ADVERTISEMENT

ಫ್ಯಾಷನ್ | ಬಾಳೆ ನಾರನು ದಿರಿಸಾಗಿಸಿದ ನಾರಿಯರು

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಳೆ ನಾರಿನ ಮೌಲ್ಯವರ್ಧನೆ

ಕೃಷ್ಣಿ ಶಿರೂರ
Published 19 ಅಕ್ಟೋಬರ್ 2024, 0:22 IST
Last Updated 19 ಅಕ್ಟೋಬರ್ 2024, 0:22 IST
ಬಾಳೆ ನಾರು ಮಿಶ್ರಿತ ಸೀರೆ ಹಾಗೂ ಕುರ್ತಿ
ಬಾಳೆ ನಾರು ಮಿಶ್ರಿತ ಸೀರೆ ಹಾಗೂ ಕುರ್ತಿ   

ಬಾಳೆ ಗೊನೆ ಬಲಿತ ನಂತರ ಕಡಿದು ಹಣ್ಣಾಗಿಸಿ ಬಾಳೆ ಹಣ್ಣನ್ನು ತಿಂದರೆ ಅಲ್ಲಿಗೆ ಆ ಬಾಳೆ ಮರದ ಕಥೆ ಮುಗಿಯಿತು ಎಂಬ ಮಾತಿದೆ. ಹಣ್ಣು ಕೊಟ್ಟ ಬಾಳೆ ಮರದ ನಾರನ್ನು ನಾರಿಯರು ನೂಲಾಗಿಸಿ, ನೇಯ್ದು ಬಟ್ಟೆಯಾಗಿಸಿದ ಯಶೋಗಾಥೆ ಇಲ್ಲಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಾಳೆ ನಾರಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿದೆ. ಸೀರೆ, ಕುರ್ತಾ, ಪಂಚೆ, ಶಲ್ಯ, ಶಾಲು ಮಾತ್ರವಲ್ಲ; ಬಾಳೆ ನಾರಿನ, ಬ್ಯಾಗ್‌, ಮ್ಯಾಟ್‌, ಬುಟ್ಟಿಗಳೂ ಇವೆ. ಇದನ್ನು ಸಾಧ್ಯವಾಗಿಸಿದ್ದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಸಣ್ಣಪಾಪಮ್ಮ ಕೆ.ಜೆ ಅವರು. ಕೃಷಿಯಲ್ಲಿ ಮಹಿಳೆ ಎಂಬ ವಿಷಯವಾಗಿ ಸಂಶೋಧನೆ ಕೈಗೆತ್ತಿಕೊಂಡ ಅವರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ 2021–22ನೇ ಸಾಲಿನಲ್ಲಿ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಅಡಿಯಲ್ಲಿ ₹1.20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಬಾಳೆ ನಾರಿನ ಮೌಲ್ಯವರ್ಧಿತ ಉತ್ಪನ್ನಕ್ಕೆ ಸಹಕಾರಿಯಾಯಿತು.

ಈ ಅನುದಾನದಲ್ಲಿ ಕೈಮಗ್ಗ ಹಾಗೂ ಪವರ್‌ ಲೂಮ್‌, ಅಡಿಕೆ ಸಿಪ್ಪೆಯ ಪೇಪರ್‌ ತಯಾರಿಸುವ ಯಂತ್ರಗಳುಳ್ಳ ಎರಡು ಸುಸಜ್ಜಿತ ಪ್ರಯೋಗಾಲಯಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ಬಾಳೆ ಬೇಸಾಯ ನಿರತ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಈವರೆಗೆ 200 ಮಹಿಳೆಯರಿಗೆ ಈ ಉತ್ಪನ್ನಗಳ ತಯಾರಿಕೆ ಕುರಿತು ಐದು ದಿನಗಳ ತರಬೇತಿಯನ್ನು ನೀಡಲಾಗಿದೆ. ಮಹಿಳೆಯರನ್ನು ಸ್ವಾವಲಂಬಿಸಿಯಾಗಿಸುವ ಉದ್ದೇಶವನ್ನು ಈ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ADVERTISEMENT

ಬಾಳೆ ನಾರಿನಿಂದ ನೂಲು ತೆಗೆಯುವುದು, ಆ ನಾರನ್ನು ಹತ್ತಿಯೊಂದಿಗೆ ಹೊಸೆದು ನೂಲಾಗಿಸುವುದು, ಆ ನೂಲಿನಿಂದ ಮಗ್ಗದಲ್ಲಿ ಬಟ್ಟೆನೇಯುವುದು ಒಂದು ಹಂತವಾದರೆ, ಬಾಳೆ ಮರದ ತಿರುಳಿನಿಂದ (ಕಾಂಡ) ರಸವನ್ನು ತೆಗೆದು ಬಟ್ಟೆಗೆ ನೈಸರ್ಗಿಕ ಡೈ ಆಗಿ ಬಳಸಲಾಗಿದೆ. ಇಷ್ಟೇ ಅಲ್ಲದೆ ಬಾಳೆ ನಾರಿನ ಆಕರ್ಷಕ ಬುಟ್ಟಿಗಳನ್ನೂ ಸಿದ್ಧಪಡಿಸಲಾಗಿದೆ. ಬಟ್ಟೆ ನೇಯಲು ಒಬ್ಬ ಪುರುಷನನ್ನು ಹೊರತುಪಡಿಸಿ ಪ್ರಯೋಗಾಲಯದ ಉಳಿದೆಲ್ಲ ಕೆಲಸವನ್ನು ರೈತ ಮಹಿಳೆಯರಾದ ಪ್ರೇಮಾ ಎತ್ತಿನಗುಡ್ಡ, ಗೀತಾ ಹಾಗೂ ಲತಾ ನಿಭಾಯಿಸುತ್ತಿದ್ದಾರೆ. ಸದ್ಯಕ್ಕೆ ಈ ಬಾಳೆ ನಾರಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಕೃಷಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಲಯ ಮಟ್ಟದಲ್ಲಿ ಬಾಳೆ ಬೆಳೆಯುವ ರೈತರಿಗೆ ಅನುಕೂಲವಾಗುವಲ್ಲಿ ಯಂತ್ರಗಳನ್ನು ಅಳವಡಿಸಿಕೊಡುವ ಯೋಜನೆ ಇದೆ ಎನ್ನುತ್ತಾರೆ ಡಾ.ಸಣ್ಣಪಾಪಮ್ಮ.

‘ಬಾಳೆ ನಾರು ಹೆಚ್ಚು ಶಕ್ತಿ, ಸಾಂದ್ರತೆ ಮತ್ತು ಮೃದುತ್ವ ಹೊಂದಿದ್ದರಿಂದ ಹತ್ತಿ ಮಿಶ್ರಿತ ನೂಲಾಗಿಸಿ ಉಡುಪು ವಿನ್ಯಾಸ ಕ್ಷೇತ್ರದಲ್ಲಿ ಹೇರಳವಾಗಿ ಬಳಸಬಹುದು. ಬಾಳೆ ಗೊನೆ ಕಡಿದ ನಂತರ ಕಾಂಡ ಕೊಳೆಯಲು ಬಿಟ್ಟು ಮಣ್ಣಲ್ಲಿ ಒಂದಾಗಿಸುವ ಬದಲು ರೈತರು ನಮಗೆ ಬೇಕಾಗುವ ರೀತಿಯಲ್ಲಿ ನಾರು ತೆಗೆದು ನೀಡಿದರೂ ಸಾಕು; ಅದು ರೈತರ ಆದಾಯಕ್ಕೆ ಪ್ರೇರಣೆಯಾಗಲಿದೆ’ ಎನ್ನುತ್ತಾರೆ ಅವರು.

ಬಾಳೆ ಮಾತ್ರವಲ್ಲದೆ ಅಡಿಕೆ ಸಿಪ್ಪೆ, ಕಬ್ಬಿನ ಸಿಪ್ಪೆ, ಕಲ್ನಾರಿನ ಮೌಲ್ಯವರ್ಧಿತ ಉತ್ಪನ್ನಗಳಿಂದಲೂ ರೈತ ಮಹಿಳೆಯರು ಆದಾಯ ಗಳಿಸಬಹುದು ಎಂಬುದನ್ನು ಸಂಶೋಧಿಸಲಾಗಿದೆ.

ಬಾಳೆ ನಾರು ಮಿಶ್ರಿತ ಪಂಚೆ ಶರ್ಟ್‌ ಶಲ್ಯ

ಬಾಳ್ವೆಗೆ ಬಾಳೆ

ಬಾಳೆ ಗಿಡ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದಿದೆ. ನಮ್ಮ ಕರ್ನಾಟಕದಲ್ಲಿ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಬಾಳೆ ಮತ್ತು ಅಡಿಕೆಯನ್ನು ನಮ್ಮ ರೈತರು ಬೆಳೆಯುತ್ತಿದ್ದು, ಅವುಗಳಿಂದ
ಬರುವಂತಹ ತ್ಯಾಜ್ಯ ವಸ್ತುಗಳ ನಿರ್ವಹಣೆ ತುಂಬಾ ಕಡಿಮೆ ಎನ್ನಬಹುದು.

ಬಾಳೆ ನಾರು ಹೆಚ್ಚು ಶಕ್ತಿ, ಸಾಂದ್ರತೆ ಮತ್ತು ಮೃದುತ್ವ ಹೊಂದಿದ್ದರಿಂದ ಹತ್ತಿ ಮಿಶ್ರಿತ ನೂಲಾಗಿಸಿ ಉಡುಪು ವಿನ್ಯಾಸ ಕ್ಷೇತ್ರದಲ್ಲಿ ಹೇರಳವಾಗಿ ಬಳಸಬಹುದು.

ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸುಸಿಜ್ಜಿತವಾದ ನೈಸರ್ಗಿಕ ನಾರುಗಳ ಸಂಸ್ಕರಣೆ ನೂಲುವಿಕೆ ಮತ್ತು ನೇಯ್ಗೆ ಘಟಕ ಹಾಗೂ ಕೈಕಾಗದಗಳ ತಯಾರಿಕೆಯ ಘಟಕ ಸ್ಥಾಪನೆಯಾಗಿದೆ.

ಈ ಘಟಕದಲ್ಲಿ ಉತ್ಕೃಷ್ಟವಾದ
ಯಂತ್ರೋಪಕರಣಗಳು ಬಂದಿದ್ದು ರೈತ ಮತ್ತು ರೈತ ಮಹಿಳೆಯರು ಇದರ ಉಪಯುಕ್ತವನ್ನು ಪಡೆಯಬಹುದು. ಈ ತರಬೇತಿಗೆ ಇಟಗಿ, ದುಬ್ಬನಮರಡಿ , ಉಪ್ಪಿನ ಬೆಟಗೇರಿ , ಮಮ್ಮಿಗಟ್ಟಿ, ಹುಬ್ಬಳ್ಳಿ ಧಾರವಾಡ ಹಾಗೂ ಬೆಂಗಳೂರಿನಿಂದ ಸಹ ಆಸಕ್ತ ತರಬೇತಿದಾರರು ಆಗಮಿಸಿ ಈ ತರಬೇತಿಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

–ಸಣ್ಣ ಪಾಪಮ್ಮ ಕೆ.ಜೆ

ಬಾಳೆ ನಾರಿನಿಂದ ರೂಪುತಳೆದ ಆಕರ್ಷಕ ಬ್ಯಾಗ್ ಮತ್ತು ಬುಟ್ಟಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.