ADVERTISEMENT

ಬಿಸಿಲ ಬೇಗೆಗೆ ಬಗೆ ಬಗೆ ಸ್ಕಾರ್ಫ್‌

ಎಡೆಯೂರು ಪಲ್ಲವಿ
Published 29 ಮಾರ್ಚ್ 2019, 19:31 IST
Last Updated 29 ಮಾರ್ಚ್ 2019, 19:31 IST
   

ಬೇಸಿಗೆ ಶುರುವಾಗಿದೆ. ಧೂಳಿನ ಆರ್ಭಟವೇ ಜಾಸ್ತಿ. ಯಾವ ಅಂಗವನ್ನೂ ಬಿಡದೆ ತನ್ನ ಅಧಿನಕ್ಕೆ ಎಳೆದು ಹಾಳು ಮಾಡುತ್ತದೆ. ಆದರೆ ಪ್ರತಿ ಅಂಗವನ್ನೂ ಕಾಪಾಡಿಕೊಳ್ಳಬೇಕೆಂಬ ಕಾಳಜಿ ಹೆಣ್ಣುಮಕ್ಕಳದು. ಅದರಲ್ಲಿ ಕೊರಳಿನ ಭಾಗವೂ ಒಂದು. ಬಿಸಿಲಿನ ಝಳಕ್ಕೆ, ಚಳಿಯ ಆರ್ಭಟಕ್ಕೆ ತ್ವಚೆ ಒಣಗುತ್ತದೆ, ಸುಕ್ಕಾದಂತೆ ಒರಟುತನ ಭಾಸವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊರಳಿನ ಸೂಕ್ಷ್ಮ ಭಾಗವನ್ನು ಕಾಳಜಿ ಮಾಡಲು ಮೊರೆ ಹೋಗುವುದು ನೆಕ್ ಸ್ಕಾರ್ಫ್ . ಇವು ನಿಮ್ಮ ಕೊರಳ ತ್ವಚೆಯನ್ನು ಕಾಪಾಡುವುದಲ್ಲದೆ ನಿಮ್ಮ ದಿರಿಸಿನ ಆಕರ್ಷಣೆಯನ್ನು ಹೆಚ್ಚಿಸಿ, ಮಾರ್ಡನ್ ಲುಕ್ ನೀಡುತ್ತವೆ. ಇವು ಪಾರ್ಟಿ, ಆಫೀಸ್, ಶಾಪಿಂಗ್, ವಿಹಾರ ಹೀಗೆ ಎಲ್ಲ ಕಾರ್ಯಕ್ರಮಗಳಿಗೆ, ಎಲ್ಲಾ ಕಾಲದಲ್ಲಿಯೂ ಒಗ್ಗುತ್ತವಲ್ಲದೆ ಫ್ಯಾಷನೆಬಲ್ ಮತ್ತು ಸ್ಟೈಲಿಶ್ ಆಗಿ ಕಾಣುತ್ತವೆ.ಇಂತಹ ಸ್ಕಾರ್ಫ್‌ಗಳನ್ನು ಧರಿಸಬಹುದಾದ ಕೆಲವು ವಿಧಾನಗಳು ಹೀಗಿವೆ.

ಫ್ರೆಂಚ್ ನಾಟ್: ಸ್ಕಾರ್ಫ್ ಅನ್ನು ಮೊದಲು ಓರೆಯಾಗಿ ಸುತ್ತಿ ಅರ್ಧಕ್ಕೆ ಮಡಚಿ.‌ ಕೊರಳಿನ ಹಿಂದಿನಿಂದ ಒಂದು ತುದಿಯನ್ನು ಕುಣಿಕೆಯಂತೆ ಮಾಡಿಕೊಳ್ಳಿ. ಅದಕ್ಕೆ ಮತ್ತೊಂದು ಭಾಗದ ತುದಿಯನ್ನು ಮೇಲಿನಿಂದ ಸೇರಿಸಿ. ಮತ್ತೊಂದು ತುದಿಯನ್ನು ಕೆಳಗಿನಿಂದ ಹಾಕಿದರೆ ಫ್ರೆಂಚ್ ಸ್ಟೈಲ್ ಲುಕ್ ನೀಡುತ್ತದೆ. ಇದು ಪಿಕ್ನಿಕ್, ಕಾಲೇಜಿಗೆ ಹೊಂದುತ್ತದೆ.

ಟ್ವಿಸ್ಟೆಡ್ ನೆಕ್ಲೇಸ್: ಸ್ಕಾರ್ಫ್‌ನ ಒಂದು ತುದಿಯಿಂದ ಮತ್ತೊಂದು ತುದಿಯನ್ನು ಟ್ವಿಸ್ಟ್ ಮಾಡಿ ಅಂದರೆ ಸುರುಳಿ ಸುತ್ತಿ ಅರ್ಧಕ್ಕೆ ಮಡಚಿ. ಕೊರಳಿನ ಹಿಂಬದಿಯಿಂದ ಹಾಕಿ ಒಂದು ಕೊಂಡಿಗೆ ಇನ್ನೊಂದು ಲೂಸ್ ಇರುವ ತುದಿ ಸೇರಿಸಿ. ನಂತರ ಮುಂತುದಿ ಸ್ವಲ್ಪ ಅಗಲಿಸಿ ಅಥವಾ ತುಸು ಗಂಟು ಹಾಕಿದರೆ ಟ್ವಿಸ್ಟೆಡ್ ಲುಕ್ ನೀಡುತ್ತದೆ. ಇದು ಆಫೀಸ್, ಶಾಪಿಂಗ್ ಗೆ ಸೂಕ್ತ.

ADVERTISEMENT

ಬೋಹಮಿಯನ್ ಚಿಕ್: ಸ್ಕಾರ್ಫ್ ಅನ್ನು ತಲೆಯ ಮೇಲೆ ಅಡ್ಡಲಾಗಿ ಹಾಕಿಕೊಂಡು ಸಪೂರಾಗಿ ಅಗಲಿಸಿ ವಿರುದ್ದದ ದಿಕ್ಕಿನಲ್ಲಿ ಹಿಂದಕ್ಕೆ ತುದಿಯನ್ನು ತೆಗೆದು ಕಟ್ಟಿ. ಇದು ಕ್ಲಾಸಿಕ್ ಲುಕ್ ನೀಡುತ್ತದೆ. ಬೇಕಿದ್ದಲ್ಲಿ ತಲೆಯ ಮೇಲಿನ ವಸ್ತ್ರವನ್ನು ಶಿರಭಾಗಕ್ಕೆ ಸರಿಸಿದರೆ ಬೋಹಮಿಯನ್ ಚಿಕ್ ಸ್ಟೈಲ್ ನೀಡುತ್ತದೆ. ಇದು ದಪ್ಪ ಇರುವವರಿಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ.

ಇಂಟ್ರಿಕೇಟ್ ಲೂಪ್: ಸ್ಕಾರ್ಫ್ ಅನ್ನು ಕತ್ತಿನ ಹಿಂಭಾಗದಿಂದ ತೆಗೆದುಕೊಂಡು ಎರಡು ಅಂಚಿನ ತುದಿಯನ್ನು ಕಟ್ಟಿ. ಅಂದರೆ ಸೆರಗನ್ನು ಗಂಟು ಹಾಕಿದಂತೆ ಕಟ್ಟಿರಬೇಕು. ಅದರ ಅರ್ಧ ಭಾಗವನ್ನು 8 ನೆಯ ಆಕಾರಕ್ಕೆ ತಂದು ವಿರುದ್ಧವಾಗಿ ಟ್ವಿಸ್ಟ್ ಮಾಡಿ ಕತ್ತಿನ ಹಿಂದಕ್ಕೆ ಹಾಕಿ.

ಬಟರ್ ಫ್ಲೈ ನೆಕ್: ಸ್ಕಾರ್ಫ್ ಅನ್ನು ಅರ್ಧಕ್ಕೆ ಮಡಚಿ ಕೊರಳಿಗೆ ಹಾಕಿಕೊಳ್ಳಿ. ಒಂದು ತುದಿಯ ಕೊಂಡಿಗೆ ಲೂಸ್ ಇರುವುದನ್ನು ಹಾಕಿ, ಅದರ ಒಂದು ತುದಿಯನ್ನು ಹಿಡಿದು ಮುಂತುದಿಯಿಂದ ವಿರುದ್ಧವಾಗಿರುವ ತುದಿಯನ್ನು ಹಿಂದೆ ಕೂದಲಿನ ಕೆಳಗೆ ಕಟ್ಟಿ. ಮುಂದೆ ಮಧ್ಯದಲ್ಲಿ ಚಿಟ್ಟೆಯ ರೆಕ್ಕೆ ಮೂಡುಂತೆ ಸರಿಪಡಿಸಿಕೊಳ್ಳಿ. ಇದು ಗ್ರಾಂಡ್ ಲುಕ್ ನೀಡುತ್ತದೆ

ನಾಟೆಟ್ ಶಾಲ್: ಇದು ಆಧುನಿಕ ಸ್ಟೈಲ್ ಆಗಿದ್ದು ತುಂಬಾ ರಿಚ್ ಸ್ಟೈಲಿಶ್ ಲುಕ್ ನೀಡುತ್ತದೆ. ಹಿಂದಿನಿಂದ ಭುಜದ ಮೇಲೆ ಹಾಕಿ, ಕೈ ಕೆಳಗಿನಿಂದ ಹಿಂದೆ ಎರಡು ತುದಿ ತೆಗೆದು ಬಿಗಿಯಾಗಿ ಗಂಟು ಕಟ್ಟಿ. ನಂತರ ಶಾಲನ್ನು ಗಂಟು ಕಾಣದ ಹಾಗೆ ಹರಡಿ. ಇದು ಕ್ಲಾಸಿಕಲ್ ಟಚ್ ನೀಡುವುದಲ್ಲದೆ ಶಾಪಿಂಗ್, ಔಟಿಂಗಿಗೆ ತುಂಬಾ ಹೊಂದುತ್ತದೆ.

ಡಬಲ್ ಲೂಪ್: ಸ್ಕಾರ್ಫ್ ಅನ್ನು ಸುರುಳಿಯಾಗಿ ಕೊರಳಿಗೆ ಎರಡು ಬಾರಿ ಸುತ್ತಿ. ಒಂದರ ತುದಿಯನ್ನು ಒಳಮಗ್ಗುಲಿಗೆ ತೆಗೆದು ಸೈಡಿನಲ್ಲಿ ಗಂಟು ಹಾಕಿ. ಇದು ಆಫೀಸ್, ಶಾಪಿಂಗಿಗೆ ಒಪ್ಪುತ್ತದೆ. ಗಾಢ ಬಣ್ಣದ ದಿರಿಸಿಗೆ ತಿಳಿ ಬಣ್ಣದ ಸ್ಕಾರ್ಫ್ ಹೆಚ್ಚು ಸೂಕ್ತ.

ಹರ್ಮ್ಸ್ ಸ್ಕಾರ್ಫ್: ಇದನ್ನು ಹೆಚ್ಚೇನೂ ಆಯಾಸವಿಲ್ಲದೆ ಸುಲಭವಾಗಿ ಕಟ್ಟಿಕೊಳ್ಳಬಹುದು. ಆಫೀಸಿಗೆ ಸರಿ ಹೊಂದುತ್ತವೆ. ನಿಮ್ಮ ಸ್ಕಾರ್ಫ್ ಅನ್ನು ರಾಂಬಸ್ ಶೇಪಿಗೆ ಇಟ್ಟು ಅರ್ಧಕ್ಕೆ ಮಡಚಿ, ಮತ್ತೆ ಫೋಲ್ಡ್ ಮಾಡಿ. ಹೀಗೆ ಎರಡು ಬೆರಳಿನಷ್ಟು ಆದ ಬಳಿಕ ಹಿಂಬದಿಯಿಂದ ಹಾಕಿಕೊಂಡು ಒಂದು ಕಡೆ ಗಂಟು ಹಾಕಿ. ಅದರ ಕೊಂಡಿಗೆ ಮತ್ತೊಂದು ತುದಿ ಸೇರಿಸಿ ಸ್ವಲ್ಪ ಪಕ್ಕಕ್ಕೆ ಸರಿಸಿ.

ರೋಸ್ ಫ್ಲವರ್ ನೆಕ್ ಸ್ಕಾರ್ಫ್: ಮೊದಲು ಹಿಂಭಾಗದಿಂದ ಸ್ಕಾರ್ಫ್ ಹಾಕಿಕೊಂಡು ಎರಡೂ ತುದಿ ಹಿಡಿದು ಸುರುಳಿ ಸುತ್ತಿ ಎತ್ತಿ ಮತ್ತೆ ಹೂವಿನಂತೆ ವರ್ತುಲಾಕಾರದಲ್ಲಿ ಸುತ್ತಿ. ತುದಿಯನ್ನು ಸ್ಕಾರ್ಫ್ ಹಿಂದೆ ಒಳಗಿನಿಂದ ಎಳೆದುಕೊಳ್ಳಬೇಕು. ಇದು ಎಲ್ಲರ ಆಕರ್ಷಣೆ ಸೆಳೆಯುವುದರಲ್ಲಿ ಸಂಶಯವಿಲ್ಲ ಮತ್ತು ಪ್ಲೆಸೆಂಟ್ ಲುಕ್ ನೀಡುತ್ತದೆ.

ನೆಕ್ ಸ್ಕಾರ್ಫ್ ಅನ್ನು ಆಯ್ಕೆ ಮಾಡುವಾಗ ತುದಿಯಲ್ಲಿ ರೌಂಡ್ ಮಣಿಗಳು, ಬಿಲ್ಲೆಗಳಿದ್ದರೆ ಚಂದ. ಅವುಗಳ ಅಂದದಲ್ಲಿ ಬಟ್ಟೆಯ ಗುಣಮಟ್ಟವು ಪ್ರಾಮುಖ್ಯತೆ ಪಡೆಯುತ್ತದೆ. ಹತ್ತಿ, ರೇಷ್ಮೆ, ಸ್ಕಿನ್ ಸಿಲ್ಕ್, ಗ್ರೀಸ್, ಜೆರ್ಸಿ, ಲಿನನ್, ಶಿಫಾನ್, ಉಣ್ಣೆ, ಕಾಶ್ಮೀರ್‌.. ಹೀಗೆ ವಿವಿಧ ರೀತಿಯ ಬಟ್ಟೆಗಳು ಹೆಚ್ಚು ಹೊಂದುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.