ಮನಸ್ಸುಗಳ ನಾಡಿಮಿಡಿತ ಹಿಡಿದು ಮಗ್ಗಲು ಬದಲಿಸುವ ಕ್ಷೇತ್ರ ಫ್ಯಾಷನ್. ಇಲ್ಲಿ ದಿನಕ್ಕೊಂದು ವಿನ್ಯಾಸ, ದಿನಕ್ಕೊಂದು ಟ್ರೆಂಡ್ ಇದ್ದರೇನೇ ಚೆಂದ. ಉಡುಗೆ ತೊಡುಗೆಯಿಂದ ಹಿಡಿದು ಅದಕ್ಕೆ ಹೊಂದುವ ಚೆಂದದ ಆ್ಯಕ್ಸಸರಿಸ್, ಅಂದದ ಬ್ಯಾಗ್‌ಗಳಲ್ಲೂ ಸದಾ ಬದಲಾವಣೆ ಬಯಸುತ್ತಾರೆ ಫ್ಯಾಷನ್ ಪ್ರಿಯರು.
ಮಹಿಳೆಯರಿಗಂತೂ ಬ್ಯಾಗ್‌ಗಳೆಂದರೆ ಹೆಚ್ಚೇ ಮೆಚ್ಚು. ಅದರಲ್ಲೂ ವಿವಿಧ ವಿನ್ಯಾಸಗಳು ಆಕರ್ಷಿತ. ಪ್ರತಿ ಮಹಿಳೆಯರೂ ಒಂದಲ್ಲಾ ಒಂದು ಬಗೆಯ ಬ್ಯಾಗ್ ಇಟ್ಟುಕೊಂಡಿರುತ್ತಾರೆ. ಆಯಾ ಸಂದರ್ಭ, ಸಮಾರಂಭ ಹಾಗೂ ಅಭಿರುಚಿಗನುಸಾರ ಬ್ಯಾಗ್‌ಗಳು ಟ್ರೆಂಡ್‌ಗೆ ಅನುಗುಣವಾಗಿ ಹಲ ಬಗೆಯ ಬ್ಯಾಗುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳ ಕಿರುಪರಿಚಯ ಇಲ್ಲಿದೆ...
ಹ್ಯಾಂಡ್ ಬ್ಯಾಗ್: ಅಲಂಕಾರಿಕ ಸಾಧನವಾಗಿಯೇ ಹೆಚ್ಚು ಬಳಕೆಯಾಗುವ ಈ ಬ್ಯಾಗ್ ಮಧ್ಯಮ ಗಾತ್ರದ್ದಾಗಿದ್ದು, ಅತಿ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲಷ್ಟೇ ಅವಕಾಶವಿರುತ್ತದೆ. ಕೈಯಲ್ಲಿ ಹಿಡಿದರೆ ಒಂದು ಬಗೆ, ಮುಂಗೈನಲ್ಲಿ ತೊಟ್ಟರೆ ಮತ್ತೊಂದು ರೀತಿಯಲ್ಲಿ ಅಂದವನ್ನು ಹೆಚ್ಚಿಸುವ ಇದು ಪ್ರತಿಷ್ಠೆಯ ದ್ಯೋತಕವೂ ಹೌದು.
ಬ್ಯಾಕ್‌ಪ್ಯಾಕ್: ಬುಕ್ ಬ್ಯಾಗ್, ಕಿಟ್‌ಬ್ಯಾಗ್, ಬ್ಯಾಕ್‌ಕೇಸ್ ಮೊದಲಾದ ಹೆಸರುಗಳೊಂದಿಗೆ ಎಲ್ಲರಿಗೂ ಪರಿಚಿತವಾಗಿರುವ ಬ್ಯಾಕ್‌ಪ್ಯಾಕ್ ಹೆಚ್ಚು ಬಳಕೆಯಲ್ಲಿವೆ. ಗಟ್ಟಿಮುಟ್ಟಾದ, ದೀರ್ಫಕಾಲಿವಾಗಿ ಬಳಸಬಹುದಾದ ಈ ಬ್ಯಾಗ್‌ಗಳ ಹಿಂಬಂದಿಯಲ್ಲಿ ಎಂದು ಹಿಡಿಕೆಗಳಿರುತ್ತವೆ. ಬಹುತೇಕ ಪ್ರಯಾಣ, ಪ್ರವಾಸಗಳಿಗೆ ಬಳಕೆಯಾಗುತ್ತವೆ.
ಟೋಟೆ: ಲೆದರ್‌ನಂತಹ ಗಟ್ಟಿ ವಸ್ತುಗಳಿಂದ ಸಿದ್ಧವಾಗುವ ಇವು ಸಾಮಾನ್ಯವಾಗಿ ಅಗಲವಾಗಿದ್ದು, ಆಯತಾಕಾರದಲ್ಲಿರುತ್ತವೆ. ಚಿಕ್ಕ, ಪುಟ್ಟ ಖರೀದಿಗೆ ಬಳಸುವಂತಹ ಇವು ಶಾಪಿಂಗ್‌ಗೆ ಹೆಚ್ಚು ಬಳಕೆಯಾಗುತ್ತವೆ. ಪುಸ್ತಕ ಹಾಗೂ ಫೈಲ್‌ಗಳನ್ನು ಇಡಬಹುದಾದಷ್ಟು ಸ್ಥಳಾವಾಕಾಶ ಇರುವ ಈ ಬ್ಯಾಗ್ ಬಹುತೇಕರಿಗೆ ಕಚೇರಿ, ಕಾಲೇಜ್‌ಗೆ ಕೊಂಡೊಯ್ಯಲು ಅಚ್ಚುಮೆಚ್ಚು.
ಮೆಸೆಂಜರ್ ಬ್ಯಾಗ್: ಮಧ್ಯಮ ಗಾತ್ರದ ಈ ಬ್ಯಾಗ್‌ಗಳನ್ನು ಕೊರಿಯರ್ ಬ್ಯಾಗ್ ಎಂದೂ ಕರೆಯುತ್ತಾರೆ. ಉದ್ದನೆಯ ಹಾಗೂ ಬಳಸುವವರು ತಮ್ಮ ಎತ್ತರಕ್ಕೆ ಹೊಂದಿಸಿಕೊಂಡು ಹೆಗಲಿಗೆ ಅಡ್ಡವಾಗಿ ಧರಿಸುವಂತಹ ಹಿಡಿಕೆಯನ್ನು ಹೊಂದಿರುತ್ತವೆ.
ಹೊಬೊ ಬ್ಯಾಗ್ (hobo): ಅತ್ಯಂತ ಮೃದುವಾದ ಸಾಮಗ್ರಿಯಿಂದ ತಯಾರಿಸುವ ಈ ಬ್ಯಾಗ್‌ಗಳು ಹೆಚ್ಚಾಗಿ ಅರ್ಧಚಂದ್ರಾಕೃತಿಯಲ್ಲಿರುತ್ತವೆ. ಹಿಡಿಕೆಯನ್ನು ಹಿಡಿದುಕೊಂಡಾಗ, ಅರ್ಧಚಂದ್ರಾಕೃತಿ ಸ್ಪಷ್ಟವಾಗಿ ಕಾಣಿಸುವುದರಿಂದ ಚಂದವೂ ಇಮ್ಮಡಿಯಾಗುತ್ತದೆ. ಹೆಚ್ಚು ಬಳಕೆಯಲ್ಲಿರುವ ಈ ಬ್ಯಾಗ್‌ಗಳು ಎಲ್ಲ ಸಂದರ್ಭಕ್ಕೂ ಒಗ್ಗುತ್ತವೆ.
ಬಕೆಟ್ ಬ್ಯಾಗ್: ಫ್ಯಾಷನ್ ಪ್ರಿಯರಿಗೆ ಮೆಚ್ಚು ಎನಿಸುವ ಈ ಬ್ಯಾಗ್‌ಗಳಿಗೆ ದಾರದಂತಹ ವಿನ್ಯಾಸವಿರುತ್ತದೆ. ಅದನ್ನು ಎಳೆದಾಗ ಈ ಬ್ಯಾಗ್ ಪೂರ್ತಿಯಾಗಿ ಮುಚ್ಚಿಕೊಳ್ಳುವುದರಿಂದ ಬ್ಯಾಗ್‌ಗೊಂದು ಚೆಂದದ ರೂಪ ಬರುತ್ತದೆ. ವಿವಿಧ ಆಕಾರ, ಬಣ್ಣಗಳಲ್ಲಿ ಲಭ್ಯವಿರುವ ಇವು ಆಕರ್ಷಕವಾಗಿವೆ.
ಕ್ಲಚ್ (Clutch): ಹ್ಯಾಂಡ್ ಬ್ಯಾಗ್‌ಗಳ ಪುಟ್ಟ ರೂಪವೇ ಈ ಕ್ಲಚ್ ಬ್ಯಾಗ್. ಯಾವುದೇ ಹಿಡಿಕೆ ಇಲ್ಲದ ಇದು ಕೈಯಲ್ಲಿ ಹಿಡಿದುಕೊಳ್ಳಬಹುದಷ್ಟೆ. ಮೊಬೈಲ್, ಕ್ರಿಡಿಟ್ ಕಾರ್ಡ್, ಲಿಪ್‌ಸ್ಟಿಕ್‌ನಂತಹ ಸಣ್ಣ ಪುಟ್ಟ ವಸ್ತುಗಳಿಗಷ್ಟೇ ಇದರಲ್ಲಿ ಸ್ಥಳಾವಕಾಶ.
ಶಾಪಿಂಗ್ ಬ್ಯಾಗ್: ಈ ಬ್ಯಾಗ್‌ಗಳನ್ನು ಪರಿಚಯಿಸುವ, ವರ್ಣಿಸುವ ಅಗತ್ಯವೇ ಇಲ್ಲ. ಪ್ರತಿ ಮನೆಯಲ್ಲಿಯೂ ಬಳಕೆಯಾಗುವ ಇವುಗಳನ್ನು ಬಟ್ಟೆ, ಪ್ಲಾಸಿಕ್ ಬಳಸಿ ತಯಾರಿಸಲಾಗುತ್ತದೆ. ವಿವಿಧ ಗಾತ್ರಗಳಲ್ಲಿ ಇವು ಲಭ್ಯ. ಹೆಚ್ಚು ಸಂಗ್ರಹ ಸಾಮರ್ಥ್ಯ, ದೀರ್ಘಕಾಲಿಕ ಬಳಕೆ ಈ ಬ್ಯಾಗ್‌ನ ವಿಶೇಷ.
ಮೇಕಪ್ ಬ್ಯಾಗ್: ಸೌಂದರ್ಯವರ್ಧಕ ಸಾಧಗಳನ್ನು ಇಡಲು ಬಳಸುವ ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದಾದ ಕಿರಿದಾದ ಬ್ಯಾಗ್‌ಗಳಿವು. ಈ ಬ್ಯಾಗ್‌ಗ ಒಳಗೆ ಪುಟ್ಟ, ಪುಟ್ಟ ಘಟಕಗಳಿದ್ದು, ಸೌಂದರ್ಯ ಸಾಧನಗಳು ಸುಲಭವಾಗಿ ಸಿಗುವಂತೆ, ಪ್ರತ್ಯೇಕವಾಗಿ ಜೋಡಿಸಿಡುವಂತೆ ವಿನ್ಯಾಸಗೊಂಡಿರುತ್ತವೆ.
ಫ್ಯಾನಿ ಪ್ಯಾಕ್ (Fanny Pack): ಬೆಲ್ಟ್ ಬ್ಯಾಗ್ ಎಂದೇ ಪರಿಚಿತವಿರುವ ಇವು ಬೆಲ್ಟ್‌ಗೆ ಪೌಚ್‌ಅನ್ನು ಜೋಡಿಸಿರುವಂತೆ ವಿನ್ಯಾಸಗೊಂಡಿರುತ್ತದೆ. ಧರಿಸಲು ಅರಾಮಾದಾಯಕವಾದ ಹಾಗೂ ನೋಡಲು ಆಕರ್ಷಕವಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.