ತಾಯಿಗಾದ ಅವಮಾನಕ್ಕೆ ಐಎಎಸ್ ಮಾಡಬೇಕೆಂದುಕೊಂಡ ಹುಡುಗಿ, ಮೆಕ್ಯಾನಿಕ್ ಆಗಿದ್ದವಳನ್ನ ಪೋಲೀಸ್ ಮಾಡಬೇಕೆಂದುಕೊಂಡ ಗಂಡ, ಸೊಸೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಸೋ ಸವಾಲು ಹಾಕುವ ಅತ್ತೆ.. ಹೀಗೆ ಎಲ್ಲ ಬದಲಾಗುತ್ತಿದೆ ಎನ್ನುವುದು ಇಂದಿನ ಹಲವಷ್ಟು ಧಾರಾವಾಹಿಗಳು ಮೇಲ್ನೋಟಕ್ಕೆ ನೀಡುತ್ತಿರುವ ಚಿತ್ರಣ. ಆಳಕ್ಕಿಳಿದಂತೆ ಸಮಾಜದಲ್ಲಿ ಹಾಸುಹೊಕ್ಕಾಗಿ ಉಳಿದುಬಿಟ್ಟಿರುವ ಅನೇಕ ಸತ್ಯಗಳನ್ನು ಸಹ ಇವು ಬಿಚ್ಚಿಡುತ್ತಿವೆ ಎನ್ನುವುದು ವಾಸ್ತವ.
ಮಧ್ಯಮ ವರ್ಗದ ಮನೆಗಳಲ್ಲಿ ಹಾಗು ಗ್ರಾಮೀಣ ಭಾಗಗಳಲ್ಲಿ, ಕಿರುತೆರೆ ದಿನಚರಿಯ ಭಾಗವೇ ಆಗಿಹೋಗಿದೆ. ಸಂಜೆಯಾದಂತೆ ಅಜ್ಜ ಅಜ್ಜಿಯರು ಟಿವಿ ಮುಂದೆ ಕುಳಿತುಕೊಳ್ಳುವುದು, ಅಮ್ಮ ತರಕಾರಿ ಹೆಚ್ಚುತ್ತಾ ಧಾರಾವಾಹಿ ನೋಡುವುದು, ಊಟದ ಹೊತ್ತಿಗೆ ಮನೆಯವರೆಲ್ಲರೂ ಅಯ್ಯೋ ಅವನು ಹಾಗೆ ಮಾಡಬಾರದಿತ್ತು, ಇವಳು ಸರಿಯಾಗಿ ಹೇಳಿದಳು ಅಂತೆಲ್ಲ ರನ್ನಿಂಗ್ ಕಮೆಂಟರಿ ಕೊಡುತ್ತಾ ಧಾರವಾಹಿ ನೋಡುವುದು ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ಕಾಣುವ ಚಿತ್ರ. ಪ್ರತಿದಿನ ನೋಡುವ ಧಾರಾವಾಹಿಗಳು ನಮ್ಮ ಯೋಚನಾಶೈಲಿಯಲ್ಲಿ ಹಲವಾರು ಬದಲಾವಣೆ ತರುವುದು ಸಹ ಸಾಮಾನ್ಯ.
ಮೇಲ್ನೋಟಕ್ಕೆ ಮಹಿಳೆಯರ ಸಬಲೀಕರಣದ ಕುರಿತು ತೋರಿಸುವ ಎಲ್ಲಾ ಧಾರವಾಹಿಗಳಲ್ಲೂ ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ಹೇಗೆ ನೋಡಬಯಸುತ್ತದೆ, ಮಹಿಳೆಗೆ ಕಟ್ಟುಪಾಡುಗಳ ಅಗತ್ಯ ಇದೆ ಎನ್ನುವುದನ್ನು ಇನ್ನಷ್ಟು ಆಳವಾಗಿ ಹೆಣೆಯಲಾಗುತ್ತಿದೆ.
ಪ್ರತಿ ಧಾರವಾಹಿಯಲ್ಲೂ ಹೆಣ್ಣುಮಗಳು ಸೀರೆಯುಟ್ಟು, ಕೈತುಂಬ ಬಳೆ ಹಾಕಿ, ದೇವಸ್ಥಾನದಲ್ಲಿ ತೆಂಗಿನ ಕಾಯಿ ಒಡೆದು, ಕುಂಕುಮ ಇಟ್ಟು ಕುಣಿಯುತ್ತಾ ಬರುವುದರ ಹೊರತಾಗಿ ಬೇರೆ ದೃಶ್ಯಗಳು ಕಾಣುವುದು ಅಪರೂಪ. ಕೊನೆಗೆ ಆ ಹುಡುಗಿಗೆ ತಕ್ಕ ವರ ಸಿಗುವುದು ಆಕೆಯ ಹಾಗೂ ಧಾರಾವಾಹಿಯ ಬದುಕಿನ ಏಕೈಕ ಗುರಿ. ನಂತರದ ಇಡೀ ಚಿತ್ರಣಗಳು ಸವಾಲುಗಳನ್ನು ಎದುರಿಸುವುದು, ಅವರಿವರ ಕೊಂಕಿಗೆ ಮಂದಹಾಸ ಬೀರುವುದು, ಏನೇ ಕಷ್ಟವಿದ್ದರೂ ತನ್ನೊಳಗೇ ಹುದುಗಿಸಿ ಇಡೀ ಮನೆಯ, ಕುಟುಂಬದ ಸಮಸ್ಯೆಯನ್ನು ಒಂಟಿಯಾಗಿ ಹೋರಾಡಿ ಎದುರಿಸುವುದು. ಇದಿಷ್ಟು ಸಿದ್ಧ ಮಾದರಿಯ ಕತೆಗಳ ಹೊರತಾಗಿ ಬೇರೆ ಚಿತ್ರಣಗಳೇ ಇಲ್ಲದಿರುವುದು ಮಹಿಳೆ ಇಂದಿನವರೆಗೆ ಹೋರಾಡಿ ಪಡೆದ ಮತ್ತು ಪಡೆಯುತ್ತಿರುವ ಸಮತೆಗೆ ಸೂಚಿಸುತ್ತಿರುವ ಅಗೌರವವಷ್ಟೇ.
ಕೆಲಸಕ್ಕೆ ಹೋಗಬೇಕಾದ ಮಹಿಳೆ ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ, ಏನೂ ತೊಂದರೆಯಾಗಲು, ಹೊರೆಯಾಗಲು ಬಿಡುವುದಿಲ್ಲ ಎಂದು ಗಂಡನ ಮನೆಯವರನ್ನು ಗೋಗರೆಯುವುದು, ಕೆಲಸಕ್ಕೆ ಹೋಗುವ ತಾಯಿ ಮಗುವನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವುದು; ಹೆಣ್ಣನ್ನು ಬೋಲ್ಡ್ & ಬ್ಯೂಟಿಫುಲ್ ಎಂಬAತೆ ಬಿಂಬಿಸಿ ಮದುವೆಯಾದ ಮರುದಿನದಿಂದಲೇ ಸೀರೆಯುಡಿಸಿ ದೊಡ್ಡ ಗಾತ್ರದ ಕರಿಮಣಿ ಹಾಕಿ ಇಲ್ಲಿಯವರೆಗೆ ಕಟ್ಟಿಕೊಟ್ಟ ಆಕೆಯ ಪಾತ್ರದ ಚಿತ್ರಣವನ್ನೇ ಮರೆತುಬಿಡುವುದು ಇನ್ನೊಂದು ಆಯಾಮ.
ಅತ್ತೆ ಸೊಸೆಯ ಉತ್ತಮ ಸಂಬಂಧ ಇತ್ತೀಚಿನ ಟ್ರೆಂಡ್ ಆಗಿರುವ ಧಾರವಾಹಿ ವಿಷಯ. ಆದರೆ, ನೋಡುತ್ತಾ ಹೋದಂತೆ ಸೊಸೆ ಏನೆಲ್ಲ ಮಾಡುತ್ತಾಳೆ ಎಂದು ಹೊಗಳುವ ಅತ್ತೆಯ ಮಾತಿನಲ್ಲಿ ಸೊಸೆಯಾದವಳು ಏನೆಲ್ಲ ಮಾಡಬೇಕು ಎನ್ನುವ ಸೂತ್ರಗಳೇ ಇರುತ್ತವೆ.
ಗಂಡನನ್ನು ಯಜಮಾನರೇ, ಸಾಹೇಬರೇ, ಸರ್ ಮುಂತಾದ ವಿಚಿತ್ರ ಸಂಬೋಧನೆಗಳೂ ಈಗಿನ ಧಾರವಾಹಿಗಳ ವಿಶೇಷ. ಗಂಡು ಸದಾ ಶ್ರೀಮಂತರ ಮನೆಯ ದೊಡ್ಡ ಕಂಪನಿಯ ಮಾಲೀಕ. ಹೆಣ್ಣು ಬಡ ಮಧ್ಯಮ ವರ್ಗದ ಕೆಲಸದವಳು, ಅವನ ಮನೆಯ ಸೊಸೆಯಾಗುವುದೇ ಇವಳ ಜನ್ಮಾಂತರದ ಪುಣ್ಯ ಎನ್ನುವುದು ಇನ್ನಷ್ಟು ಅಸಹ್ಯಕರ. ಮೂವತ್ತಾದರೂ ಗಂಡು ಸಿಕ್ಕಿಲ್ಲ ಎನ್ನುವ ಹೀಯಾಳಿಕೆ, ವಿಧವೆಯನ್ನು ಮದುವೆಯಾಗುವ ಶ್ರೀರಾಮಚಂದ್ರ ಎನ್ನುವ ದೊಡ್ಡಸ್ತಿಕೆ ಕಥೆಗಳಲ್ಲಾದರೆ, ಕರಿಮಣಿ, ಅಂತರಪಟ, ಗಟ್ಟಿಮೇಳ, ಮುಂತಾದ ಶೀರ್ಷಿಕೆಗಳಲ್ಲೇ ಬದುಕೆಂದರೇ ಮದುವೆ ಮತ್ತದರ ಸುತ್ತುವ ಕಥೆಯಷ್ಟೇ ಎನ್ನುವುದೂ ಇದೆ.
ಹೆಣ್ಣಿಗೆ ಓದುವ, ಸಾಧಿಸುವ, ಜವಾಬ್ದಾರಿಯುವ ಪಾತ್ರ ನಿರ್ವಹಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ, ತನ್ನ ಆಯ್ಕೆಯ ಬದುಕು ಕಟ್ಟಿಕೊಳ್ಳುವ, ಯಾರ ಹಂಗಿಲ್ಲದೆಯೇ ಬದುಕುವ ಎಲ್ಲ ಶಕ್ತಿಯಿದ್ದರೂ ಅದೆಲ್ಲವನ್ನೂ ಇದು ಸಾಧ್ಯವಾಗದಿರುವುದು ಅಥವಾ ಸಾಧ್ಯವಾಗಬಾರದು ಎಂದು ತೋರಿಸುತ್ತಿರುವುದು ಇಂದಿನ ಧಾರವಾಹಿಗಳ ಹಿರಿಮೆ.
ಕೆಲ ವರ್ಷಗಳ ಹಿಂದಷ್ಟೇ ಬಂದ ಕೆಲವೇ ಕೆಲವು ಧಾರವಾಹಿಗಳು ಇಂದಿಗೂ ಪ್ರಸ್ತುತ ಎನಿಸಿವೆ. ಟಿ.ಎನ್ ಸೀತಾರಾಮ್ ಅಥವಾ ಸೇತುರಾಂ ರವರ ಧಾರವಾಹಿಗಳಲ್ಲಿ ನಾಯಕಿಯ ಪಾತ್ರಗಳನ್ನು ಕಟ್ಟಿಕೊಟ್ಟಿರುವುದು ಬಹಳಷ್ಟು ಸಮರ್ಥನೀಯವಾಗಿವೆ. ತನ್ನ ಸಿದ್ದಾಂತಕ್ಕೆ ಬದ್ಧವಾದ ಹೆಣ್ಣುಮಗಳು, ರಾಜಕೀಯ ರಂಗದಲ್ಲಿ, ಮಾಧ್ಯಮ ರಂಗದಲ್ಲಿ, ನಾಗರೀಕ ಸೇವೆಗಳಲ್ಲಿ ಕೆಲಸ ನಿರ್ವಹಿಸುವ ಪಾತ್ರಗಳು, ಪ್ರಬುದ್ಧತೆ, ಅಂದ ಚಂದ, ಮ್ಯಾಚಿಂಗ್, ದೇವರ ಮನೆ, ಬೆಳಗಿನ ಕಾಫಿ ಇದೆಲ್ಲ ಕ್ಲೀಷೆಗಳನ್ನು ಮೀರಿದ ಅದ್ಭುತ ಪಾತ್ರಗಳನ್ನು ಕಟ್ಟಿಕೊಟ್ಟ ಹಿರಿಮೆ ಇವರದು. ಪೋಲೀಸ್ ಪಾತ್ರದಲ್ಲಿ ಮಾಳವಿಕಾ, ವಕೀಲೆಯಾಗಿ ಅಪರ್ಣಾ, ಕಾಲು ಕಳೆದುಕೊಂಡರೂ ಹೋರಾಡಿ ಐಎಎಸ್ ಅಧಿಕಾರಿಯಾದ ವೈಜಯಂತಿ ಮುಂತಾದ ಬಹಳಷ್ಟು ಪಾತ್ರಗಳು ಇಂದಿಗೂ ಮನಸ್ಸಿನಲ್ಲಿ ಉಳಿಯುವಂತಹವು. ಮಹಿಳಾ ಕೇಂದ್ರಿತ ಧಾರವಾಹಿಯಾಗಿ ಮಹಿಳೆಗಿರುವ ಹಲವಾರು ಸಾಧ್ಯತೆಗಳನ್ನು ತೋರಿಸುತ್ತಾ ಹೋದ ಇಂತಹ ಧಾರವಾಹಿಗಳು ಈಗ ಮರೆಯಾಗಿರುವುದು ವಿಷಾದನೀಯ.
ಪ್ರೇಕ್ಷಕರಿಗೆ ಹೊಸತನದ ಹೆಸರಲ್ಲಿ ಮತ್ತಷ್ಟು ಹಿಂದಕ್ಕೆಳೆಯುತ್ತಿರುವುದು, ಮತ್ತೆ ಪುರುಷ ಪ್ರಧಾನ ಸಮಾಜದ ಪ್ರಾಬಲ್ಯ ಸಾಧಿಸತೊಡಗುತ್ತಿರುವುದು ಅರಿವಿಗೆ ಬರುವ ಹೊತ್ತಿಗೆ, ಮತ್ತೆಷ್ಟೋ ಓದಬೇಕಾದ ಮಕ್ಕಳು ಮದುವೆಯಾಗಿರುತ್ತಾರೆ, ತನ್ನ ಕಾಲಮೇಲೆ ನಿಲ್ಲಬೇಕಾದ ಹುಡುಗಿಯರು ಸಂಸಾರದ ಜಂಜಾಟದಲ್ಲಿ ಹೆಣಗಿರುತ್ತಾರೆ.
ಮಹಿಳೆ ಪ್ರತಿ ಕ್ಷೇತ್ರದಲ್ಲು ತನ್ನ ಹೆಜ್ಜೆಯನ್ನು ಅಚಲವಾಗಿ ಇಡುವ ಹೊತ್ತಿನಲ್ಲಿ ಇನ್ನಷ್ಟು ವಿಶಾಲವಾಗಿ, ಅರಿವಿನಿಂದ, ಕಾಳಜಿಯಿಂದ ಜೊತೆಗೂಡಬೇಕಾಗಿರುವುದು ಮಾಧ್ಯಮದ ಜವಾಬ್ದಾರಿ.
ಇಲ್ಲಿ ಕೇವಲ ಮಹಿಳೆಯ ಪಾತ್ರ ಪೋಷಣೆಯಲ್ಲದೇ ಪುರುಷರ ಸಬಲೀಕರಣವೂ ಅಗತ್ಯವಿದೆ. ಒಬ್ಬ ಮಹಿಳೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಅವಳ ಬದುಕಿನ ಆಯ್ಕೆ ಮಾಡಿಕೊಳ್ಳುವುದು ಸಹಜವೋ, ಒಬ್ಬ ಪುರುಷ ಮಹಿಳೆಯನ್ನು ಸಮಾನವಾಗಿ ನೋಡುತ್ತಾ ಆಕೆಯ ಮೇಲೆ ಅವಲಂಬಿತನಾಗದೇ, ಅವನ ಅಧಿಪತ್ಯ ಸಾಧಿಸದೇ ಇರುವುದು ಕೂಡ ಸಹಜ ಎನ್ನುವುದು ಸಹ ತಿಳಿಯಬೇಕಾಗಿದೆ. ದುಡಿಯುವ ಮಹಿಳೆ, ಸಿಂಗಲ್ ಪೇರೆಂಟ್ ಅಥವಾ ಸ್ವಾವಲಂಬಿ ಮಹಿಳೆಯ ಪಾತ್ರ ಎಷ್ಟು ಸಹಜ ಎನ್ನುವುದನ್ನು ತಿಳಿಸುವ ಅಗತ್ಯಕ್ಕಿಂತ ಬೆಳಿಗ್ಗೆ ಎದ್ದು ತನ್ನ ಕಾಫಿ ತಾನೇ ಮಾಡಿ ತಾನೇ ಕುಡಿದು, ತನ್ನ ಲಂಚ್ ಪ್ಯಾಕ್ ಮಾಡಿ ಹೊರಡುವುದು, ಮನೆಗೆ ಬಂದು ತಾನು ತಿಂದ ತಟ್ಟೆಯನ್ನು ತಾನೇ ತೊಳೆದು, ಬಟ್ಟೆ ಮೆಷಿನ್‌ಗೆ ಹಾಕಿ ಒಣಹಾಕುವುದು ಗಂಡಿನ ಬದುಕಲ್ಲಿ ಸಹಜ ಎನ್ನುವುದನ್ನು ತಿಳಿಸುವ ಅಗತ್ಯ ಅದಕ್ಕಿಂತ ಹೆಚ್ಚಾಗಿದೆ.
ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ವಾಸ್ತವಕ್ಕೆ ದೂರವಾದ ಚಿತ್ರಣಗಳು ಇನ್ನಷ್ಟು ತಪ್ಪು ತಿಳುವಳಿಕೆಗಳು, ಅತಿಯಾದ ನಿರೀಕ್ಷೆ - ಹತಾಶೆಗಳು, ಅತಿಯಾದ ಅವಲಂಬನೆಗೆ ದಾರಿ ಮಾಡುತ್ತಿರುವುದನ್ನು ಅರಿವಿನಲ್ಲಿಟ್ಟುಕೊಂಡು ಕಿರುತೆರೆ ಇನ್ನಾದರೂ ಬದಲಾವಣೆ ತಂದುಕೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.