ಈ ಲಾಕ್‌ಡೌನ್ ಎಂಬುದನ್ನು ಪ್ರೇಮಲತಾ ಮನಸ್ಸಿನಲ್ಲಿ ಎಷ್ಟು ಒತ್ತಡ ಇಟ್ಟುಕೊಂಡು ಎದುರಿಸಿದಳೋ ಅವಳಿಗೇ ಗೊತ್ತು. ಹೊರಗಡೆ ಹೋಗಬೇಕೆಂಬ ತುಡಿತವಿದ್ದರೂ ಕೂಡ ಮನೆಯೊಳಗೇ ಇದ್ದು, ಕುಟುಂಬದವರ ಜೊತೆ ವನವಾಸವೆಂಬಂತೆ ಕಳೆಯಬೇಕಾಯಿತು. ಆದರೆ ಈಗ ಸರ್ಕಾರ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸುತ್ತಿದ್ದಂತೆ ಆಕೆಯ ಮನಸ್ಸಿನೊಳಗೆ ಇನ್ನೊಂದು ರೀತಿಯ ತಳಮಳ ಶುರುವಾಗಿದೆ. ಹೊರಗಡೆ ಹೋಗಲು, ಬೇರೆಯವರ ಜೊತೆ ಬೆರೆಯಲು ವಿಪರೀತ ಭಯ. ಆಕೆಗೆ, ಆಕೆಯ ಪತಿಗೆ ಮನೆಯಿಂದಲೇ ಕಚೇರಿಯ ಕೆಲಸ ಒಗ್ಗಿಕೊಂಡುಬಿಟ್ಟಿದೆ. ಮೆಟ್ರೋದಲ್ಲೋ ಅಥವಾ ಬಸ್‌ನಲ್ಲೋ ಕಚೇರಿಗೆ ಹೋಗುವುದು ಹೇಗೆಂಬ ಚಿಂತೆ. ಎಲ್ಲಕ್ಕಿಂತ ಹೆಚ್ಚಾಗಿ ಚಿಕ್ಕ ಮಗಳನ್ನು, ವಯಸ್ಸಾದ ಅತ್ತೆ– ಮಾವನನ್ನು ಈ ಹೊಸ ಬದುಕಿಗೆ ಹೇಗೆ ಸನ್ನದ್ಧಗೊಳಿಸುವುದು ಎಂಬ ಆತಂಕ.
ಪ್ರೇಮಲತಾ ಮಾತ್ರವಲ್ಲ, ಹೊರಗಡೆ ದುಡಿಯುವ ಹಲವು ಮಹಿಳೆಯರು ಇದೇ ರೀತಿಯ ತಳಮಳವನ್ನು ಅನುಭವಿಸುತ್ತಿದ್ದಾರೆ. ಮನೆಯಿಂದ ಕಚೇರಿಗೆ ಹೋಗುವಾಗ ಕುಟುಂಬದ ಸದಸ್ಯರ ಸುರಕ್ಷತೆಯ ಬಗ್ಗೆ ದುಗುಡ ತುಂಬಿಕೊಂಡೇ ಹೊರಗೆ ಅಡಿಯಿಡುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಓಡಾಡುವಾಗ ಮನಸ್ಸಿನೊಳಗೆ ಅವ್ಯಕ್ತ ಭಯ ಉಂಟಾಗುವುದು, ಮಾಸ್ಕ್ ಅನ್ನು ಪದೇ ಪದೇ ಸರಿಪಡಿಸಿಕೊಳ್ಳುವುದು, ಕ್ಯಾಬ್ ಸೀಟ್ ಅನ್ನು ಸ್ಯಾನಿಟೈಸ್ ಮಾಡುವಾಗ ವಿಪರೀತ ಕಾಳಜಿ... ಇವೆಲ್ಲ ಬಹುತೇಕರ ಅನುಭವಕ್ಕೆ ಬಂದಿದೆ. ಕಚೇರಿಯಲ್ಲಿ ಸೂಕ್ತ ಎಚ್ಚರಿಕೆ ತೆಗೆದುಕೊಂಡರೂ ವಾಪಸ್ಸು ಮನೆಯೊಳಗೆ ಕಾಲಿಡುವವರೆಗೂ ಒಂದು ರೀತಿಯ ಕಳವಳ. ಮನೆಗೆ ಬಂದ ಮೇಲೆ ಮಕ್ಕಳು, ಹಿರಿಯರಿಗೆ ತಮ್ಮಿಂದ ಏನಾಗಿ ಬಿಡುವುದೋ ಎಂಬ ಹೆದರಿಕೆ.
ಇದು ಹೆಚ್ಚು ಕಡಿಮೆ ಎಲ್ಲ ದುಡಿಯುವ ಹೆಣ್ಣುಮಕ್ಕಳ ಮನಸ್ಸನ್ನು ಆವರಿಸಿಕೊಂಡು ಬಿಟ್ಟಿದೆ. ಲಾಕ್‌ಡೌನ್ ಶುರುವಾದಾಗ ಮನಸ್ಸಿನೊಳಗೆ ಆವರಿಸಿದ್ದ ಹೆದರಿಕೆ ನಿಧಾನವಾಗಿ ಕಡಿಮೆಯಾಗಿ ಮನೆಯಿಂದಲೇ ಕಚೇರಿ ಕೆಲಸ, ಮಕ್ಕಳಿಗೆ ಆನ್‌ಲೈನ್ ತರಗತಿಗೆ ನೆರವಾಗುವುದು, ಹೆಚ್ಚುವರಿ ಅಡುಗೆ, ಮನೆಗೆಲಸ ಎಂದು ಹೊಂದಿಕೊಂಡಿದ್ದವರಿಗೆ ಹೊರಗೆ ಹೋಗುವುದೆಂದರೆ ಕಳವಳ.
‘ಸಹಜತೆಗೆ ವಾಪಸ್ಸು ಹೊಂದಿಕೊಳ್ಳುವಾಗ ಈ ರೀತಿಯ ತಳಮಳ ಸಾಮಾನ್ಯ. ಇದನ್ನು ರೀಎಂಟ್ರಿ ಸಮಸ್ಯೆಯ ಲಕ್ಷಣ ಎನ್ನಬಹುದು’ ಎನ್ನುತ್ತಾರೆ ಆಪ್ತ ಸಮಾಲೋಚಕ ರೋಹಿತ್ ವಿಶ್ವನಾಥ್.
ಮುನ್ನೆಚ್ಚರಿಕೆ ಇರಲಿ..
ಹೊಸ ಬದಲಾವಣೆಗೆ ಹೊಂದಿಕೊಳ್ಳುವಾಗ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. ‘ಅಂತರ ಕಾಪಾಡಿಕೊಳ್ಳುವುದು ಮಾತ್ರವಲ್ಲ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಕೆಲಸಕ್ಕೆ ಸಂಬಂಧಿಸಿದಂತೆ ದೂರ ನಿಂತು ಮಾತನಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಈಗೆಂಟು ದಿನಗಳಿಂದ ಕಚೇರಿಗೆ ಹೋಗಿ ಬರುತ್ತಿರುವ ಒಳಾಂಗಣ ವಿನ್ಯಾಸಕಿ ಮಂದಾರ ಕುಲಕರ್ಣಿ.
ಮಾನಸಿಕವಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳುತ್ತ ಹೋದರೆ ಈ ಹೊಸ ಸಹಜತೆಗೆ ಹೊಂದಿಕೊಳ್ಳುವುದು ಕಷ್ಟವೇನಲ್ಲ ಎನ್ನುತ್ತಾರೆ ರೋಹಿತ್. ‘ಇದಕ್ಕಾಗಿ ಮೊದಲು ನಿಮ್ಮ ಕುಟುಂಬದ ಸದಸ್ಯರಿಗೆ ಹಿಂದೆ ಅನುಸರಿಸುತ್ತಿದ್ದ ನಿತ್ಯದ ಅಭ್ಯಾಸಗಳನ್ನು ಅನುಸರಿಸುವಂತೆ ಪ್ರೇರಣೆ ನೀಡಬೇಕು’ ಎಂಬುದು ಅವರ ಸಲಹೆ. ಅಂದರೆ ಬೆಳಿಗ್ಗೆ ಅಲಾರ್ಮ್ ಇರಿಸಿಕೊಂಡು ಏಳುವುದು, ವ್ಯಾಯಾಮ, ಸ್ನಾನ, ಉಪಾಹಾರ, ಕಚೇರಿಗೆ ಹೊರಡಲು ಸಿದ್ಧತೆ, ಮಕ್ಕಳಿಗೆ ಆನ್‌ಲೈನ್ ತರಗತಿಗೆ ಸಿದ್ಧಪಡಿಸುವುದು (ಶಾಲೆ ಇನ್ನೂ ಶುರುವಾಗಿಲ್ಲವಲ್ಲ..).. ಹೀಗೆ ಈ ಹಿಂದಿನ ವಾಡಿಕೆಯನ್ನು ಪುನರಾರಂಭಿಸಿದರೆ ಹೊಸ ಸಹಜತೆಯನ್ನೂ ಹೆಚ್ಚಿನ ಸಮಸ್ಯೆಯಿಲ್ಲದೇ ಅಳವಡಿಸಿಕೊಳ್ಳಬಹುದು.
ಕಚೇರಿಗೆ ಕೆಲಸಕ್ಕೆ ಹೋಗುವ ಮುನ್ನ
ನೀವು ಈ ನಿಯಮಗಳನ್ನು ಪಾಲಿಸುವುದರಿಂದ ನಿಮಗೆ ನಿಮ್ಮ ಸುರಕ್ಷತೆ ಮಾತ್ರವಲ್ಲ ನಿಮ್ಮ ಕುಟುಂಬದ ಸುರಕ್ಷತೆಗೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ.
ಮನೆಯವರ ಕಾಳಜಿಯೂ ಇರಲಿ
ವರ್ಷದಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡಿ ಹಲವರಿಗೆ ಬೇಸರವಾಗಿರುವುದು ನಿಜ. ಇದರೊಂದಿಗೆ ಕಚೇರಿ ಕೆಲಸವೇ ಬೆಸ್ಟ್ ಎಂಬ ಅಭಿಪ್ರಾಯವೂ ಹಲವರಲ್ಲಿದೆ. ಹಾಗಾಗಿ ಸಂಭ್ರಮದಿಂದ ಕಚೇರಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಕೆಲಸದ ನಡುವೆ ಮನೆಯವರ ಮೇಲಿನ ಕಾಳಜಿಯನ್ನು ಮರೆಯಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.