ಕೇವಲ ಒಂದೇ ಜೇಬಿನ(ಪಾಕೆಟ್) ಕಿರುಚೀಲದಿಂದ ಬಹು ಘಟಕಗಳ, ರಹಸ್ಯ ಕಿಸೆಯುಳ್ಳ ಚೀಲಗಳು, ಒಂದು ಜಿಪ್‌ನಿಂದ ವಿವಿಧ ಜಿಪ್, ಡಿಸೈನರ್ ಟ್ಯಾಗ್, ಹಿಡಿಕೆಗಳಿಗನುಸಾರ ತಯಾರಾದ ರಂಗುರಂಗಿನ ಬ್ಯಾಗುಗಳು ಮಹಿಳಾ ಗ್ರಾಹಕರನ್ನು ಮೋಡಿ ಮಾಡುವುದು ಸುಳ್ಳಲ್ಲ. ಹೀಗೆ ಬದಲಾದ ಫ್ಯಾಷನ್ ಲೋಕದಲ್ಲಿ ಸ್ಥಾನ ಪಡೆದಿರುವ ಬಗೆ ಬಗೆಯ ಬ್ಯಾಗ್‌ಗಳ ವಿವರ ಇಲ್ಲಿದೆ.
‘ಜಂಬದ ಚೀಲ’ ಎಂದೇ ಕರೆದುಕೊಳ್ಳುತ್ತಿದ್ದ ವ್ಯಾನಿಟಿ ಬ್ಯಾಗ್ ದಶಕಗಳ ಹಿಂದೆ ಐಷಾರಾಮಿ ಜೀವನದ ಗುರುತಾಗಿತ್ತು. ಕ್ರಮೇಣ ಅದು ‘ಕಂಫರ್ಟ್ ಝೋನ್’ಗೆ ವಿಸ್ತರಿಸಿತ್ತು. ಇಂತಿಪ್ಪ ವ್ಯಾನಿಟಿ ಬ್ಯಾಗ್ ಈಗ ಅಗತ್ಯವಸ್ತುಗಳ ಪಟ್ಟಿಗೆ ಸೇರಿ ಹೋಗಿದೆ. ಶಾಲಾ–ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಂದ ಹಿಡಿದು, ಯುವತಿಯರು, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು ಸೇರಿದಂತೆ ಎಲ್ಲಾ ವರ್ಗದವರಿಗೂ ಈ ಬ್ಯಾಗ್ ಅಚ್ಚುಮೆಚ್ಚು. ಮದುವೆಯಂತಹ ಕಾರ್ಯಕ್ರಮಗಳಿಂದ ಹಿಡಿದು ಸಭೆ–ಸಮಾರಂಭಗಳಲ್ಲಿ ಥಟ್ ಎಂದು ಆಕರ್ಷಿಸುವ ನವ ನವೀನ ವಿನ್ಯಾಸದ ಬ್ಯಾಗ್‌ಗಳು ಕಾಣಿಸಿಕೊಳ್ಳುತ್ತವೆ. ಸೀರೆಯ ನಂತರ ಮಹಿಳೆಯರನ್ನು ಹಿಡಿದಿಟ್ಟುರುವುದು ಬಹುಶಃ ಈ ಬ್ಯಾಗ್‌ಗಳ ಲೋಕವೇ ಇರಬೇಕು.
ಕೇವಲ ಒಂದೇ ಜೇಬಿನ(ಪಾಕೆಟ್) ಕಿರುಚೀಲದಿಂದ ಬಹು ಘಟಕಗಳ, ರಹಸ್ಯ ಕಿಸೆಯುಳ್ಳ ಚೀಲಗಳು, ಒಂದು ಜಿಪ್‌ನಿಂದ ವಿವಿಧ ಜಿಪ್, ಡಿಸೈನರ್ ಟ್ಯಾಗ್, ಹಿಡಿಕೆಗಳಿಗನುಸಾರ ತಯಾರಾದ ರಂಗುರಂಗಿನ ಬ್ಯಾಗುಗಳು ಮಹಿಳಾ ಗ್ರಾಹಕರನ್ನು ಮೋಡಿ ಮಾಡುವುದು ಸುಳ್ಳಲ್ಲ. ಹೀಗೆ ಬದಲಾದ ಫ್ಯಾಷನ್ ಲೋಕದಲ್ಲಿ ಸ್ಥಾನ ಪಡೆದಿರುವ ಬಗೆ ಬಗೆಯ ಬ್ಯಾಗ್‌ಗಳ ವಿವರ ಇಲ್ಲಿದೆ.
ಸ್ಲಿಂಗ್ ಬ್ಯಾಗ್: ಇದು ಮೆಸೆಂಜರ್ ಬ್ಯಾಗ್‌ನ ಒಂದು ವಿಧ. ಉದ್ದನೆಯ ಹಾಗೂ ಗ್ರಾಹಕರ ಎತ್ತರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದಾದ ಹಿಡಿಕೆ ಹೊಂದಿರುವ ಕಿರುಚೀಲ. ಒಂದು ಮೊಬೈಲ್, ಕರವಸ್ತ್ರ, ಸಣ್ಣ ಪರ್ಸ್, ಬೀಗದ ಕೈ ಮತ್ತಿತರ ಚಿಕ್ಕಪುಟ್ಟ ವಸ್ತುಗಳನ್ನಷ್ಟೇ ಇದರಲ್ಲಿ ಇರಿಸಿಕೊಳ್ಳಬಹುದು. ವಾಕಿಂಗ್‌ಗೆ ಹೋಗುವಾಗ, ಯಾವುದೇ ಉದ್ದೇಶವಿಲ್ಲದೇ ಸುಮ್ಮನೆ ಹೊರಗಡೆ ತಿರುಗಾಡುವಾಗ ಈ ಚೀಲಗಳನ್ನು ಬಳಸುವುದು ಆರಾಮದಾಯಕ.
ಟೋಟೆ: ಇವು ಸಾಮಾನ್ಯವಾಗಿ ಒಂದೇ ಜಿಪ್ ಇರುವ ಸ್ವಲ್ಪ ಅಗಲವಾದ ಬ್ಯಾಗ್‌ಗಳು. (ಓವರ್ ಸೈಜ್ಡ್ ಬ್ಯಾಗ್) ಪುಸ್ತಕ, ಫೈಲ್ಸ್‌ಗಳನ್ನು ಇದರಲ್ಲಿ ಇರಿಸಿ ಕಾಲೇಜು ಅಥವಾ ಕಚೇರಿಗೆ ಒಯ್ಯಬಹುದು. ಸಾಂದರ್ಭಿಕವಾಗಿ, ಸಣ್ಣಪುಟ್ಟ ಖರೀದಿಯ ಉದ್ದೇಶವಿರುವಾಗ ಶಾಪಿಂಗ್ ಬ್ಯಾಗ್‌ನಂತೆಯೂ ಬಳಸಬಹುದು.
ಶೋಲ್ಡರ್ ಬ್ಯಾಗ್: ಎರಡರಿಂದ ಮೂರು ಒಳಭಾಗ, ರಹಸ್ಯ ಕಿಸೆ(ಸೀಕ್ರೆಟ್ ಪಾಕೆಟ್), ಹೊರಭಾಗಕ್ಕೂ ಸಣ್ಣ ಪ್ಯಾಕೆಟ್ ಇರುವಂತಹ ಉದ್ಯೋಗಸ್ಥ ಮಹಿಳೆಯರಿಗೆ ಹೇಳಿ ಮಾಡಿಸಿದ ಬ್ಯಾಗ್ ಇದು. ಕಚೇರಿ, ಶಾಲೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಊಟದ ಡಬ್ಬಿ, ನೀರು, ಹಾದಿ ಸವೆಸಲು ಓದಲು ಇರಿಸಿಕೊಂಡ ಪುಸ್ತಕ, ಪತ್ರಿಕೆಗಳು, ಅತ್ಯಗತ್ಯ ನೈರ್ಮಲ್ಯ ವಸ್ತುಗಳು, ಔಷಧಿ ಹೀಗೆ ಎಲ್ಲವನ್ನೂ ಪ್ರತ್ಯೇಕವಾಗಿ ಇರಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ. ರಹಸ್ಯ ಕಿಸೆಯಲ್ಲಿ ದುಡ್ಡು ಅಥವಾ ಅತಿಮುಖ್ಯ ಡಿಜಿಟಲ್ ಕಾರ್ಡ್‌ಗಳನ್ನು ಇರಿಸಿಕೊಳ್ಳಬಹುದು. ಸಂಜೆ ಬರುವಾಗ ಅನಿರೀಕ್ಷಿತವಾಗಿ ಕಣ್ಣಿಗೆ ಕಂಡದ್ದು, ಕೊಂಡರೆ, ಅದಕ್ಕೂ ಈ ಬ್ಯಾಗ್‌ನಲ್ಲಿ ಎಂಟ್ರಿ ಸಿಗುತ್ತದೆ.
ಹ್ಯಾಂಡ್ ಬ್ಯಾಗ್(ಹ್ಯಾಂಡ್ ಹೆಲ್ಡ್ ಬ್ಯಾಗ್ ): ಇದರ ಸಾಮರ್ಥ್ಯ ಶೋಲ್ಡರ್ ಬ್ಯಾಗ್‌ಗಿಂತ ಕಡಿಮೆಯೇ. ಒಂದು ರೀತಿ ಪ್ರತಿಷ್ಠೆಯ ದ್ಯೋತಕ. ಅತಿ ಕಡಿಮೆ ಅತ್ಯಗತ್ಯ ವಸ್ತುಗಳಿಗೆ ಮಾತ್ರ ಇದರಲ್ಲಿ ಅವಕಾಶ. ಇದನ್ನು ಮುಂಗೈಯಲ್ಲಿ ಹಿಡಿದರೆ ಮತ್ತೊಂದು ಅಲಂಕಾರಿಕ ಸಾಧನದಂತೆ ಕಾಣುತ್ತದೆ.
ಎಲ್ಲ ವರ್ಗಗಳಿಗೂ ಇಷ್ಟವಾಗುವಂತಹ ಈ ಬಗೆಬಗೆಯ ಬ್ಯಾಗುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಗುಣಮಟ್ಟ, ವಿನ್ಯಾಸ, ಬ್ರಾಂಡ್ ಮೇಲೆ ಅವುಗಳ ಮೌಲ್ಯ ನಿರ್ಧಾರವಾಗುತ್ತವೆ. ಎಲ್ಲವೂ ಅಷ್ಟೇ, ಕಾಸಿಗೆ ತಕ್ಕಂತೆ ಕಜ್ಜಾಯ. ಬಳಸುವಾಗ ಸ್ವಲ್ಪ ಜಾಗ್ರತೆ, ಕಾಳಜಿವಹಿಸಿದರೆ ದೀರ್ಘಕಾಲದವರೆಗೆ ಬಾಳಿಕೆ ಬರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.