ADVERTISEMENT

ಜೊಳ್ಳುಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದಕ್ಕಿಂತ ದೂರವಿದ್ದರೆ ನಷ್ಟವಿಲ್ಲ

ಪಲ್ಲವಿ ಇಡೂರು
Published 8 ಮಾರ್ಚ್ 2019, 2:30 IST
Last Updated 8 ಮಾರ್ಚ್ 2019, 2:30 IST
   

ಸುಮಾರು ಒಂದು ವರ್ಷದ ಹಿಂದೆ ಕಟ್ಟರ್ ಹಿಂದೂ ನಾನು, ಹಿಂದೂ ಧರ್ಮಕ್ಕಾಗಿ ನಾವು ಸಪೋರ್ಟ್ ಮಾಡಬೇಕು ಅಂತ ಬೊಗಳೆ ಬಿಡುತ್ತಿದ್ದ ಮಂಗಳೂರು ಮೂಲದ ಹೆಣ್ಣುಮಗಳೊಬ್ಬಳ ಜೊತೆ ಯಾವುದೊ ಒಂದು ಸಂದರ್ಭದಲ್ಲಿ ಮಾತಿನ ವಿನಿಮಯ ನಡೆಯಿತು. ಆಗ ಮಂಗಳೂರಿನಲ್ಲಿ ಹಿಂದೂ ಯುವಕನೊಬ್ಬನ ಕೊಲೆಯಾಗಿ ಪ್ರತೀಕಾರಕ್ಕೆಂಬಂತೆ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ಅಮಾಯಕ ಮುಸ್ಲಿಂ ನಾಗರಿಕನೊಬ್ಬನನ್ನು ರಾತ್ರಿ ಅಡ್ಡಗಟ್ಟಿ ಕೊಂದಿದ್ದರು. ಮತ್ತು ಆ ಮಹಿಳೆ ಆ ಮುಸ್ಲಿಂ ಯುವಕನನ್ನು ಕೊಂದಿದ್ದನ್ನು ಸಪೋರ್ಟ್ ಮಾಡಿದ್ದರು.

ಮಾತಿಗೆ ಮಾತು ಬೆಳೆದು ಆಕೆ ಮತ್ತೆ ಮತ್ತೆ ಅದನ್ನೇ ಹೇಳುತ್ತಿದ್ದಾಗ ನಾನು ಆಕೆಗೆ ನಿಮಗೆ ಮದುವೆ ಆಗಿದ್ಯಾ ಅಂತ ವಿಚಾರಿಸಿದೆ. ಅವರು ಮಕ್ಕಳಿದ್ದಾರೆ ಅನ್ನುವುದನ್ನು ಸ್ಪಷ್ಟ ಪಡಿಸಿದರು. ಆಕೆ ತಕ್ಕ ಮಟ್ಟಿಗೆ ಅನುಕೂಲಕರ ಜೀವನ ನಡೆಸುತ್ತಿದ್ದ ಹೆಣ್ಣುಮಗಳಾದ್ದರಿಂದ, ನಿಮ್ಮ ಮಕ್ಕಳ ಹುಟ್ಟಿದ ಹಬ್ಬ ಯಾವಾಗ? ತಿಳಿಸಿ ಮತ್ತು ನಿಮ್ಮ ವಿಳಾಸ ಕೊಡಿ. ನಾನು ನಿಮ್ಮ ಮಕ್ಕಳಿಗೆ ಮಚ್ಚೊಂದನ್ನು ಉಡುಗೊರೆ ಕೊಡುತ್ತೇನೆ. ಯಾಕೆ ಯಾರೊ ಬಡವರ ಮನೆಯ ಗಂಡುಮಕ್ಕಳು ಉಳ್ಳವರ ಹಿಂದುತ್ವದ ಹೆಸರಿನ ರಾಜಕೀಯದ ತೆವಲಿಗೆ ಬಲಿಯಾಗೋದು. ನಿಮ್ಮ ಮಕ್ಕಳನ್ನೇ ರೆಡಿ ಮಾಡಿ ಕೊಲ್ಲಲು ಕಳಿಸಿ. ಆಗ ಬಹುಶಃ ಈ ಕೆಟ್ಟ ಕೊಳಕು ಧರ್ಮದ ರಾಜಕೀಯಕ್ಕೆ ತಾರ್ಕಿಕ ಅಂತ್ಯ ಸಿಗಬಹುದು ಅಂದೆ. ಅಲ್ಲಿಗೆ ಆಕೆ ನನಗೊಂದಿಷ್ಟು ಬೈದು ನಿರ್ಗಮಿಸಿದಳು.

ಇದು ಒಂದು ಘಟನೆಯಾದರೆ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವ ಪ್ರತಿಯೊಂದು ಸಂದರ್ಭದಲ್ಲೂ ಅದನ್ನು ಖಡಾಖಂಡಿತವಾಗಿ ವಿರೋಧಿಸಿದ ನನ್ನ ನಿಲುವನ್ನು ಬಹಳಷ್ಟು ಜನ ಸ್ನೇಹಿತರೆನಿಸಿಕೊಂಡವರೇ ವಿರೋಧಿಸಿದ್ದಾರೆ. ನನ್ನ ಮಟ್ಟಿಗೆ ಸೋಷಿಯಲ್ ಮೀಡಿಯಾ ದಲ್ಲಿ ನಾನು ಸೆಲೆಕ್ಟಿವ್ ಆಗಿರುವುದರಿಂದ ಅಂತಹ ದೊಡ್ಡ ತೊಂದರೆಗಳನ್ನು ಅನುಭವಿಸಿಲ್ಲವಾದರೂ ನನ್ನೊಡನೆ ಬಹಳ ಉತ್ತಮ ಬಾಂಧವ್ಯ ಹೊಂದಿದ ಅದೆಷ್ಟೊ ಜನ ಸ್ನೇಹಿತರು ನನ್ನ ಕಡಕ್ ನಿಲುವಿನಿಂದಾಗಿ ದೂರವಾಗಿದ್ದಾರೆ.

ADVERTISEMENT

ಜೊಳ್ಳುಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದಕ್ಕಿಂತ ದೂರವಿದ್ದರೆ ನಷ್ಟವಿಲ್ಲ ಅನ್ನುವ ಕಾರಣಕ್ಕೆ ನಾನೂ ನಕ್ಕು ಸುಮ್ಮನಾಗಿದ್ದೇನೆ. ಮೊನ್ನೆ ಮೊನ್ನೆ ಅದ್ಯಾರೊ ಮೋದಿ ಅಭಿಮಾನಿಯೊಬ್ಬ ನನ್ನನ್ನು ಗಂಜಿಗಿರಾಕಿ ಅಂದು ನನ್ನ ಫೋಟೊ ಸಮೇತ ಅವನ ವಾಲ್ ನಲ್ಲಿ ಬೈದು ಪೋಸ್ಟ್ ಹಾಕಿದ್ದು ಗೊತ್ತಾಯಿತು. ನಾನಾದರೊ ಗಂಜಿಗಿರಾಕಿ. ಅವರದ್ದು ಕಲಗಚ್ಚು ಕುಡಿಯುವ ದುಸ್ಥಿತಿ! ನೆನೆಸಿಕೊಂಡು ನಗು ಬಂತು!

ದೇಶದ ಜವಾಬ್ದಾರಿಯುತ ನಾಗರಿಕಳಾಗಿ, ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಮಾನವತಾವಾದಿಯಾಗಿ ಮನುಷ್ಯತ್ವದ ಹಾದಿಯಲ್ಲಿ ಯಾವುದು ಸರಿಯೊ ಅದನ್ನು ಪ್ರತಿಪಾದಿಸುವುದಕ್ಕೆ ಮತ್ತು ಅದರ ಪರವಾಗಿ ದನಿ ಎತ್ತುವುದಕ್ಕೆ ನನಗೆ ಹೆಮ್ಮೆಯಿದೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.