ಮೊನ್ನೆ ಊರಿಗೆ ಹೋದಾಗ ಹೆಚ್ಚಿನ ಮನೆಯಂಗಳದಲ್ಲಿ ಬಣ್ಣಬಣ್ಣದ ಸೀರೆಗಳು ಮೈಬಿಡಿಸಿ ಅರಳಿತ್ತು. ಬಣ್ಣಬಣ್ಣದ ರಂಗೋಲಿಗಳು ಗಾಳಿಯಲ್ಲಿ ಮೂರ್ತರೂಪ ತಾಳಿ ಹಾರಾಡುತ್ತಿರುವಂತೆ ಕಾಣಿಸಿತ್ತು. ಸ್ವಾತಿ ಬಿಸಿಲಿನ ಸಮಯವಿರಬೇಕು, ಬೆಂಗಳೂರಿಗೆ ಹಿಂದಿರುಗಿದ ಮೇಲೆ ನಾನೂ ಮಾಡಬೇಕೆಂದುಕೊಂಡೆ. ಆದರೆ ಅಲ್ಲಿ ಉರಿಬಿಸಿಲಿದ್ದರೆ, ಇಲ್ಲಿ ಮೋಡದ ಛಾಯೆ. ಬಿಸಿಲಿಗಾಗಿ ಎರಡು ದಿನ ಕಾದದ್ದಾಯಿತು, ನಂತರ ತಿಂಗಳ ರಜೆಯೆಂದು ನಾಲ್ಕೈದು ದಿನ ಹಾಗೇ ಕಳೆದುಹೋಯಿತು, ಇನ್ನೇನು ಸ್ವಾತಿ ನಕ್ಷತ್ರ ಮುಗಿಯುತ್ತಿದೆ ಎನ್ನುವಾಗ ನನ್ನ ಸೀರೆಗಳಿಗೆ ಬಿಸಿಲು ಕಾಣುವ ಮುಹೂರ್ತ ಬಂದಂತಾಯಿತು, ಇಲ್ಲಿಯವರೆಗೆ ಆಷಾಢದ ಗಾಳಿ, ಶ್ರಾವಣದ ಮಳೆ ಎಂದು ತಣಸು ಹತ್ತಿಸಿಕೊಂಡ ಬಟ್ಟೆಗಳಿಗೆ ಬೆಚ್ಚಗಾಗಲು ಇದೇ ಸುಸಮಯ. ಸ್ವಾತಿಬಿಸಿಲಿಗೆ ಹಾಕಿದ ಬಟ್ಟೆಗಳಿಗೆ ಹುಳಹುಪ್ಪಟೆ ಹಿಡಿಯುವುದಿಲ್ಲ ಎಂಬುದು ಅನಾದಿ ಕಾಲದಿಂದ ಬಂದ ಆಚರಣೆ. ಹೀಗಾಗಿ ಸೀರೆಗಳಿರುವ ಚೀಲ ಬಿಚ್ಚಿದೆ.
ಕಳೆದ ವರ್ಷ ಸೀರೆಗಳನ್ನು ಹೇಗಿಟ್ಟಿದ್ದೆನೋ ಇವತ್ತೂ ಹಾಗೆಯೇ ಇದ್ದವು. ನಾಲ್ಕೈದು ಸೀರೆಗಳು ಜಾಸ್ತಿಯಾಗಿದ್ದವು ಎನ್ನುವುದು ಬಿಟ್ಟರೆ ಬೇರೇನೂ ಬದಲಾಗಿರಲಿಲ್ಲ. ಒಂದು ವರ್ಷದಿಂದ ಕತ್ತಲೊಳಗೇ ಮಲಗಿದ್ದ ಸೀರೆಗಳನ್ನು ಒಂದೊಂದೇ ತೆಗೆದಂತೆ ಒಂದೊಂದು ಕತೆ ಬಿಚ್ಚಿಕೊಳ್ಳಲಾರಂಭಿಸಿತು. ಅಣ್ಣ ಕಂಚಿಯಿಂದ ತಂದದ್ದು, ಹುಟ್ಟುಹಬ್ಬಕ್ಕೆ ಕೊಂಡದ್ದು, ಮಾವನ ಮಗನ ಮದುವೆಯಲ್ಲಿ ಕೊಟ್ಟದ್ದು ಎಂದು ಮನಸ್ಸು ಮಧುರವಾಯಿತು. ಬೇಸರವಾಗಿದ್ದು ಮಾತ್ರ ಒಂದೇ ಬಣ್ಣದ ಐದಾರು ಸೀರೆಗಳನ್ನು ಕಂಡು.
ಜೊತೆಗೆ ಒಂದಿಷ್ಟು ಹೊಸ ಸೀರೆಗಳು. ಆನ್‌ಲೈನಿನಲ್ಲಿ ಕೊಂಡದ್ದಾದರೂ ಅದಕ್ಕೂ ಒಂದು ಹಿನ್ನೆಲೆ. ಸ್ಕ್ರೀನಿನಲ್ಲಿ ಕಂಡ ಬಣ್ಣವೇ ಒಂದಾದರೆ ಕಳುಹಿಸಿಕೊಟ್ಟದ್ದು ಬೇರೆ ಬಣ್ಣ, ಡ್ಯಾಮೇಜಿನ ಸೀರೆಯೆಂದು ಅಂಗಡಿಯವನ ಹತ್ತಿರ ಗಲಾಟೆ ಮಾಡಿ ಬದಲಾಯಿಸಿ ತಂದದ್ದು, ನನ್ನಲ್ಲಿರುವ ಸೀರೆಯಂತದ್ದೇ ಬಣ್ಣ, ಮೆಟೀರಿಯಲ್‌ನ ಸೀರೆಯನ್ನು ಪಕ್ಕದ ಮನೆಯವರು ಕಡಿಮೆ ಬೆಲೆಗೆ ತಂದದ್ದು ಕಂಡು ಎರಡು ದಿನ ನಿದ್ದೆಯಿಲ್ಲದೆ ಒದ್ದಾಡಿದ್ದು- ಎಲ್ಲವೂ ಅದರಲ್ಲಿತ್ತು.
ಮತ್ತೆ ಕೆಲವು ನನ್ನನ್ನು ನಿಕಷಕ್ಕೆ ಒಡ್ಡಿದ್ದವು. ಆಗ ಚಂದವಿದೆ ಅಂದುಕೊಂಡ ಸೀರೆ ಈಗ ಒಂಚೂರು ಇಷ್ಟವಾಗುತ್ತಿಲ್ಲ. ಆಗ ನನಗಿದ್ದ ಖರಾಬು ಟೇಸ್ಟಿನ ಬಗ್ಗೆ ನನಗೇ ವಿಷಾದವುಂಟಾಯಿತು. ಇನ್ನು ಕೆಲವು ಸೀರೆಗಳದ್ದು ಒಂದೇ ಬಾರಿ ಸುತ್ತಾಡಿಸಿದ್ದೆ. ಅದೂ ಕೇವಲ ಯಾವುದೋ ಒಂದು ಸಮಾರಂಭಕ್ಕೋಸ್ಕರ. ಮತ್ತೆ ಉಟ್ಟೇ ಇರಲಿಲ್ಲ. ಕೇಳಿದ ಕೂಡಲೇ ನಿರಾಕರಿಸದೆ ಕೊಡಿಸಿದ ಗಂಡನ ಮೇಲೆ ಪ್ರೀತಿ ಉಕ್ಕಿಬಂತು. ಇನ್ನು ಕೆಲವು ಸೀರೆಗಳು ಆಗಿನ ಕಾಲದಲ್ಲಿ ಟ್ರೆಂಡಿಂಗ್ ಎಂದು ಕೊಂಡದ್ದು. ಈಗ ಅದು ಔಟ್ ಆಫ್ ಫ್ಯಾಶನ್ ಆಗಿತ್ತು. ಉಟ್ಟುಕೊಂಡು ಹೋದರೆ ಶಿಲಾಯುಗದವಳು ಎಂದುಕೊಳ್ಳಬಹುದು ಅನ್ನಿಸಿತು. ಬದಲಾವಣೆ ಜಗದ ನಿಯಮವಲ್ಲವೇ! ಅಂತದ್ದರಲ್ಲಿ ನಾನೇನು ಮಹಾ?ಎಂದು ಸಮಜಾಯಿಷಿ ಕೊಟ್ಟುಕೊಂಡೆ. ಕೆಲವು ಸೀರೆಗಳು ಈಗ ಐವತ್ತು ಸಾವಿರ ಕೊಟ್ಟರೂ ಸಿಗದ ಜೆಮ್‌ಗಳಂತೆ ಕಂಡುಬಂದವು. ಚಿನ್ನದ ಅಂಚಿನ ಮೈ ತುಂಬಾ ಬುಟ್ಟಾಗಳಿರುವ ಸೀರೆ ಉಟ್ಟರೆ ಎಲ್ಲರ ಕಣ್ಣಲ್ಲೂ ಮಿಂಚು ಮಿನುಗುತ್ತಿತ್ತು.
ಇನ್ನು ರವಿಕೆಗಳು - ಹೈ ನೆಕ್ಕಿನ, ಬೋಟು ಕುತ್ತಿಗೆಯ, ಫ್ರೆಂಚ್ ಕಟ್ಟಿನ, ಹಿಂದೆಗುಂಡಿಯಿರುವ, ಹ್ಯಾಂಡ್, ಮೆಷಿನ್ ಎಂಬ್ರಾಯಿಡರಿಯ, ರೆಡಿಮೇಡ್‌ಗಳೆಂದು ಯಾವ ಡಿಸೈನಿನ ರವಿಕೆಗಳು ಬೇಕು? ಎಲ್ಲಾ ಅಲ್ಲಿದ್ದವು. ಹೆಚ್ಚಿನವುಗಳದ್ದು ಸೀರೆಯಷ್ಟೇ ಬೆಲೆ ಅಥವಾ ಅದಕ್ಕಿಂತ ಜಾಸ್ತಿಯಿದ್ದಿತ್ತು. ಮೂಗಿಗಿಂತ ಮೂಗುತಿಯ ಭಾರವೇ ಜಾಸ್ತಿಯಾದಕ್ಕೆ ಸಾಕ್ಷಿಯಾಗಿದ್ದವು. ಅದರೆ ಅಷ್ಟು ಹಣ ಕೊಟ್ಟು ಹೊಲಿಸಿದ್ದು ಈಗ ಮಾತ್ರ ಮೈಒಳಗೆ ತೂರಲು ನಖರಾ ತೋರಿಸುತ್ತಿದ್ದುದನ್ನು ಅರಗಿಸಿಕೊಳ್ಳಲಾಗಲಿಲ್ಲ.
ಅಷ್ಟೂ ಸೀರೆಗಳನ್ನು ದಿನಕ್ಕೆರಡು ಪಾಳಿಯಂತೆ ಬಿಸಿಲಿಗೆ ಹಾಕಿ ಮತ್ತೆ ಒಳಗಡೆಯಿಡುವಾಗ ಎರಡು ದಿನ ಕಳೆದಿತ್ತು. ಬಿಸಿಲಿಗೆ ಹರಹುವ ನೆವದಲ್ಲಿ ಹಳೆಯ ಆಲ್ಬಂನ್ನು ತಿರುವಿದಂತೆ ನೆನಪಿನ ನೆರಿಗೆ ಚಿಮ್ಮಿ ಮನಸ್ಸು ಪ್ರಫುಲ್ಲಗೊಂಡಿತ್ತು. ಆದರೆ ಸತ್ಯದ ವಿಷಯವೇನೆಂದರೆ ದಾಸರು ‘ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ’ ಎಂದಂತೆ ಹೆಂಗಳೆಯರಿಗೆ ಸೀರೆ ಎಷ್ಟಿದ್ದರೂ ಇನ್ನು ಸಾಕು ಎಂದೂ ಎನಿಸದು. ಅದರ ಮೇಲಿನ ಮೋಹ ಎಂದೂ ತೀರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.