ನನ್ನ ಮಗಳಿಗೆ ನಾಲ್ಕು ವರ್ಷ. ಎಲ್‌ಕೆಜಿ ಓದುತ್ತಿದ್ದಾಳೆ. ಮನೆಯಲ್ಲಿ ಚಟುವಟಿಕೆಯಿಂದ ಇರುವ ಅವಳು ಶಾಲೆಗೆ ಹೋದ ಕೂಡಲೇ ಮಂಕಾಗುತ್ತಾಳೆ. ಓದಲು ಆಸಕ್ತಿ ತೋರುವುದಿಲ್ಲ. ಶಾಲೆಯ ಬಗ್ಗೆ ಕೇಳಿದರೆ ಅವಳಿಗೆ ಇಷ್ಟವಾಗುವುದಿಲ್ಲ. ಅವಳ ಶಾಲೆಯಲ್ಲಿನ ಶಿಕ್ಷಕರೆಲ್ಲರೂ ತುಂಬಾನೇ ಒಳ್ಳೆಯವರು. ಆದರೂ ಅವಳು ಯಾಕೆ ಹೀಗೆ ಮಾಡುತ್ತಾಳೆ ತಿಳಿದಿಲ್ಲ.
ರಮಾ, ಬೆಳಗಾವಿ
ಅವಳಿನ್ನೂ ಚಿಕ್ಕವಳು. ಮುಗ್ಧೆ. ಅಂತಹ ವಯಸ್ಸಿನ ಮಕ್ಕಳಿಗೆ ಅವರ ಪ್ರಪಂಚ ಏನಿದ್ದರೂ ತಂದೆ–ತಾಯಿಗಳ ಸುತ್ತಲೂ ಮಾತ್ರ. ಆಗ ಮಾತ್ರ ಅವರಿಗೆ ತಾನು ಸುರಕ್ಷಿತ ಎಂಬ ಭಾವನೆ ಬರುವುದು. ಅದರಲ್ಲೂ ತಾಯಿಯೊಂದಿಗೆ ಮಗು ತಾನು ಹೆಚ್ಚು ಸುರಕ್ಷಿತ ಎಂದುಕೊಳ್ಳುತ್ತದೆ. ಅವಳು ಹೊರಗಿನ ಪ್ರಪಂಚವೂ ಸುರಕ್ಷತೆಯಿಂದ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವವರೆಗೂ ನೀವು ತಾಳ್ಮೆಯಿಂದ ಇರಬೇಕು. ಇದನ್ನು ಒಪ್ಪಿಕೊಳ್ಳಿ. ನಿರಾಶರಾಗಬೇಡಿ. ಇದೊಂದು ಹಂತ. ಇದು ಬೇಗ ಕಳೆದು ಹೋಗುತ್ತದೆ. ಯಾವಾಗ ಶಾಲೆಯಲ್ಲಿ ಅವಳ ಸುತ್ತಲೂ ಇರುವವರ ಜೊತೆಯಲ್ಲಿ ಅವಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದೋ ಆಗ ಅವಳು ಎಲ್ಲರ ಜೊತೆಗೂ ಬೆರೆಯುತ್ತಾಳೆ. ಶಾಲೆಯಲ್ಲೂ ಖುಷಿಯಿಂದ ಇರುತ್ತಾಳೆ. ಕೆಲವು ಮಕ್ಕಳು ಸಮಯ ತೆಗೆದುಕೊಳ್ಳುತ್ತಾರೆ. ಅವಳು ಸಮಯ ತೆಗೆದುಕೊಳ್ಳಲಿ, ಅವಳನ್ನು ಅವಳ ಪಾಡಿಗೆ ಬಿಡಿ. ಅವಳು ಸರಿ ಹೋಗುತ್ತಾಳೆ. ಯಾವುದಕ್ಕೂ ಅವಳಿಗೆ ಒತ್ತಾಯ ಮಾಡಬೇಡಿ. ನಿಮ್ಮಿಂದ ದೂರ ಇರುವಾಗ ಅವಳು ಸುರಕ್ಷತೆ ಹಾಗೂ ಭದ್ರವಾಗಿದ್ದಾಳೆ ಎಂಬುದನ್ನು ಗಮನಿಸಿ.
ನನಗೆ 31 ವರ್ಷ. ನಾನು ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟಾಗುವುದು, ಬೇಸರಗೊಳ್ಳುವುದು ಮಾಡುತ್ತೇನೆ. ಹಳೆಯ ನೆನಪು ಮಾಡಿಕೊಂಡು ಒಮ್ಮೊಮ್ಮೆ ಒಬ್ಬಳೇ ನಗೋದು, ಅಳೋದು ಮಾಡುತ್ತೇನೆ. ನನ್ನ ಬಗ್ಗೆ ನಾನು ಯೋಚನೆ ಮಾಡಿದಾಗ ನಾನು ಮಾನಸಿಕ ಅಸ್ವಸ್ಥಳಾ? ಇಲ್ಲ ಗೀಳು ರೋಗದಿಂದ ಬಳಲುತ್ತಿದ್ದೇನಾ ಎಂಬುದು ಅರಿವಾಗುತ್ತಿಲ್ಲ. ಜಾಸ್ತಿ ಸೈಲೆಂಟ್ ಆಗಿ ಇರ್ತೀನಿ. ಆಗಾಗ ಒತ್ತಡವಾಗುತ್ತದೆ. ಭಯ ಜಾಸ್ತಿ ಇದೆ. ನನಗೆ ಚಟುವಟಿಕೆಯಿಂದ ಇರಲು ಆಗುವುದಿಲ್ಲ. ನನಗಿರುವ ಸಮಸ್ಯೆ ಏನು?
ರಾಜೇಶ್ವರಿ, ಊರು ಬೇಡ
ನಿಮಗೆ ಯಾವುದೇ ಸಮಸ್ಯೆ ಇಲ್ಲ. ನೀವು ಆರೋಗ್ಯವಾಗಿದ್ದೀರಿ. ನಿಮಲ್ಲಿ ಯಾವ ಭಾವನೆ ಮೂಡುತ್ತಿದೆ ಅದರ ಬಗ್ಗೆ ಚಿಂತಿಸಬೇಡಿ. ನಿಮ್ಮಲ್ಲಿರುವ ಒಂದೇ ಒಂದು ಸಮಸ್ಯೆ ನೀವು ಚಟುವಟಿಕೆಯಿಂದ ಇರುವುದಿಲ್ಲ. ಹಾಗಾಗಿ ನೀವು ಅದರ ಮೇಲೆ ಕೆಲಸ ಮಾಡಬೇಕು. ನಿಮ್ಮನ್ನು ನೀವು ಕೆಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ನೀವಿರುವ ಜಾಗಕ್ಕೆ ಹತ್ತಿರದಲ್ಲಿ ನಡೆಯುವ ಸಮುದಾಯದ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಸ್ನೇಹಿತರನ್ನು ಮಾಡಿಕೊಳ್ಳಿ. ಅವರೊಂದಿಗೆ ಸಂತೋಷದಿಂದಿರಿ. ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅದು ಅಡುಗೆ ಮಾಡುವುದು, ಟೈಲರಿಂಗ್ ಮಾಡುವುದು, ಗಾರ್ಡನಿಂಗ್ ಮಾಡುವುದು, ಓದುವುದರಲ್ಲಿ ಸಮಯ ಕಳೆಯುವುದು ಈ ಯಾವುದೂ ಆಗಬಹುದು. ನಿಮಗೆ ಬರುವಂತಹ ಋಣಾತ್ಮಕ ಯೋಚನೆಗಳಿಂದ ಹೊರ ಬಂದು ಆರಾಮವಾಗಲು ಕೆಲವು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಿ.
ನನಗೆ 21 ವರ್ಷ. ನಾನು ಪಿಯುಸಿ ಆದ ಮೇಲೆ ಡಿಪ್ಲೋಮಾ ಮಾಡಿದ್ದೇನೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಆದರೆ ಓದಲು ಆಸಕ್ತಿ ಬರುತ್ತಿಲ್ಲ. ಟೈಮ್ ಟೇಬಲ್ ಕೂಡ ರೆಡಿ ಮಾಡಿದ್ದೇನೆ. ಅದಕ್ಕೆ ತಕ್ಕಂತೆ ಇರಲು ಸಾಧ್ಯವಾಗುತ್ತಿಲ್ಲ. ಓದಲು ಕುಳಿತರೆ ಬೇರೆ ಬೇರೆ ಯೋಚನೆಗಳು ತಲೆ ಮುತ್ತಿಕೊಳ್ಳುತ್ತವೆ. ಇದರಿಂದ ಓದಿನ ಮೇಲೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಏನಾದ್ರೂ ಸಾಧಿಸಬೇಕು ಎನ್ನುವ ಛಲ ಇದೆ. ಆದರೆ ಏನೂ ಮಾಡೋಕೆ ಆಗುತ್ತಿಲ್ಲ. ಬೆಳಿಗ್ಗೆ ಬೇಗ ಎದ್ದೇಳಲು ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು ಪರಿಹಾರ ತಿಳಿಸಿ.
ಹೆಸರು, ಊರು ಬೇಡ
ನೀವು ಏನನ್ನೇ ಓದಿದರೂ ಅದು ನಿಮಗಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನೀವು ಓದಬೇಕು ಎಂಬುದು ನಿಮ್ಮ ಮನಸ್ಸಿನಲ್ಲಿರಲಿ. ಈಗಾಗಲೇ ನಿಮ್ಮ ಬಳಿ ಟೈಮ್‌ಟೇಬಲ್ ಇದೆ. ಇದು ಖುಷಿಯ ವಿಚಾರ. ನಿಮಗೆ ಆ ಟೈಮ್‌ಟೇಬಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಅದರಲ್ಲಿ ಶೇ 50 ರಷ್ಟನ್ನಾದರೂ ಪಾಲಿಸಿ. ಆ ಸಮಯದಲ್ಲಿ ಓದಿ. ಹಂತ ಹಂತವಾಗಿ ಇದನ್ನು ಮಾಡಿ. ನಿಮ್ಮ ಇಷ್ಟದ ವಿಷಯದಿಂದ ಓದಲು ಆರಂಭಿಸಿ. ಆಗ ನಿಮಗೆ ಓದಿನ ಮೇಲೆ ಆಸಕ್ತಿ ಮೂಡುತ್ತದೆ. ಒಮ್ಮೆ ನಿಮಗೆ ಓದಿನ ಮೇಲೆ ಹಿಡಿತ ಸಿಕ್ಕರೆ ಆಗ ನೀವು ಓದಿನ ಸಮಯವನ್ನು ಹೆಚ್ಚಿಸಿಕೊಳ್ಳಬಹುದು. ನಂತರ ನಿಮ್ಮ ಟೈಮ್‌ಟೇಬಲ್ ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು. ಮನೆಯಲ್ಲಿ ಹಿರಿಯರು ಹಾಗೂ ಒಡಹುಟ್ಟಿದವರ ಸಹಾಯ ಪಡೆದುಕೊಳ್ಳಿ. ನಿಮ್ಮಿಂದ ಓದಲು ಸಾಧ್ಯವಾಗದಿದ್ದಾಗ ಅವರ ಬಳಿ ಬಲವಂತವಾಗಿ ನಿಮ್ಮನ್ನು ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ತಿಳಿಸಿ. ಇದರಿಂದ ಸಹಾಯವಾಗುತ್ತದೆ. ಪ್ರವೇಶ ಪರೀಕ್ಷೆಯ ತಯಾರಿಗಾಗಿ ಕೋಚಿಂಗ್ ತರಗತಿಗಳಿಗೆ ಸೇರಿಕೊಳ್ಳಿ. ಆಗ ಅಲ್ಲಿನ ನಿಮ್ಮ ಶಿಕ್ಷಕರ ಎದುರು ನೀವು ಓದಲೇ ಬೇಕಾಗುತ್ತದೆ. ನೀವು ಓದಿನ ಮೇಲೆ ಆಸಕ್ತಿ ಬೆಳೆಸಿಕೊಳ್ಳಬೇಕು ಜೊತೆಗೆ ಓದನ್ನು ಎಂಜಾಯ್ ಮಾಡಬೇಕು. ಆಗ ಮಾತ್ರ ನೀವು ಗುರಿ ಸಾಧಿಸಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.