ಸೆಲೆಬ್ರಿಟಿಗಳಷ್ಟೇ ಅಲ್ಲ ಜನಸಾಮಾನ್ಯರೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಕಾಲವಿದು. ತಮ್ಮ ಇಷ್ಟಾನಿಷ್ಟಗಳು ಸೇರಿದಂತೆ ಅಭಿಪ್ರಾಯ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುವಲ್ಲಿ ಹೆಣ್ಣು ಮಕ್ಕಳೂ ಹಿಂದೆ ಬಿದ್ದಿಲ್ಲ. ಆದರೆ ಇಂತಹ ಹೆಣ್ಣುಮಕ್ಕಳನ್ನು ಟ್ರೋಲ್ ಮಾಡುವ ಕೆಟ್ಟ ನಡವಳಿಕೆ ಜಾಸ್ತಿಯಾಗಿದ್ದು, ಲಾಕ್‌ಡೌನ್‌ನಲ್ಲಿ ಮಿತಿಮೀರಿದೆ.
ಬಾಲಿವುಡ್ ನಟಿ ಮೀರಾ ಚೋಪ್ರಾ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ದಕ್ಷಿಣ ಭಾರತದ ನಟನ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು. ಅವರ ಪೋಸ್ಟ್ ಟ್ವಿಟ್ಟರ್‌ನಲ್ಲಿ ಪ್ರಕಟವಾದದ್ದೇ ತಡ, ಆ ನಟನ ಅಭಿಮಾನಿಗಳು ಮೀರಾಗೆ ಸಾಮೂಹಿಕ ಅತ್ಯಾಚಾರದ, ಮುಖಕ್ಕೆ ಆ್ಯಸಿಡ್ ಎರಚುವ ಬೆದರಿಕೆ ಸೇರಿದಂತೆ ಅಶ್ಲೀಲ ಪದಗಳನ್ನು ಎಗ್ಗಿಲ್ಲದೇ ಬಳಸಿ ಟ್ವಿಟ್ಟರ್‌ನಲ್ಲಿ ಟ್ರೋಲ್ ಮಾಡಿಬಿಟ್ಟರು. ಮೀರಾ ಸೇರಿದಂತೆ ಅನೇಕರು ಈ ಟ್ವೀಟ್‌ಗಳನ್ನು ನೋಡಿ ಕೆಲಕಾಲ ಆಘಾತಗೊಂಡಿದ್ದರು. ಆದರೆ ತಕ್ಷಣವೇ ಎಚ್ಚೆತ್ತ ಮೀರಾ, ಟ್ರೋಲಿಗರಿಗೆ ತಕ್ಕ ಉತ್ತರ ನೀಡಿ, ಸೈಬರ್ ಪೊಲೀಸರ ಮೊರೆಹೊಕ್ಕರು.
ಸೆಲೆಬ್ರಿಟಿ ನಟಿಯರಷ್ಟೇ ಅಲ್ಲ, ಸಾಮಾನ್ಯ ಮಹಿಳೆಯರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿರುವ ಅನೇಕ ಮಹಿಳೆಯರೂ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಹೆಣ್ಣುಮಕ್ಕಳು ತೊಡುವ ಉಡುಪಿನಿಂದ ಹಿಡಿದು ಅವರ ಆಲೋಚನಾ ಕ್ರಮದ ತನಕ ಹಲವು ವಿಷಯಗಳು ಟ್ರೋಲಿಗರಿಗೆ ಆಹಾರವಾಗಿವೆ. ರಾಜ್ಯದಲ್ಲಿ ರೈತ ಮಹಿಳೆಯೊಬ್ಬರು ಜೀನ್ಸ್ ತೊಟ್ಟಿದ್ದು, ಬೈಕ್ ಓಡಿಸಿದ್ದೇ ತಪ್ಪು ಎನ್ನುವಂಥ ಮನಸ್ಥಿತಿಯ ಟ್ರೋಲ್‌ಗಳು ಈಚೆಗೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯನ್ನೇ ಹುಟ್ಟುಹಾಕಿದ್ದವು.
ಮಹಿಳೆಯರೇ ಹೆಚ್ಚು ಗುರಿ
ಟ್ವಿಟ್ಟರ್, ಇನ್‌ಸ್ಟಾಗ್ರಾಂಗೆ ಹೋಲಿಸಿದರೆ ಫೇಸ್‌ಬುಕ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಟ್ರೋಲಿಂಗ್‌ಗೆ ಒಳಗಾಗುತ್ತಿದ್ದಾರೆ. ಯಾವುದೋ ರಾಜಕೀಯ ಪಕ್ಷ ಇಲ್ಲವೇ ಸಿದ್ಧಾಂತಕ್ಕೆ ಕಟ್ಟುಬಿದ್ದವರು ತಮ್ಮ ಶ್ರೇಷ್ಠತೆಯ ವ್ಯಸನ ಮೆರೆಯಲು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಟ್ರೋಲ್ ಮಾಡುವುದು ನಿತ್ಯದ ವಾಡಿಕೆ ಎಂಬಂತಾಗಿದೆ.
ಕೆಲ ಮಹಿಳೆಯರು ತಮ್ಮ ಮಾತುಗಳಿಗೆ ಬದ್ಧರಾಗಿ ಟ್ರೋಲಿಗರಿಗೆ ಆಯಾ ಮಾಧ್ಯಮಗಳಲ್ಲಿಯೇ ತಕ್ಕ ಉತ್ತರ ನೀಡುತ್ತಿದ್ದರೆ, ಮತ್ತೆ ಕೆಲವರು ಟ್ರೋಲ್ ಮಾಡಿದವರನ್ನೇ ಬ್ಲಾಕ್ ಮಾಡುವುದು ಇಲ್ಲವೇ ಅವರ ಸಂದೇಶವನ್ನು ಅಳಿಸಿಹಾಕುವ ಮೂಲಕ ನಿಟ್ಟುಸಿರುಬಿಡುತ್ತಾರೆ. ಅಸಭ್ಯ ಮತ್ತು ಮನಸ್ಸಿಗೆ ಘಾಸಿಯಾಗುವಂಥ ಟ್ರೋಲ್‌ಗಳಿಂದ ಅನೇಕ ಮಹಿಳೆಯರು ಮಾನಸಿಕವಾಗಿ ಕಿರಿಕಿರಿ ಅನುಭವಿಸಿ, ಸಾಮಾಜಿಕ ಮಾಧ್ಯಮಗಳ ಸಹವಾಸವೇ ಬೇಡವೆಂದು ಅವುಗಳಿಂದ ಹೊರಬಂದಿದ್ದೂ ಇದೆ. ಆದರೆ, ಟ್ರೋಲಿಂಗ್‌ಗೆ ಒಳಗಾದ ಅನೇಕ ಹೆಣ್ಣುಮಕ್ಕಳು ಅದನ್ನು ಎದುರಿಸಲಾಗದೇ ಒಳಗೊಳಗೇ ಆತಂಕ, ನೋವು ಅನುಭವಿಸುವುದಕ್ಕಿಂತ ಅದರಿಂದ ಹೊರಬರುವ ದಾರಿಗಳನ್ನು ಕಂಡುಕೊಳ್ಳುವುದು ಅಗತ್ಯ ಎನ್ನುತ್ತಾರೆ ಸಾಮಾಜಿಕ ಮಾಧ್ಯಮಗಳ ತಜ್ಞರು.
‘ಯಾರು ಹೆಚ್ಚು, ಯಾರು ಕಡಿಮೆ ಎನ್ನುವಂಥ ಪ್ರಶ್ನೆಗಳು ಅಭಿಮಾನಿಗಳ ನಡುವೆ ಉಂಟಾದಾಗ ಇಂಥ ಟ್ರೋಲ್‌ಗಳು ಆಗುತ್ತವೆ. ತಮ್ಮ ನೆಚ್ಚಿನ ನಟ ಮಾಡಿದ್ದೆಲ್ಲವೂ ಸರಿ ಅನ್ನುವಂಥ ಅಂಧಾಭಿಮಾನ ಇಲ್ಲಿರುತ್ತದೆ. ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ, ಅಶ್ಲೀಲವಾಗಿ ಟ್ರೋಲ್ ಮಾಡುವ ಬಹುತೇಕ ಪುರುಷರಲ್ಲಿ ‘ಅಹಂ’ ಸಮಸ್ಯೆ ಇರುತ್ತದೆ. ಹೆಣ್ಣುಮಕ್ಕಳ ಸಾಧನೆಯನ್ನು ಸಹಿಸದ ಹಲವರು ಆಕೆಗೆ ದೈಹಿಕ ಇಲ್ಲವೇ ಮಾನಸಿಕವಾಗಿ ಘಾಸಿಗೊಳಿಸಿ ಆ ಮೂಲಕ ಆಕೆಯನ್ನು ಮಟ್ಟ ಹಾಕುವ ಹೀನ ಮನಸ್ಥಿತಿ ಹೊಂದಿರುತ್ತಾರೆ. ಇಂಥ ಮನಸ್ಥಿತಿಯವರೇ ಅತ್ಯಾಚಾರ, ಆ್ಯಸಿಡ್ ಎರಚುವ ಮಾತುಗಳನ್ನಾಡುತ್ತಾರೆ’ ಎಂದು ವಿಶ್ಲೇಷಿಸುತ್ತಾರೆ ಸುಮನ ಕೌನ್ಸೆಲಿಂಗ್ ಕೇಂದ್ರದ ಆಪ್ತ ಸಮಾಲೋಚಕಿ ಡಿ. ಯಶೋದಾ.
ಲಾಕ್‌ಡೌನ್‌ನಲ್ಲೇ ಹೆಚ್ಚು
ಕೋವಿಡ್–19 ಲಾಕ್‌ಡೌನ್ ಸಮಯದಲ್ಲಿ ಇಂಥ ಟ್ರೋಲಿಂಗ್‌ಗಳ ಸಂಖ್ಯೆಗಳು ಹೆಚ್ಚಾಗಿರುವುದು ಗಮನೀಯ. ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಬಹುತೇಕರು ಟ್ರೋಲ್‌ಗಳ ಮೂಲಕ ತಮ್ಮ ಕಾಲ ಕಳೆಯುವುದನ್ನು ದಿನಚರಿಯನ್ನಾಗಿ ಮಾಡಿಕೊಂಡಿದ್ದೂ ಇದೆ. ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ವಿಚಿತ್ರ ಮನಸ್ಥಿತಿಯೂ ಕೆಲವರಲ್ಲಿದೆ.
ಟ್ರೋಲ್ ಎದುರಿಸುವ ಬಗೆ
*ಟ್ರೋಲ್‌ಗಳಿಗೆ ಯಾವುದೇ ಕಾರಣಕ್ಕೂ ಹೆದರಬಾರದು. ನಿಮ್ಮ ವಿರುದ್ಧದ ಟ್ರೋಲ್‌ಗಳಿಗೆ ನೀವೇ ಧೈರ್ಯವಾಗಿ ಉತ್ತರಿಸಿ. ಇದರಿಂದ ಯಾರು ಟ್ರೋಲ್‌ಗೊಳಾಗಿರುತ್ತಾರೋ ಅವರ ನಿಲುವು ಇತರರಿಗೆ ಸ್ಪಷ್ಟವಾಗಿ ತಿಳಿಯುತ್ತದೆ.
*ಸಭ್ಯತೆಯ ಗೆರೆ ದಾಟಿ, ದೈಹಿಕವಾಗಿ ಹಲ್ಲೆ ಮಾಡುವಂಥ ಬೆದರಿಕೆಯ ಟ್ರೋಲ್‌ಗಳನ್ನು ಖಂಡಿತಾ ನಿರ್ಲಕ್ಷಿಸದಿರಿ. ಅಂಥ ಟ್ರೋಲ್‌ಗಳನ್ನು ದಾಖಲೆ ಸಮೇತ ಒಂದೆಡೆ ಸೇವ್ ಮಾಡಿ. ಸಾಧ್ಯವಾದರೆ ಟ್ರೋಲ್ ಮಾಡಿದವರ ವಿವರಗಳನ್ನು ಕಲೆ ಹಾಕಿ.
*ಟ್ರೋಲ್ ಮಾಡಿದವರ ಇಮೇಲ್, ಧ್ವನಿಮುದ್ರಿತ ಸಂದೇಶ, ಟೆಕ್ಸ್ಟ್ ಸಂದೇಶ, ಸಾಮಾಜಿಕ ಮಾಧ್ಯಮಗಳಲ್ಲಿನ ಸ್ಕ್ರೀನ್ ಶಾಟ್‌ಗಳನ್ನು ಸೇರಿದಂತೆ ಸಾಧ್ಯವಾದರೆ ಲಿಂಕ್‌ಗಳನ್ನು ಕಾಪಿ ಮಾಡಿಟ್ಟುಕೊಳ್ಳಿ.
*ಕೆಲವರು ನಕಲಿ ಖಾತೆಗಳ ಮೂಲಕ ಟ್ರೋಲ್ ಮಾಡುತ್ತಿರುತ್ತಾರೆ. ಅಂಥವರನ್ನು ಬ್ಲಾಕ್ ಮಾಡಿದರೂ ಬೆನ್ನು ಹತ್ತಿದ ಬೇತಾಳದಂತೆ ಟ್ರೋಲ್ ಮಾಡುತ್ತಲೇ ಇರುತ್ತಾರೆ. ಅಂಥವರು ನಿಮ್ಮ ಖಾತೆಗಳನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ನಿಮ್ಮ ಅಕೌಂಟ್‌ಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ಅಕೌಂಟ್ ರಕ್ಷಣೆ ಬಗ್ಗೆ ಇರುವ ತಂತ್ರಗಳನ್ನು ಅಳವಡಿಸಿಕೊಳ್ಳಿ.
*ಸುಳ್ಳನ್ನು ವೈಭವೀಕರಿಸುವ ಟ್ರೋಲ್‌ಗಳಿಗೆ ಹೆದರದೇ ತಕ್ಕ ಉತ್ತರ ನೀಡಿ. ಏಕೆಂದರೆ ನಿಮ್ಮ ಮೌನ ಇತರರಿಗೆ ತಪ್ಪು ಸಂದೇಶ ರವಾನಿಸಬಹುದು. ಹಾಗಾಗಿ, ಟ್ರೋಲಿಗರ ಬಾಯ್ಮುಚ್ಚಿಸಲು ನಿಮ್ಮ ಮಾತುಗಳನ್ನು ಯಾವುದೇ ವಾದ ಮಾಡದೇ ದೃಢವಾಗಿ ಹೇಳಿ. ಇದರಿಂದ ಕೆಟ್ಟ ಟ್ರೋಲ್‌ಗಳ ಬಗ್ಗೆ ಸಹಮತ ಇಲ್ಲದವರು ನಿಮ್ಮ ಮಾತುಗಳನ್ನು ಗೌರವಿಸಿ, ನಿಮ್ಮ ಬೆಂಬಲಕ್ಕೆ ನಿಲ್ಲಬಹುದು.
*ಕೊಲೆ, ಅತ್ಯಾಚಾರ, ಹೆಣ್ಣು ಮಕ್ಕಳ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂಥ ಟ್ರೋಲ್ ಮಾಡಿದರೆ ಅವುಗಳಿಗೆ ಸೈಬರ್ ಕಾನೂನಿನಡಿ ಶಿಕ್ಷೆ ಇದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಹಿಂಜರಿಯದಿರಿ.
**
ಸುಪ್ತ ಮನಸ್ಸಿನ ಪ್ರತೀಕ
ನಮ್ಮ ಸಮಾಜ ನೈತಿಕವಾಗಿ ಯಾವುದನ್ನು ನಿಷೇಧ ಮಾಡಿರುತ್ತದೆಯೋ ಅದನ್ನು ಸುಪ್ತ ನೆಲೆಯಲ್ಲಿ ಮುರಿಯಬೇಕೆನ್ನುವ ಹೀನ ಮನಸ್ಥಿತಿಯುಳ್ಳವರೇ ಟ್ರೋಲಿಂಗ್ ಮಾಡುವವರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂಥವರಿಗೆ ಹೇರಳ ಸ್ವಾತಂತ್ರ್ಯ ಸಿಗುವುದರಿಂದ ಇಂಥವರು ತಮ್ಮನ್ನು ಯಾರೂ ಅಷ್ಟಾಗಿ ಗಮನಿಸುವುದಿಲ್ಲ, ಗಮನಿಸಿದರೂ ಏನೂ ಮಾಡಲಿಕ್ಕಾಗದು ಎನ್ನುವ ಮನಸ್ಥಿತಿಯಲ್ಲಿ ಕೆಟ್ಟದಾಗಿ ಟ್ರೋಲಿಂಗ್ ಮಾಡುತ್ತಾರೆ.
ಆನ್‌ಲೈನ್ ಫ್ಲಾಟ್‌ಫಾರಂಗಳಲ್ಲಿ ಜನರಿಗೆ ಮುಕ್ತ ಸ್ವಾತಂತ್ರ್ಯ ದೊರೆಯುತ್ತದೆ. ನಾವು ಜನರನ್ನು ಮುಖಾಮುಖಿ ಭೇಟಿಯಾದಾಗ ನಮ್ಮ ಮಾತುಗಳಲ್ಲಿ ಅರಿವಿಲ್ಲದೆಯೇ ನಿಯಂತ್ರಣವಿರುತ್ತದೆ. ಆದರೆ, ಆನ್‌ಲೈನ್‌ನಲ್ಲಿ ಈ ರೀತಿ ನಿಯಂತ್ರಣ ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಣ್ಣುಮಕ್ಕಳು ಸೀಮಿತ ಮಟ್ಟದಲ್ಲಿ ತಮ್ಮ ಮಾಹಿತಿ ಹಂಚಿಕೊಳ್ಳುವುದು ಉತ್ತಮ. ಬಹಳಷ್ಟು ಸಂಬಂಧಗಳು ಸ್ನೇಹದಿಂದ ಶುರುವಾಗಿ ಆನಂತರ ದುರುಪಯೋಗವಾದ ಉದಾಹರಣೆಗಳು ಬಹಳಷ್ಟಿವೆ. ಆದ್ದರಿಂದ ಫೋಟೊ ಅಥವಾ ಮಾಹಿತಿಗಳನ್ನು ಅಗತ್ಯವಿರುವಷ್ಟೇ ಹಂಚಿಕೊಳ್ಳಿ. ನಿಮ್ಮ ಫೋಟೊಗಳು ಇತರರಿಗೆ ಸುಲಭವಾಗಿ ಸಿಗದಂತೆ ಎಚ್ಚರವಹಿಸಿ.
– ಡಾ. ಮನೋಜ್‌ಕುಮಾರ್ ಶರ್ಮಾ,ನಿಮ್ಹಾನ್ಸ್‌ನ ‘ಶಟ್’ಕ್ಲಿನಿಕ್‌ನ ಮನೋವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.