ADVERTISEMENT

‘ವಿಚ್ಛೇದಿತ ಗಂಡನತ್ತ ಮನಸ್ಸು ವಾಲುತ್ತಿದೆ...

ಏನಾದ್ರೂ ಕೇಳ್ಪೋದು: ಆಪ್ತ ಸಮಾಲೋಚಕಿ ಸುನೀತಾ ರಾವ್‌ರೊಂದಿಗೆ ಮಾತುಕತೆ

ಸುನೀತಾ ರಾವ್
Published 14 ಸೆಪ್ಟೆಂಬರ್ 2018, 19:30 IST
Last Updated 14 ಸೆಪ್ಟೆಂಬರ್ 2018, 19:30 IST
ಯುವ ಜೋಡಿಗಳು –ಸಾಂದರ್ಭಿಕ ಚಿತ್ರ
ಯುವ ಜೋಡಿಗಳು –ಸಾಂದರ್ಭಿಕ ಚಿತ್ರ   

ನಾನು ಶಿಕ್ಷಕಿ. ತವರುಮನೆಯ ಮೇಲಿನ ಅತಿಯಾದ ಒಲವಿನಿಂದ ನನ್ನ ಗಂಡನ ಜೊತೆ ಜಗಳವಾಡಿದೆ. ಆ ಜಗಳ ಡೈಮೋರ್ಸ್‌ವರೆಗೂ ಹೋಯಿತು; ಡೈವೋರ್ಸ್ ಪಡೆದುಕೊಂಡೆವು. ಈಗ ನಾವು ದೂರವಾಗಿ ಐದು ವರ್ಷಗಳಾಗಿವೆ. ನಮಗೆ ಒಬ್ಬ ಮಗ ಇದ್ದಾನೆ. ಅವನು ನನ್ನ ಜೊತೆ ಇರುತ್ತಾನೆ. ನನ್ನ ಗಂಡ ಇನ್ನೊಂದು ಮದುವೆಯಾಗಿದ್ದಾರೆ. ಅವರ ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ. ಅದಕ್ಕೆ ಎರಡನೇ ಹೆಂಡತಿ ಒಪ್ಪಿದರೆ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಿದ್ದಾರೆ. ಮೂರು ವರ್ಷಗಳಿಂದ ಈ ಮಾತು ಹೇಳುತ್ತಲೇ ಇದ್ದಾರೆ. ಆದರೆ ಇತ್ತೀಚೆಗೆ ನಾನು ಅವರ ಬಳಿ ‘ಬೇಗ ನಿಮ್ಮ ಮನೆಗೆ ಕರೆದುಕೊಂಡು ಹೋಗಿ’ ಎಂದು ಒತ್ತಾಯ ಮಾಡಿ ನನ್ನ ಗೌರವವನ್ನು ನಾನೇ ಕಳೆದುಕೊಳ್ಳುತ್ತಿದ್ದೇನೆ ಎನ್ನಿಸುತ್ತಿದೆ. ‘ಅವಳು ನನ್ನನ್ನು ಒಪ್ಪುತ್ತಾಳಾ?’ – ಈ ಪಶ್ನೆ ದಿನೇ ದಿನೇ ನನ್ನನ್ನು ಕಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ನನಗೆ ಏನು ಮಾಡಬೇಕು ತಿಳಿಯುತ್ತಿಲ್ಲ. ನನ್ನ ಜೀವನ ಎಲ್ಲೋ ಒಂದು ಕಡೆ ನಿಂತು ಹೋಗಿದೆ ಎಂದು ನನಗನ್ನಿಸುತ್ತಿದೆ.

–ಹೆಸರು, ಊರು ಬೇಡ

ನೀವು ಈಗಾಗಲೇ ನಿಮ್ಮ ಗಂಡನಿಗೆ ವಿಚ್ಛೇದನ ನೀಡಿದ್ದೀರಿ ಮತ್ತು ಅವರು ಮರು ಮದುವೆಯಾಗಿದ್ದಾರೆ. ಮತ್ತೆ ನೀವು ಅವರ ಬಳಿಗೆ ಹೋಗುವುದು ನೈತಿಕವೂ ಅಲ್ಲ ಮತ್ತು ಕಾನೂನಿಗೂ ವಿರುದ್ಧವಾದುದು. ಮರಳಿ ಅವರು ನಿಮ್ಮನ್ನು ಕರೆದ್ಯೂಯಲು ಸಾಧ್ಯವಿಲ್ಲ. ನಿಮಗೆ ಈಗ ಅವರ ಮೇಲೆ ಯಾವುದೇ ನೈತಿಕ ಹೊಣೆಗಾರಿಕೆ ಇಲ್ಲ. ಕಾನೂನಿನ ದೃಷ್ಟಿಯಿಂದ ಹೇಳುವುದಾದರೆ ನಿಮಗೆ ಅವರ ಆಸ್ತಿ ಹಾಗೂ ದುಡ್ಡಿನ ಮೇಲೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ನೀವು ನಿಮ್ಮ ಮಗನ ದೃಷ್ಟಿಯಿಂದ ಯೋಚಿಸುವುದಾದರೆ ನೀವು ಒಬ್ಬ ಒಳ್ಳೆಯ ಕಾನೂನು ಸಲಹೆಗಾರರನ್ನು ನೋಡಿ, ಸಲಹೆ ಪಡೆಯುವುದು ಉತ್ತಮ.

ADVERTISEMENT

**

ನಾನು ಬಿ. ಕಾಂ. ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ನನ್ನ ಸಮಸ್ಯೆ ಏನೆಂದರೆ ನಾನು ಎಲ್ಲರನ್ನೂ ಬಹಳ ಬೇಗ ಹಚ್ಚಿಕೊಳ್ಳುತ್ತೇನೆ ಮತ್ತು ಬೇಗ ನಂಬುತ್ತೇನೆ. ಆಮೇಲೆ ಅವರಿಂದ ಮೋಸ ಆಗುತ್ತದೆ. ಆಮೇಲೆ ನಾನು ನೋವನ್ನು ಅನುಭವಿಸುತ್ತೇನೆ. ಈ ರೀತಿ ಅನೇಕ ಬಾರಿ ನೋವು ತಿಂದಿದ್ದೇನೆ. ಆದರೂ ನನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಲಾಗುತ್ತಿಲ್ಲ.

–ಹೆಸರು, ಊರು ಬೇಡ

ನಮ್ಮ ಜೀವನದಲ್ಲಿ ಬರುವ ಪ್ರತಿಯೊಬ್ಬರನ್ನೂ ನಂಬುವುದು ಕೆಟ್ಟದಲ್ಲ; ಅಲ್ಲದೇ ನಂಬುವುದು ಮನುಷ್ಯ ಸಹಜಗುಣ ಮತ್ತು ಅದರಿಂದ ಏನು ಸಮಸ್ಯೆಯಾಗುವುದಿಲ್ಲ. ಆದರೆ ಒಂದು ಮಾತು, ನೀವು ಅವರಿಗೆ ಶರಣಾಗುವುದು ಒಳ್ಳೆಯದಲ್ಲ. ನಿಮ್ಮ ಸುತ್ತಲಿರುವ ಜನರ ಉದ್ದೇಶಗಳನ್ನು ತಿಳಿದುಕೊಳ್ಳುವಷ್ಟು ನೀವು ಪ್ರೌಢರಾಗಿದ್ದೀರಿ. ಯಾವಾಗ ಸಂಬಂಧದಲ್ಲಿನ ಆತ್ಮೀಯತೆಯನ್ನು ನಿಮ್ಮಿಂದ ನಿರ್ವಹಿಸಲು ಸಾಧ್ಯವಿಲ್ಲವೋ ಆಗ ಆ ಸಂಬಂಧ ಕಹಿಯಾಗುತ್ತದೆ ಅಥವಾ ನೋವು ತರುತ್ತದೆ. ಅಂತಹ ಸಂದರ್ಭದಲ್ಲಿ ಸಂಬಂಧದಿಂದ ದೂರಾಗಿ ತಟಸ್ಥರಾಗಿರಿ. ಕೆಟ್ಟ ಮನಃಸ್ಥಿತಿಯ ಜನರಿಂದ ದೂರವಿರಿ. ಅಂತಹ ಮನೋಭಾವ ಇರುವವರ ಜನರ ಜೊತೆ ಹೊಂದಿಕೊಂಡು ಹೋಗುವುದಕ್ಕಿಂತ ದೂರವಿರುವುದೇ ಉತ್ತಮ. ನಿಮ್ಮ ಪ್ರಾಶಸ್ತ್ಯಗಳತ್ತ ಗಮನ ನೀಡಿ ಮತ್ತು ಅದರ ಮೇಲೆ ಕೆಲಸ ಮಾಡಿ.

**

ನನ್ನ ಮದುವೆ ಆಗುವುದಕ್ಕೆ ಮೊದಲು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಮದುವೆ ಆದ ನಂತರ ಅವನಿಂದ ದೂರ ಆಗುವ ಪ್ರಯತ್ನ ಮಾಡಿದೆ. ಆದರೆ, ಅವನು ನನ್ನನ್ನು ತುಂಬಾ ಇಷ್ಟಪಡುತ್ತಾನೆ. ಅವನಿಗೆ ಅಪ್ಪ ಅಮ್ಮ ಯಾರು ಇಲ್ಲ. ನನ್ನನ್ನು ತುಂಬ ಪ್ರೀತಿಸುತ್ತಾನೆ. ನನ್ನ ಗಂಡ ನನಗೆ ಅಷ್ಟು ಪ್ರೀತಿಯನ್ನು ತೋರಿಸುವುದಿಲ್ಲ. ಅವರು ತುಂಬ ಒರಟು ಸಭ್ವಾವದವರು. ನನಗೆ ಮತ್ತೆ ಪ್ರೇಮಿಯ ಪ್ರೀತಿ ಬೇಕು ಎಂದು ಅನ್ನಿಸಿತ್ತು. ಹಾಗಾಗಿ ಅವನ ಜೊತೆ ಮತ್ತೆ ಮಾತಾಡ್ತಾ ಇದ್ದೀನಿ. ಅದು ತಪ್ಪು ಎಂಬುದು ನನಗೆ ತಿಳಿದಿದೆ. ಆದರೆ ಏನೂ ಮಾಡಬೇಕು ತೋಚುತ್ತಿಲ್ಲ. ನನಗೆ ಏನೇ ಕಡಿಮೆ ಆದರೂ ಸಹಿಸಿಕೊಳ್ಳುತ್ತೇನೆ. ಆದರೆ ಪ್ರೀತಿ ವಿಷಯದಲ್ಲಿ ಹಾಗೆ ಅನ್ನಿಸುವುದಿಲ್ಲ. ಮತ್ತೆ ಅವನ ಪ್ರೀತಿ ಬೇಕು ಅನಿಸುತ್ತದೆ. ನನಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ.

–ಹೆಸರು, ಊರು ಬೇಡ

ನೀವು ಮಾಡುತ್ತಿರುವುದು ಸರಿಯಲ್ಲ ಎಂಬುದು ನಿಮಗೆ ತಿಳಿದಿದೆ.ನೀವು ನಿಮ್ಮ ಪ್ರೇಮಿಯನ್ನೇ ಯಾಕೆ ಮದುವೆಯಾಗಿಲ್ಲ; ಅವರನ್ನು ಮದುವೆಯಾಗದಿರುವುದಕ್ಕೆ ಒಂದು ಕಾರಣವಿರುತ್ತದೆ ಅಲ್ಲವೇ? ಆ ಕಾರಣಕ್ಕೆ ನೀವು ಬೇರೆಯವರನ್ನು ಮದುವೆಯಾಗಿದ್ದೀರಿ. ನಿಮ್ಮ ಪ್ರೇಮಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿ ಮತ್ತು ನೀವಾಗಿಯೇ ನಿಮ್ಮ ಸಂಸಾರ–ಜೀವನವನ್ನು ಹಾಳು ಮಾಡಿಕೊಳ್ಳಬೇಡಿ.ನೀವು ನಿಮ್ಮ ಗಂಡನನ್ನು ಪ್ರೀತಿಸಬೇಕು. ಆಗ ಅವರು ಖಂಡಿತವಾಗಿಯೂ ನಿಮ್ಮನ್ನು ಪ್ರೀತಿಸುತ್ತಾರೆ.ಅದಕ್ಕೆ ಸ್ವಲ್ಪ ಸಮಯ ಬೇಕು. ಮದುವೆ ನಿಂತಿರುವುದು ಗಂಡ-ಹೆಂಡತಿಯರ ನಡುವಿನ ನಂಬಿಕೆ, ಪ್ರೀತಿ ಹಾಗೂ ಗಟ್ಟಿಯಾದ ಬಾಂಧ್ಯವದ ಮೇಲೆ. ಆ ಸುಂದರ ಬಾಂಧವ್ಯಕ್ಕೆ ನಿಮ್ಮ ಕಡೆಯಿಂದ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಿ.ನಿಮ್ಮ ಸಂಸಾರವನ್ನು ಸಂತೋಷ ಹಾಗೂ ಪ್ರೀತಿಯಿಂದ ಮುನ್ನಡೆಸಿಕೊಂಡು ಹೋಗುವುದು ನಿಮ್ಮ ಕೈಯಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.