ADVERTISEMENT

ಉಳಿತಾಯದಿಂದ ಹೂಡಿಕೆ ಕಡೆಗೆ

ವಿಜಯ್ ಜೋಷಿ
Published 1 ನವೆಂಬರ್ 2024, 23:30 IST
Last Updated 1 ನವೆಂಬರ್ 2024, 23:30 IST
<div class="paragraphs"><p>ಹೂಡಿಕೆ (ಸಾಂದರ್ಭಿಕ ಚಿತ್ರ)</p></div>

ಹೂಡಿಕೆ (ಸಾಂದರ್ಭಿಕ ಚಿತ್ರ)

   
ಹೆಣ್ಣುಮಕ್ಕಳೆಲ್ಲ ದುಡಿಯುವುದಷ್ಟೆ ಅಲ್ಲದೆ ಹೂಡಿಕೆಯತ್ತಲೂ ಮನಸ್ಸು ಮಾಡಬೇಕು. ಉಳಿತಾಯ ಹಾಗೂ ಹೂಡಿಕೆಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಹಲವು ಪ್ರಚಲಿತ ಮಾರ್ಗಗಳಿವೆ. ಅದನ್ನು ತಿಳಿದುಕೊಂಡು, ಅನುಷ್ಠಾನಗೊಳಿಸಿದಾಗಷ್ಟೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯ. ಆದಾಯ, ಖರ್ಚು, ವೆಚ್ಚ, ಉಳಿತಾಯ ಎಲ್ಲದರ ನೀಲನಕ್ಷೆಯೊಂದು ಹೆಣ್ಣುಮಕ್ಕಳ ಮುಂದಿದ್ದರೆ, ಅದಕ್ಕೆ ತಕ್ಕನಾದ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಬೆಳಕಿನ ಹಬ್ಬದ ಈ ಹೊತ್ತಿನಲ್ಲಿ ಮಹಿಳೆಯರಿಗಾಗಿ ಒಂದಷ್ಟು ‘ಅರ್ಥ’ ಸಲಹೆಗಳು ಇಲ್ಲಿವೆ.

ಭಾರತದಲ್ಲಿ ಮಹಿಳೆಯರಿಗೂ ಬಂಡವಾಳ ಮಾರುಕಟ್ಟೆಯ ಹೂಡಿಕೆಗೂ ಆಗಿಬರುವುದಿಲ್ಲ ಎಂಬುದನ್ನು ಈ ವರ್ಷದ ಜನವರಿಯಲ್ಲಿ ಬಹಿರಂಗವಾದ ಅಧ್ಯಯನ ವರದಿಯೊಂದು ಹೇಳಿತ್ತು. ಡಿಬಿಎಸ್ ಬ್ಯಾಂಕ್ ಮತ್ತು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಒಟ್ಟಾಗಿ ಸಿದ್ಧಪಡಿಸಿದ ವರದಿಯೊಂದು, ದೇಶದ ನಗರವಾಸಿ ಮಹಿಳೆಯರ ಪೈಕಿ ಶೇಕಡ 51ರಷ್ಟು ಮಂದಿ ತಮ್ಮ ಹಣವನ್ನು ನಿಶ್ಚಿತ ಠೇವಣಿಗಳಲ್ಲಿ ಹಾಗೂ ಉಳಿತಾಯ ಖಾತೆಯಲ್ಲಿ ಇರಿಸುವುದನ್ನು ಇಷ್ಟಪಡುತ್ತಾರೆ ಎಂದು ಹೇಳಿತ್ತು.

ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸುವ ಮಹಿಳೆಯರ ಪ್ರಮಾಣ ಶೇ 15ರಷ್ಟು, ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸುವ ಮಹಿಳೆಯರ ಪ್ರಮಾಣ ಶೇ 7ರಷ್ಟು ಮಾತ್ರ ಎಂಬುದನ್ನು ದೇಶದ 10 ನಗರಗಳ 800ಕ್ಕೂ ಹೆಚ್ಚಿನ ಮಹಿಳೆಯರನ್ನು ಒಳಗೊಂಡಿದ್ದ ಆ ಸಮೀಕ್ಷೆಯು ಕಂಡುಕೊಂಡಿತ್ತು. ಆದರೆ, ಪರಿಸ್ಥಿತಿಯಲ್ಲಿ ಬದಲಾವಣೆ ಆಗುತ್ತಿದೆ ಎಂಬುದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧಿಕಾರಿಗಳ ಮಾತುಗಳು ಹೇಳುತ್ತವೆ.

ADVERTISEMENT

‘ಈಗ ಭಾರತದ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುತ್ತಿರುವವರ ಪೈಕಿ ಶೇಕಡ 22ರಷ್ಟು ಮಹಿಳೆಯರೇ ಇದ್ದಾರೆ’ ಎಂಬುದನ್ನು ಸೆಬಿ ಅಧಿಕಾರಿಗಳು ಆಗಸ್ಟ್‌ನಲ್ಲಿ ತಿಳಿಸಿದ್ದರು. ಇಂದಿಗೂ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬಂಡವಾಳ ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲು ಹೆಚ್ಚಾಗುತ್ತಿರುವುದರಲ್ಲಿ ಹೊಸ ಕಾಲದ, ತಂತ್ರಜ್ಞಾನದ ಆಧಾರಿತ ಆ್ಯಪ್‌ಗಳ ಕೊಡುಗೆಯೂ ಇದೆ.

ಈಚೆಗೆ ಮತ್ತೆ ಕೆಲಸಕ್ಕೆ ಸೇರಿರುವ ಲಕ್ಷ್ಮಿ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಷೇರುಪೇಟೆ ಅಂದರೆ ಆಗಿಬರುತ್ತಿರಲಿಲ್ಲ. ಅವರು ತಮ್ಮ ಉಳಿತಾಯದ ಹಣವನ್ನೆಲ್ಲ ಇರಿಸಿದ್ದು ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆಗಳಲ್ಲಿ. ಅಲ್ಲಿ ಸಿಗುವ ಬಡ್ಡಿ ಪ್ರಮಾಣ ಕಡಿಮೆ ಎಂಬುದು ಗೊತ್ತಿದ್ದರೂ, ಅದು ಸುರಕ್ಷಿತ ಎಂದು ಅವರು ಹಾಗೆ ಮಾಡುತ್ತಿದ್ದರು. ‘ಆದರೆ, ಹಣದುಬ್ಬರ ಹೆಚ್ಚಳ ಹಾಗೂ ಬಂಡವಾಳ ಮಾರುಕಟ್ಟೆಯಲ್ಲಿ ಸಿಗುವ ಲಾಭದ ಪ್ರಮಾಣ ಕಂಡು ನನಗೂ ಷೇರುಗಳಲ್ಲಿ ಹೂಡಿಕೆ ಮಾಡುವ ಮನಸ್ಸಾಯಿತು. ಆ್ಯಪ್‌ ಬಳಸಿ, ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಆರಂಭಿಸಿದ್ದೇನೆ. ಮನೆಯಿಂದಲೇ ಖಾತೆ ತೆರೆಯುವ, ಆಧಾರ್ ಸಂಖ್ಯೆ ಬಳಸಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶವು ಹೂಡಿಕೆ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವಲ್ಲಿ ಬಹಳ ನೆರವಿಗೆ ಬಂತು’ ಎಂದು ಅವರು ಹೇಳುತ್ತಾರೆ. ಆ್ಯಪ್ ಆಧಾರಿತ ಹೂಡಿಕೆಯು ಬ್ಯಾಂಕ್‌ಗಳಿಗೆ, ಅಂಚೆ ಕಚೇರಿಗೆ ತೆರಳಿ ವಿವಿಧ ನಮೂನೆಗಳನ್ನು ಭರ್ತಿ ಮಾಡಿ, ಹಣ ಠೇವಣಿ ಇರಿಸುವುದಕ್ಕಿಂತ ಸುಲಭದ್ದಾಗಿದೆ ಎಂಬುದು ಅವರ ಅನಿಸಿಕೆ.

ಅವರ ಮಾತನ್ನು ದೇಶದ ಅತಿದೊಡ್ಡ ಷೇರು ಬ್ರೋಕರೇಜ್ ಹಾಗೂ ಮ್ಯೂಚುವಲ್ ಫಂಡ್ ವಿತರಕ ಕಂಪನಿಯಾದ ‘ಗ್ರೋ’ ಕೂಡ ಅನುಮೋದಿಸುತ್ತದೆ. ‘ಈ ವರ್ಷದ ಜನವರಿಯಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಮಹಿಳೆಯರ ಕಡೆಯಿಂದ ಬರುತ್ತಿರುವ ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಸಂಖ್ಯೆಯು 3.5 ಪಟ್ಟು ಹೆಚ್ಚಾಗಿದೆ. 2023ರಲ್ಲಿ ಪ್ರತಿ ಐದು ಎಸ್‌ಐಪಿ ಹೂಡಿಕೆಗಳಲ್ಲಿ ಒಂದು ಎಸ್‌ಐಪಿ ಮಹಿಳೆಯ ಕಡೆಯಿಂದ ಆಗುತ್ತಿತ್ತು (ಒಟ್ಟು ಎಸ್‌ಐಪಿಗಳಲ್ಲಿ ಶೇ 20ರಷ್ಟು). 2024ರಲ್ಲಿ ಪ್ರತಿ ನಾಲ್ಕು ಎಸ್‌ಐಪಿಗಳಲ್ಲಿ ಒಂದು ಎಸ್‌ಐಪಿ ಮಹಿಳೆಯಿಂದ ಆಗುತ್ತಿದೆ (ಶೇ 25ರಷ್ಟು)’ ಎಂದು ತಮ್ಮಲ್ಲಿನ ದತ್ತಾಂಶ ಆಧರಿಸಿ ‘ಗ್ರೋ’ ವಕ್ತಾರರು ಪ್ರಜಾವಾಣಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಷೇರು ಮಾರುಕಟ್ಟೆ ಹೂಡಿಕೆಯಿಂದ ಸಿಗುವ ಲಾಭದ ಪ್ರಮಾಣವು ಕೋವಿಡ್‌ ನಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಮಾತ್ರವೇ ಅಲ್ಲದೆ, ಮಹಿಳೆಯರ ತೊಡಗಿಸಿಕೊಳ್ಳುವಿಕೆ ಹೆಚ್ಚಾಗಿರುವುದಕ್ಕೆ ಇನ್ನೂ ಹಲವು ಕಾರಣಗಳಿವೆ. ‘ಹೂಡಿಕೆ ಪ್ರಕ್ರಿಯೆಯನ್ನು ಸುಲಭವಾಗಿಸುವಲ್ಲಿ ತಂತ್ರಜ್ಞಾನವು ಬಹಳ ದೊಡ್ಡ ಪಾತ್ರ ನಿರ್ವಹಿಸಿದೆ. ಆಧಾರ್ ಮೂಲಕ ನಡೆಯುವ ಇ–ಸಹಿ ಪ್ರಕ್ರಿಯೆಯು ಮನೆಯಿಂದಲೇ ಎಲ್ಲ ಕೆಲಸಗಳನ್ನು ನಿರ್ವಹಿಸುವುದನ್ನು ಸಾಧ್ಯವಾಗಿಸಿದೆ. ಇದರಿಂದಾಗಿ ಸ್ವತಂತ್ರವಾಗಿ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸವು ಹೆಣ್ಣುಮಕ್ಕಳಲ್ಲಿ ಮೂಡಿದೆ. ವಿಶ್ವಾಸಾರ್ಹ ವೇದಿಕೆಗಳಿಂದ ಅಗತ್ಯ ಮಾಹಿತಿ ಕಲೆಹಾಕುವ ಕೌಶಲ ಹೆಣ್ಣುಮಕ್ಕಳಿಗೆ ಇದೆ. ಹಣಕಾಸು ಸಂಸ್ಥೆಗಳು ಗ್ರಾಹಕಸ್ನೇಹಿ ಆ್ಯಪ್‌ಗಳನ್ನು ರೂಪಿಸಿರುವ ಕಾರಣ ಹೂಡಿಕೆ ಪ್ರಕ್ರಿಯೆಯು ಬಹಳ ಸರಳವಾಗಿದೆ. ಇವೆಲ್ಲವೂ ಒಟ್ಟಾಗಿ ಮಹಿಳೆಯರಿಗೆ ಬಂಡವಾಳ ಮಾರುಕಟ್ಟೆಯನ್ನು ಹತ್ತಿರವಾಗಿಸಿವೆ’ ಎಂದು ಆ್ಯಕ್ಸಿಸ್ ಸೆಕ್ಯುರಿಟೀಸ್‌ನ ಆನ್‌ಲೈನ್‌ ವಹಿವಾಟುಗಳ ಮುಖ್ಯಸ್ಥ ಸಮೀರ್ ಶಾ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಹಿಳೆಯರಲ್ಲಿ ಹೂಡಿಕೆಯ ಹವ್ಯಾಸವನ್ನು ಹೆಚ್ಚು ಮಾಡುವ ಉದ್ದೇಶದಿಂದಲೇ ಕೆಲವು ಆಸ್ತಿ ನಿರ್ವಹಣಾ ಕಂಪನಿಗಳು ಪ್ರತ್ಯೇಕ ತರಗತಿಗಳನ್ನು ಕೂಡ ಆರಂಭಿಸಿವೆ. ಅಲ್ಲದೆ, ಕೆಲವು ಬ್ರೋಕರೇಜ್ ಕಂಪನಿಗಳು ಮಹಿಳಾ ಹೂಡಿಕೆದಾರರಿಗೆ ಹೆಚ್ಚಿನ ರಿಯಾಯಿತಿಗಳನ್ನು ಕೂಡ ನೀಡುತ್ತಿವೆ. 

‘ಡಿಮ್ಯಾಟ್ ಖಾತೆ ತೆರೆಯುವ ಶುಲ್ಕ, ಖಾತೆ ನಿರ್ವಹಣಾ ಶುಲ್ಕ, ಬ್ರೋಕರೇಜ್ ಶುಲ್ಕದಲ್ಲಿ ಮಹಿಳೆಯರಿಗೆ ರಿಯಾಯಿತಿಗಳನ್ನು ಕೆಲವು ಕಂಪನಿಗಳು ನೀಡುತ್ತಿವೆ. ಮಹಿಳೆಯರು ಹಣಕಾಸಿನ ದೃಷ್ಟಿಯಿಂದ ಹೆಚ್ಚು ಮಾಹಿತಿ ಹೊಂದಿದವರಾಗುವಂತೆ ಮಾಡಲು ತರಬೇತಿ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ದೀಪಕ್ ಜಸನಿ ಹೇಳಿದರು.

‘ಕುಟುಂಬಗಳು ಕಿರಿದಾಗುತ್ತಿರುವುದು, ಮದುವೆಯನ್ನು ತಡವಾಗಿ ಆಗುತ್ತಿರುವುದು, ಮಹಿಳೆಯರಲ್ಲಿ ಕೆಲವರು ಮದುವೆಯಿಂದ ದೂರ ಉಳಿಯುತ್ತಿರುವ ಕಾರಣದಿಂದಾಗಿಯೂ, ಹಣಕಾಸಿನ ಅರಿವು ಹೆಚ್ಚಾಗಿದೆ’ ಎಂದರು.

‘ಹಣಕಾಸಿನ ತೀರ್ಮಾನಗಳಲ್ಲಿ ಮಹಿಳೆಯರಿಗೆ, ಪುರುಷರಿಗೆ ಇರುವಂಥದ್ದೇ ಅಧಿಕಾರ ಇರಬೇಕು. ಆದರೆ, ಭಾರತದಲ್ಲಿ ಹಲವಾರು ಮಹಿಳೆಯರಿಗೆ ಮಾನಸಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಡ್ಡಿಗಳು ಎದುರಾಗುತ್ತವೆ. ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಇನ್ನಷ್ಟು ಸಬಲರಾಗುವಂತೆ ಮಾಡಲು ಹಾಗೂ ಹಣಕಾಸಿನ ಒಳಗೊಳ್ಳುವಿಕೆಯನ್ನು ಹೆಚ್ಚು ಮಾಡಲು ಹಣಕಾಸಿನ ಸಾಕ್ಷರತೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು’ ಎಂದು ಅವರು ಹೇಳಿದರು. 

ಇವುಗಳನ್ನು ಗಮನಿಸಬಹುದು...
ಭಾರತದ ಹತ್ತು ಮುಂಚೂಣಿ ಬ್ರೋಕರೇಜ್ ಕಂಪನಿಗಳು ಇವು: ಗ್ರೋ, ಜೆರೊದಾ, ಏಂಜೆಲ್ ವನ್, ಅಪ್‌ಸ್ಟಾಕ್ಸ್‌, ಐಸಿಐಸಿಐ ಡೈರೆಕ್ಟ್, ಕೋಟಕ್ ಸೆಕ್ಯುರಿಟೀಸ್, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್, ಎಸ್‌ಬಿಐ ಸೆಕ್ಯುರಿಟೀಸ್‌, ಪೇಟಿಎಂ ಮನಿ. (*ದತ್ತಾಂಶಗಳನ್ನು ಆಧರಿಸಿದ ಮಾಹಿತಿ ಒದಗಿಸುವ ವೇದಿಕೆ ಸ್ಟಾಟಿಸ್ಟಾದಲ್ಲಿ ಇರುವ ಅಂಕಿ–ಅಂಶಗಳ ಪ್ರಕಾರ. ಇವುಗಳಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಆ್ಯಪ್‌ ಮೂಲಕ, ಮನೆಯಿಂದಲೇ ಡಿಮ್ಯಾಟ್ ಖಾತೆ ತೆರೆಯಲು, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತವೆ.)
ಪ್ರಭಾವಿಸುವವರ ಪ್ರಭಾವ!

ಈಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಣಕಾಸು ವಿಚಾರಗಳ ಬಗ್ಗೆ ಮಾಹಿತಿ ನೀಡುವವರ, ಪ್ರಭಾವ ಬೀರುವವರ ಸಂಖ್ಯೆ ಗಣನೀಯವಾಗಿದೆ. ಇವರನ್ನು ಫಿನ್‌ಪ್ಲುಯೆನ್ಶಿಯರ್ಸ್‌ ಎಂದು ಗುರುತಿಸಲಾಗುತ್ತಿದೆ. ಇವರು ಜನರ ಮೇಲೆ ಪ್ರಭಾವ ಬೀರುತ್ತಿರುವ ಬಗೆಯ ಕುರಿತು ಕೆಲವು ಟೀಕೆಗಳೂ ಇವೆ. ಆದರೆ, ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಇಂಥವರ ಕೊಡುಗೆ ಇದೆ ಎಂಬುದನ್ನು ತಜ್ಞರು ಗುರುತಿಸುತ್ತಾರೆ.

‘ಫಿನ್‌ಫ್ಲುಯೆನ್ಶಿಯರ್‌ಗಳು ಹಾಗೂ ಬ್ರೋಕರೇಜ್ ಕಂಪನಿಗಳು ಹಣಕಾಸಿನ ಸಂಗತಿಗಳನ್ನು ಸರಳವಾಗಿ ಹೇಳುವ ಕೆಲಸಕ್ಕೆ ಮುಂದಾದರು. ಇದು ಮಹಿಳೆಯರು ಸೇರಿದಂತೆ ಬಂಡವಾಳ ಮಾರುಕಟ್ಟೆಗೆ ಮೊದಲ ಬಾರಿಗೆ ಪ್ರವೇಶಿಸುತ್ತಿರುವ ಎಲ್ಲರಿಗೂ ಸಹಾಯ ಮಾಡಿದೆ. ಮಹಿಳೆಯರನ್ನು ಕೇಂದ್ರೀಕರಿಸಿಕೊಂಡಿರುವ ಹಣಕಾಸು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಸಿಗುತ್ತಿವೆ’ ಎಂದು ಶೇರ್‌ಖಾನ್‌ ಬೈ ಬಿಎನ್‌ಪಿ ಪಾರಿಬಾಸ್‌ನ ಮುಖ್ಯ ಬಿಸಿನೆಸ್ ಅಧಿಕಾರಿ ಪರ್ಮಿಂದರ್ ವರ್ಮಾ ತಿಳಿಸಿದರು. ಈ ವರ್ಷದ ಫೆಬ್ರುವರಿಯಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಮಹಿಳೆಯರ ಪ್ರಮಾಣ ಹಿಂದಿನ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಶೇಕಡ 25ರಷ್ಟು ಹೆಚ್ಚಾಗಿದೆ ಎಂಬುದನ್ನು ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ಸಂಬಂಧಿಸಿದ ಸೇವೆ ಒದಗಿಸುವ ‘ಕ್ಯಾಮ್ಸ್‌’ನ ವರದಿಯೊಂದು ಹೇಳಿದೆ ಎಂದು ವರ್ಮಾ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.