಬಕ್ಕೆ ನವನಗರದ ಸೆಕ್ಟರ್ ನಂ 10ರಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಆಗಿನ್ನೂ ನವನಗರದಲ್ಲಿ ಅಷ್ಟಾಗಿ ಜನಸಂದಣಿ ಇರಲಿಲ್ಲ. ಹೋಟೆಲ್‌ಗಳು ವಿರಳ. ಜಿಲ್ಲಾ ಆಸ್ಪತ್ರೆಯ ಎದುರೇ ಮನೆ. ಸಮೀಪದಲ್ಲೆ ಜಿಲ್ಲಾಡಳಿತ ಭವನ, ವಿದ್ಯಾಗಿರಿಯಲ್ಲಿ ಶಾಲಾ–ಕಾಲೇಜುಗಳು ಇದ್ದವು. ಅಲ್ಲಿ ಓದಲು ನೌಕರಿ ಮಾಡಲು ಬಂದವರು ಊಟಕ್ಕೆ ಪರದಾಡುತ್ತಿದ್ದರು. ಅದನ್ನು ಗಮನಿಸಿದ ಲಕ್ಷ್ಮೀಬಾಯಿ ರೊಟ್ಟಿ ಮಾಡಿ ಮಾರಾಟ ಮಾಡಲು ಆರಂಭಿಸಿದರು.
’ಮೊದಲಿಗೆ ದಿನಕ್ಕೆ ನಿಗದಿಯಷ್ಟು ರೊಟ್ಟಿ ಖರ್ಚಾಗುತ್ತಿದ್ದವು. ಅದರೊಂದಿಗೆ ಚಟ್ನಿಪುಟಿ, ಕೆಂಪು ಚಟ್ನಿ ಕೂಡ ಕೊಡುತ್ತಿದ್ದೆನು. ರೊಟ್ಟಿ–ಚಟ್ನಿಯ ರುಚಿ ಬೇಗನೇ ಗ್ರಾಹಕರನ್ನು ಸೆಳೆಯಿತು. ಕಾಯಂ ಗ್ರಾಹಕರನ್ನು ಸೃಷ್ಟಿಸಿತು. ರೂಂಗೆ ಕೊಂಡೊಯ್ದು ರೊಟ್ಟಿ ತಿನ್ನುತ್ತಿದ್ದವರು ನಿಧಾನವಾಗಿ ಮನೆಗಳಿಗೆ ಪ್ಯಾಕ್ ಮಾಡಿಸಿಕೊಂಡು ಒಯ್ಯತೊಡಗಿದರು. ಕಿವಿಯಿಂದ ಕಿವಿಗೆ ನಮ್ಮ ಅಂಗಡಿಯ ರೊಟ್ಟಿಯ ರುಚಿ ಹಬ್ಬಿತು. ಹಬ್ಬ–ಹರಿದಿನ, ನಾಮಕರಣ, ಕುಪ್ಪಸ ಕಾರ್ಯ, ಹುಟ್ಟುಹಬ್ಬದಂತಹ ಸಮಾರಂಭಗಳಿಗೂ ರೊಟ್ಟಿಗೆ ಬೇಡಿಕೆ ಬಂದಿತು‘ ಎಂದು ಲಕ್ಷ್ಮೀಬಾಯಿ ಹೇಳುತ್ತಾರೆ.
ಗೃಹಿಣಿಯೊಬ್ಬರು ಮನೆಯಲ್ಲೇ ಆರಂಭಿಸಿದ ಪುಟ್ಟ ಕೆಲಸ ನಿಧಾನವಾಗಿ ಉದ್ಯಮದ ಸ್ವರೂಪ ಪಡೆಯಿತು. ಗುರುಬಸವ ಹೆಸರಿನಲ್ಲಿ ಅಂಗಡಿ ತೆರೆಯಲಾಯಿತು. ಒಂದೂವರೆ ದಶಕದ ಈ ರೂಪಾಂತರದಲ್ಲಿ ಪತಿ ಮನೋಹರ, ಪುತ್ರರಾದ ಸದಾನಂದ, ಚಿದಾನಂದ ಕೂಡ ಅಮ್ಮನೊಂದಿಗೆ ಕೈ ಜೋಡಿಸಿದ್ದಾರೆ. ನಾಲ್ವರು ಹೆಣ್ಣು ಮಕ್ಕಳ ಪೈಕಿ ಮೂವರು ರೊಟ್ಟಿ ವ್ಯವಹಾರವನ್ನೇ ನಡೆಸುತ್ತಿದ್ದು, ಒಬ್ಬರು ಬಾಗಲಕೋಟೆಯ ವಿದ್ಯಾಗಿರಿಯಲ್ಲಿ, ಇನ್ನಿಬ್ಬರು ವಿಜಯಪುರ ಜಿಲ್ಲೆ ನಿಡಗುಂದಿ ಹಾಗೂ ಧಾರವಾಡದಲ್ಲಿ ಬ್ರ್ಯಾಂಚ್ ತೆಗೆದಿದ್ದಾರೆ.
200 ಮಂದಿಗೆ ಉದ್ಯೋಗಾವಕಾಶ
ಮೊದಲಿಗೆ ಗೃಹ ಉದ್ಯೋಗವಾಗಿದ್ದ ರೊಟ್ಟಿ ಗೃಹೋದ್ಯಮದ ಸ್ವರೂಪ ಪಡೆಯುತ್ತಿದ್ದಂತೆಯೇ ಕಾಯಂ ಗ್ರಾಹಕರು ಸೃಷ್ಟಿಯಾಗಿದ್ದಾರೆ. ಹೀಗಾಗಿ ನವನಗರದ ಸೆಕ್ಟರ್ ನಂ 4ರಲ್ಲಿ ತಾಳಿಕೋಟಿ ಕುಟುಂಬ ರೊಟ್ಟಿ ತಯಾರಿಕೆ ಘಟಕ ಸ್ಥಾಪಿಸಿದೆ. ಅಲ್ಲಿ 200 ಮಂದಿ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸಮೀಪದ ಶಿರೂರು, ಕಮತಗಿ, ಅಮೀನಗಡ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸ್ಥಳೀಯರಿಗೆ ಜೋಳ, ಸಜ್ಜೆ ಕೊಟ್ಟು ಅವರಿಂದ ರೊಟ್ಟಿ ಮಾಡಿಸಿ ಖರೀದಿಸಿ ತರುತ್ತಾರೆ. ಆಯಾ ದಿನದ ಬೇಡಿಕೆ ಆಧರಿಸಿ ಗ್ರಾಮೀಣರಿಂದ ರೊಟ್ಟಿ ಖರೀದಿಸಿ ತರಲಾಗುತ್ತದೆ.ಇದಕ್ಕಾಗಿಯೇ ಎರಡು ವಿಶೇಷ ವಾಹನಗಳಿವೆ.
’ಗುಣಮಟ್ಟದಲ್ಲಿ ರಾಜಿಯೇ ಇಲ್ಲ. ರೊಟ್ಟಿ ಕೈಯಲ್ಲಿ ಬಡಿದು ಮಾಡುತ್ತೇವೆ. ಯಂತ್ರಗಳ ಬಳಕೆ ಮಾಡುವುದಿಲ್ಲ. ರೊಟ್ಟಿ ಗರಿ ಗರಿಯಾಗಲಿ ಎಂದು ಅಕ್ಕಿ ಹಿಟ್ಟು ಅಥವಾ ಬೇರೆ ಯಾವುದೇ ಹಿಟ್ಟುಗಳನ್ನು ಬೆರೆಸುವುದಿಲ್ಲ. ಸೌದೆಯ ಒಲೆಯಲ್ಲಿ ಹೆಂಚಿಟ್ಟು ಬೇಯಿಸುತ್ತೇವೆ. ಹೀಗಾಗಿ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಊಟದ ಹೋಟೆಲ್, ಮೆಸ್, ಖಾನಾವಳಿಗೂ ರೊಟ್ಟಿ ಪೂರೈಸುತ್ತೇವೆ. ಲಾಕ್‌ಡೌನ್‌ಗೆ ಮುನ್ನ ಮಹಾರಾಷ್ಟ್ರದ ಉದ್ಯಮಿಯೊಬ್ಬರು ಬೇಡಿಕೆಯಂತೆ ಒಂದೇ ದಿನ 50 ಸಾವಿರ ರೊಟ್ಟಿಯನ್ನು ಮುಂಬೈಗೆ ಕಳುಹಿಸಿದ್ದೆವು. ಅದೊಂದು ದಾಖಲೆ‘ ಎಂದು ಚಿದಾನಂದ ಹೇಳುತ್ತಾರೆ.
ರೊಟ್ಟಿ ತಯಾರಿಕೆಯಲ್ಲೂ ಪ್ರಯೋಗಾತ್ಮಕತೆ ರೂಢಿಸಿಕೊಂಡ ಫಲವಾಗಿ ಗೋವಿನಜೋಳದ (ಮೆಕ್ಕೆಜೋಳ) ಹಿಟ್ಟು ಕೂಡ ರೊಟ್ಟಿಯಾಗಿ ಬದಲಾಗುತ್ತಿದೆ. ಗೋವಿನ ಜೋಳದ ರೊಟ್ಟಿಯೇ ಎಂದು ಆರಂಭದಲ್ಲಿ ಮೂಗು ಮುರಿಯುತ್ತಿದ್ದವರು ಈಗ ಮುಂಗಡ ಬೇಡಿಕೆ ಸಲ್ಲಿಸಿ ಒಯ್ಯುತ್ತಿದ್ದಾರೆ. ಗ್ರಾಹಕರ ಆರೋಗ್ಯದ ಕಾಳಜಿ ರಾಗಿ ರೊಟ್ಟಿಗೂ ಬೇಡಿಕೆ ಹೆಚ್ಚಿಸಿದೆ.
ರೊಟ್ಟಿಯ ಜೊತೆಗೆ ಶೇಂಗಾ, ಎಳ್ಳು ಹೋಳಿಗೆ, ರವೆ, ಲಡಕಿ ಉಂಡೆ, ಶೇಂಗಾ, ಕಡಲೆ, ಅಗಸಿ ಚಟ್ನಿ, ಗುರೆಳ್ಳು ಪುಡಿ, ಕೆಂಪು ಖಾರದ ಚಟ್ನಿ, ಬೆಳ್ಳುಳ್ಳಿ ಚಟ್ನಿ, ಶಂಕರಪಾಳಿ, ಸಕ್ಕರೆ ಗೊಂಬೆ, ಚಕ್ಕುಲಿ, ಕೋಡುಬಳೆ, ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್, ಬೇರೆ ಬೇರೆ ಕ್ಷೇತ್ರಗಳಂತೆ ರೊಟ್ಟಿ ಉದ್ಯಮಕ್ಕೂ ತೊಂದರೆ ಮಾಡಿತ್ತು. ಈಗ ಮದುವೆಯಂತಹ ಶುಭ–ಸಮಾರಂಭಗಳು ಆರಂಭವಾಗಿವೆ. ನಿಧಾನವಾಗಿ ರಾಜಕೀಯ, ಧಾರ್ಮಿಕ ಸಭೆ–ಸಮಾರಂಭಗಳಿಗೂ ಅವಕಾಶ ಸಿಗುತ್ತಿದೆ. ಮತ್ತೆ ಚೇತರಿಸಿಕೊಳ್ಳಲಿದೆ ಎಂದು ಲಕ್ಷ್ಮೀಬಾಯಿ ಆಶಾಭಾವನೆ ವ್ಯಕ್ತಪಡಿಸುತ್ತಾರೆ.
’ನಾನು ಅಡುಗೆ ಎಣ್ಣೆ ವ್ಯಾಪಾರಕ್ಕೆಂದು ಆಗಾಗ ಬಾಗಲಕೋಟೆಗೆ ಬರುತ್ತಿರುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿಂದ ರೊಟ್ಟಿ ಕೊಂಡೊಯ್ಯುತ್ತಿದ್ದೇನೆ. ಊರಿನಲ್ಲಿ ಅಕ್ಕಪಕ್ಕದವರ ಮನೆಯವರು, ಸಂಬಂಧಿಗಳಿಂದಲೂ ಬೇಡಿಕೆ ಇದೆ. ಹೀಗಾಗಿ ಕಾರಿನ ಡಿಕ್ಕಿ ತುಂಬಿಸಿಕೊಂಡು ಹೋಗುತ್ತೇನೆ‘ ಎಂದು ಹರಿಹರದಿಂದ ಬಂದಿದ್ದ ಗ್ರಾಹಕ ವೈ.ಜಿ.ವಿನಯ್ ಹೇಳಿದರು.
ಬಾಗಲಕೋಟೆಯತ್ತ ಬಂದರೆ ನವನಗರದ ಮ್ಯೂಸಿಯಂ ಸರ್ಕಲ್‌ನಲ್ಲಿರುವ ಲಕ್ಷ್ಮೀಬಾಯಿ ಅವರ ಅಂಗಡಿಗೆ ಭೇಟಿ ಕೊಡಬಹುದು. ರೊಟ್ಟಿ, ವಿವಿಧ ರೀತಿಯ ಚಟ್ನಿ, ಉಪ್ಪಿನಕಾಯಿಗೆ ಬೇಡಿಕೆ ಸಲ್ಲಿಸಲು ಮೊಬೈಲ್ ಸಂಖ್ಯೆ: 9741713820 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.