ADVERTISEMENT

Pregnancy Tips: ಗರ್ಭಿಣಿಯರಲ್ಲಿ ದಂತ ಆರೋಗ್ಯಕ್ಕಿರಲಿ ಆದ್ಯತೆ!

ಡಾ ವೀಣಾ ಎಸ್.ಭಟ್ಟ ಭದ್ರಾವತಿ
Published 14 ಸೆಪ್ಟೆಂಬರ್ 2024, 0:35 IST
Last Updated 14 ಸೆಪ್ಟೆಂಬರ್ 2024, 0:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚೊಚ್ಚಲ ಮಗುವಿನ ತಾಯಿಯಾಗುವ ಸಡಗರದಲ್ಲಿರುವವರಿಗೆ ಗರ್ಭಾವಸ್ಥೆಯ ಸಮಸ್ಯೆಗಳ ಕುರಿತು ಒಂದಷ್ಟು ಸಂದೇಹಗಳು ಸಹಜ. ಇವುಗಳಲ್ಲಿ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಯೂ ಒಂದು. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ದಂತ ಸಮಸ್ಯೆಗೆ ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.

ಮೊದಲನೆ ಬಾರಿಗೆ ಗರ್ಭ ಧರಿಸಿದ್ದೇನೆ. ಆರನೇ ತಿಂಗಳು ನಡೆಯುತ್ತಿದ್ದು, ಹಲ್ಲುಜ್ಜಿದಾಗ ರಕ್ತ ಬರುತ್ತದೆ. ಕೆಲವೊಮ್ಮೆ ತಿನ್ನುವಾಗ, ಕುಡಿಯುವಾಗ ಹಲ್ಲುಗಳಲ್ಲಿ ಜುಮ್ಮು ಎನಿಸಿದಂತೆ ಆಗುತ್ತದೆ. ತಜ್ಞವೈದ್ಯರ ಬಳಿ ತೋರಿಸಿದ್ದೇನೆ. ಮೃದುಬ್ರಷ್‌ ಬಳಸಲು ಹೇಳಿದ್ದಾರೆ. ಇದರಿಂದ ಏನಾದರೂ ತೊಂದರೆ ಇದೆಯೇ?

ADVERTISEMENT

ಗರ್ಭಧಾರಣೆಯಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ರಕ್ತ ಸರಬರಾಜು ಹೆಚ್ಚುತ್ತದೆ. ಜತೆಗೆ ವಸಡಿನ ಉರಿಯೂತ/ಸುತ್ತಲಿನ ಹಲ್ಲಿನ ಮೂಳೆಯ ಉರಿಯೂತವೂ ಉಂಟಾಗಬಹುದು. ಸೋಂಕು ಉಂಟಾಗಬಹುದು. ಇದರಿಂದಾಗಿ  ಬ್ರಷ್ ಮಾಡಿದಾಗ ರಕ್ತಸ್ರಾವ ಆಗುತ್ತಿರಬಹುದು. ಗಾಬರಿಗೊಳ್ಳಬೇಡಿ.

ಗರ್ಭಿಣಿಯರಲ್ಲಿ ಆಹಾರಸೇವನೆಯ ವಿಧಾನ ಬದಲಾಗುತ್ತದೆ. ಪದೇಪದೇ ಸ್ವಲ್ಪ ಸ್ವಲ್ಪ ಆಹಾರ ಸೇವಿಸಬೇಕಾಗಿ ಬರಬಹುದು. ಮತ್ತು ಹೆಚ್ಚಿನವರು ಆಹಾರ ಸೇವನೆಯ ನಂತರ ಬಾಯಿಮುಕ್ಕಳಿಸಲು ನಿರ್ಲಕ್ಷಿಸುತ್ತಾರೆ. ಕೆಲವು ಗರ್ಭಿಣಿಯರು ಬ್ರಷ್ ಮಾಡಿದರೆ ವಾಂತಿಯಾಗುತ್ತದೆ ಎಂದು ಬ್ರಷ್ ಮಾಡದೇ ಇರಬಹುದು. ಇದರಿಂದ ದಂತಕುಳಿ, ಪಾಚಿಗಟ್ಟುವಿಕೆ, ವಸಡಿನ ಸೋಂಕು ಇವೆಲ್ಲಾ ಆಗಬಹುದು. ಈ ಮೊದಲೇ ಇಂಥ ಸಮಸ್ಯೆಗಳು ಇದ್ದವರಲ್ಲಿ ಇನ್ನಷ್ಟು ಹೆಚ್ಚಬಹುದು. ಹಾಗಾಗಿ ಗರ್ಭಧರಿಸುವ ಮೊದಲೇ ಇವುಗಳ ಬಗ್ಗೆ ದಂತವೈದ್ಯರಿಗೆ ತೋರಿಸುವುದು ಉತ್ತಮ.

ಜ್ಞಾನದ ಹಲ್ಲಿನ (ವಿಸ್ಡ್ಂಟೀತ್) ಸಮಸ್ಯೆಯೂ ಕೆಲವೊಮ್ಮೆ ಭಾಧಿಸಬಹುದು. ಗರ್ಭಧಾರಣೆಯಲ್ಲಿ ಹೆಚ್ಚುವ ರಕ್ತಸರಬರಾಜಿನಿಂದ ಹಲ್ಲು ಸೂಕ್ಷ್ಮಗೊಂಡು ಬಿಸಿ ಅಥವಾ ತಂಪು ಆಹಾರ ಸೇವಿಸಿದಾಗ ಜುಮ್ಮೆನಿಸಿದ ಹಾಗಾಗುತ್ತದೆ. ಬಹುಶಃ ನಿಮಗೆ ಹೀಗೇ ಆಗುತ್ತಿದೆ ಎಂದು ಅನಿಸುತ್ತಿದೆ. ಗರ್ಭಿಣಿಯರಲ್ಲಿ ಬಾಯಿಒಣಗಿದ ಅನುಭವ ಆಗಬಹುದು. ಇದರಿಂದ ದಂತ ಸವಕಳಿ ಹೆಚ್ಚುತ್ತದೆ. ಕೆಲವು ಗರ್ಭಿಣಿಯರಲ್ಲಾಗುವ ಬೆಳಗಿನ ಸುಸ್ತು, ಅತಿಯಾದ ವಾಂತಿಯಿಂದ, ಜಠರಾಮ್ಲ ಹಿಮ್ಮುಖವಾಗಿ ಬಾಯಿಗೆ ಚಲಿಸಿದಾಗ ಹಲ್ಲಿನ ಸವಕಳಿಯೂ ಹೆಚ್ಚುವ ಸಾಧ್ಯತೆಯೂ ಇರುತ್ತದೆ.

ಹಲವು ಸಂಶೋಧನೆಗಳಿಂದ ವಸಡು/ಹಲ್ಲಿನ ಸೋಂಕಿನಿಂದ ಪ್ರೋಸ್ಟಗ್ಲಾಂಡಿನ್ ಎಂಬ ನೋವುಕಾರಕ ಹಾರ್ಮೋನುಗಳು ಹೆಚ್ಚು ಬಿಡುಗಡೆಯಾಗಿ ಅದು ಅಕಾಲಿಕ ಇಲ್ಲವೇ ಅವಧಿಪೂರ್ವ ಹೆರಿಗೆಗೂ ಕಾರಣವಾಗುತ್ತದೆ. ಜತೆಗೆ ಶಿಶುಮರಣಕ್ಕೂ ಕಾರಣವಾಗಬಹುದೆಂಬ ವಾದಕ್ಕೆ ಸಾಕಷ್ಟು ಪುಷ್ಟಿ ದೊರಕಿದೆ. ಹಾಗಾಗಿ ಗರ್ಭಿಣಿಯರೂ ಉತ್ತಮ ದಂತ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಬಾಯಿಒಣಗದ ಹಾಗೇ ಕನಿಷ್ಠ 3ರಿಂದ 3.6 ಲೀಟರ್‌ಅನ್ನು ಪ್ರತಿದಿನ ಕುಡಿಯಿರಿ. ನಿಯಮಿತವಾಗಿ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಮತ್ತು ಸಾಧ್ಯವಾದರೆ ಮಧ್ಯದಲ್ಲೊಮ್ಮೆ ಮೃದುವಾದ, ಉತ್ತಮ ದರ್ಜೆಯ ಬ್ರಷ್‌ನಿಂದ ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದು ಮುಖ್ಯ. ಅದಕ್ಕೂ ಮುಖ್ಯವಾಗಿ ದಂತಮಜ್ಜನವಾದ ಮೇಲೆ ವಸಡನ್ನು ನಿಯಮಿತವಾಗಿ ಬೆರಳಿಂದ ಮಸಾಜ್ ಮಾಡಿ. ಇದರಿಂದ ವಸಡಿನ ಉರಿಯೂತ ಆಗುವ ಸಂಭವ ಕಡಿಮೆಯಾಗುತ್ತದೆ. ಎಲ್ಲಕ್ಕೂ ಮೊದಲು ಪ್ರತಿ ಬಾರಿ ಆಹಾರ ಸೇವಿಸಿದಾಗ ದ್ರವಆಹಾರ ತೆಗೆದುಕೊಂಡಾಗಲು ನೀರಿನಿಂದ ಚೆನ್ನಾಗಿ ಬಾಯಿಮುಕ್ಕಳಿಸುವುದು ಮುಖ್ಯ. ಸಾಧ್ಯವಾದಷ್ಟು ಸಿಹಿತಿನಿಸು, ಜಂಕ್‌ಫುಡ್, ಕೃತಕಪಾನೀಯಗಳಿಂದ ದೂರವಿರಿ.

ಹಣ್ಣು, ಸೊಪ್ಪು, ತರಕಾರಿಗಳನ್ನು ಜಗಿದು ತಿನ್ನಿ, ಗರ್ಭ ಧರಿಸುವ ಮೊದಲೇ ಮತ್ತು ಗರ್ಭಧರಿಸಿದ ನಂತರವೂ ಯಾವುದೇ ದಂತಾರೋಗ್ಯ ಸಮಸ್ಯೆಗಳಿದ್ದರೂ ದಂತವೈದ್ಯರನ್ನ ಕಾಣಲು ಹಿಂದೇಟು ಹಾಕಬೇಡಿ.

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.