ಕಳೆದ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರುಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಕ್ರಿಕೆಟ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರಾಭವಗೊಂಡ ನಂತರ ಮರುದಿನ ಟ್ವಿಟರ್‌ನಲ್ಲಿ ಅನುಷ್ಕಾ ಹೆಸರು ಟ್ರೆಂಡ್ ಆಯ್ತು. ಕೊಹ್ಲಿ ಎರಡು ಕ್ಯಾಚ್ ಕೈಚೆಲ್ಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುವುದರ ಜತೆಗೇ ಸುನೀಲ್ ಗಾವಸ್ಕರ್ ವೀಕ್ಷಕ ವಿವರಣೆಯಲ್ಲಿ ಅನುಷ್ಕಾ ಹೆಸರು ಉಲ್ಲೇಖಿಸಿದ್ದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಯ್ತು. ‘ಲಾಕ್‌ಡೌನ್ ಹೊತ್ತಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಅವರ ಬೌಲಿಂಗ್ ಎದುರಿಸುವ ಬಗ್ಗೆ ಮಾತ್ರ ತರಬೇತಿ ಪಡೆದಿದ್ದಾರೆ‘ ಎಂದು ಗಾವಸ್ಕರ್ ಹೇಳಿದ ಮಾತು ತಿರುಚಲ್ಪಟ್ಟಿತು. ಲಾಕ್‍ಡೌನ್ ವೇಳೆ ಅನುಷ್ಕಾ ಬೌಲಿಂಗ್‍ಗೆ ಕೊಹ್ಲಿ ಬ್ಯಾಟಿಂಗ್ ಮಾಡುವ ವಿಡಿಯೊ ಉಲ್ಲೇಖಿಸಿ ಗಾವಸ್ಕರ್ ಈ ಮಾತು ಹೇಳಿದ್ದರೂ, ಟ್ವೀಟಿಗರು ಮಾತ್ರ, ಅದು ದ್ವಂದ್ವಾರ್ಥದಲ್ಲಿ ಹೇಳಿದ್ದು ಎಂದು ವಾದಿಸಿದರು. ಪರ-ವಿರೋಧ ಚರ್ಚೆ ಕಾವೇರುತ್ತಿದ್ದಂತೆ ಗಾವಸ್ಕರ್ ಮಾತಿಗೆ ಇನ್‌ಸ್ಟಾಗ್ರಾಂನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅನುಷ್ಕಾ, ‘ಕ್ರಿಕೆಟ್ ವಿಷಯಕ್ಕೆ ನನ್ನನ್ನು ಯಾಕೆ ಎಳೆದು ತರುತ್ತೀರಿ? ಪ್ರತಿಯೊಂದಕ್ಕೂ ನನ್ನನ್ನು ಯಾಕೆ ದೂಷಣೆ ಮಾಡುತ್ತಿದ್ದೀರಿ?‘ ಎಂದು ಕೇಳಿದ್ದರು.
ಕೊಹ್ಲಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಅನುಷ್ಕಾ ಹೆಸರು ಟ್ರೆಂಡ್ ಆಗುವುದು, ಆಕೆಯನ್ನು ದೂಷಿಸುವುದು ಇದೇನು ಮೊದಲಲ್ಲ. 2014ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಯ್ಲಿ ಮೊದಲ ಬಾಲ್‌ಗೆ ಔಟ್ ಆದಾಗಲೂಅನುಷ್ಕಾ ಹೆಸರು ಟ್ರೋಲ್ ಆಗಿತ್ತು. 2015ರಲ್ಲಿ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಸೋತಾಗ ‘ಅನುಷ್ಕಾ ಅನಿಷ್ಠ ಹಾಗಾಗಿ ಭಾರತ ಸೋತಿದೆ‘ ಎಂದು ನೆಟ್ಟಿಗರು ದೂರಿದ್ದರು. 2018ರ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಆರ್‌ಸಿಬಿ ಸೋತಾಗ, 2019ರಲ್ಲಿ ವಿಶ್ವಕಪ್ ಪಂದ್ಯದ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಪರಾಭವಗೊಂಡಾಗ ನೆಟ್ಟಿಗರು ಅನುಷ್ಕಾ ಶರ್ಮಾಳನ್ನು ದೂರಿದ್ದರು, ಟ್ರೋಲ್ ಮಾಡಿದ್ದರು. ಒಟ್ಟಿನಲ್ಲಿ ‘ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದರೆ ಅದಕ್ಕೆ ಪತ್ನಿ ಅನುಷ್ಕಾ ಕಾರಣ‘ ಎಂಬ ಸೋಶಿಯಲ್ ಮೀಡಿಯಾ ದೂಷಣೆ ವರ್ಷಗಳಿಂದಲೂ ನಡೆದು ಬರುತ್ತಿದೆ.
ಈ ರೀತಿ ‘ಅವನ‘ ತಪ್ಪಿಗೆ ‘ಅವಳ‘ನ್ನು ದೂಷಿಸುವ ಟ್ರೆಂಡ್ ಇತ್ತೀಚೆಗೆ ಹುಟ್ಟಿಕೊಂಡಿದ್ದೇನೂ ಅಲ್ಲ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಆತನ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿ ಮೇಲಿನ ಪ್ರಕರಣಗಳು ಯಾವ ರೀತಿ ಟ್ವಿಸ್ಟ್ ಪಡೆಯುತ್ತಿವೆ ಎಂಬುದು ದಿನನಿತ್ಯದ ಸಂಗತಿಯಾಗಿದೆ. #JusticeForSushantSinghRajputಎಂದು ಶುರುವಾಗಿದ್ದ ಹ್ಯಾಶ್‌ಟ್ಯಾಗ್ ಹಂತ ಹಂತವಾಗಿ ಬದಲಾಗುತ್ತಾ ಬರುತ್ತಿದೆ.
ಸುಶಾಂತ್ ಸಾವಿಗೆ ರಿಯಾಳೇ ಕಾರಣ ಎಂದು ಮಾಧ್ಯಮಗಳು ತೀರ್ಪು ನೀಡಿದವು. ಇದರ ಬೆನ್ನಲ್ಲೇ ಕೆಲವು ವಾಹಿನಿಗಳು, ಆಕೆ ಬ್ಲಾಕ್ ಮ್ಯಾಜಿಕ್ ಮಾಡಿದ್ದಾಳೆ, ಬಂಗಾಳಿ ಹುಡುಗಿ ಆಕೆ ವಶೀಕರಣ ಮಾಡುತ್ತಾಳೆ, ಡ್ರಗ್ಸ್ ನೀಡುತ್ತಾಳೆ ಎಂದು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ, ರಿಯಾಳನ್ನು ವಿಲನ್ ಸ್ಥಾನಕ್ಕೆ ತಂದು ನಿಲ್ಲಿಸಿದವು. ಸಾರ್ವಜನಿಕರ ಮುಂದೆ ರಿಯಾ ಅತೀ ದೊಡ್ಡ ಅಪರಾಧಿ ಎಂಬಂತೆ ಬಿಂಬಿಸಲಾಯಿತು. ಡ್ರಗ್ಸ್ ಜಾಲದಲ್ಲಿ ಬಾಲಿವುಡ್ ಸುದ್ದಿಯಾಗುತ್ತಿದ್ದಂತೆ ಸ್ಯಾಂಡಲ್‌ವುಡ್ ನಲ್ಲಿಯೂ ಡ್ರಗ್ಸ್ ಸುದ್ದಿಯಾಯಿತು. ಪ್ರಕರಣದಲ್ಲಿ ನಟಿಯರು ಬಂಧಿತರಾದಾಗ ಇಲ್ಲಿಯೂ ಆರೋಪಿಗಳನ್ನು ಅಪರಾಧಿ ಎಂಬಂತೆ ಮಾಧ್ಯಮಗಳು ವರದಿ ಮಾಡಿದವು.
‘ಡ್ರಗ್ಸ್ ಜಾಲದಲ್ಲಿ ಮಹಿಳೆಯರನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಲಾಗುತ್ತಿದ್ದೆ'ಎಂದು ಪತ್ರಕರ್ತೆ ರೋಹಿಣಿ ಸಿಂಗ್ ಪ್ರಶ್ನಿಸಿದ್ದರು. ಲಾಕ್‌ಡೌನ್ ತೆರವುಗೊಂಡು ಮದ್ಯದಂಗಡಿ ಓಪನ್ ಆದಾಗ ‘ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ಮಹಿಳೆಯರೂ ಇದ್ದಾರೆ'ಎಂದು ಸುದ್ದಿವಾಹಿನಿಗಳು ಬ್ರೇಕಿಂಗ್ ಸುದ್ದಿ ನೀಡಿ ನಡೆಯಬಾರದ್ದು ನಡೆದಿದೆ ಎಂಬಂತೆ ಕಿರುಚಿದ್ದು ಮರೆಯುವಂತಿಲ್ಲ. ಆದರೆ ಅತ್ಯಾಚಾರ ಪ್ರಕರಣಗಳು ನಡೆದಾಗ ಈ ರೀತಿಯ ಅಪರಾಧಿಗಳ ಬಗ್ಗೆಯಾಗಲೀ, ಸಮಾಜದ ಅವ್ಯವಸ್ಥೆಯ ಬಗ್ಗೆಯಾಗಲೀ ಈ ರೀತಿ ಸುದ್ದಿ ಸ್ಫೋಟ ನಡೆಯುತ್ತದೆಯೇ?
ಅದ್ಯಾವುದೇ ಪ್ರಕರಣವಿರಲಿ, ಆರೋಪಿಗಳ ಪಟ್ಟಿಯಲ್ಲಿ ಹೆಣ್ಣಿನ ಹೆಸರು ಇದ್ದರೆ ಅದೇ ಹೈಲೈಟ್. ಕೇರಳದಲ್ಲಿ ನಡೆದ ಚಿನ್ನ ಕಳ್ಳ ಸಾಗಣಿಕೆ ಪ್ರಕರಣವನ್ನೇ ನೋಡಿ. ಅದರಲ್ಲಿ ಪ್ರಮುಖ ಆರೋಪಿ ಪಿ.ಎಸ್ ಸರಿತ್ಆಗಿದ್ದರೂ ಸ್ವಪ್ನಾ ಸುರೇಶ್ ಹೆಸರು ಮಾತ್ರ ಹೈಲೈಟ್ ಆಯಿತು. ಆಕೆಯ ವೇಷ ಭೂಷಣ, ಆಕೆಯ ವೈವಾಹಿಕ ಸಂಬಂಧ, ವೈಯಕ್ತಿಕ ಜೀವನ ಎಲ್ಲವೂ ಚರ್ಚೆ ಆಯಿತು. ಆದರೆ ಇತರ ಪುರುಷ ಆರೋಪಿಗಳ ಬಗ್ಗೆ ಇಷ್ಟೊಂದು ಚರ್ಚೆ ಆಗಲೇ ಇಲ್ಲ.
1990ರಲ್ಲಿ ಬಾಲಿವುಡ್ ನಟಿ ರೇಖಾಳ ಪತಿ ಮುಖೇಶ್ ಅಗರವಾಲ್ ಆತ್ಮಹತ್ಯೆ ಮಾಡಿಕೊಂಡಾಗ ಜನರು ದೂರಿದ್ದೂ ರೇಖಾಳನ್ನೇ. ಆತನ ಸಾವಿಗೆ ಆಕೆಯೇ ಕಾರಣ ಎಂದು ಯಾವುದೇ ಸಾಕ್ಷಿ ಇಲ್ಲದೆ ಸಮಾಜ ಷರಾ ಬರೆದು ಬಿಟ್ಟಿತು. ಹೆಂಡತಿಯನ್ನು ತೊರೆದು ಗಂಡ ಬೇರೊಬ್ಬಳನ್ನು ಮದುವೆಯಾದರೆ ಅಲ್ಲಿ ಗಂಡನದ್ದೇನು ತಪ್ಪಿಲ್ಲ. ತಪ್ಪು ಹೆಣ್ಣಿನದ್ದೇ. ಸೆಲೆಬ್ರಿಟಿಗಳ ಜೀವನದಲ್ಲಿ ಮಾತ್ರ ಅಲ್ಲ ನಮ್ಮ ಸುತ್ತಮುತ್ತಲೂ ಇಂಥದ್ದೇ ದೂಷಣೆಗಳು ನಡೆಯುತ್ತಲೇ ಇರುತ್ತವೆ. ಆಕೆ ಸರಿಯಾಗಿ ಗಂಡನನ್ನು ನೋಡಿಕೊಂಡಿಲ್ಲ, ಹಾಗಾಗಿ ಅವ ಕುಡಿಯುತ್ತಾನೆ. ಅವಳು ಸರಿ ಇದ್ದಿದ್ದರೆ ಅವನು ಹೀಗಾಗುತ್ತಿದ್ದನಾ? - ಇಂಥಾ ಮಾತುಗಳು ನಮ್ಮ ನಡುವೆ ಸಾಮಾನ್ಯವಾಗಿ ಬಿಟ್ಟಿದೆ.
ಅತ್ಯಾಚಾರ ನಡೆದರೂ ಅದು ಹೆಣ್ಣಿನದ್ದೇ ತಪ್ಪು ಎಂದು ದೂರುವ ಪುರುಷ ಪ್ರಧಾನ ಸಮಾಜ ನಮ್ಮದು. ಅವಳ ಬಟ್ಟೆ ಸರಿ ಇರಲಿಲ್ಲ. ಅವಳಿಗೆ ಆತ ಮೋಸ ಮಾಡುತ್ತಾನೆ ಎಂದು ಗೊತ್ತಿರಲಿಲ್ಲವೇ? ಅವಳ್ಯಾಕೆ ಅಷ್ಟು ಹೊತ್ತಿಗೆ ಹೊರಗೆ ಹೋದಳು? ಹೀಗೆ ಹಲವಾರು ಪ್ರಶ್ನೆಗಳು ಅವಳತ್ತ ಬೊಟ್ಟು ಮಾಡುತ್ತವೆ. ನಮ್ಮ ಸಮಾಜ ಹೇಗಿದೆ ಅಂದರೆ ಗಂಡು ತಪ್ಪು ಮಾಡುವುದಿಲ್ಲ. ಆತ ತಪ್ಪು ಮಾಡಿದರೂ ಹೆಣ್ಣೇ ಕಾರಣ. ಆದರೆ ಹೆಣ್ಣು ತಪ್ಪು ಮಾಡಿದರೆ ಅದಕ್ಕೆ ಅವಳೊಬ್ಬಳೇ ಕಾರಣ. 'ಹೆಣ್ಣು ಕುಲಕ್ಕೇ ಅವಮಾನ' ಎಂಬ ಪದಪುಂಜ. ಗಂಡಾದರೆ ಅದು ವ್ಯಕ್ತಿಗಷ್ಟೇ ಸೀಮಿತ. ಎಂಥಾ ವಿಪರ್ಯಾಸ!.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.